ಅಥವಾ

ಒಟ್ಟು 59 ಕಡೆಗಳಲ್ಲಿ , 24 ವಚನಕಾರರು , 58 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಲಿಂಗವ ಹಿಡಿದು ಕಷ್ಟಯೋನಿಗೆ ತಿರುಗುವ ಕೆಟ್ಟ ಪಾತಕರ ನೋಡಲಾಗದು. ಜಂಗಮವೆಂದು ಮಾಡಲಾಗದು ಪೂಜೆಯ. ನಮಿಸಿಕೊಳ್ಳಲಾಗದು ಹರನೆಂದು. ಅದೇನು ಕಾರಣವೆಂದೊಡೆ : ತನುಮನಭಾವನಷ್ಟವಾದಿಷ್ಟಲಿಂಗಜಂಗಮವು ಪೂಜೆಗೆ ಯೋಗ್ಯ. ತನುಮನಭಾವವು ತ್ರಿವಿಧಮಲದಲ್ಲಿ ಮುಳುಗಿ ಮಲರೂಪಮನುಜರಿಗೆ, ಗುರುನಿರಂಜನ ಚನ್ನಬಸವಲಿಂಗವೆಂದೊಡೆ ನಾಚಿಕೆಗೊಂಡಿತ್ತು ಆಚಾರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕ್ರಿಯಾಸ್ವರೂಪವೇ ಲಿಂಗವೆಂದು, ಜಾÕನಸ್ವರೂಪವೇ ಜಂಗಮವೆಂದು, ಜಾÕನಸ್ವರೂಪವಪ್ಪ ಜಂಗಮದ ಪ್ರಸನ್ನೇತಿ ಪ್ರಸಾದ ಲಿಂಗಕ್ಕೆ ಜೀವಕಳೆಯೆಂದೆ. ಜ್ಯೋತಿ ಕರ್ಪೂರವ ನೆರೆದಂತೆ, ಅಂಗ ಲಿಂಗದಲ್ಲಡಗಿತ್ತು. ದೀಪ ದೀಪವ ಬೆರಸಿದಂತೆ ಪ್ರಾಣ ಜಂಗಮದಲ್ಲಿ ಅಡಗಿತ್ತು. ಈ ಕ್ರಿಯಾ ಜಾÕನ ಭಾವ ನಿರವಯವಾದವಾಗಿ ಲಿಂಗವೆನ್ನೆ, ಜಂಗಮವೆನ್ನೆ ಪ್ರಸಾದವೆನ್ನೆ ಇದುಕಾರಣ, ಕೊಟ್ಟೆನೆಂಬುದೂ ಇಲ್ಲ, ಕೊಂಡೆನೆಂಬುದೂ ಇಲ್ಲ. ಕೊಡುವುದು ಕೊಂಬುದು ಎರಡೂ ನಿರ್ಲೇಪವಾದ ಬಳಿಕ ನಾನೆಂಬುದೂ ನೀನೆಂಬುದೂ, ಏನು ಏನುಯೆಂಬೂದಕ್ಕೆ ತೆರಹಿಲ್ಲದೆ, ಪರಿಪೂರ್ಣ ಸರ್ವಮಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಂಗಮವೆಂದು ಮಾಡಿ ಪಙÂ್ತಯಲ್ಲಿ ವಿಂಗಡಿಸಿ, ಲೆಕ್ಕವ ಮಾಡುವ ದಂಡದ ಮನೆಯಲ್ಲಿ ಕೂಳನುಂಬ ಜಂಗಮಕ್ಕೆ ಭಂಡುಗೆಲಿದು ಬೇಡಿ ತಂದ ಭಂಡನ ಎಂಜಲ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತನಾದುದಕ್ಕೆ ಇದೆ ಚಿಹ್ನವು ನೋಡಾ, ಎಲೆ ದೇವಾ. ಕೈಯಲ್ಲಿರಲು ಮಾಂಸದ ಮುದ್ದೆ, ಬಾಯಲ್ಲಿರಲು ವಾರಾಂಗನೆಯ ತಾಂಬೂಲ, ಮನದಲ್ಲಿರಲು ಕ್ಕ್ರಯ ಭಾವ, ಕೊರಳಲ್ಲಿರಲು ಲಿಂಗ, ದೇಹದಲ್ಲಿರಲು ಲಿಂಗಲಾಂಛನ, ಜಂಗಮವೆಂದು ನಂಬುವುದು ಕಾಣಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
`ಹೆಸರು ಹಾಲಯ್ಯ ಎರೆದುಂಬುದಂಬಿಲ' ಎಂಬ ಲೋಕದ ಗಾದೆಯ ಮಾತು ದಿಟವಾಯಿತಲ್ಲಾ ! ಮಾತು ಕಲಿತು ಮಂಡೆಯ ಬೋಳಿಸಿಕೊಂಡು ಊರ ಮಾರಿಯ ಮರನೇರಿದಂತೆ ಮಾಯೆಯ ಕೊರಳಲ್ಲಿ ಕಟ್ಟಿಕೊಂಡು ಘಟಸರಣಿಯ ಪಶುಗಳು ಜಂಗಮವೆಂದು ಸುಳಿವ ನಾಚಿಕೆಯ ನೋಡಾ ಗುಹೇಶ್ವರ
--------------
ಅಲ್ಲಮಪ್ರಭುದೇವರು
ಆ ಮಧ್ಯಾವಸಾನವನರಿಯದೆ ನಾನು ಭಕ್ತ, ನಾನು ಜಂಗಮವೆಂದು ನುಡಿವ ಉದ್ದೇಶದ ಬರುಬಾಯ ಭುಂಜಕರ ನಾನೇನೆಂಬೆನಯ್ಯಾ. ಆಯನರಿದಡೆ ಗುರುಕರಜಾತನೆಂಬೆ; ಮಧ್ಯವನರಿದಡೆ ಜಂಗಮಸಹಚಾರಿಯೆಂಬೆ; ಅವಸಾನವನರಿದಡೆ ಮಹಾಲಿಂಗೈಕ್ಯನೆಂಬೆ. ಇಂತೀ ತ್ರಿವಿಧವನರಿದಡೆ ತುರ್ಯನೆಂಬೆ. ಅರಿವರತು ಮರಹು ನಷ್ಟವಾದಡೆ ಕಪಿಲಸಿದ್ಧ ಮಲ್ಲಿಕಾರ್ಜುನದೇವರು ತಾನೆಂಬೆ.
--------------
ಸಿದ್ಧರಾಮೇಶ್ವರ
ಗುರುವೆಂದು ಇದಿರಿಟ್ಟಲ್ಲಿ ಗುರುದ್ರೋಹ. ಲಿಂಗವೆಂದು ಸಂದೇಹಿಸಿದಲ್ಲಿ ಲಿಂಗದ್ರೋಹ. ಜಂಗಮವೆಂದು ಉಭಯದಲ್ಲಿಕಂಡಡೆ ಜಂಗಮದ್ರೋಹ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆಂದು ಇದಿರೆಡೆಯಾಡಿದಡೆ ಮಹಾದ್ರೋಹ.
--------------
ಪ್ರಸಾದಿ ಭೋಗಣ್ಣ
ಶಿವ ಗುರುವೆಂದು ನಂಬಿಪ್ಪಾತನೆ ಶಿವಭಕ್ತ. ಶಿವ ಲಿಂಗವೆಂದು ನಂಬಿಪ್ಪಾತನೆ ಶಿವಭಕ್ತ. ಶಿವ ಜಂಗಮವೆಂದು ನಂಬಿಪ್ಪಾತನೆ ಶಿವಭಕ್ತ. ಶಿವ ಪಾದೋದಕ ಪ್ರಸಾದವೆಂದು ನಂಬಿಪ್ಪಾತನೆ ಶಿವಭಕ್ತ. ಗುರುಲಿಂಗಜಂಗಮದ ಪಾದೋದಕ ಪ್ರಸಾದದ ಬಂದ ಬಟ್ಟೆಯನರಿಯದೆ ಬರಿದೆ ಭಕ್ತರೆಂದು ಅನ್ಯವನಾಶ್ರಯಿಸಿ ಅನ್ಯದೈವಕೆರಗುವ ಕುನ್ನಿಮಾನವರನೆಂತು ಭಕ್ತರೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿವ, ಗುರುವೆಂದು ಬಲ್ಲಾತನೆ ಗುರು. ಶಿವ, ಲಿಂಗವೆಂದು ಬಲ್ಲಾತನೆ ಗುರು. ಶಿವ, ಜಂಗಮವೆಂದು ಬಲ್ಲಾತನೆ ಗುರು. ಶಿವ, ಪ್ರಸಾದವೆಂದು ಬಲ್ಲಾತನೆ ಗುರು. ಶಿವ, ಆಚಾರವೆಂದು ಬಲ್ಲಾತನೆ ಗುರು._ ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ ಮಹಾ ಮಹಿಮ ಸಂಗನಬಸವಣ್ಣನು, ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗದ ಮೇಲೆ ಇಷ್ಟಲಿಂಗವ ಧರಿಸಿ ಪೂಜೋಪಚಾರವ ಮಾಡುವವರು ಲಿಂಗಪ್ರಾಣಿಗಳಲ್ಲ. ಎನ್ನ ಗುರುವೆಂದು ಭಾವಿಸಿ ಶರಣೆಂದು ನಮಸ್ಕಾರ ಮಾಡುವವರು ಲಿಂಗಪ್ರಾಣಿಗಳಲ್ಲ. ಜಂಗಮವೆಂದು ನಂಬಿ, ವಿಶ್ವಾಸ ಬಲಿದು, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಂಬುವವರು ಲಿಂಗಪ್ರಾಣಿಗಳಲ್ಲ. ಇಂತೀ ತ್ರಿಮೂರ್ತಿಗಳ ಪೂಜೆಯನ್ನು ಬಿಟ್ಟು ಬಿಡದೆ ಪಿಡಿದು ಪೂಜಿಸುವವರು ಪ್ರಾಣಲಿಂಗಿಗಳೆಂಬೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನುಡಿದ ನುಡಿಗೆ ನಡೆ ಇಲ್ಲದಿದ್ದರೆ, ಮೃಡನ ಶರಣರು ಕಡೆನುಡಿದಲ್ಲದೆ ಮಾಣರು. ಎಮ್ಮ ಶರಣರು ಮತ್ತೆ ಹೊಡೆಗೆಡೆದು ಎನ್ನ ನುಡಿದು, ಹೊಡೆದು, ರಕ್ಷಿಸಿದಿರಲ್ಲ. ಎನ್ನ ಒಡೆಯರು ನೀವಹುದೆಂದು ಬಿಡದೆ ಅವರ ಬೇಡಿಕೊಂಬೆ. ಇದೀಗ ನಮ್ಮ ಶರಣರ ನಡೆನುಡಿ. ಅದಂತಿರಲಿ. ಅದಕೆ ನಮೋ ನಮೋ ಎಂಬೆ. ಈ ಪೊಡವಿಯೊಳು ಹುಟ್ಟಿದ ಮನುಜರೆಲ್ಲರು ಒಡೆಯರೆಂದು ಪೂಜೆಯಮಾಡಿ,ತುಡುಗುಣಿನಾಯಿಯಂತೆ ಒಕ್ಕುದ ಮಿಕ್ಕುದ ನೆಕ್ಕಿ, ತಮ್ಮ ಇಚ್ಛೆಗೆ ನುಡಿದರೆ ಒಳ್ಳಿದನೆಂಬರು. ಸತ್ಯವ ನುಡಿದರೆ ಸಾಯಲವನೆಲ್ಲಿಯ ಶರಣ ? ಇವನೆಲ್ಲಿಯ ಜಂಗಮ? ಇವರ ಕೂಡಿದ ಮನೆ ಹಾಳೆಂದು, ಕಂಡ ಕಂಡವರ ಕೂಡ ಹೇಳಿಯಾಡುವ, ಈ ಕಾಳುಮನುಜರನು ಲಿಂಗ ಜಂಗಮವೆಂದು ನುಡಿದು ಕೂಡಿಕೊಂಡು ಹೋದರೆ, ತನ್ನ ತನ್ನ ಪದಾರ್ಥವ ಹಿಡಿದರೆ, ಒಡೆಯನೆ ಬದುಕಿದೆ, ತ್ರಾಹಿ ಎಂಬ ಮೃಡಶರಣನು ಈ ಅಡ[ಗು] ಕಚ್ಚಿಕೊಂಡಿರುವ, ಹಡಿಕಿಮನುಜರನು ಸರಿಗಂಡಡೆ, ನಾಯಕ ನರಕದಲ್ಲಿಕ್ಕುವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಪೃಧ್ವಿಯಗೆಲಿದ ಏಲೇಶ್ವರನ ಕಂಡೆ. ಭಾವಭ್ರಮೆಯ ಗೆಲಿದ ಬ್ರಹ್ಮೇಶ್ವರನ ಕಂಡೆ. ಸತ್ವ ರಜ ತಮ ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ. ಅಂತರಂಗದ ಆತ್ಮಜ್ಞಾನದಿಂದ ಜ್ಯೋತಿಸಿದ್ಧಯ್ಯನ ಕಂಡೆ. ಇವರೆಲ್ಲರ ಮಧ್ಯಮಸ್ಥಾನ ಪ್ರಾಣಲಿಂಗ ಜಂಗಮವೆಂದು ಸುಜ್ಞಾನದಲ್ಲಿ ತೋರಿದ ಬಸವಣ್ಣ ; ಆ ಬಸವಣ್ಣನ ಪ್ರಸಾದದಿಂದ ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯಾ
--------------
ಅಕ್ಕಮಹಾದೇವಿ
ಜಂಗಮ ಜಂಗಮವೆಂದು ನುಡಿದು, ಜಗದ ಹಂಗಿಗರಾಗಿ ಇರಲಾಗದು. ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಜಂಗುಳಿಗಳ ಬಾಗಿಲ ಕಾಯಲಾಗದು. ಜಂಗಮದ ಸುಳುಹು ಎಂತಿರಬೇಕೆಂದರೆ, ತನ್ನ ನಂಬಿದ ಸಜ್ಜನರ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮಿಸಿ, ತಾ ಕಂಡ ಲಿಂಗಾಂಗವನು ಅಲ್ಲಿಯೇ ನಿಕ್ಷೇಪಿಸಿ, ತಾ ನಿರ್ಗಮನಿಯಾಗಿ ಸುಳಿಯಬಲ್ಲರೆ, ಜಂಗಮಲಿಂಗವದು ಇಂತಲ್ಲದೆ ಕಂಡವರ ಕಾಡಿ ಬೇಡಿಕೊಟ್ಟರೆ ಕೊಂಡಾಡಿ, ಕೊಡದಿದ್ದಡೆ ಜರಿದು, ತಾಗು ನಿರೋಧಕ್ಕೆ ಗುರಿಯಾಗಿ ನೋವುತ್ತ, ಬೇವುತ್ತ ಧಾವತಿಗೊಂಬ ಗಾವಿಲರ ಎಂತು ಜಂಗಮವೆಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
--------------
ಹಡಪದ ಅಪ್ಪಣ್ಣ
ಲಿಂಗ ಲಿಂಗವೆಂದು ಕಾಣದನ್ನಕ್ಕ, ಜಂಗಮ ಜಂಗಮವೆಂದು ಕಾಣದನ್ನಕ್ಕ, ಇನ್ನಾಗದಯ್ಯಾ, ಇನ್ನಾಗದಯ್ಯಾ. ಅರಿವಿನೊಳಗಣ ಘನವೆ ಸುಳುಹಡಗಿದ ಸೂತಕ, ಇನ್ನಾಗದಯ್ಯಾ, ಇನ್ನಾಗದಯ್ಯಾ. ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯ, ಸರ್ವಾಂಗ ಸಂದೇಹಿಗಳಿಗೆಂತೊಲಿವ ?
--------------
ಚನ್ನಬಸವಣ್ಣ
ಗುರು ಗುರು ಎಂದು ಪೂಜೆಯ ಮಾಡುವರು. ಮತ್ತೆಯಾ ಗುರುವ ನರನೆಂದೆಂಬರು, ಅವರು ಗುರುದ್ರೋಹಿಗಳು. ಲಿಂಗ ಲಿಂಗವೆಂದು ಪೂಜೆಯ ಮಾಡುವರು, ಆ ಲಿಂಗವ ಶಿಲೆ ಎಂಬರು, ಅವರು ಲಿಂಗದ್ರೋಹಿಗಳು. ಜಂಗಮ ಜಂಗಮವೆಂದು ಪೂಜೆಯ ಮಾಡುವರು, ಆ ಜಂಗಮವ ಜಗದ ಹಂಗಿಗರೆಂಬರು, ಅವರು ಜಂಗಮದ್ರೋಹಿಗಳು. ಈ ಮೂರು ಕರ್ತರೆಂದು ಅರಿಯದವಂಗೆ ಕುಂಭೀಪಾಕ ನಾಯಕನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->