ಅಥವಾ

ಒಟ್ಟು 67 ಕಡೆಗಳಲ್ಲಿ , 23 ವಚನಕಾರರು , 57 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂದಡೆ; ಹೊನ್ನು ಹೆಣ್ಣು ಮಣ್ಣು ಹಿಡಿದು ನೆಟ್ಟನೆ ಭಕ್ತನಾಗಿ ನಿಲ್ಲಬೇಕು. ಸುಳಿದಡೆ; ಹೊನ್ನು ಹೆಣ್ಣು ಮಣ್ಣು ಬಿಟ್ಟು ನೆಟ್ಟನೆ ಜಂಗಮವಾಗಿ ಸುಳಿಯಬೇಕು. ನಿಂದು ಭಕ್ತನಲ್ಲದ, ಸುಳಿದು ಜಂಗಮವಲ್ಲದ ಉಭಯಭ್ರಷ್ಟರನೇನೆಂಬೆ ಗುಹೇಶ್ವರಯ್ಯಾ ?
--------------
ಅಲ್ಲಮಪ್ರಭುದೇವರು
ಕಾವಿ ಕಾಷಾಂಬರವ ಹೊದ್ದು ಕಾಮವಿಕಾರಕ್ಕೆ ತಿರುಗುವ ಕರ್ಮಿಗಳಮುಖವ ನೋಡಲಾಗದು. ಜಂಗಮವಾಗಿ ಜಗದಿಚ್ಫೆಯ ನುಡಿವ ಜಂಗುಳಿಗಳಮುಖವ ನೋಡಲಾಗದು. ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ ಲಿಂಗದ್ರೋಹಿಗಳ ಮುಖವ ನೋಡಲಾಗದು ಕಾಣಾ, ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಅಹಂಕಾರವರತು ಗುರುವಾಗಿ, ಜಗವರತು ಲಿಂಗವಾಗಿ, ತ್ರಿವಿಧವರತು ಜಂಗಮವಾಗಿ, ಸಕಲೇಂದ್ರಿಯದ ಲಂಪಟವರತು ಭಕ್ತನಾಗಿ ಸಂಸಾರವೆಂಬ ಗಡಬಡೆಯಲ್ಲಿ ಸಿಲುಕದೆ, ಆವ ಸ್ಥಲದಲ್ಲಿ ನಿಂದು ನೋಡಿದಡೂ ಭಾವಶುದ್ಧವಾಗಿ ಗುರುವಿಂಗೆ ಗುರುವಾಗಿ, ಲಿಂಗಕ್ಕೆ ಲಿಂಗವಾಗಿ ಜಂಗಮಕ್ಕೆ ಜಂಗಮವಾಗಿ ಭಕ್ತರ ಯುಕ್ತಿಯ ಮಾರಿಕೊಂಡಿಪ್ಪ ಸದ್ಭಕ್ತ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಬಿರುಗಾಳಿ ಬೀಸಿ ಮರ ಮುರಿವಂತಹ ಸುಳುಹ ಸುಳಿಯದೆ, ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು. ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು. ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು. ಸುಳಿದು ಜಂಗಮವಾಗಲರಿಯದ, ನಿಂದು ಭಕ್ತನಾಗಲರಿಯದ ಉಭಯಭ್ರಷ್ಟರನೇನೆಂಬೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು, ಅದೆಂತೆಂದಡೆ: ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ, ನಿಮ್ಮ ಹಾನಿವೃದ್ಧಿ ಎನ್ನದಾಗಿ. ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ? ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದಬಳಿಕ ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ ! ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ, ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು ! ಅದೆಂತೆಂದಡೆ, ಶಿವರಹಸ್ಯದಲ್ಲಿ: ``ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ ಇಂತೆಂಬ ಶ್ರುತ್ಯರ್ಥವ ಕೇಳದೆ, ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ, ಇದಕ್ಕೆ ಮತ್ತೆಯೂ ಶ್ರುತಿ: ``ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು ಕೋಪ ತಾಪಮಂ ಬಿಟ್ಟು, ಭ್ರಾಂತು ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು. ಕುಳಿತರೆ ಲಿಂಗವಾಗಿ ಕುಳಿತಿರಬೇಕು, ಇದ್ದರೆ ಜಂಗಮವಾಗಿ ಇರಬೇಕು. ಈ ನಾಲ್ಕರ ಹೊಂದಿಗೆಯನರಿಯದವರು ಎಷ್ಟು ದಿನವಿದ್ದರೂ ಫಲವೇನು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಎಲೆ ಮನವೆ ಕೇಳಾ, ಶಿವನು ನಿನಗೆ ಅನಂತಾನಂತಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ, ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂದು. ಆ ಪ್ರಭಾಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ, ಮಹಾಲಿಂಗೈಕ್ಯವನು, ಮಹಾಲಿಂಗ ಯೋಗಪ್ರಭಾವವನು, ಅಷ್ಟಾಷಷ್ಟಿತೀರ್ಥಂಗಳನು, ಶಿವನು ಅನಂತಪ್ರಾಣಿಗಳಿಗೆ ಸಾಧನವೆಂದು ಮಾಡಿದನು. ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಂಗೊಳಿಸಿದನು. ಅನಾದಿಸಂಸಿದ್ಧದಾದಿಲಿಂಗೇಶ್ವರದೇವರ ಸ್ಥಲಂಗೊಳಿಸಿದನು. ಎಲ್ಲಾ ಯಂತ್ರಕ್ಕೆ ಅಮೃತಕಳೆಯನೀಯಲೆಂದು ಕಪಿಲಸಿದ್ಧಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು. ಸಿದ್ಧಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ ಗುರು ಮತ್ರ್ಯಕ್ಕೆ ಬಂದ ಕಾಣಾ ಮನವೆ. ಆಚಾರ ಗೋಚರವಾಗಬೇಕೆಂದು ಆ ನಿರ್ವಯಲೆಂಬ ಸ್ವಾಮಿ ತಾನೆಯಾಗಿ, ಓಂಕಾರ ಊಧ್ರ್ವರೇತ ಶಿವನಾಗಿ, ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ. ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು ಶುದ್ಧಸಿದ್ಧಪ್ರಸಿದ್ಧಪ್ರಸಾದವ ತೋರಿಹೆವೆನುತ ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ. ಜ್ಞಾನವಾಹನವಾಗಿ ತನುಮನಧನದ ಮೇಲೆ ನಡೆದು, ಅನಂತಮೂರ್ತಿಗಳ ಪವಿತ್ರವ ಮಾಡಲೆಂದು ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು, ಜಂಗಮವಾಗಿ ಪ್ರಭುದೇವರು ಬಂದರು ಕಾಣಾ ಮನವೆ. ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ, ಪ್ರಸಾದಿಯ ಅನುಭಾವದ ಆಭರಣವೆ ಜಂಗಮವಾಗಿ, ಇಂತೀ ಚತುರ್ವಿಧಸ್ಥಲಂಗಳು ಎನ್ನ ಪ್ರಾಣನ ಕೊರಳಲ್ಲಿಹವಾಗಿ, ನಿಮ್ಮ ಅನಿಮಿಷವಾಗಿ ನಾ ನೋಡುತಿರ್ದೆ ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಜಂಗಮವಾಗಿ ಹುಟ್ಟಿದ ಮತ್ತೆ ಹಿಂದಣ ಹಜ್ಜೆಯ ಮೆಟ್ಟಲುಂಟೆ? ಜಂಗಮವೆಂಬ ಮಾತಿಂಗೊಳಗಾದಲ್ಲಿ ಮೂರು ಮಲತ್ರಯವ ಹಿಂಗಿರಬೇಕು. ಅನಂಗನ ಬಲೆಗೆ ಎಂದಿಗೂ ಸಿಲುಕದಿರಬೇಕು; ಅದು ನಿಜದ ಸಂಗ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಈ ಗುಣ ಆರಿಗೂ ಇಲ್ಲ ಇಲ್ಲಎಂದೆ.
--------------
ಘಟ್ಟಿವಾಳಯ್ಯ
ಗುರುವಾಗಿ ಬಂದರಯ್ಯಾ ರೇವಣಸಿದ್ಧೇಶ್ವರದೇವರು. ಲಿಂಗದಲ್ಲಿ ನಿಬ್ಬೆರಗಾದರಯ್ಯಾ ಅನುಮಿಷದೇವರು. ಜಂಗಮವಾಗಿ ಸುಳಿದರಯ್ಯಾ ಪ್ರಭುದೇವರು. ಪ್ರಸಾದವ ಕೊಂಡು ಪಥವ ತೋರಿದರಯ್ಯಾ ಬಿಬ್ಬಿಬಾಚಯ್ಯಗಳು. ಲಿಂಗದಲ್ಲಿ ನಿರ್ವಯಲಾದರಯ್ಯಾ ನೀಲಲೋಚನೆಯಮ್ಮನವರು. ಸೌರಾಷ್ಟ್ರಮಂಡಲದಲ್ಲಿ ಮೆರೆದರಯ್ಯಾ ಓಹಿಲದೇವರು. ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದ ಕೊಂಡು ಬದುಕಿದೆನಯ್ಯಾ, ವೀರಶೂರ ರಾಮೇಶ್ವರಾ
--------------
ಬಾಲಬೊಮ್ಮಣ್ಣ
ಕಾಲಜ್ಞಾನಿ, ಕರ್ಮವಿದೂರ, ನಿತ್ಯತೃಪ್ತನೆ, ನಿಮ್ಮಭೇದಿಸುವರಾರು ಹೇಳಾ ಎಲೆ ಅಯ್ಯಾ. ಎನ್ನ ಭವಕರ್ಮವು ಕಳೆಯಲಿಕೆ ಏಕರೂಪವಾಗಿ ಬಂದೆಯಯ್ಯಾ. ನಿಮ್ಮ ಪದಂಗಳೆ ಲಿಂಗವಾಗಿ, ನಿಮ್ಮ ಕರಣಂಗಳೆ ಶ್ರೀಗುರುವಾಗಿ, ನಿಮ್ಮುರುತರಮಪ್ಪ ಜಿಹ್ವೆಯ ಜಂಗಮವಾಗಿ ಬಂದೆಯಯ್ಯಾ. ನೀನು ಶಿಷ್ಯ ಕಾರಣ ಪರಶಿವಮೂರ್ತಿಯಾದುದನು ನಾನಿಂದು ಕಂಡೆ ಕಾಣಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುರುವಿನಲ್ಲಿ ಆಚರಣೆಯ, ಲಿಂಗದಲ್ಲಿ ಅನುಸರಣೆಯ, ಜಂಗಮದಲ್ಲಿ ದೂಷಣ ಮಾಡುತ್ತ ಲಿಂಗವನರಿತು, ಗುರುವ ಮರೆಯಬೇಕು. ಅರಿವನರಿತು, ಜಂಗಮವ ಮರೆಯಬೇಕು. ಗುರುವೆ ಲಿಂಗವಾಗಿ, ಲಿಂಗವೆ ಜಂಗಮವಾಗಿ, ಜಂಗಮವೆ ಅರಿವಾಗಿ ನಿಂದಲ್ಲಿ ಲಿಂಗವನರಿತು, ಗುರುವೆಂಬುದ ಮರೆಯಬೇಕು. ಗುರುವನರಿತು, ಜಂಗಮವ ಮರೆಯಬೇಕು. ಜಂಗಮವ ಮರೆದಲ್ಲಿ ಅರಿವು ಕರಿಗೊಂಡಿತ್ತು, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಎನ್ನ ಆಪತ್ತು, ಸುಖ-ದುಃಖವನಿನ್ನಾರಿಗೆ ಹೇಳುವೆ ಶರಣಸ್ಥಲದವರಿಗೆ ಹೇಳಿದಡೆ ಮಚ್ಚರ ! ಸವತಿ-ಸಕ್ಕರೆ, ಬೇವು-ಬೆಲ್ಲ ಉಂಟೆ! ಇನ್ನಾರಿಗೆ ಹೇಳುವೆ! ಕೂಡಲಸಂಗಮದೇವಾ, ಜಂಗಮವಾಗಿ ಬಂದು ಎನ್ನ ಮನದ ಸೂತಕವ ಕಳೆಯಾ. 390
--------------
ಬಸವಣ್ಣ
ಜಂಗಮವಾಗಿ ಫಲವೇನಯ್ಯಾ, ಜಗದ ಹಂಗುದೊರೆಯದನ್ನಕ್ಕ? ಯೋಗಿಯಾದಲ್ಲಿ ಫಲವೇನಯ್ಯಾ, ನಿನ್ನಂಗ ಬರದನ್ನಕ್ಕ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಂದು ನೀ ಬಂದ ಬೆಂಬಳಿಯಲ್ಲಿ ನಾ ಬಂದೆ. ಅಂದಂದಿನ ಸಂದೇಹ ಹರಿಯಿತ್ತು. ನೀ ಭಕ್ತನಾಗಿ ನಾ ಜಂಗಮವಾಗಿ, ಗುಹೇಶ್ವರಲಿಂಗವೆಂಬುದಕ್ಕೆ ಅಂಗವಾಯಿತ್ತು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->