ಅಥವಾ

ಒಟ್ಟು 26 ಕಡೆಗಳಲ್ಲಿ , 10 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸಾದವ ಪಡೆದವರೆಂದು ಬದ್ಧಸಂಕಲ್ಪ ದುರ್ವರ್ತನೆಗಳನೇನೆಂಬೆನಯ್ಯಾ! ಗಣಸಮೂಹದಲ್ಲಿ ಸೌಖ್ಯವಿಲ್ಲೆಂದು ಚಿಕ್ಕ ಬಟ್ಟಲಲ್ಲರ್ಪಿಸಿಕೊಂಡು, ಪೂರ್ವ ಬಳಗಗೂಡಿ ಹಂದಿ ನಾಯಿಯಂತೆ ಒಗೆದಾಡಿ ತಿಂಬುವ ಬೆಂದ ನರಕಿಗಳಿಗೆ ಪ್ರಸಾದವೆಲ್ಲಿ ಹುದಯ್ಯಾ? ಪ್ರಸಾದಿ ಒಮ್ಮೆ ಪ್ರಸಾದವ ಸೇವಿಸಿ, ಒಮ್ಮೆ ಉಚ್ಛಿಷ್ಟಕೂಳ ಸೇವಿಸುವನೆ? ಛೀ ಅದೇತರ ನಡೆನುಡಿ ಅತ್ತ ಹೋಗಿ, ನಮ್ಮ ಗುರುನಿರಂಜನ ಚನ್ನಬಸವಲಿಂಗಶರಣರ ತಿಂಥಿಣಿಯ ಸೋಂಕದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ, ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ, ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು, ಶಿಶುವು ತಾನಾಡುವ ಆಟದಲ್ಲಿ, ಕಲ್ಲಿಗೆ ಕಾಲ ತಗಲಿಸಿಕೊಂಡು ಅಳುವಂತೆ, ವಿಷಯದಿಚ್ಛೆಯಲ್ಲಿ ನೊಂದು ಶೋಕಿಸುತ್ತಿರಲು, ಆ ಶಿಶುವಿಗೆ ತಂದಿ ಬಂದು ಕಣ್ಣೀರೊರಸಿ, ಆ ಕಲ್ಲತಗಲಿದ ಕಾಲ್ನೋವಿಗೆ ಔಷದ್ಥಿಯ ಮಾಡಿ, ತನ್ನ ಹೆಂಡತಿಯ ಕರೆದು, ಮಗನ ಸಮಾಧಾನಮಾಡೆಂದು ಹೇಳಲು, ಆ ತಾಯಿಯೆತ್ತಿಕೊಂಡು, ಕಣ್ಣು, ಮೂಗು, ಕಿವಿ, ಬಾಯಿ, ಮೈ ಧೂಳವನ್ನೆಲ್ಲಾ ತಾ ಹೊದ್ದ ಮೇಲ್‍ಸೆರಗಿಲೊರಸಿ ಮೊಲೆಯುಣಿಸಿ, ತೊಟ್ಟಿಲೊಳು ಹಾಸಿ ಮಲಗಿಸಿ ಹೊಚ್ಚಿ ಹೆಂಗ ಮಂಗಲ ನುಡಿ, ನಮ್ಮಪ್ಪ ಅರಸ ಛೀಮಾರಿ ಛೀ ಛೀ ಛೀ ಅಳುಳುಳುಳುಳುಳೆಂದು ಹಾಡುತ್ತಿರಲು, ಆ ಶಿಶುವು ಆ ಔಷಧದಿಂದೆ ನೋವು ಹೋಗಿ, ತಾಯಿಯ ಮೊಲೆಹಾಲಿನಿಂದೆ ಹಸಿವು ಅಡಗಿ, ಆ ಜೋಗುಳಹಾಡಿಗೆ ಸೊಂಪುದೋರಿ ಸುಮ್ಮನಾಗಿ, ತೊಟ್ಟಿಲ ತೂಗುವುದರೊಳಗೆ ಜೋಕಬಂದು, ಸುಖನಿದ್ರೆಯೊಳ್ ಮೈಮರೆದಿರಲು, ಮಾಯೆಸರ್ಪನು ಬಂದು ಕಚ್ಚಿ ಕಾಣಿಸಿಕೊಳ್ಳದೆ ಹೋಗಲು, ಆ ತಾಯಿ ತಂದಿ ಉಂಡು ಮಂಚದಮ್ಯಾಲೆ, ರತಿಸಂಭೋಗಸುಖನಿದ್ರೆಯಲ್ಲಿರೆ, ಮಾಳಿಗೆ ಬಿದ್ದು ಮರಣವಾಗಲು, ಆ ತಾಯಿ ತಂದಿಯು ಮಗ ಈ ಮೂವರು ಮಾಳಿಗೆ ಬಿದ್ದು ಮರಣವಾದರೆಂಬುದಾಯಿತ್ತಲ್ಲದೆ, ಆ ಶಿಶುವಿನ ಸಾವು ಆರು ಅರಿಯರು. ಇದರ ಹಾಂಗೆ ತನ್ನ ವಿಷಯದಿಚ್ಛೆಗೆ ಓಡ್ಯಾಡಿ ಕಾಲನ ಬಾಧೆಗೆ ಬಿದ್ದು ಭವದುಃಖದೊಳಗಿರುವ ನರರಿಗೆ ತಾನೇ ಗುರುವಾಗಿ ಬಂದು, ಸಾನಂದಸಿದ್ಧರಾಮನು ಹೀನ ನರಕಿಗಳ ತಗೆದಂತೆ, ಆ ಶಿಷ್ಯನ ಕೈಹಿಡಿದೆತ್ತಿ ಸರ್ವಕರಣಗಳ ಶುದ್ಧಗೊಳಿಸಿ, ಶಿಕ್ಷೋಪದೇಶವಮಾಡಿ, ತನ್ನ ಚಿತ್‍ಶಕ್ತಿಯ ಕರಸಂಜ್ಞೆ ನುಡಿನೋಟದಿಂದೆ ತೋರಿ ಹೇಳಿ ಕಾಣಿಸಿಕೊಡಲು, ಆ ಚಿತ್‍ಶಕ್ತಿ ಹತಿಗೊಂಡು ನಿತ್ಯತ್ವದ ನುಡಿ ಮನದ ಮೈಲಿಗೆಯ ತೊಳೆದು ತನ್ನ ಮೇಲುಮುಸುಕಿದ ಮಹಾಜ್ಞಾನದ ಬೆಳಗಿನಲ್ಲಿ ಸರ್ವ ಅವಯವಂಗಳ ಕಸರು ಕಳೆದು, ಆತ್ಮಜ್ಞಾನದೊಳಗೆ ಅಖಂಡಜ್ಞಾನದಲ್ಲಿರಿಸಿ, ಬ್ರಹ್ಮಜ್ಞಾನವನಾಚ್ಛಾದಿಸಿ, ನಿಜಜ್ಞಾನದಲ್ಲಿ ಲೋಲ್ಯಾಡಿ, ಅರುವಿನ ಹರುಷದಲ್ಲಿ ಹಿಂದಿಂದು ಹೇಯವಾಗೆ ಮುಂದಿಂದು ಹಿತವಚನ ಮುಂದೆ ಅಲ್ಲಲ್ಲಾ, ಸರ್ವವು ಸುಳ್ಳು ಸುಳ್ಳೆಂಬ ಮಹದರುವಿನ ಅನುಭವದ ಶಿವೋಹಂ ಶಿವೋಹಂ ಶಿವೋಹಂ, ಸೋಹಂ, ಸೋಹಂ, ಸೋಹಂ, ನಮೋ ನಮೋ, ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಏಂ ಏಂ ಏಂ ಏಂ ಏಂ ಎಂಬ ಮಹಾನಾದದೊಳಗೆ ಆ ಕಾಲನ ಬಾಧೆ ಹೋಗಿ, ಭವದುಃಖ ಹಿಂಗಿ, ಚಿತ್ತಚಿನ್ಮಯ ಸವಿಗೊಂಡು ನಿತ್ಯ ತೃಪ್ತನಾಗಿ, ನಿಜಲೀಲಾನುಭವದ ಶಬ್ದಕ್ಕೆ ಮುಗ್ಧನಾಗಿ, ಆತ್ಮಜ್ಞಾನದ ನಲಿಗಿನೊಳಗೆ ಲೋಲಗೊಂಡು, ಎಚ್ಚರಡಗಿ ಅಚ್ಚಸುಖದಲ್ಲಿ ಸಮರಸವಾಗಿರಲು, ಸಾವು ಬಂದು ಸಾವು ಸತ್ತು ಸಾವು ಸಾವಾಗಲು ಆ ಶರಣನ ಅಂಗ, ಮನ, ಭಾವ, ಆತ್ಮಸಂಗವೊಂದಾಗಿರೆ ಶ್ವಾಸ ಸುಳುಹುಗಳೆಲ್ಲಾ ನಿಂದು, ಚಿತ್ತ ಸತ್ತು ಸ್ವಸ್ಥವಾಗಲು, ನಿಜಶರಣನ ಅರುವು ಲಿಂಗದಲ್ಲಿ ಪರವಶರಾಗಿಹರೆಂಬುದು ಬಲ್ಲರಲ್ಲದೆ ಅರುವು ಮರೆಗೊಂಡಿರ್ಪ ನಿರ್ಬೈಲ ಆರೂ ಅರಿಯರೋ. ಆ ಶರಣ ತನ್ನರುವು ತಾನರಿಯ, ಸತ್ತ ಸುದ್ದಿ ಸತ್ತವ ಅರಿಯ, ಬದುಕಿದವ ಬಲ್ಲ. ಇದೇ ನಿಜಮುಕ್ತಿ ; ಇದನರಿಯದೆ, ತತ್ವವನೋದಿ ಗಾಳಿಗೊದರುವ ಒಡಕುಮಡಕಿಯ ಸ್ವರವ ಕಡಿಮಿಯಾದ ನಾದವನು ಆಲಿಸಿ, ನಾಹಂಬ್ರಹ್ಮವ ನುಡಿದು, ಕೋಹಂಬ್ರಹ್ಮವ ಬೆರೆತು, ಮುಂದೆ ಸೋಹಂ ಬ್ರಹ್ಮವ ಹುಡುಕದೆ, ದಾಸೋಹಂಬ್ರಹ್ಮವ ಕೂಡದೆ, ನಮಗೆ ಸಾವು ಇಲ್ಲಾ, ನಮ್ಮ ದೇಹ ಬೈಲು ಮಾಡುವೆವೆಂದು ಅದು ತಪ್ಪಲಿಕ್ಕೆ ಪಂಚತತ್ವದೇಹವು, ಪಂಚತತ್ವಕ್ಕೆ ಕೂಡಿಸುವೆವು ಎಂಬುವರು. ಅದು ಹಾಂಗಿರಲು, ಆ ದೇಹ ಬಯಲುವಾದರೇನು ? ಆ ಬಯಲಿಗೆ ಸಾವು ಇಲ್ಲವು. ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು. ಎಷ್ಟು ನಿಜ ತಿಳಿದರೇನೋ ? ಅಷ್ಟು ತಾವಾಗದೇ, ಭ್ರಷ್ಟರಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮಗನ ಮದುವೆಯ ತೊಡಗಿದಾಗ ಬಡಬಡನೆ ಹೋಗಿ ಹಾರುವನ ಕರೆವಿರಿ. ಅವನೇನು ನಿಮ್ಮ ಗುರುವೆ ? ನಿಮ್ಮ ಮನೆದೇವರೆ ? ನಿಮ್ಮ ಅಣ್ಣ ತಮ್ಮನೆ ? ನಿಮ್ಮ ಕುಲಬಾಂಧವನೆ ? ನಿಮ್ಮ ಹೊಂದಿ ಹೊರದವನೆ ? ಶಿವ ಸಹೋದರನೆ ? ನಿಮ್ಮ ಅಜ್ಜ ಮುತ್ತೈನೆ? ಛೀ ಛೀ ಎಲೊ ಶಿವದ್ರೋಹಿ ಕೇಳೊ. ಬಣ್ಣಗಾರ ಬಾಯಿಬಡಕ ಭ್ರಷ್ಟಮಾದಿಗ ವಿಪ್ರಜೋಯಿಸನ ಮಾತ ಕೇಳಿ ಮದುವೆಯಾದ ಪಂಚಪಾಂಡವರು ಕೆಟ್ಟರು. ಹರಿವಿರಂಚಿ ಹರಿಶ್ಚಂದ್ರ ದೇವೇಂದ್ರ ನಾಗಾರ್ಜುನ ಕಂಸರಾಜ ನಳಚಕ್ರವರ್ತಿ ಚಂದ್ರ ಸೂರ್ಯ ಮಂಗಳ ಬುಧ ಶುಕ್ರ ಸುರಸ್ತೋಮ ಮುನಿಸ್ತೋಮ ಕೆಟ್ಟಿತು. ಪಂಚಾಂಗ ಕೇಳಿದ ದಕ್ಷನ ಪಡೆಯೆಲ್ಲ ಕೆಟ್ಟು ನಷ್ಟವಾಗಿಹೋದ ದೃಷ್ಟವ ಕಂಡು ಕೇಳಿ, ಶಿವನ ಹಳಿವ ಹೊಲೆಮನದ ವಿಪ್ರಜೋಯಿಸನ ಕರೆಸಿ, ಕೈಮುಗಿದು ಕಾಣಿಕೆಯ ಕೊಟ್ಟು ಪಂಚಾಂಗವ ಕೇಳಿದ ಶಿವಭಕ್ತರಿಗೆ ತಾ ಗುರುದ್ರೋಹ, ಲಿಂಗದ್ರೋಹ, ಜಂಗಮದ್ರೋಹವು ಒದಗಿ, ತಾವು ಹಿಂದೆ ಮಾಡಿದ ದಾನಧರ್ಮ ಪರೋಪಕಾರವು ಕೆಟ್ಟು ನರಕಸಮುದ್ರದೊಳಗೆ ಮುಳುಗಾಡುತ್ತೇಳುತ್ತ ತಾವೇ ಸೇರಲರಿಯದೆ ಕೆಟ್ಟರು ನೋಡಾ ಹಲಕೆಲಬರು ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಸ್ಥಲವಿಟ್ಟು ನಡೆಯಬೇಕೆಂಬರು, ಸ್ಥಲವಿಟ್ಟು ನುಡಿಯಬೇಕೆಂಬರು. ಸ್ಥಲದ ನೆಲೆಯನಾರೂ ಅರಿಯರು. ಕಾಯಸ್ಥಲ, ಕರಸ್ಥಲ, ಭಾವಸ್ಥಲವನರಿದು, ಆ ಕಾಯಸ್ಥಲ ಕರಸ್ಥಲ ಭಾವಸ್ಥಲದಲ್ಲಿ ಕೂಡಿ ನಿಲಿಸುವದೆ ಸ್ಥಲ. ಇದನರಿಯದೆ, ಹಿಂದಕ್ಕೆ ನುಡಿದವರ ಮಾತು ಕಲಿತುಕೊಂಡು, ಈಗ ನುಡಿವವರ ಮಾತ ಮೆಚ್ಚುವರೆ ನಮ್ಮ ಶರಣರು ? ಅದಂತಿರಲಿ. ಇನ್ನು ನೇಮವಾವುದು ಎಂದರೆ, ಗುರುಲಿಂಗಜಂಗಮದ ಪಾದೋದಕ ಪ್ರಸಾದವನರಿದು, ಅಂಗೀಕರಿಸಿ, ತನ್ನ ತನುವನೆ ಪ್ರಸಾದವ ಮಾಡುವದೀಗ ನೆಲೆ. ಈ ಸ್ಥಲದ ನೆಲೆಯ ಬಲ್ಲವರಿಗೆ ನಮೋ ನಮೋ ಎಂಬೆ. ಇದನರಿಯದೆ ಬರಿಯ ನುಡಿಯ ನುಡಿವವರ ಕಂಡರೆ ಛೀ ಎಂಬೆನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಬೋಧೆಯ ಹೇಳಿ ಉಂಬವಂಗೆ ಆಗುಚೇಗೆಯ ಮಾತೇಕೆ ? ಅವ ಮಾತ ಕಲಿತ ಮಾತುಗನಂತೆ, ಆಟವ ಕಲಿತ ಕೋಲಾಟಿಕನಂತೆ. ಛೀ ಅದೇತರ ಅರಿವು ? ಐಘಟದೂರ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ.
--------------
ಮೆರೆಮಿಂಡಯ್ಯ
ಭೂತ ಭೂತ ಹೊಡಯಿತೆಂದು ಬಾಯಿಗೆ ಬಂದ ಹಾಗೆ ಕೆಲದಾಡಿ ಹಲಬರು ಮಂತ್ರಿಸಿ ಥೂಥೂ ಎಂದು ಉಗುಳಿ, ಛೀ ಛೀ ಎಂದು ಉಗುಳಿ, ಜರಿದು ಝಂಕಿಸಿ ಲಜ್ಜೆಗೆಡಿಸಿಕೊಂಬ ಪಾತಕ ಕರ್ಮಿಗಳಿಗ್ಯಾಕೊ ಶಿವಸ್ತೋತ್ರ, ಶಿವಭಕ್ತಿ? .................................................ಬೆಂದು ನಾರು ಬೇರು................................................................. ..............
--------------
ಅಂಬಿಗರ ಚೌಡಯ್ಯ
ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ. ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ ಕೂಡಲಸಂಗಮದೇವಾ, ನೀ ಸಾಕ್ಷಿಯಾಗಿ ಛೀ ಎಂಬೆನು.
--------------
ಬಸವಣ್ಣ
ಬಂಧನಂ ಪಾಪರೂಪಂ ಚ ನಿರ್ಬಂಧಃ ಪುಣ್ಯರೂಪಕಃ ಸತ್ಯಜ್ಞಾನ ಸಂಬಂಧಶ್ಚ ತದ್ಯಥಾ ಶ್ರುಣು ಪಾರ್ವತಿ || ಎಂದಕಾರಣ, ಬಂಧನದೈಕ್ಯವ ಶಿವಶರಣರೊಪ್ಪರಾಗಿ. ಅದೆಂತೆಂದಡೆ: ತೈಲ ಬತ್ತಿಯುಳ್ಳನ್ನಕ್ಕ ಜ್ಯೋತಿ ಬಯಲಾಗದು. ಎಣ್ಣೆ ಬತ್ತಿ ತೀರಿದ ಮೇಲೆ ಗೃಹದೊಳಗಣ ಜ್ಯೋತಿ ಉರಿಯಬಲ್ಲುದೆ ಹೇಳಿರಣ್ಣಾ ? ಈ ದೃಷ್ಟಾಂತದಂತೆ, ದೇಹಿಗಳ ದೇಹಮಧ್ಯದಲ್ಲಿ ಸಪ್ತಧಾತುಗಳುಳ್ಳ ಪರಿಯಂತರ ಪಂಚಾಗ್ನಿಯಿದ್ದ ಜೀವರುಗಳು ಪ್ರಾಣತ್ಯಾಗವ ಮಾಡುವುದು. ಹಾಗೆ ಶರಣನ ದೇಹಮಧ್ಯದಲ್ಲಿ ಚಿದಗ್ನಿಯಿದ್ದು, ಪ್ರಾಣ ದಗ್ಧವ ಮಾಡಿ, ವಸ್ತುವಿನಲ್ಲಿ ಎಯ್ದಿಸುತ್ತಿರಲಾಗಿ, ಆತನ ಅರಿವು ಮರವೆಗೆ ಕರ್ತರಾಗಿಪ್ಪ ತೆತ್ತಿಗತ್ತ್ವವಲ್ಲದೆ ತಾವು ಕಳಂಕರಾಗಿ, ಆತನ ವಿಕಳತೆಯಿಂದ ಐಕ್ಯವ ಮಾಡಿದಡೆ, ಆ ದ್ರೋಹ ತಮಗಲ್ಲದೆ ಆತಂಗಿಲ್ಲ. ಇಂತೀ ವಿವೇಕವುಳ್ಳ ವೀರಮಾಹೇಶ್ವರರ ಐಘಟದೂರ ರಾಮಲಿಂಗವೆಂಬೆ. ಅಲ್ಲದಿರ್ದಡೆ, ನೀ ಸಾಕ್ಷಿಯಾಗಿ ಛೀ ಎಂಬೆನು.
--------------
ಮೆರೆಮಿಂಡಯ್ಯ
ಏನೂ ಏನೂ ಇಲ್ಲದೆ ತಾನೆ ತಾನಾಗಿರ್ದ ಭಾನುಕೋಟಿಪ್ರಭೆ ಒಂದಾದ ಪ್ರಸಾದ. ವರ್ಣ ವಸ್ತು ನಾದ ಬಿಂದು ಕಳೆಗಳಿಲ್ಲದಂದು ಸುರಾಳ ನಿರಾಳವಿಲ್ಲದಂದು ಪಿಂಡಾಂಡ ಬ್ರಹ್ಮಾಂಡಂಗಳು ಮೊಳೆದೋರದಂದು ಪಂಚಮೂರ್ತಿಗಳ ನಾಮವಿಲ್ಲದಂದು ಪಂಚಪ್ರಣಮದ ಘೋಷಧ್ವನಿದೋರದಂದು ಮಹಾಪ್ರಸಾದ ಆಕಾಶವೆ ತಾನೆಯಾದ ಚಿತ್ಪ್ರಸಾದದ ಪ್ರಕಾಶವೆ ಅನಂತಕೋಟಿ ಸೋಮಸೂರ್ಯಪ್ರಭೆಯನೊಳಕೊಂಡಿತ್ತು. ಸಾಕಾರವೆ ಚಿಚ್ಫಕ್ತಿ[ಗೆ] ಆದಿಯಾಗಿ ಅನಂತಕೋಟಿಶಕ್ತಿಗಳಿಗೆ ಆಶ್ರಯಸ್ಥಾನವಾಗಿದ್ದಿತ್ತು. ದಕಾರವೆ ದಶದಿಶಭರಿತಪೂರ್ಣಾಕಾರ ಲಿಂಗವಾಗಿ ಸತ್ತುಚಿತ್ತಾನಂದ ನಿತ್ಯಪರಿಪೂರ್ಣನಾಮವೆಂದುದಾ ಪ್ರಸಾದ ಶಬ್ದ. ಈ ಭೇದವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆನಬಹುದು. ಈ ಭೇದವನರಿದು ಕೊಳಬಲ್ಲರೆ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆನಬಹುದು. ಇದನರಿಯದೆ ಕೊಟ್ಟ ಜಂಗಮಕ್ಕೆ, ಕೊಂಡ ಭಕ್ತಂಗೆ ರೌರವ ನರಕವೆಂದುದು ನೋಡಾ. ಇದಕ್ಕೆ ಸಾಕ್ಷಿ: 'ಜ್ಞಾನಹೀನಂ ಗುರುಂ ಪ್ರಾಪ್ಯ ಶಿಷ್ಯೋ ಜ್ಞಾನವಿವರ್ಜಿತಃ | ಅಂಧ್ಯೋಂಧಕರಯುಕ್ತಶ್ಚದ್ವಿವಿಧಂ ಪಾತಕಂ ಭವೇತ್ ||' ಎಂದುದಾಗಿ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವು ಶ್ರುತಿ ಸಾಕ್ಷಿಯಾಗಿ ಛೀ ಎನ್ನದೆ ಮಾಣ್ಬನೆ ನಿಮ್ಮ ಶರಣನು ?
--------------
ಚೆನ್ನಯ್ಯ
ಹಾವು ಹಲ್ಲಿ ಮಾರ್ಜಾಲ ಇವ ಹಾಯಿಸಿ ಕಂಡೆಹೆನೆಂಬುದರಿಂದ ಕಡೆಯೆ, ಲಿಂಗವ ಹಿಡಿದಿದ್ದ ಸಾಕಾರ ಅಂಗನ ಇರವು ? ಮುಂದೆ ಬಹುದ ಹೇಳಿಹೆನೆಂದು ವಿಹಂಗನನೆಬ್ಬಿಸಿ, ಹೋಹರ ಕಂಡು ನಂಬುವರಿಂದ ಕಡೆಯೆ, ಲಿಂಗವ ಹಿಡಿದ ಅಂಗ ? ಛೀ, ಸಾಕು ಸುಡು. ಇವರಿಗೆ ಲಿಂಗ ಕೊಟ್ಟ ದರುಶನ[ವ], ಭಂಡನ ಕಂಡು ಅಡಗಿದ ಗುಡಿಯೊಳಗೆ, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಹರಮುನಿದರೆ ಗುರುಕಾಯುವ ಗುರುಮುನಿದರೆ ಹರಕಾಯನೆಂಬ ಮಹಾವಾಕ್ಯವನು ಕೇಳಿ ಕಂಡರಿದ ಹೃದಯವು ದುರಾಗ್ನಿಯಿಂದೆ ನಾಶವಾಯಿತ್ತೆ ? ಛೀ ಅದೇತರ ಬಾಳುವೆ. ಗುರುವ ಮರೆದು ಲಿಂಗವನೊಲಿಸುವೆನೆಂದರೆ ಎಂದಿಗೂ ಆಗಬಾರದು. ಛೀ ಗುರುಮಾರ್ಗವೇ ಮಾರ್ಗ, ಛೀ ಗುರುಜ್ಞಾನವೇ ಜ್ಞಾನ, ಛೀ ಗುರು ಪರಿಣಾಮವೇ ಪರಿಣಾಮ. ಅದು ಕಾರಣ ಜಡಮೂಢ ಪ್ರಾಣಿಗಳಿರಾ, ಕರ್ಕಸಮಥನ ಕಡಲೊಳು ಮುಳುಗಿ ಹೋಗುವದಕಿಂತವೆ ಗುರುಕೃಪಾಂಬುಧಿಯೊಳ್ಮುಳುಗಿ ನಿಜ ನಿವಾಸಿಗಳಾಗಿರಿ ನಮ್ಮ ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸತ್ತಡೆ ಸಂಗಡ ಹೊಳಿಸಿಕೊಂಬ ಲಿಂಗವು ತನ್ನ ಕೊರಳಲ್ಲಿ ಹತ್ತೆಯಾಗಿ ಕಟ್ಟಿರಲು, ನಾನು ಸತ್ಯಶುದ್ಧಶಿವಭಕ್ತನೆಂದರಿಯದೆ ಮತ್ತೆ ಅನ್ಯದೈವಕ್ಕೆರಗುವ ಕತ್ತೆಮೂಳರು ನೀವು ಕೇಳಿರೊ! ಗಂಡನ ಕೂಡೆ ಸಮಾಧಿಯ ಕೊಂಬ ಹೆಂಡತಿ ಅಪೂರ್ವ! ಹೆಂಡಿರ ಕೂಡೆ ಸಮಾಧಿಯ ಕೊಂಬ ಗಂಡರುಂಟೆ ಲೋಕದೊಳು ? ಛೀ ಛೀ ಹಂದಿಮೂಳರಿರ! ಈ ದೃಷ್ಟವ ಕಂಡಾದರೂ ನಾಚಲಿಲ್ಲವೆ ? ಭವಬಂಧನಂಗಳನಳಿಯಬೇಕೆಂದು ಬಹುದೈವಕ್ಕೆರಗಿದಡೆ, ಅವು ನಿಮ್ಮ ಸಂಗಡ ಒಂದಾದಡೂ ಹೂಳಿಸಿಕೊಂಬವೆ ? ನೀವು ಗಳಿಸಿದ ಅರ್ಥವನುಂಡುಂಡು, ನಿಮ್ಮ ಭವದೊಳಗೆ ನೂಂಕಿದ ಪಿಶಾಚಿಗಳ ನೋಡಿಕೊಂಡು ಪ್ರಮಾಣಿಸಿ, ಮರಳಿ ಲಿಂಗಭಕ್ತಿಯನರಿಯದೆ, ಬರಿದೆ ಶಿವಭಕ್ತರೆಂದು ಬೊಗಳುವ ಕುನ್ನಿಗಳು ಪರಿಭವಕ್ಕೆ ಒಳಗಾಗುವರೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಹರನಲ್ಲದೆ ದೈವವಿಲ್ಲೆಂದು ಶ್ರುತಿ ಸಾರುತಿರ್ದು, ವೇದಂಗಳು ಪೊಗಳುತಿರ್ದು, ನರರು ಸುರರು ಅರಿವಿರ್ದು, ಅರಿಯದೆ, ಹರಿಯು ದೈವ, ಬ್ರಹ್ಮನು ದೈವ, ಸುರಪನು ದೈವ, ಮನುಮುನಿ ತ್ರಿವಿಧ ದೇವರ್ಕಳು ದೈವವೆಂದು, ಚಂದ್ರ, ಸೂರ್ಯರು ದೈವವೆಂದು ಆರಾಧಿಸುವಿರಿ. ಪತಿವ್ರತೆಯಾದವಳಿಗೆ ತನ್ನ ಪುರುಷನ ನೆನೆಹಲ್ಲದೆ, ಅನ್ಯರ ನೆನೆವಳೆ ? ವೇಶಿಯಂತೆ ಹಲಬರು ನಂಟರೆ ? ಇವರೆಲ್ಲರ ಸಂತವಿಟ್ಟು, ಮತ್ತೆ ಶಿವನೆ ಎಂಬ ಶಿವದ್ರೋಹಿಗಳು ಕೇಳಿರೊ. ಹರಿ ದೈವವೆಂದು ಆರಾಧಿಸುವರೆಲ್ಲ ಮುಡುಹ ಸುಡಿಸಿಕೊಂಡು, ಮುಂದಲೆಯಲ್ಲಿ ಕೆರಹ ಹೊತ್ತರು. ಬ್ರಹ್ಮವೇ ದೈವವೆಂದು ಆರಾಧಿಸುವವರೆಲ್ಲ ಹೆಮ್ಮೆಯ ನುಡಿದು, ಹೋಮವನಿಕ್ಕಿ ಹೋತನ ಕೊಂದು ತಿಂದು, ಪಾತಕಕ್ಕೆ ಒಳಗಾದರು. ಸುರಪ ದೈವವೆಂದು ಆರಾಧಿಸಿದವರೆಲ್ಲ ತಮ್ಮ ಸಿರಿಯಲ್ಲಿ ಹೋಗಿ ಶಿವನಲ್ಲಿಗೆ ಸಲ್ಲದೆ ಹೋದರು. ಮನುಮುನಿದೇವರ್ಕಳು ದೈವವೆಂದು ಆರಾಧಿಸಿದವರೆಲ್ಲ ಹಿಂದುಮುಂದಾಗಿ ಅಡ್ಡಬಿದ್ದು , ಅವರು ಬಂದ ಭವಕ್ಕೆ ಕಡೆ ಇಲ್ಲ . ಇದನ್ನೆಲ್ಲ ಅರಿದು ಮತ್ತೆ ಇವರೇ ದೈವವೆಂದು ಆರಾಧಿಸುವ ವಿವರಗೆಟ್ಟ ಭವಭಾರಿಗಳ ನುಡಿಯ ಕೇಳಲಾಗದು, ಅವರೊಡನೆ ನುಡಿಯಲಾಗದು. ಅವರ ನಡೆಯ ಕಂಡರೆ ಛೀ ಎಂಬರು ನಿಮ್ಮ ಶರಣರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗುರುಕರಜಾತರಾಗಿ ಬಂದವರೆಂದು ಹರಿವಾಣತುಂಬಿ ಸೂಸುತ ನೀಡಿಸಿಕೊಂಡು, ತೋರಿಕೊಂಬ ಭೇದವನರಿಯದೆ ಕುಂಡಿತುಂಬಿದ ತೊಂಡುಪಶುವಿನಂತೆ ಕೈಬಾಯಿದುಡುಕಿ ತಿಂದು, ಸೂರ್ಯಾಡಿ ಸಮಯಾಚಾರಕ್ಕೆ ಛೀ ಛೀ ಎಂದು ಢೂಕ ಹಾಕುವರೆಂದು ಕೊಟ್ಟು ಕೊಟ್ಟುಂಬ ಸೊಟ್ಟನಡೆಯ ಭ್ರಷ್ಟ ಮೂಳ ಹೊಲೆಯರ ಹೊಟ್ಟೆಯ ತುಳಿದುಹಾಕುವರು ದುರ್ಗತಿಗೆ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅತತತತತ ಮಹೀಂದ್ರಜಾಲಿ ಜ್ಯಾಜ್ಯಾಜ್ಯಾಜ್ಯಾಜ್ಯಾ ಮಲನಾಡಚವಡಿ, ಛೀ ಕುರುಬರ ಪಿಡ್ಡಿ, ಛೀ ಹಲಗಿಸಕಿ ನಾಗಿ, ಗುಲು ಗುಲು ಗುಲು ಗುಲುಪುತ್ತ ಬಾ ಮತ್ತ ಬಾ ಅಹಾ ಉಪ್ ಮಂತ್ರ ಗಾಳಿ ಚೀಲ್ದಾಗಿಂದ ಬಾ ಕಿವಿಯೊಳಗೆ ಹೋಗು ಬಾಯೊಳಗಿಂದ ಬಾ ಮೂಗಿನೊಳಗ ಹೋಗು ಕಣ್ಣೊಳಗಿಂದ ಬಾ ತಲೆಯೊಳಗೆ ಹೋಗು ಬೆನ್ನೊಳಗಿಂದ ಬಾ ಮೈಯೊಳಗೆ ಹೋಗು ಅಂಗಾಲೊಳಗಿಂದ ಬಾ ಅಂಗೈಯೊಳಗೆ ಹೋಗು ಗಾಳಿಗೆ ಗಾಳಿ ಧೂಳಿಗೆ ಧೂಳಿ ಬೈಲಿಗೆ ಬೈಲು ನಿರ್ಬೈಲು ಮಹಾಂತಯೋಗಿ ಗಾಳಿಪೂಜಿ ಸುಡುಗಾಡಲಿಂದ ಬಂದೆವಯ್ಯಾ ಶಂಕರಪ್ರಿಯ ಚನ್ನಕದಂಬಲಿಂಗ ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->