ಅಥವಾ

ಒಟ್ಟು 12 ಕಡೆಗಳಲ್ಲಿ , 7 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ದೇಹವ ದಗ್ಧವ ಮಾಡಯ್ಯಾ. ಎನ್ನ ಕಾಯದಲಿಪ್ಪ ಕರ್ಮವ ತೊಡೆಯಯ್ಯಾ. ಎನ್ನ ಭಾವದಲಿಪ್ಪ ಭ್ರಮೆಯ ಜರಿಯಯ್ಯಾ. ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಭಕ್ತಂಗೆ ಬೇಡದ ಭಾಷೆ, ನಿನಗೆ ಕೊಡದ ಭಾಷೆ. ಭಕ್ತಂಗೆ ಓಡದ ಭಾಷೆ, ನಿನಗೆ ಕಾಡುವ ಭಾಷೆ. ಭಕ್ತಂಗೆ ಸತ್ಯದ ಬಲ, ನಿನಗೆ ಶಕ್ತಿಯ ಬಲ. ಇಬ್ಬರ ಗೆಲ್ಲ ಸೋಲಕ್ಕೆ ಕಡೆಯಿಲ್ಲ. ಈ ಇಬ್ಬರಿಗೆಯೂ ಒಡೆಯರಿಲ್ಲದ ಲೆಂಕ. ಇನ್ನು ಭಕ್ತನು ಭಕ್ತಿಯ ಛಲವ ಬಿಡನಾಗಿ. ಭಕ್ತ ಸೋತಡೆ, ಭಕ್ತನದೆ ಗೆಲುವು. ಭಕ್ತ ಗೆದ್ದಡಂತು ಗೆಲುವು? ಇದ ನೀನೆ ವಿಚಾರಿಸಿಕೊಳ್ಳಾ, ಭಕ್ತದೇಹಿಕದೇವ ಸಕಳೇಶ್ವರಾ.
--------------
ಸಕಳೇಶ ಮಾದರಸ
ಚಾಂಡಾಲನಾದಡೇನು ಶಿವಭಕ್ತನೆ ಕುಲಜನು. ಆತನೊಡನೆ ನುಡಿಗಡಣವ ಮಾಡೂದೆನುತಿ[ದೆ] ವೇದ ಶ್ರುತಿ. ಕುಲವ ನೋಡಲು ಬೇಡ, ಛಲವ ನೋಡಲು ಬೇಡ. ಎಲ್ಲರಿಂದ ಹಿರಿಯರು ಆತನಿದ್ದಲ್ಲಿ ಇರುತಿಪ್ಪುದೆನುತಿ[ದೆ] ವೇದ. ಒಂ ಅಪಿ ವಾ ಯಶ್ಚಾಂಡಾಲಶ್ಶಿವ ಇತಿ ವಾಚಂ ವದೇತ್ತೇನ ಸಹ ಸಂವಿಶೇತ್ತೇನ ಸಹ ಭುಂಜೇತ್ ತೇನ ಸಹ ಸಂವದೇತ್ || ಇಂತೆನುತಿದ್ದುದು ಶ್ರುತಿವಾಕ್ಯ. ನಮ್ಮ ಭಕ್ತರನು ಅವರಿವರೆಂದು ಕುಲವನೆತ್ತಿ ನುಡಿದಂಗೆ, ಇಪ್ಪತ್ತೇಳುಕೋಟಿನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಗುರುವಾದಡೂ ತನ್ನ ಶಿಷ್ಯನ ಕೈಯ(ಕೈಯಿಂದ?) ಜಂಗಮಕ್ಕೆ ಸೇವೆಯ ಮಾಡಿಸದೆ, ತಾ ಮಾಡಿಸಿಕೊಂಡನಾದಡೆ ಶ್ವಾನ ಒಡಲ ಹೊರೆದಂತೆ. ಅದು ಹೇಗೆಂದಡೆ; ತನ್ನ ಲಿಂಗವನಾ ಶಿಷ್ಯಂಗೆ ಕೊಟ್ಟು, ತಾನು ವ್ರತಗೇಡಿಯಾಗಿ ಹೋಹಲ್ಲಿ, ಆ ಜಂಗಮವೆ ಸಾಕ್ಷಿಯಾಗಿರ್ದು ವಿಭೂತಿವೀಳೆಯವ ತೆಗೆದುಕೊಂಡು ಗುರು ಶಿಷ್ಯರಿಬ್ಬರ ಪೂರ್ವಾಶ್ರಯವ ಕಳೆದರಾಗಿ, ಆ ಜಂಗಮಕ್ಕೆ ಮಾಡಿಸುವುದು. ಗುರುವಾದಡಾಗ ಲಿಂಗವಾದಡಾಗಲಿ ಜಂಗಮ ತಾನಾದಡೂ ಆಗಲಿ ಜಂಗಮ ಪಾದೋದಕ ಪ್ರಸಾದವಿಲ್ಲದವರನೊಲ್ಲೆನೊಲ್ಲೆ. ಅವರು ಬರುಕಾಯರೆಂಬೆ, ಬರುಮುಖಿಗಳೆಂಬೆ, ಅಂಗಹೀನರೆಂಬೆ ಲಿಂಗಹೀನರೆಂಬೆ. ಜಂಗಮದಲ್ಲಿ ಗುಣವ ನೋಡದೆ, ಅವಗುಣವ ನೋಡದೆ ರೂಪವ ನೋಡದೆ, ನಿರೂಪವ ನೋಡದೆ, ಕೋಪವ ನೋಡದೆ, ಶಾಂತವ ನೋಡದೆ, ವಿವೇಕವ ನೋಡದೆ, ಅವಿವೇಕವ ನೋಡದೆ, ಮಲಿನವ ನೋಡದೆ, ಅಮಲಿನವ ನೋಡದೆ, ರೋಗವ ನೋಡದೆ, ನಿರೋಗವ ನೋಡದೆ, ಕುಲವ ನೋಡದೆ, ಛಲವ ನೋಡದೆ, ಆಶೆಯ ನೋಡದೆ, ನಿರಾಶೆಯ ನೋಡದೆ, ಅಂಗದ ಮೇಲಣ ಲಿಂಗವನೆ ನೋಡಿ, ಜಂಗಮಕ್ಕೆ ಮಾಡಿ ನೀಡಿ, ಪಾದೋದಕ ಪ್ರಸಾದವ ಕೊಂಬ ಶರಣನ ಬಸವಣ್ಣನೆಂಬೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಕ್ತೆಯಾನಪ್ಪೆನಯ್ಯಾ ; ಕರ್ತೃಭೃತ್ಯವ ನಾನರಿಯೆ. ಮಾಹೇಶ್ವರಿಯಾನಪ್ಪೆನಯ್ಯಾ ; ವ್ರತ ನೇಮ ಛಲವ ನಾನರಿಯೆ. ಪ್ರಸಾದಿಯಾನಪ್ಪೆನಯ್ಯಾ ; ಅರ್ಪಿತನರ್ಪಿತವೆಂಬ ಭೇದವ ನಾನರಿಯೆ. ಪ್ರಾಣಲಿಂಗಿಯಾನಪ್ಪೆನಯ್ಯಾ ; ಅನುಭಾವದ ಗಮನವ ನಾನರಿಯೆ. ಶರಣೆಯಾನಪ್ಪೆನಯ್ಯಾ? ಶರಣಸತಿ ಲಿಂಗಪತಿ ಎಂಬ ಭಾವವ ನಾನರಿಯೆ. ಐಕ್ಯಳಾನಪ್ಪೆನಯ್ಯಾ? ಬೆರಸಿ ಭೇದವ ನಾನರಿಯೆ. ಚೆನ್ನಮಲ್ಲಿಕಾರ್ಜುನಯ್ಯಾ, ಷಟ್‍ಸ್ಥಲದಲ್ಲಿ ನಿಃಸ್ಥಲವಾಗಿಪ್ಪೆನು.
--------------
ಅಕ್ಕಮಹಾದೇವಿ
ಸೂರ್ಯಂಗೆ ಅಲ್ಲಿ ಇಲ್ಲಿ ಎಂಬ ಸಂದೇಹವುಂಟೆ ? ಎಲ್ಲೆಲ್ಲಿಯೂ ತನ್ನ ಪ್ರಭೆಯ ಬೀರುತಿಪ್ಪುದು. ಬಲ್ಲ ಘನಮಹಿಮನ ಎಲ್ಲರು ಜರಿದಡೇನು ಕಿಂಕಿಲನೆ ? ಸರ್ವಾಂಗವು ಲಿಂಗವಾದ ನಿರಾಲಂಬಿ ಕಾಬರ ಕಂಡು ತಾ ಕಾಬವನಲ್ಲ; ಅರಿವವರ ಕಂಡು ತಾನರಿವವನಲ್ಲ; ಬಿಡುವವರ ಕಂಡು ತಾ ಬಿಡುವವನಲ್ಲ; ಹಿಡಿದ ಛಲವ ತಾ ಬಿಡುವವನಲ್ಲ, ಅಮುಗೇಶ್ವರಲಿಂಗವನರಿದವನು.
--------------
ಅಮುಗೆ ರಾಯಮ್ಮ
ಹಿಡಿದ ಛಲವ ಬಿಡದೆ ನಡೆಸುವರ ಕಂಡಡೆ ಎನ್ನ ಕರ್ತು ಬಾರೆಂಬರಯ್ಯಾ ಮೃಡನ ಶರಣರು. ಎನ್ನೊಡೆಯ ಕಡುಗಲಿಯಾಗಿ ಬಿಡದೆ ಆಚರಿಸಿ ಬಳಲಿದಿರಯ್ಯಾ ಅಮುಗೇಶ್ವರನೆಂಬ ಲಿಂಗವನರಿದ ಶರಣರು.
--------------
ಅಮುಗೆ ರಾಯಮ್ಮ
ಗುರುವಿನಡಿಗೆರಗೆನೆಂಬ ಭಾಷೆ ರಿನಗೆ. ಲಿಂಗವ ಪೂಜಿಸಿ ವರವ ಬೇಡೆನೆಂಬ ಭಾಷೆ ಎನಗೆ. ಜಡೆಮುಡಿಯುಳ್ಳ ನಿಜಜಂಗಮವ ಕಂಡು ಅಡಿಗೆರಗದ ಭಾಷೆ ಎನಗೆ. ಹಿಡಿದ ಛಲವ ಬಿಡದೆ ನಡೆಸಿ ಮೃಡನ ಪಡೆದೆಹೆನೆಂಬ ಭಾಷೆ ಎನಗೆ. ಕಡುಗಲಿಯಾಗಿ ಆಚರಿಸಿ ಜಡಿದೆನು ಅಜ್ಞಾನಿಗಳ ಬಾಯ ಕೆರಹಿನಲ್ಲಿ. ಮಾತಿನಲ್ಲಿ ವೇಷಧಾರಿಗಳು ಮೃಡನ ಅರಿದೆಹೆನೆಂದು ಗಳಹುತಿಪ್ಪರೆ, ಕೆರಹಿನಟ್ಟೆಯಲ್ಲಿ ಹೊಯ್ಯದೆ ಮಾಣ್ಬನೆ ಅರಿವುಳ್ಳ ಘನಮಹಿಮನು ¯ ಅಮುಗೇಶ್ವರನೆಂಬ ಲಿಂಗವ ಅರಿದಿಪ್ಪ ಮಹಾಘನಮಹಿಮನ ನಾನೇನೆಂಬೆನಯ್ಯಾ ?
--------------
ಅಮುಗೆ ರಾಯಮ್ಮ
ಕುಲವ ನೋಡದೆ, ಛಲವ ನೋಡದೆ, ನಿಲವ ನೋಡದೆ ಕೂಡಿದ ಬಳಿಕ, ಅಲ್ಲಿ ಹೆಚ್ಚು ಕುಂದನರಸಲುಂಟೆ ಮುಂದುವರಿದು ಜಂಗಮಕ್ಕೆ ಭಕ್ತಿಯ ಮಾಡೆಂದು ನಿಮ್ಮ ಕಾರುಣ್ಯವನುಪದೇಶವ ಮಾಡಿದ ಬಳಿಕ ಬಂದುದ ಬಂದಂತೆ ಸಮನಿಸಿಕೊಳ್ಳಬೇಕಲ್ಲದೆ ಅಂತಿಂತೆನಬಾರದು ಕೇಳಯ್ಯಾ. ನೀನು ನಿರಾಕಾರ, ಸಾಕಾರವೆಂಬೆರಡು ಮೂರ್ತಿಯ ಧರಿಸಿಪ್ಪೆಯಾಗಿ, ಒಂದ ಜರೆದು ಒಂದ ಹಿಡಿದಿಹೆನೆಂದಡೆ ಅದೆ ಕೊರತೆ ನೋಡಾ ಪ್ರಭುವೆ, ಕೂಡಲಸಂಗಮದೇವಾ.
--------------
ಬಸವಣ್ಣ
ಹೆದರದಿರು ಮನವೆ, ಹಿಮ್ಮೆಟ್ಟದಿರು ಮನವೆ, ಹಿಡಿದ ಛಲವ ಬಿಡದಿರು ಮನವೆ. ಜರಿದರೆಂದು ಝಂಕಿಸಿದರೆಂದು ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧದಲ್ಲಿ ಘಟವ ಬಿಡದೆ ಗುರುವಾದಡು ಲಿಂಗವಾದಡು ಜಂಗಮವಾದಡು ನೊಸಲಲ್ಲಿ ಕಣ್ಣುಳ್ಳ ಪಶುಪತಿಯಾದಡು ತೆತ್ತಿಗರು ಕಂಡು ಒತ್ತಿ ನುಡಿದರೆಂದು ಘಟವ ಬಿಡುವ ಘಟಕರ್ಮಿಗಳು ಏಳೇಳು ಜನ್ಮದಲ್ಲಿ ಸೂಕರನ ಹೊಟ್ಟೆಯಲ್ಲಿ ಹುಟ್ಟಿ, ನೂರೊಂದು ಕುಲ ಹದಿನೆಂಟು ಜಾತಿಯ ಅಮೇಧ್ಯವ ತಿಂದು ಹೊಲೆಯರ ಮನೆಯ ಹೊಸ್ತಿಲ ಕಾಯ್ದುಕೊಂಡಿಪ್ಪರಯ್ಯಾ : ಅಮುಗೇಶ್ವರಲಿಂಗವೆ, ನಿಮ್ಮಾಣೆ ನಿಮ್ಮ ಪ್ರಮಥರಾಣೆ.
--------------
ಅಮುಗೆ ರಾಯಮ್ಮ
ಹೊಡವುಂಟು ದೇವರ ತಲೆಯ ತಾಟಿಸಿಕೊಂಬರು ನೆಲಕೆಯೂ ತಲೆಗೆಯೂ ನಂಟೊಳವೆ ? ಕೊಲಬೇಡ ಪ್ರಾಣಿಯ, ಗೆಲಬೇಡ ನಂಬಿದರ, ಛಲವ ಸಾಧಿಸಬೇಡ ಗೋತ್ರದಲ್ಲಿ. ಕೊಲುವವ ಗೆಲುವವ ಛಲವ ಸಾಧಿಸುವವ ಹೊಲೆಯ[ರು] ಮಾದಿಗರೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->