ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲದಲ್ಲಿ ಶಿವಕುಲವೆಂಬೆ, ಛಲದಲ್ಲಿ ಶಿವಛಲವೆಂಬೆ, ರೂಪದಲ್ಲಿ ಶಿವರೂಪವೆಂಬೆ, ತಪದಲ್ಲಿ ಶಿವತಪವೆಂಬೆ. ಇಂತೀ ಅಷ್ಟಮದಮುಖದಲ್ಲಿ ಶಿವಮುಖವಾಗಿಪ್ಪ ಶಿವಶರಣರ ಚರಣಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ, ಚಕೋರನ ಧ್ಯಾನವೆಂತಿಪ್ಪದು,_ಅಂತಾಗಿದ್ದೆ ನಾನು. ಮಾತೆ ವಿಯೋಗವಾದ ಶಿಶುವಿನ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಬಂಧನದಲ್ಲಿ ಸಿಕ್ಕಿದ ಫಣಿಯ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ರಾತ್ರಿಯೊಳು ಮುಗಿದ ಪದ್ಮದ ಭ್ರಮರನ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಸ್ವಪ್ನದಲ್ಲಿ ದುಷ್ಟ ಕೇಸರಿಯ ಧ್ಯಾನದ ಮದಹಸ್ತಿ ಎಂತಿಪ್ಪುದು_ಅಂತಾಗಿದ್ದೆ ನಾನು. ನೋಟವಗಲಿದ ನೇಹದ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಬ್ರಹ್ಮಪಾಶ ವಿಷ್ಣುಮಾಯವನತಿಗಳೆದ ಛಲದಲ್ಲಿ ಏನೆಂದರಿಯದಿದ್ದೆ ನಾನು. ಗುಹೇಶ್ವರಲಿಂಗವೆ ಸಂಗನಬಸವಣ್ಣನೊಳಗೆ ಲೀಯವಹ ಭರದಲ್ಲಿ ಏನೆಂದರಿಯದಿದ್ದೆ ನಾನು.
--------------
ಅಲ್ಲಮಪ್ರಭುದೇವರು
ಅಂಗದ ಆಪ್ಯಾಯನಕ್ಕೆ ಲಿಂಗವ ಮರೆದು ತಿರುಗುವ ಭಂಡಭವಿಗಳನೇನೆಂಬೆನಯ್ಯಾ ? ಲಿಂಗದಲ್ಲಿ ನಿತ್ಯರಲ್ಲ ; ಜಂಗಮದಲ್ಲಿ ಪ್ರೇಮಿಗಳಲ್ಲ ; ಹಿಡಿದ ಛಲದಲ್ಲಿ ಕಡುಗಲಿಗಳಲ್ಲ. ಮೃಡನ ಕಂಡೆಹೆನೆಂಬ ಮೂರ್ಖರ ಮುಖವ ನೋಡಲಾಗದು ; ಅವರಡಿಯ ಮೆಟ್ಟಲಾಗದು ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
-->