ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಪಟ್ಟಣದೊಳಗೆ ಛಪ್ಪನ್ನ ಗೃಹಕ್ಕೆ ಒಂದೆ ಕೀಲಾಗಿ, ಆ ಕೀಲಿನ ಸಕೀಲವನಾರಿಗೂ ಕಾಣಬಾರದೆಂದೂ_ ಭಾವಿಸಿ ಕಂಡರು ಒಂದೆ ಮನದವರು. ಉಳಿದವರೆಲ್ಲ ಆ ಕೀಲಿನೊಳಗಾಗಿ ಜೀವ ಜೀರ್ಣವಾಯಿತ್ತು. ಹದಿನೆಂಟು ಸ್ಥಾನದ ಕೀಲಗಳ ಸಂಗವನಳಿದು, ಸುಸಂಗವಾಗಿ ಶೃಂಗಾರ ಭೃಂಗಾರವಾಗದೆ ಒಂದು ಮುಖದಲ್ಲಿ ನಿಂದು ಗುಹೇಶ್ವರಾ_ನಿಮ್ಮ ಶರಣ ಚನ್ನಬಸವಣ್ಣ ಹೊರಗಾದ !
--------------
ಅಲ್ಲಮಪ್ರಭುದೇವರು
ಈರೇಳು ರತ್ನ, ಹದಿನೆಂಟು ಲಕ್ಷಗಜ, ನಾರಿಯರು ನಾಲ್ಕು ಲಕ್ಷವು ಮೂವತ್ತೆರಡುಸಾವಿರ, ಮಕ್ಕಳು ಹದಿನಾರು ಲಕ್ಷ, ಅವರುಗಳೇರುವ ರಥಂಗಳು ಸೂರ್ಯನ ರಥಕ್ಕೆ ಸರಿಮಿಗಿಲೆನಿಸುವ ರಥಂಗಳು, ಸಾಲದೆ, ಸಿರಿಗೆ ನೆಲೆಯೆನಿಸುವ ಅಸಂಖ್ಯಾತ ಪುರ, ಮೂರುವರೆ ಕೋಟಿ ಬಂಧುಗಳು, ಮೂವತ್ತೆಂಟು ಕೋಟಿ ಜಾತ್ಯಶ್ವ, ಇಪ್ಪತ್ತೆಂಟು ಕೋಟಿ ಮೈಗಾವಲ ವೀರಭಟರು, ಛಪ್ಪನ್ನ ದೇಶದ ರಾಯರುಗಳೆಲ್ಲರು ಕಪ್ಪಕಾಣಿಕೆಯಂ ತೆತ್ತು ಬಹರು. ಕೂಡಲಸಂಗಮದೇವಾ, ನಿಮ್ಮ ಕೃಪೆ ತಪ್ಪಿದಲ್ಲಿ ಆ ಸಗರ ಕಾರ್ತವೀರ್ಯರೊಂದು ಕ್ಷಣದಲ್ಲಿ ಮಡಿದರು.
--------------
ಬಸವಣ್ಣ
ಪೃಥ್ವಿ ಅಪ್ಪು ತೇಜ ವಾಯು ಆಕಾಶದ ಕೊನೆಯ ಮೊನೆಯ ಮೇಲೆ, ಇಪ್ಪತ್ತೈದು ಗ್ರಾಮಂಗಳು, ಚೌಷಷ್ಟಿ ಪಟ್ಟಣ. ಛಪ್ಪನ್ನ ವೀಥಿಗಳ ದಾಂಟಿ, ಛತ್ತೀಸ ಪುರದ ರಚನೆಯ ನೋಡಬಲ್ಲೆವೆಂಬರು, ತ್ರಿಕೋಣದ್ವಾರಮಂಟಪದ ಅಯ್ವೆತ್ತೆರಡಕ್ಷರದ, ಶಾಸನದ ಲಿಪಿಯಂ ತಿಳಿಯಲೋದಿ, ಎಂಬತ್ತುನಾಲ್ಕುಲಕ್ಷ ದ್ವಾರದೊಳಗೆ ಹೊಕ್ಕು ಹೊರವಡುವ ಜೀವನ ತಿಳಿಯಲರಿಯದೆ ದಕ್ಷಿಣದ್ವಾರದಿಂದ ಉತ್ತರದ್ವಾರಕ್ಕೆ ಬಂದು, ಪಶ್ಚಿಮವಾಯುವ ಕೊನೆಯ ಮೊನೆಯ ಮೇಲೆ ಬೆಳಗುವ ಜ್ಯೋತಿಯ ನಿಮ್ಮ ಶರಣರಲ್ಲದೆ, ಲೋಕದ ಅಜ್ಞಾನಿಗಳೆತ್ತ ಬಲ್ಲರು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಹರ[ನಿತ್ತಾ]ಗ್ರಹ ನಿಗ್ರಹದ ಬೆಸನ, ಗುರುನಿರೂಪವೆಂದು ಕೈಕೊಂಡು, ಕರುಣಿ ಬಸವಣ್ಣ ಕೈಲಾಸದಿಂದ ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬೇಕೆಂದು ಏಳುನೂರೆಪ್ಪತ್ತು ಅಮರಗಣಂಗಳು ಸಹಿತ ಮತ್ರ್ಯಲೋಕಕ್ಕೆ ಬಂದನಯ್ಯಾ. ಶಿವಸಮಯಕ್ಕಾಧಾರವಾದನಯ್ಯಾ, ಬಸವಣ್ಣನು. ಜಡರುಗಳ ಮನದ ಕತ್ತಲೆಯ ಕಳೆಯಲೆಂದು ಕಟ್ಟಿತ್ತು ಕಲ್ಯಾಣದಲ್ಲಿ ಮಹಾಮಠವು. ಪರಮನಟ್ಟಿದ ಓಲೆ ಬಂದಿಳಿಯಿತ್ತು, ಬಿಜ್ಜಳನ ಸಿಂಹಾಸನದ ಮುಂದೆ. ಅದತಂದು ಓದಿದಡೆ ಸೃಷ್ಟಿಯ ಸೇನಬೋವರಿಗೆ ತಿಳಿಯದು ಛಪ್ಪನ್ನ ದೇಶದ ಭಾಷೆಯ ಲಿಪಿ ಮುನ್ನವಲ್ಲ. ಇದನೋದಿದವರಿಗೆ ಆನೆ ಸೇನೆ ಕುದುರೆ ಭಂಡಾರ ಅರವತ್ತಾರು ಕರಣಿಕರಿಗೆ ಮುಖ್ಯನ ಮಾಡುವೆನೆಂದು ಬಿಜ್ಜಳ ಭಾಷೆಯ ಕೊಡುತ್ತಿರಲು, ಹರನಿರೂಪವ ಶಿರದ ಮೇಲಿಟ್ಟು ಶಿವಶರಣೆಂದು ಬಸವಣ್ಣನೋದಿ ಮೆಟ್ಟಿ ತೆಗೆಸಿದನಯ್ಯಾ ಅರವತ್ತಾರು ಕೋಟಿ ವಸ್ತುವ ಅರಮನೆಗೆ. ರಾಜ್ಯಕ್ಕೆ ಅರಮನೆಗೆ [ಶಿರಃ ಪ್ರಧಾನ]ನಾಗಿ ಹರಗಣಂಗಳಿಗೆ ಗತಿಮತಿ ಚೈತನ್ಯನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಅಂಡಜದೊಳಗಿದ್ದು ಶಿವನ ಭಂಡಾರಿಯಾದನಯ್ಯಾ ಎನ್ನ ತಂದೆ ಪೂರ್ವಾಚಾರಿ ಸಂಗನಬಸವಣ್ಣನು.
--------------
ಚನ್ನಬಸವಣ್ಣ
-->