ಅಥವಾ

ಒಟ್ಟು 24 ಕಡೆಗಳಲ್ಲಿ , 12 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಾವಧಾನಿ ಸಮಯಪ್ರಸಾದಿ ನೋಡಯ್ಯಾ, ಲಿಂಗಾರ್ಪಿತದಲ್ಲಿ ಸರ್ವಾವಧಾನಿ ನೋಡಯ್ಯಾ, ಅಯ್ಯಾ, ಅನಾಹತಂಗಳ ಮುನ್ನವೆ ಇರಲೀಯ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
--------------
ಬಸವಣ್ಣ
ಭಕ್ತಿಸೂತ್ರ ಬಸವಣ್ಣಂಗೆ, ಭಾವಸೂತ್ರ ಚೆನ್ನಬಸವಣ್ಣಂಗೆ, ಜ್ಞಾನಸೂತ್ರ ಪ್ರಭುದೇವಂಗೆ. ಇಂತೀ ಸ್ಥೂಲತನು ಬಸವಣ್ಣಂಗೆ, ಸೂಕ್ಷ್ಮತನು ಚೆನ್ನಬಸವಣ್ಣಂಗೆ, ಕಾರಣತನು ಪ್ರಭುದೇವಂಗೆ. ಕಾಯ ಬಸವಣ್ಣನಾಗಿ, ಜೀವ ಚೆನ್ನಬಸವಣ್ಣನಾಗಿ, ಉಭಯದರಿವು ಪ್ರಭುದೇವರಾಗಿ. ಇಂತೀ ತ್ರಿವಿಧ ಪ್ರಸಾದ ಎನಗೆ ನಿಂದು, ಎನ್ನ ಜನ್ಮವಾಸನೆ ಬಿಡದಿದೆ ನೋಡಾ. ಈ ವಾಸನೆ ನಿಃಕಳಂಕ ಮಲ್ಲಿಕಾರ್ಜುನ ನಷ್ಟವಾಗಿಯಲ್ಲದೆ, ಎನ್ನ ಭಾವ ನಷ್ಟವಿಲ್ಲ.
--------------
ಮೋಳಿಗೆ ಮಾರಯ್ಯ
ಸುವರ್ಣಕ್ಕೆ ಅಲಂಕಾರಕ್ಕೆ ಭೇದವುಂಟೆ ಅಯ್ಯಾ? ಜ್ಯೋತಿಗೆ ಪ್ರಕಾಶಕ್ಕೆ ಭೇದವುಂಟೆ ಅಯ್ಯಾ? ನೂಲಿಂಗೆ ಪಟಕ್ಕೆ ಭೇದವುಂಟೆ ಅಯ್ಯಾ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ಚೆನ್ನಬಸವಣ್ಣಂಗೆ ನನಗೆ ಭೇದವುಂಟೆ ಅಯ್ಯಾ? ಇಲ್ಲ ನೋಡಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಲೋಕದಿಚ್ಛೆಯ ನಡೆವವನಲ್ಲ, ಲೋಕದಿಚ್ಛೆಯ ನುಡಿವವನಲ್ಲ, ಲೋಕವಿರಹಿತ ಶರಣ, ಶರಣವಿರಹಿತ ಲೋಕವೆಂಬುದು ಕಾಣಬಂದಿತ್ತು ನೋಡಾ. ಲಿಂಗವೆ ಗೂಡಾಗಿ, ಜಂಗಮವೆ ಸ್ವಾಯತವಾಗಿ ಪ್ರಸಾದವೆ ಪ್ರಾಣವಾಗಿ ಪರಿಣಾಮದಲ್ಲಿ ಇಪ್ಪ ನೋಡಯ್ಯಾ. ಕೂಡಲಸಂಗಮದೇವಾ, ನಿಮ್ಮ ಶರಣ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ಹಿಡಿಯಿಲ್ಲದ ಶಸ್ತ್ರ, ಕೀಲಿಲ್ಲದ ಕತ್ತರಿ, ಉಭಯ ಒಡಗೂಡದ ಚಿಮ್ಮುಟ, ರೂಹಿಲ್ಲದ ಚಣ ಹಲ್ಲಿಲ್ಲದ ಹಣಿಗೆ, ಮಲವಿಲ್ಲದ ಬೆಳಗಿನ ಮುಕುರವ ಹಿಡಿದು ಶರಣರೆಲ್ಲರ ಅಡಿವಿಡಿದಾಡ ಬಂದೆ. ಚೆನ್ನಬಸವಣ್ಣಂಗೆ ಭೃತ್ಯನಾಗಿ, ಶರಣತತಿಗೆ ಲೆಂಕನಾಗಿ ಸತ್ಯ ಗುರುಚರದ ಕರ್ತೃಸ್ವರೂಪಕ್ಕೆ ಡಿಂಗರಿಗ ಉಭಯ ಡಿಂಗರಿಗರ ಪ್ರತಿ ಡಿಂಗರಿಗರ ಕಂದನೆಂದು ಪ್ರತಿಪಾಲಿಸಿಕೋ ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗಾ.
--------------
ಶ್ರೀಗುರು ಪ್ರಭುನ್ಮುನೀಶ್ವರ
ಜನಕ್ಕೆ ಜಂಗಮನಲ್ಲದೆ ಎನ್ನ ಮನಕ್ಕೆ ಜಂಗಮನಲ್ಲ ನೋಡಾ; ಎನ್ನ ಮನಕ್ಕೆ ಜಂಗಮನಲ್ಲದೆ ಎಮ್ಮ ಪುರಾತರಿಗೆ ಜಂಗಮನಲ್ಲ ನೋಡಾ; ಎಮ್ಮ ಪುರಾತರಿಗೆ ಜಂಗಮನಲ್ಲದೆ ಚೆನ್ನಬಸವಣ್ಣಂಗೆ ಜಂಗಮನಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ವೀರಧಾರುಣಿಯೊಳಗೆ ನಾರಿ ಶೃಂಗಾರವ ಮಾಡಿ ಈರೇಳು ಭುವನವ ಅಮಳೋಕ್ಯವ ಮಾಡಿ ಬಿಂದು ಶಕ್ತಿಯ ಭೇದ ಸಂದ ಯೋಗದ ಸುಖವ ತಂದು ಮೂರ್ತಿಗೊಳಿಸಿದವರಾರು ? ಒಂದೆರಡರ ನುಡಿಯ ಮತ್ತೊಂದು ಗ್ರಹಿಸಿತ್ತ ಕಂಡೆ. ಬಿಂದುವಿನ ರಸದ ಪರೀಕ್ಷೆಯ ಭೇದವ ಚಂದ್ರಕಾಂತದ ಗಿರಿಗೆ(ಯ?) ಅರುಣ ಚಂದ್ರರೊಡನೆ ಇಂಬಿನಲ್ಲಿಪ್ಪ ಪರಿಯ ನೋಡಾ ! ಅಂಗೈಯ ತಳದೊಳು ಮೊಲೆ ಕಂಗಳಲ್ಲಿ ಕರಸನ್ನೆ ಇಂಬಿನಲ್ಲಿ ನೆರೆವ ಸುಖ ಒಂದೆ ! ಆದಿ ಅನಾದಿಯ ಪ್ರತಿಬಿಂಬ ಇಂದೆನಗೆ ತೋರಿತ್ತು. ಗುಹೇಶ್ವರನ ಶರಣ ಚೆನ್ನಬಸವಣ್ಣಂಗೆ ಶರಣೆನುತಿರ್ದೆನು.
--------------
ಅಲ್ಲಮಪ್ರಭುದೇವರು
ಪ್ರಸಾದಿಯ ಪ್ರಸಾದದಲೊದಗಿದ ಪ್ರಸಾದಿಯನು ಏನೆಂದುಪಮಿಸುವೆನು ಏನೆಂದು ಸ್ತುತಿಸುವೆನಯ್ಯಾ, ಮಹಾಪ್ರಸಾದಿಗೆ ಮಹಾಘನಪ್ರಸಾದವಾದ ಪ್ರಸಾದಿಯನು ಅಗಮ್ಯಪ್ರಸಾದದಲ್ಲಿ ಸ್ವಾಯತವಾದ ಕೂಡಲಸಂಗಮದೇವಾ, ನಿಮ್ಮ ಶರಣ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ಅರುವತ್ತಾರುತತ್ವಂಗಳ ಮೇಲೆ ನಿನ್ನ ಅರಿವವರಿಲ್ಲ. ಮೂವತ್ತಾರುತತ್ವಂಗಳ ಮೇಲೆ ನೀನು ರಚ್ಚೆಗೆ ಬಂದವನಲ್ಲ. ಕೈಲಾಸಕ್ಕೆ ಬಂದು ನೀನು ಬ್ರಹ್ಮ ವಿಷ್ಣು ರುದ್ರನ ವಾದದಿಂದ ಮತ್ರ್ಯಕ್ಕೆ ಬಂದವನಲ್ಲ. ಅನಾದಿಯಿಂದ ಅತ್ತಲಾದ ಬಸವನಭಕ್ತಿಯ ನೋಡಲೆಂದು ಬಂದವನಲ್ಲದೆ ಮಾಯಾವಾದದಿಂದ ಮತ್ರ್ಯಕ್ಕೆ ಬಂದನೆಂದು ನುಡಿವವರ ನಾಲಗೆಯ ಕಿತ್ತು ಕಾಲು ಮೆಟ್ಟಿ ಸೀಳುವೆನು. ಹೊಟ್ಟೆಯ ಸೀಳಿ, ಮುಳ್ಳಿನ ರೊಂಪೆಯ ಮಡಗುವೆನು ; ಅದೇನು ಕಾರಣವೆಂದಡೆ ಬಸವಣ್ಣಂಗೆ ಭಕ್ತಿಯ ತೋರಲೆಂದು, ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು, ಘಟ್ಟಿವಾಳ, ಮಹಾದೇವಿ, ನಿರವಯಸ್ಥಲದಲ್ಲಿ ನಿಂದ ಅಜಗಣ್ಣ, ಬೊಂತಲಾದೇವಿ ಇಂತಿವರಿಗೆ ಸ್ವತಂತ್ರವ ತೋರಲೆಂದು ಬಂದೆಯಲ್ಲಾ. ಅಮುಗೇಶ್ವರಲಿಂಗಕ್ಕೂ ಎನಗೂ ಪರತಂತ್ರವ ತೋರದೆ ಸ್ವತಂತ್ರನ ಮಾಡಿ ನಿರವಯಸ್ಥಲದಲ್ಲಿ ನಿಲ್ಲಿಸಿದೆಯಲ್ಲಾ, ಪ್ರಭುವೆ
--------------
ಅಮುಗೆ ರಾಯಮ್ಮ
ಒಂದು ಕೈಯ ಬಯಲ ಎನಗೆ ಕೊಟ್ಟ. ಒಂದು ಕೈಯ ಬಯಲ ಚೆನ್ನಬಸವಣ್ಣಂಗೆ ಕೊಟ್ಟ. ನೀವು ಬಂದಹರೆಂದು ಎಂಟುಸಾವಿರವರುಷ ಒಗೆದೊಗೆದು ಬಿಳಿದು ಮಾಡುತ್ತಿದ್ದೆನು. ಒಂದು ಬಿಳಿದ, ಬಸವಣ್ಣ ಲಿಂಗಕ್ಕೆ ಕೊಡು ಎಂದಡೆ, ಲಿಂಗಕ್ಕೆ ಕೊಡಲೊಲ್ಲದೆ ತಲೆಯ ಸುತ್ತಿಕೊಂಡ. ಮಡಿಯ ಕೂಲಿಯ ಬೇಡಹೋದಡೆ, ಬಿಳಿದ ಹರಿದು, ಮೇಲೆ ಬಿಸಾಟನು. ನೀನುಟ್ಟ ಬೀಳುಡಿಗೆಯನು, ಚೆನ್ನಬಸವಣ್ಣನ ಕೈಯ ನಿರಾಳವನು. ಎನಗೆ ಕೊಡಿಸಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ವರ್ತ[ನ] ಶುದ್ಧವಾದಲ್ಲಿ ಭಕ್ತಸ್ಥಲವಾಯಿತ್ತು. ಕ್ರೀಭಾವ ಶುದ್ಧವಾದಲ್ಲಿ ಮಾಹೇಶ್ವರಸ್ಥಲವಾಯಿತ್ತು. ನಡೆನುಡಿ ಶುದ್ಧವಾಗಲಾಗಿ ಪ್ರಸಾದಿಸ್ಥಲವಾಯಿತ್ತು. ಕಾಯ ಜೀವದ ಭೇದವನರಿಯಲಿಕ್ಕೆ ಪ್ರಾಣಲಿಂಗಿಸ್ಥಲವಾಯಿತ್ತು. ಸಕಲವನರಿದು ಹಿಡಿದು ಬಿಡುವಲ್ಲಿ ಶರಣಸ್ಥಲವಾಯಿತ್ತು. ಇಂತೀ ಐದರಲ್ಲಿ ಏರಿ ಭೇದವಿಲ್ಲದೆ ನಿರಾಕರಿಸಿ ನಿಂದಲ್ಲಿ ಐಕ್ಯಸ್ಥಲವಾಯಿತ್ತು. ಇಂತೀ ಆರುಸ್ಥಲವನರಿದು, ಮತ್ತಿವರೊಳಗಾದ ನಾನಾ ಸ್ಥಲಂಗಳ ತಿಳಿದು ನಿಂದ ಸಂಗನಬಸವಣ್ಣಂಗೆ, ಚೆನ್ನಬಸವಣ್ಣಂಗೆ, ಪ್ರಭು, ಮಡಿವಾಳಯ್ಯಂಗೆ, ನಮೋ ನಮೋ ಎನುತಿದ್ದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕರ್ಮವೆಂಬ ಕದಳಿ ಎನಗೆ, ಕಾಯವೆಂಬ ಕದಳಿ ನಿಮಗೆ. ಮಾಟವೆಂಬ ಕದಳಿ ಬಸವಣ್ಣಂಗೆ, ಭಾವವೆಂಬ ಕದಳಿ ಚೆನ್ನಬಸವಣ್ಣಂಗೆ. ಬಂದ ಬಂದ ಭಾವ ಸಲೆ ಸಂದಿತ್ತು. ಎನ್ನಂಗದ ಅವಸಾನವ ಹೇಳಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಆದಿತ್ಯವಾರ ಸೋಮವಾರ ಮಂಗಳವಾರವೆಂದು, ಏಳು ವಾರವ ಹೆಸರಿಟ್ಟು ನುಡಿವರು, ನಾವಿದನರಿಯೆವು. ಗುಹೇಶ್ವರನ ಶರಣ ಚೆನ್ನಬಸವಣ್ಣಂಗೆ ಮೂರೇ ವಾರ
--------------
ಅಲ್ಲಮಪ್ರಭುದೇವರು
ಎಲೆ ಅಯ್ಯಾ, ಪುರದ ಮೇಲುಪ್ಪರಿಗೆಯ ಕೆಲಸವನೇನೆಂಬೆನಯ್ಯಾ! ಮುತ್ತಿನ ಕಳಸದ ಮೇಲೆ ಒಂದು ಅರಳಿದ ಪುಷ್ಪ. ಆ ಪುಷ್ಪದ ಪರಿವೀಧಿಯೊಳಗೆ ಅಗ್ನಿಯ ಕಂಡೆನಾಗಿ, ಕಪಿಲಸಿದ್ಧಮಲ್ಲಿನಾಥಾ ನಿಮ್ಮ ಶರಣ ಚೆನ್ನಬಸವಣ್ಣ ತೋರಿದ ಹಾ ಸುಪಥವಾಯಿತ್ತು. ನಾನು ಚೆನ್ನಬಸವಣ್ಣಂಗೆ ನಮೋನಮೋ ಎನುತಿರ್ದೆನು
--------------
ಸಿದ್ಧರಾಮೇಶ್ವರ
ಗುರುಭಕ್ತಿ ಉಂಟು, ಲಿಂಗಭಕ್ತಿ ಉಂಟು. ಜಂಗಮಭಕ್ತಿ ಎತ್ತಲಾನೆ ಉಂಟು. ತನ್ನನರಿದು ಇದಿರ ಕಾಬ ಜ್ಞಾನಭಕ್ತಿ ಚೆನ್ನಬಸವಣ್ಣಂಗೆ ಸಾಧ್ಯವಾಯಿತ್ತು ನೋಡಾ. ಅದು ಅರಿದರುವಿಂಗೆ ಮುನ್ನವೆ ಕುರುಹಿಟ್ಟ ನಿಜ. ಆ ಗುಣ ಸಂಗನಬಸವಣ್ಣ ಬಂದ ಹಾದಿ, ಬ್ರಹ್ಮೇಶ್ವರಲಿಂಗದಲ್ಲಿಗಾಗಿ.
--------------
ಬಾಹೂರ ಬೊಮ್ಮಣ್ಣ
ಇನ್ನಷ್ಟು ... -->