ಅಥವಾ

ಒಟ್ಟು 144 ಕಡೆಗಳಲ್ಲಿ , 1 ವಚನಕಾರರು , 144 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರ ಬಿಟ್ಟವಂಗಲ್ಲದೆ ಸತ್ಯವ ಸಾದ್ಥಿಸಬಾರದು. ಆರ ಬಿಟ್ಟವಂಗಲ್ಲದೆ ಆದರಿಸಬಾರದು. ಎಂಟ ಬಿಟ್ಟವಂಗಲ್ಲದೆ ಸಾಕಾರದ ಕಂಟಕವನರಿಯಬಾರದು. ರಣದಲ್ಲಿ ಓಡಿ ಮನೆಯಲ್ಲಿ ಬಂಟತನವನಾಡುವನಂತೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ರೋಗಿಗೆ ಹಾಲು ಸಿಹಿಯಪ್ಪುದೆ? ಗೂಗೆಗೆ ರವಿ ಲೇಸಪ್ಪುದೆ? ಚೋರಗೆ ಬೆಳಗು ಗುಣವಪ್ಪುದೆ? ಭವಸಾಗರದ ಸಮಯದಲ್ಲಿದ್ದವರು ನಿರ್ಭಾವನ ಭಾವವನೆತ್ತ ಬಲ್ಲರು? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಕಾಳು ದೇಹದೊಳಗೊಂದು ಕೀಳು ಜೀವ ಹುಟ್ಟಿತ್ತಾಗಿ ಅಪ್ಯಾಯನವಡಗದು, ಸಂದೇಹ ಹಿಂಗದು ಇದೇನೊ ಇದೇನೋ! ಹಂದೆಗಳ ಮುಂದೆ ಬಂದು ಕಾಡುತಲಿದ್ದುದೆ ಇದೇನೊ ಇದೇನೋ! ಕಾಲಾಳು ಮೇಲಾಳುಗಳು ಬೇಳುವೆಗೊಳಗಾದರು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬರು.
--------------
ಘಟ್ಟಿವಾಳಯ್ಯ
ಏನೆಂದೂ ಎನಲಿಲ್ಲ; ನುಡಿದು ಹೇಳಲಿಕ್ಕಿಲ್ಲ. ನಿಜದಲ್ಲಿ ನಿಂದ ಬೆರಗ ಕುರುಹ ಹರಿವುದೆ ಮರುಳೆ? ಹರಿದು ಹತ್ತುವುದೆ ಮರುಳೆ ಬಯಲು? ಅದು ತನ್ನಲ್ಲಿ ತಾನಾದ ಬಯಲು; ತಾನಾದ ಘನವು. ಇನ್ನೇನನರಸಲಿಲ್ಲ. ಅದು ಮುನ್ನವೆ ತಾನಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ತನುವ ಮರೆಯಬೇಕೆಂದು ಗುರುವ ತೋರಿ, ಮನವ ಮರೆಯಬೇಕೆಂದು ಲಿಂಗವ ತೋರಿ, ಧನವ ಮರೆಯಬೇಕೆಂದು ಜಂಗಮವ ತೋರಿ, ಲೇಸ ಮರೆದು ಕಷ್ಟಕ್ಕೆ ಕಡಿದಾಡುವ ಭಾಷೆಹೀನರ ಕಂಡು ನಾಚಿಕೆಯಾಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಜಲದೊಳಗಣ ಬೊಬ್ಬುಳಿಕೆ ಜಲ ಘಟ್ಟಿಗೊಂಡಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹೇಂದ್ರ ಜಾಲವು ಮರೀಚಿಕಾ ಜಲವು. ಎಲ್ಲಿ ಹುಟ್ಟಿ ಎಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹಾನಾದ ಸುನಾದ, ಸುನಾದಕ್ಕೆ ಕೈಗೈದು ಆ ಸುನಾದವು ಮಹಾನಾದದೊಡನೆ ಮಥನಿಸಿ ಇವೆರಡರ ಪ್ರಾಣ ಚೈತನ್ಯ ಒಂದಾಗಿ ಹುಟ್ಟಿ ಅಡಗುವ ಭೇದವ ಬಲ್ಲೆನಾಗಿ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.
--------------
ಘಟ್ಟಿವಾಳಯ್ಯ
ಆಯತವಿಲ್ಲದ ಮಠದಲ್ಲಿ ಅಗ್ನಿಯಿಲ್ಲದೆ ಬೋನವ ಮಾಡಿ ಭಾವವಿಲ್ಲದೆ ಶಿವಕಾರ್ಯಂಗಳು ಭೋಜನವಿಲ್ಲದೆ ಅರಿಸಿ ಕೊಟ್ಟಡೆ ಆಪ್ಯಾಯನವಾರಿಗೂ ಅಡಸದಿರ್ದುದ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆನು.
--------------
ಘಟ್ಟಿವಾಳಯ್ಯ
ಅಬ್ದಿಯ ಘೋಷವೆದ್ದು ನಿರ್ಭರ ನಿರ್ವೇಗದಿಂದ ಅಬ್ಬರಿಸಿ ಬರುವಾಗ ಅದನೊಬ್ಬರು ಹಿಡಿದ [ರುಂಟೆ]? ಆಕಾಶದ ಸಿಡಿಲು ಆರ್ಭಟದಿಂದ ಬಡಿವಲ್ಲಿ ತಾಕು ತಡೆಯುಂಟೆ? ಮಹಾದ್ಭುತವಾದ ಅಗ್ನಿಯ ಮುಂದೆ ಸಾರವರತ ತೃಣಕಾಷ್ಟವಿ [ದ್ದುದುಂ]ಟೆ? ತಾ ಸರ್ವಮಯವಾದ ನಿಃಕಳಂಕ ನಿರಂಜನ ಐಕ್ಯಾನುಭಾವಿಗೆ ಅಂಡ ಪಿಂಡ ಬ್ರಹ್ಮಾಂಡ ಅಬ್ದಿ ಆಕಾಶ ಆತ್ಮನೆಂದುಂಟೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಹೊರಗಣ ಮಲತ್ರಯಕ್ಕೆ ಒಳಗಣ ಅರಿವ ನೀಗಾಡಲೇತಕ್ಕೆ? ಅಲ್ಪ ಸುಖಕ್ಕೆ ಮಚ್ಚಿ ಕುಕ್ಕುರನಂತೆ ಸಿಕ್ಕಿಸಾಯಲೇತಕ್ಕೆ? ನಿಶ್ಚಯವಾಗಿ ತಾ ಬಂದ ಆದಿ ಅನಾದಿಯೆಂಬ ವಸ್ತುವ ತಿಳಿದು ನೋಡಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗವನರಿಯಬಲ್ಲಡೆ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಜಂಗಮವಾಗಿ ಹುಟ್ಟಿದ ಮತ್ತೆ ಹಿಂದಣ ಹಜ್ಜೆಯ ಮೆಟ್ಟಲುಂಟೆ? ಜಂಗಮವೆಂಬ ಮಾತಿಂಗೊಳಗಾದಲ್ಲಿ ಮೂರು ಮಲತ್ರಯವ ಹಿಂಗಿರಬೇಕು. ಅನಂಗನ ಬಲೆಗೆ ಎಂದಿಗೂ ಸಿಲುಕದಿರಬೇಕು; ಅದು ನಿಜದ ಸಂಗ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಈ ಗುಣ ಆರಿಗೂ ಇಲ್ಲ ಇಲ್ಲಎಂದೆ.
--------------
ಘಟ್ಟಿವಾಳಯ್ಯ
ಕಂಡು ಕಂಡು ಕಾಣಲುಂಟೆ ಅಯ್ಯಾ. ಕೇಳಿ ಕಂಡಿಹೆನೆಂದಡೆ ಮನಸ್ಸು ನಾಚಿತ್ತು. ನಾಚಿದ ಮನಸ್ಸಿಗೆ, ನೋಡಿದ ನೋಟಕ್ಕೆ ಭಾವ ಬತ್ತಲೆಯಾಗದನ್ನಕ್ಕ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಆ ಉದಯದಲ್ಲಿ ನಿಚ್ಚ ನಿಚ್ಚ ಹುಟ್ಟಿದ ಪ್ರಾಣಿ ಅಸ್ತಮಾನದಲ್ಲಿ ನಿಚ್ಚ ನಿಚ್ಚ ಮರಣವಾಯಿತ್ತಲ್ಲಾ! ಇದರಂತುವನರಿಯದೆ ಅಜ್ಞಾನಿಗಳಾಗಿ ಹೋದರಲ್ಲಾ! ಎಲ್ಲರು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಬಸವ ಮಾಡಿಹನೆಂದು ಬಾಯಲ್ಲಿ ಬಸಿವ ಲೊಳೆಯನರಿಯದೆ ಎಸಕದಿಂದ ಮಾಡುವ ಹುಸಿಭಕ್ತಿಯನರಿಯದ ಈ ಕಿಸಿವಾಯರಿಗೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಸಾರಂಗದ ತುದಿಯಲ್ಲಿ ಧಾರೋದ್ರಿಜವ ತುಂಬಿದರು. ಮೇರು ಮಂದಿರದ ಮೇಲೆ ಮನೆಯ ಮಾಡಿದರಾರೋ? ತಿದಿಯ ಹರಿವೆ, ಮನೆಯ ಸುಡುವೆ, ನಿಲುವೆ ಹೊಸ ಪರಿಯರಿಯಾ! ಎನ್ನ ಪರಿಯ ಹಿಂದೆ ಕೇಳಿದ್ದು ಮನೆಯೊಳಗಣ ಬೂದಿಯ ಭಸ್ಮವಾಗಿ ಧರಿಸಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಇಷ್ಟಲಿಂಗವ ತೆಕ್ಕೊಂಡಲ್ಲಿ ದೃಷ್ಟವಾಯಿತ್ತೆ ನಿಮಗೆ? ಬಂದ್ಥಿಕಾರನ ಬಂಧನವ ಮಾಡೂದು ಲಿಂಗದೇಹಿಗಳಿಗುಂಟೆ ಅಯ್ಯಾ. ಜಗದಲ್ಲಿ ಉಂಡುಂಡು ಕೊಂಡಾಡುವವರಿಗೆ, ಘನಲಿಂಗದ ಶುದ್ಧಿ ಏಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಇನ್ನಷ್ಟು ... -->