ಅಥವಾ

ಒಟ್ಟು 245 ಕಡೆಗಳಲ್ಲಿ , 1 ವಚನಕಾರರು , 245 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವಿಲ್ಲದ ಶರಣಂಗೆ ಕರ್ಮವಿಲ್ಲ ; ಕರ್ಮಶೂನ್ಯವಾದಲ್ಲಿ ಭಾವನಾಸ್ತಿ ಕಾಣಾ. ಭಾವನಾಸ್ತಿಯಾಗಿ ನಿರ್ಭಾವ ನಿಂದು ನಿಜವಾದಲ್ಲಿ ನೋಡಲಿಲ್ಲ ನುಡಿಯಲಿಲ್ಲ ಕೂಡಲಿಲ್ಲ ಅಗಲಲಿಲ್ಲ. ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿರ್ದ ಸುಖವ ತಂದು ಹೇಳುವರಾರೂ ಇಲ್ಲ ಈ ಮೂರುಲೋಕದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುತ್ತೈದೆ ಸತ್ಯಕ್ಕಗಳಿರಾ ! ನಿತ್ಯರೆನ್ನ ಮನೆಗೆ ಕರ್ತುವಾಗಿ ಬಂದರೆ ಅರ್ಥವನೀವೆ. ಅವರಿರತಕ್ಕ ಇಚ್ಫೆ ಬಾರದಮುನ್ನ ಎಚ್ಚರವನೀವುತ ಬನ್ನಿರೆ. ಪಂಚವರ್ಣದಾಭರಣವ ನಿಮ್ಮ ಕೈಯಿಂದೆ ಕೊಡಿಸುವೆ, ನಾನಚ್ಚತಗೊಂಬೆ ಎನ್ನ ಬಯಕೆಯನೊಯ್ದೊಪ್ಪಿಸಿ ಅವರ ಸಮರಸಾನಂದವೆನಗಿತ್ತಡೆ ನಿಮ್ಮ ಕೈಯಲ್ಲಿ ನಿರಂತರ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವಣ್ಣನ ಮಗನಹುದೆಂಬುದು ಕಾಣಬಂದಿತ್ತು ನೋಡಾ; ಚನ್ನಬಸವಣ್ಣನ ಮಗನಮಗನೆಂಬುದು ಕಾಣಬಂದಿತ್ತು ನೋಡಾ; ಪ್ರಭುವಿನ ಮಗನಮಗನಮಗನೆಂಬುದು ಕಾಣ ಬಂದಿತ್ತು ನೋಡಾ; ಅವಸ್ಥಾತ್ರಯದಲ್ಲಿ ಗುರುನಿರಂಜನ ಚನ್ನಬಸವಲಿಂಗ ತಾನೆಂಬುದು ಕಂಡು ಮರೆಯಿತ್ತು ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅವನಿ ಮಡದಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸಡಗರದಿಂದಡಗಿದ ಸುಖವ ಹೇಳಲಾರೆ ಕಾಣಮ್ಮ. ಅಪ್ಪು ಸತಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೌಖ್ಯದೊಳೊಂದಿದ ಸುಖವ ಹೇಳಲಾರೆ ಕಾಣಮ್ಮ. ಪಾವಕ ನಾರಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಅವಧಾನವೆರೆದ ಸರಸವನು ಹೇಳಲಾರೆ ಕಾಣಮ್ಮ. ಮರುತ ಸ್ತ್ರೀಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೊಂಪಿನೊಳಗಿರ್ದ ಸುಖವ ಹೇಳಲಾರೆ ಕಾಣಮ್ಮ. ಗಗನವೆಣ್ಣಾದಂದು, ಅವ ಎನ್ನ ಕೈಗೆ ಬಂದಂದು, ನಿನ್ನಿಂದ ನಿರ್ಮಲಾನಂದ ಸಮರಸದೊಳಗಿರ್ದೆ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೃಥ್ವಿಯನರಿಯಲುಬಾರದು ನಕಾರ, ಅಪ್ಪುವನರಿಯಲುಬಾರದು ಮಕಾರ, ಅಗ್ನಿಯನರಿಯಲುಬಾರದು ಶಿಕಾರ, ವಾತವನರಿಯಲುಬಾರದು ವಕಾರ, ಅಂಬರವನರಿಯಲುಬಾರದು ಯಕಾರ, ಭಾವವನರಿಯಲುಬಾರದು ಓಂಕಾರ. ಇದು ಕಾರಣ ಷಡ್ಬ್ರಹ್ಮರೂಪ ಚನ್ನಬಸವಲಿಂಗ ಅರಿದು ಅರಿಯದಿರಲುಬೇಕು ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು ಪುರದ ಜನರು ಭೀತಿಗೊಂಡು ನೋಡುವ ಸಮಯದಲ್ಲಿ ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು, ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೂರ್ವದಂದುಗವನಳಿದು ಪುನರ್ಜಾತನಾದ ಶರಣನು ತನ್ನ ತ್ರಿವಿಧಮುಖಭಕ್ತಿಯ ಮಾಡುವಲ್ಲಿ ಪೂರ್ವದಂದುಗ ಬೆರಸಿದರೆ ತಿರುಗ ಬಟ್ಟೆ ಸವೆಯದು. ಮೇಲುಗತಿಮತಿಗಳಸುಖ ದೊರೆಯದು. ಬಿಟ್ಟುದ ಬೆರೆಸಿದರೆ, ಹಿಡಿದು ಹರಿಸದೆ ದಾರಿಕಾರರ ಹೆಜ್ಜೆಗೆ ಶಿರಬಾಗದೆ ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಾರುವನ ಕೊಂದು ಹಾರುವನಾಗಿ ಕರ್ಮಜ್ಞಾನ ಕಂಡು ಕಾಣಿಸದಿರ್ದು ಕರಗಿದರೆ ಆತನೇ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೂರುಕಾಲ ಮಣಿಯನೇರಿ ಹತ್ತಿಯನರೆವ ಹೆಂಗಳೆಯ ಚಿತ್ತ ಕಾಲವಿಡಿದು, ಕಾಳವಿಸರ್ಜಿಸಿ ಅರಳೆಯ ತನ್ನತ್ತಲೆಳಹುವದು. ಕ್ರಿಯಾಪಾದ ಜ್ಞಾನಪಾದ ಚರ್ಯಾಪಾದವೆಂಬ ಪಾದತ್ರಯದಮೇಲಿರ್ದ ಶರಣನ ಚಿತ್ತ, ಸೂಕ್ಷ್ಮಸುವಿಚಾರವಿಡಿದು ಕರಣೇಂದ್ರಿಯ ವಿಷಯಕಾಠಿಣ್ಯ ಪ್ರಕೃತಿಯ ದೂಡುತ್ತ ಸ್ವಚ್ಫ ಸೂಕ್ಷ್ಮತರಭಾವವೇದಿ ಮಹಾಘನ ಪ್ರಕಾಶವ ನೆರೆಯಲೆಳಹುವುದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೊದಲಿಂದತ್ತಲರಿಯದೆ, ಕಡೆಯಿಂದ ಮೇಲೆ ಕಾಣದೆ, ಚದುರಿನ ಹದನ ಸದನ ಸಂಭ್ರಮಕ್ಕೆ ಒದಗಿ ಬಿದ್ದೊರಲಿದರು ಅಜ ವಿಷ್ಣು ಇಂದ್ರಾದಿ ಸಕಲ ಸಂದೋಹ. ಉಳಿದ ಉಚ್ಛಿಷ್ಟ ಬಚ್ಚಲದೊಳು ಬಿದ್ದ ಪ್ರಾಣಿಗಳಂತಿರಲಿ, ಮತ್ತೆ ಕೋಟಲೆಯ ಕಳೆದು ರಾಟಣವ ಹರಿದು, ನಿಜಬೇಟವರಿದು ನಿರ್ಮಲವನರ್ಪಿಸಿ, ನಿರಾವಯವ ಕೊಂಡಾಡುವ ನಿಜಪ್ರಸಾದಿಗಲ್ಲದೆ ಅಸಾಧ್ಯ ಕಾಣಾ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನ್ನನರಿದು ಹಿಡಿದು ಬಂದ ಶರಣ ಎಂಟರಲ್ಲಿ ನಿಂದು, ಏಳರಲ್ಲಿ ನಡೆದು, ಒಂದರಲ್ಲಿ ನಿಂದು, ಎಂಟರಲ್ಲಿ ನಡೆದು, ಒಂದರಲ್ಲಿ ನಿಂದು, ಆರರಲ್ಲಿ ನಡೆದು, ಒಂದರಲ್ಲಿ ನಿಂದು, ನಾಲ್ಕರಲ್ಲಿ ನಡೆದು, ಒಂದರಲ್ಲಿ ನಿಂದು ಮೂರರಲ್ಲಿ ನಡೆದು ಒಂದರಲ್ಲಿ ನಿಂದು, ಮೂರರಲ್ಲಿ ನಡೆದುಡುಗಿದ ಮತ್ತೆ ಒಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೆ ಮೂರರಲ್ಲಿ ತನುಮನಭಾವವೆರೆದು ನಿಂದ ಮಹಿಮಂಗೆ ಗುರುನಿರಂಜನ ಚನ್ನಬಸವಲಿಂಗ ಕರತಳಾಮಳಕ ಕಡೆಗಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವನರಿಯದೆ ಗುರುಭಕ್ತಿಯ ಮಾಡಲೊಪ್ಪಿದೆನು. ಮನವನರಿಯದೆ ಲಿಂಗಪೂಜೆಯ ಮಾಡಲೆಸವುತಿರ್ದೆನು. ಪ್ರಾಣವನರಿಯದೆ ಜಂಗಮದಾಸೋಹವ ಮಾಡಲು ಪ್ರಕಾಶವಾದೆನು. ಸತ್ತುಚಿತ್ತಾನಂದಕೆ ನಿತ್ಯ ಅಂಗ ಮನ ಪ್ರಾಣ ನಿರಂತರ ಶೋಭನ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದನುವ ಬಹಿರಂಗಕ್ಕೆ ಬೆರಸಿತಂದು ಹಿಡಿ ಹಿಡಿದು ನಡೆವುದೊಂದು ಕಡುಜಾಣದಾಗು, ಈ ಕುರುಹಿನೊಳು ನಿಂದು ಹೊರಗಣನೆರವಿಯ ಗುದ್ದಾಟಕ್ಕೆ ಸೆರೆಸೂರೆಹೋಯಿತ್ತು ಒಳಗಣ ಒಡವೆ ಊರು ಹಾಳಾದಲ್ಲಿ ಕ್ಷೇತ್ರದ ಸುಖವಾರಿಗೆ ? ಗುರುನಿರಂಜನ ಚನ್ನಬಸವಲಿಂಗ ಒಳಹೊರಗೆ ತನ್ನ ತಾ ನೋಡುತಾಡುತಿರ್ಪನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರುತಿಯ ನೋಡುವ ಮತಿಕುಶಲದನುವಿಂಗೆ ನೆಗೆದುನೋಡಲೊಲ್ಲದೆನ್ನ ಭಾವ. ಆಗಮವ ನೋಡುವ ಮತಿಕುಶಲದನುವಿಂಗೆ ವಿಕಸನವಾಗಲೊಲ್ಲದೆನ್ನ ಮನ. ಅಭ್ಯಾಸಿಗಳರಿವ ಮತಿಕುಶಲದನುವಿಂಗೆ ಸೊಗಸನೆತ್ತಲೊಲ್ಲದೆನ್ನ ತನು. ಅದೇನು ಕಾರಣವೆಂದೊಡೆ, ಬಸವ ಚನ್ನಬಸವ ಪ್ರಭುಗಳ ವಚನಾನುಭಾವದ ಪರಮಪ್ರಕಾಶ ಎನ್ನೊಳಹೊರಗೆ ಪರಿಪೂರ್ಣಾನಂದ ತಾನೆಯಾಗಿಪ್ಪುದಾಗಿ, ಮತ್ತೊಂದನರಿಯಲರಿಯದ ಭಾವವನೇನೆಂದರಿಯದಿರ್ದೆ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನುಡಿವನಯ್ಯಾ ಶರಣನು ತನ್ನಡಿಗೆರಗಿ ನಿಂದ ನಿರ್ಮಲರಿಗೊಲಿದು. ನುಡಿವನಯ್ಯಾ ಶರಣನು ಭಕ್ತಿತ್ರಯದ ಯುಕ್ತರ ಕೂಡಿ. ನುಡಿವನಯ್ಯಾ ಶರಣನು ಮಹಾನುಭಾವರ ಪ್ರಸಂಗಕ್ಕೆ ಅಭಿನ್ನಮುಖದಿಂದೆ. ನುಡಿವನಯ್ಯಾ ಶರಣನು ಗುರುನಿರಂಜನ ಚನ್ನಬಸವಲಿಂಗ ತಾನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->