ಅಥವಾ

ಒಟ್ಟು 57 ಕಡೆಗಳಲ್ಲಿ , 19 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಹಳ ಬಹಳ ಕಂಡೆನೆಂದು ನುಡಿವ, ಬಿಸಿಲು ಮಧ್ಯಾಹ್ನದಲ್ಲಿ ಚಂದ್ರಬಿಂಬ ಉದಯವಾದ ಪ್ರತ್ಯಕ್ಷವಾಯಿತ್ತೆಂದು ಹೊರಗೆ ಕಂಡು ಒಳಗೆ ಕಂಡನಲ್ಲದೆ ಏನು ಅಪ್ಪುದು ಕಾಣಾ. ಎರಡೂ ಒಂದೇ. ಮುಂದೆ ಮೀರಿ ಮನಸಮಾದ್ಥಿ ಮಾಡಿದಡೆ ಮುಕ್ತಿಯೆಂದು ಹೇಳುವರು. ಮನ ಮುಳುಗಿದುದೆ ಲಿಂಗವೆಂದೆಂಬರು. ಆ ಲಿಂಗ ಮುಳುಗುವುದು ಸಮಾದ್ಥಿ ಕಾಣಾ, ತಾನಳಿದ ಮೇಲೆ ಮುಕ್ತಿ ಯಾರಿಗೆ ಹೇಳಾ ? ಲಿಂಗಕ್ಕೆ ಅಳಿವು ಬೆಳವುಂಟೆ ಕಾಣಾ ? ಚಿಂತಿಸಿ ಮುಳುಗಿದವರೆಲ್ಲ ಕಡೆಯಿಲ್ಲ ಮೊದಲಿಲ್ಲ ನೋಡಾ. ಇನ್ನು ಉಳಿದದ್ದು ಘನವು. ಉಳಿಯೆ ಹೇಳಾ ನಿಜಕೆಲ್ಲ. ಲಯವಿಲ್ಲ ಭಯವಿಲ್ಲದಾಡಿದ ವಿದೇಹ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ನಡೆನುಡಿಯಿಲ್ಲದ ಘನವು ನಡೆನುಡಿಗಡಿಯಿಟ್ಟು ಬಂದರೆ ಎನ್ನ ಸಡಗರ ಹೆಚ್ಚಿತ್ತು ನೋಡಾ ! ಬಡಿವಾರದ ಬಲವಯ್ಯಾ, ಕರ್ತು ಭೃತ್ಯಕಳೆ ಉನ್ನತವಾಗಿ ಶಕ್ತಿಯನು ಮುಕ್ತಿದಾಯಕ ಮುನಿಸಿಲ್ಲದೆ ಮುಂದುವರಿ. ನಾದ ಬಿಂದು ಕಳೆ ನವೀನವಯ್ಯಾ. ಮೂದೇವರೊಡೆಯ ಶರಣು ಶರಣು ಕರುಣಾನಿದ್ಥಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು. ಪ್ರಾಣ ಹೋದರೆ ಕಾಯ ಬಿದ್ದಿತ್ತು, ಲಿಂಗ ಒಂದೆಸೆಯಾದಡೆ ಮನ ನಾಚಿತ್ತು. ಗುಹೇಶ್ವರನೆನಲಿಲ್ಲದ ಘನವು.
--------------
ಅಲ್ಲಮಪ್ರಭುದೇವರು
ಪ್ರಥಮದಲ್ಲಿ ಸ್ಪರ್ಶವೆಂಬ ಸ್ಪರ್ಶನಗುಣದಿಂದ ಪಾದೋದಕ, ದ್ವಿತೀಯದಲ್ಲಿ ಅಂಗಗುಣವಳಿಯಿತ್ತಾಗಿ ಲಿಂಗಮುಖದಿಂದ ಬಂದುದು ಲಿಂಗೋದಕ, ತೃತೀಯದಲ್ಲಿ ಮಹಾಗಣಂಗಳ ಬರವಿನಿಂದ (ಬಂದುದಾಗಿ) ಮಜ್ಜನೋದಕ, ಚತುರ್ಥದಲ್ಲಿ ಚತುರ್ದಳಪದ್ಮ ವಿಕಸಿತವಾಗಿ ಪುಷ್ಪೋದಕ, ಪಂಚಮದಲ್ಲಿ ಲಿಂಗಕ್ಕೆ ಪರಮ ಪರಿಯಾಣ (ಪರಿಣಾಮರಿ) ಇಕ್ಕುವಲ್ಲಿ ಅವಧಾನೋದಕ, ಷಷ್ಠಮದಲ್ಲಿಲಿಂಗಾರೋಗಣೆಯ ಅಪ್ಯಾಯನೋದಕ, ಸಪ್ತಮದಲ್ಲಿ ಲಿಂಗಕ್ಕೆ ಹಸ್ತೋದಕ ಅಷ್ಟಮದಲ್ಲಿ ಅಷ್ಟಾಂಗಯೋಗ ಪರಮಪರಿಣಾಮೋದಕ, ನವಮದಲ್ಲಿ ನಾಮ ಸೀಮೆ ಇಲ್ಲವಾಗಿ ನಿರ್ನಾಮೋದಕ, ದಶಮದಲ್ಲಿ ಹೆಸರಿಲ್ಲವಾಗಿ ನಿತ್ಯೋದಕ,-ಇಂತು ದಶವಿಧೋದಕ. ಇನ್ನು ಏಕಾದಶಪ್ರಸಾದ: ಪ್ರಥಮದಲ್ಲಿ ಮಹಾದೇವಂಗೆ ಮನವರ್ಪಿತ, ದ್ವಿತೀಯದಲ್ಲಿ ಮಾಹೇಶ್ವರಂಗೆ ವೀರಾರ್ಪಿತ, ತೃತೀಯದಲ್ಲಿ ಶಂಕರಂಗೆ ಸಮಾಧಾನಾರ್ಪಿತ, ಚತುರ್ಥದಲ್ಲಿ ನಿರ್ವಿಷಯಾರ್ಪಿತ, ಪಂಚಮದಲ್ಲಿ ಪಂಚವಸ್ತ್ರಾರ್ಪಿತ, ಷಷ್ಠಮದಲ್ಲಿ ನಷ್ಟರೂಪ ನಿರೂಪಾರ್ಪಿತ, ಸಪ್ತಮದಲ್ಲಿ ಆತ್ಮಾರ್ಪಿತ, ಅಷ್ಟಮದಲ್ಲಿ ತನ್ನ ಮರೆದ ಮರಹಾರ್ಪಿತ, ನವಮದಲ್ಲಿ ಅಸಮಸಹಸ್ರನಾಳದಿಂದ ತೃಪ್ತ್ಯಾರ್ಪಿತ, ದಶಮದಲ್ಲಿ ಚಿತ್ತಸುಯಿಧಾನಿಯಾಗಿ ಸುಷುಮ್ನಾನಾಳದಿಂದ ಅಮೃತಾರ್ಪಿತ, ಏಕಾದಶದಲ್ಲಿ ಏಕಪ್ರಸಾದ ನೋಡಹೋದರೆ ತನ್ನ ನುಂಗಿತ್ತಯ್ಯಾ. ಹೇಳಬಾರದ ಘನವು ಕಾಣಬಾರದಾಗಿ ಕೂಡಲಚೆನ್ನಸಂಗನಲ್ಲಿ ಉಪಮಿಸಬಾರದ ಮಹಾಘನವು
--------------
ಚನ್ನಬಸವಣ್ಣ
ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ ? ಆಠಾವು ಹಿಂಗಿದಡೆ ಭಂಗಿತನು ಕಂಡಾ. ಅಂತರಂಗದಲೊದಗೂದನರಿಯರು ಗುಹೇಶ್ವರನೆಂಬುದು ಮೀರಿದ ಘನವು
--------------
ಅಲ್ಲಮಪ್ರಭುದೇವರು
ಏನೆಂದೂ ಎನಲಿಲ್ಲ; ನುಡಿದು ಹೇಳಲಿಕ್ಕಿಲ್ಲ. ನಿಜದಲ್ಲಿ ನಿಂದ ಬೆರಗ ಕುರುಹ ಹರಿವುದೆ ಮರುಳೆ? ಹರಿದು ಹತ್ತುವುದೆ ಮರುಳೆ ಬಯಲು? ಅದು ತನ್ನಲ್ಲಿ ತಾನಾದ ಬಯಲು; ತಾನಾದ ಘನವು. ಇನ್ನೇನನರಸಲಿಲ್ಲ. ಅದು ಮುನ್ನವೆ ತಾನಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ನೀ ನಿಲಿಸಿದಲ್ಲಿ ನಾನಂಜೆ ನಾನಂಜೆ ನಾನಂಜೆನಯ್ಯಾ ಘನವು ಮಹಾಘನಕ್ಕೆ ಶರಣು ಹೊಕ್ಕುದಾಗಿ. ನೀ ನಿಲಿಸಿದ ಧನದಲ್ಲಿ ನಾನಂಜೆ ನಾನಂಜೆನಯ್ಯಾ, ಧನವು ಸತಿಸುತ ಮಾತಾಪಿತರಿಗೆ ಹೋಗದಾಗಿ. ನೀ ನಿಲಿಸಿದ ತನುವಿನಲ್ಲಿ ನಾನಂಜೆ ನಾನಂಜೆನಯ್ಯಾ, ತನು ಸರ್ವಾರ್ಪಿತದಲ್ಲಿ ನಿಹಿತಪ್ರಸಾದಭೋಗಿಯಾಗಿ, ಇಂತೆಲ್ಲರ ಧೀರಸಮಗ್ರನಾಗಿ, ಕೂಡಲಚೆನ್ನಸಂಗಮದೇವಾ, ನಿಮಗಾನಂಜೆನು
--------------
ಚನ್ನಬಸವಣ್ಣ
ಭೂಮಿಯಾಕಾಶ ಒಂದು ಜೀವನದುದರ. ಅಲ್ಲಿ ಘನವೇನು ಘನವೆನ್ನದವಂಗೆ? ಕಿರಿದೇನು ಕಿರಿದೆನ್ನದವಂಗೆ ? ಆ ಘನವು ಮನಕ್ಕೆ ಗಮಿಸಿದಡೆ, ಇನ್ನು ಸರಿಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜರಿ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !
--------------
ಚನ್ನಬಸವಣ್ಣ
ಎರಡೆಂಬತ್ತು ಕೋಟಿ ಗೀತವ ಹಾಡಿದರೇನಯ್ಯಾ ? ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ. ಮನವು ಘನವ ನೆಮ್ಮದು, ಘನವು ಮನವ ನೆಮ್ಮದು. ಹಾಡಿದರೇನು ಓದಿದರೇನು ? ಗುಹೇಶ್ವರ ನೀನೊಲಿದ ಕಾಲಕ್ಕೆ ಎರಡೆಂಬತ್ತು ಕೋಟಿ ಗೀತವೆಲ್ಲವೂ ನಿಮ್ಮದೊಂದು ಮಾತಿನೊಳಡಕವಯ್ಯಾ.
--------------
ಅಲ್ಲಮಪ್ರಭುದೇವರು
ಕಣ್ಣೆಯ್ದಿದ ಭಾವ ಕಾಲೆಯ್ದಿದ ಬಲ್ಲವೆ ಮರುಳೆ! ಮನವೆಯ್ದಿದ ಘನವು ತನುವಿಂಗೆ ಸಿಲುಕುವುದೆ? ಇದೆತ್ತಣ ಮಾತೊ? ...ಡನೆಂದರಿದ ಬಳಿಕ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಹೊರಗರಸಲಿಲ್ಲ ನಿಲ್ಲು.
--------------
ಚಂದಿಮರಸ
ತೆರಹಿಲ್ಲದ ಘನವು ಮನದೊಳಗೆ ನಿಂದು ನೆಲೆಗೊಂಡ ಬಳಿಕ, ಆ ಘನವ ತೆರೆಯ ಮರೆಯಲಡಗಿಸಿಹೆನೆಂದಡೆ ಅಡಗುವುದೆ ? ಹೇಮಗಿರಿಯ ಕದ್ದು ಭೂಮಿಯಲಡಗಿಸಿಹೆನೆಂದಡೆ ಆ ಕಳವು ಸಿಕ್ಕದೆ ಮಾಣ್ಬುದೆ ? ಕೂಡಲಚೆನ್ನಸಂಗನ ಶರಣ ಪ್ರಭುವಿನಲ್ಲಿ ಬೆರಸಿದ ಸುಖವ ಮರೆಸಿಹೆನೆಂದಡೆ ನಿನ್ನಳವೆ ಹೇಳಾ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಆದಿಲಿಂಗ, ಅನಾದಿ ಶರಣನೆಂಬುದು ತಪ್ಪದು; ಆದಿ ಗುರು, ಅನಾದಿ ಶಿಷ್ಯನೆಂಬುದು ತಪ್ಪದು. ಗುರುವಿಂಗೆ ಶಿಷ್ಯಂಗೆ ಏನು ದೂರ ದೇವಾ ? ಮುಳ್ಳುಗುತ್ತುವಡೆ ತೆರಹಿಲ್ಲದ ಪರಿಪೂರ್ಣ ಘನವು. ಒಬ್ಬರಲ್ಲಿ ಒಂದು ಭಾವವುಂಟೆ ? ಎನ್ನೊಳಗೆ ಬೆಳಗುವ ಜ್ಞಾನ, ನಿನ್ನ ಹೃದಯಕಮಲದೊ?ಗಣ ಆವ್ಯಕ್ತಲಿಂಗ. ನಿನ್ನೊಳು ತೊಳಗಿ ಬೆಳಗುವ ಜ್ಯೋತಿರ್ಲಿಂಗ ಎನ್ನಂತರಂಗದ ಸುಜ್ಞಾನಲಿಂಗ. ಒಂದರಲ್ಲಿ ಒಂದು ಬಿಚ್ಚಿ ಬೇರೆ ಮಾಡಬಾರದಾಗಿ, ಪ್ರಾಣಲಿಂಗ ಒಂದೆ, ಉಪದೇಶ ಒಂದೆ, ಕ್ರಿಯಾಕರ್ಮ ಒಂದೆ. ನೀವಿನ್ನಾವುದ ಬೇರೆಮಾಡಿ ನುಡಿವಿರಯ್ಯಾ ? ಕಾರ್ಯದಲ್ಲಿ ಗುರುವಾಗಿ, ಅಂತರಂಗಕ್ಕೆ ಸುಜ್ಞಾನೋಪದೇಶವ ಮುನ್ನವೆ ಮಾಡಿದ ಬಳಿಕ ಕ್ರೀಯಿಂದ ಮಾಡಲಮ್ಮೆನೆಂದಡೆ ಹೋಹುದೆ ? ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಎನಗೆ ನೀವು ಉಪದೇಶವ ಮಾಡಿದಡೆ ಮರ್ತಲೋಕದ ಮಹಾಗಣಂಗ? ಕೈಯಲ್ಲಿ ಅಹುದಹುದೆನಿಸುವೆ ಕಾಣಾ ಸಂಗನಬಸವಣ
--------------
ಚನ್ನಬಸವಣ್ಣ
ತೋರಲಿಲ್ಲದ ಸಿಂಹಾಸನದ ಮೇಲೆ ಹೇಳಬಾರದ ಘನವು ಬಂದೆರಗಿದಡೆ, ತೋರಿ ಮೆರೆವ ಸಂಗಮನಾಥನು ಎದ್ದು ಹೋದನು. ನೀಡ ನೀಡ ಸಯದಾನವೆಲ್ಲವೂ ನಿರ್ವಯಲಾಯಿತ್ತು, ಮಾಡ ಮಾಡ ಸಯದಾನವ ಮರಳಿ ನೋಡಲಿಲ್ಲ. ಇದನೇನ ಹೇಳುವೆ ಅನಿಯಮ ಚರಿತ್ರವನು ಇದೆಂತುಪಮಿಸುವೆನು ವಿಸ್ಮಯವನು ಕೂಡಲಸಂಗಮದೇವರ ತೃಪ್ತಿಯ ತೆರನ ಬಲ್ಲಡೆ ಹೇಳಯ್ಯಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಲೋಕವಿರಹಿತ ಶರಣ, ಶರಣವಿರಹಿತ ಲೋಕ. ಹದಿನಾಲ್ಕು ಭುವನ ಒಬ್ಬ ಶರಣನ ಕುಕ್ಷಿಯೊಳಗು. ಅರಿವು ಮರಹಿಲ್ಲದ ಘನವು ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->