ಅಥವಾ

ಒಟ್ಟು 17 ಕಡೆಗಳಲ್ಲಿ , 11 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಷ್ಕಳಂಕಾತ್ಮನು ನಿಜಪ್ರಕೃತಿವಶದಿಂ ಮನ ನೆನಹು ಭಾವದೆ ತ್ರಿವಿಧಸ್ವರೂಪವಾಯಿತ್ತು. ಆ ಮನವೊಗ್ದಿದುದೆ ನೆನಹಿಗೆ ಬಂದಿತ್ತು. ಅದೇ ಭಾವದಲ್ಲಿ ತೋರಿತ್ತು ; ಅದೇ ಪ್ರಾಣವಾಯಿತ್ತು ; ಅದೇ ಚೈತನ್ಯಸ್ವರೂಪಮಾಗಿ ತನುವನೆಳದಾಡಿತ್ತು. ಅದಕ್ಕೆ ವಾಯುವೇ ಅಂಗವಾಗಿ ಕರ್ಮಾದ್ಥೀನಮೆನಿಸಿ, ತಾನೆಂಬಹಂಕಾರದಿಂ ತನ್ನ ತಾ ಮರೆತು ತೊಳಲಿಬಳಲುತ್ತಿರಲು, ಅನೇಕಜನ್ಮ ಸಂಚಿತಕರ್ಮ ಸಮೆದು, ಗುರುಕರುಣ ನೆಲೆಗೊಂಡಲ್ಲಿ ಗಗನಾಂಗಿಯಾಗಿ, ಆ ಮನಕ್ಕೆ ತಾನೇ ಆಧಾರಮಾಗಿ, ತಾನೇ ಪರಮನಾಗಿ, ತಾನೇ ಪ್ರಸನ್ನಮಾಗಿರ್ದ ಮಹಾಜಾÕನಶಕ್ತಿಯಂ ಕಂಡದರೊಳಗೆ ಕೂಡಿ, ಸಾಧಕಕ್ಕೊಳಗಾದ ಮನವೇ ಘನವಾಯಿತ್ತು. ಆ ಘನವೇ ಲಿಂಗವಾಯಿತ್ತು, ಆ ಲಿಂಗವೇ ಪ್ರಾಣವಾಯಿತ್ತು, ಆ ಪ್ರಾಣವೇ ಪರಮಾತ್ಮಸ್ವರೂಪಮಾಗಿ ತತ್ತ್ವಮಸಿಪದದಿಂದತ್ತತ್ತ ಹಮ್ಮನಳಿದು ಸುಮ್ಮನೆಯಾದುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆ ಅನ್ಯಕ್ಕೆ ಹರಿವುತಿರ್ಪುದು ನೋಡಾ. ಗುರು ಚರ ಲಿಂಗದ ಸೇವೆಯೆಂದೊಡೆ ಹಿಂದುಳಿವುತಿರ್ಪುದು ನೋಡಾ. ಅನ್ಯರ ಒಡವೆಯಾದ ಹೊನ್ನು ಹೆಣ್ಣು ಮಣ್ಣೆಂದೊಡೆ ಮುಂದುವರಿದು ಓಡುತಿರ್ಪುದು ನೋಡಾ. ಈ ಮನದ ಉಪಟಳವು ಘನವಾಯಿತ್ತು. ಇನ್ನೇನು ಗತಿಯಯ್ಯ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನೇವೆನಿನ್ನೇವೆನಯ್ಯಾ ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು, ಎನ್ನ ನಿಂದಲ್ಲಿ ನಿಲ್ಲಲೀಯದು, ಎನ್ನ ಕುಳಿತಲ್ಲಿ ಕುಳ್ಳಿರಲೀಯದು, ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ. ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ. ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ. ಕೂಡಲಸಂಗಮದೇವಾ ಈ ಮನವೆಂಬ ಮರ್ಕಟನ ದಾಳಿಯನೆಂದಿಗೆ ನೀಗಿ, ಎಂದು ನಿಮ್ಮನೊಡಗೂಡುವೆನಯ್ಯಾ.
--------------
ಬಸವಣ್ಣ
ಮನವೆಂದಡೆ ಮರವೆಗೆ ಒಳಗುಮಾಡಿತ್ತು. ತನುವೆಂದಡೆ ತಾಮಸಕ್ಕೊಳಗುಮಾಡಿತ್ತು. ಧನವೆಂದಡೆ ಆಶೆಯೆಂಬ ಪಾಶಕ್ಕೊಳಗುಮಾಡಿತ್ತು. ಇವೀಸು ಮಾಯಾಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತನಿರ್ಮಲನಾಗಿ ನೋಡಿ ಕಂಡ ಶರಣಂಗೆ ತನುವೆ ಗುರುವಾಯಿತ್ತು. ಮನವೆ ಘನವಾಯಿತ್ತು, ಧನವೆ ಜಂಗಮವಾಯಿತ್ತು. ಈ ತ್ರಿವಿಧವನು ತ್ರಿವಿಧಕಿತ್ತು, ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು. ಇದರ ನೆಲೆಯನರಿಯದೆ, ಆ ಮನದ ಬೆಂಬಳಿಗೊಂಡಾಡಿದವರೆಲ್ಲ ನರಗುರಿಗಳಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಪಾದೋದಕವು ಲಿಂಗದ ಮೇಲೆ ಎರದಲ್ಲಿ ಜಂಗಮ ಘನವಾಯಿತ್ತು. ಆ ಲಿಂಗೋದಕ ಸ್ವೀಕರಿಸಿದಲ್ಲಿ ಜಂಗಮಕ್ಕೆ ಲಿಂಗ ಘನವಾಯಿತ್ತು. ಲಿಂಗದ ಕಳೆಯೆ ಜಂಗಮ, ಜಂಗಮದ ಕಳೆಯೇ ಲಿಂಗ; ಆವುದ ಘನವೆಂಬೆ; ಆವುದ ಕಿರಿದೆಂಬೆ? ಲಿಂಗ-ಜಂಗಮ ನೇತ್ರದಲ್ಲಿಯ ಪ್ರಕಾಶದಂತೆ ತಿಳಿದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಯ್ಯಾ, ನಾನು ಊರ ಮರೆದು ಆಡ ಹೋದಡೆ, ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಆ ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು, ಉಷ್ಣ ಊರ್ದ್ವಕ್ಕೇರಿತ್ತು. ತಲೆಯೆತ್ತಿ ನೋಡಲು, ಒಕ್ಕಲು ಓಡಿತ್ತು, ಊರು ಬಯಲಾಯಿತ್ತು. ಆ ಬಯಲನೆ ನೋಡಿ, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಗಂಡನಿಂದ ಗಳಿಸಿದರ್ಥವನು ಹಗಲಿರುಳಗೂಡಿ, ಮಂಡಲದೊಳಗುಳ್ಳ ಮಿಂಡರ ನೋಡಿ ನೋಡಿಯಿತ್ತಡೆ ಗಂಡನೈಶ್ವರ್ಯದ ಬೆಳಗು ಘನವಾಯಿತ್ತು ಮೂರು ಲೋಕದೊಳಗೆ ; ವಿನಯವಾಯಿತ್ತು ಸಕಲಸನ್ನಿಹಿತರಿಗೆ ; ಸನುಮತವಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾಚಿಕೆಯಿಲ್ಲದ ಹೆಂಡತಿ, ಗುಣವಿಲ್ಲದ ಗಂಡನ ಮದುವೆಯ ನಿಬ್ಬಣದಲ್ಲಿ, ಮಿಂಡರ ಗುದ್ದಾಟ ಘನವಾಯಿತ್ತು ನೋಡಾ ! ಚೆನ್ನೆಯ ಜವ್ವನದ ಸುಖವ ಚನ್ನಿಗರು ಮೋಹಿಸಿ ಭೋಗವ ಮಾಡಿದರೆ, ಗುರುನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಡಿನ ಕೋಡಿನ ತುದಿಯ ಇಂಬಿನಲ್ಲಿ ಮೂರು ತೋಳನ ಅಗಡ ಘನವಾಯಿತ್ತು. ಬೇಟೆಯ ಬೆಂಬಳಿಗೆ ಸಿಕ್ಕವು, ನಾಯ ತೋಟಿಗೆ ತೊಡಕವು, ಹಿಂಡಿನ ಗೊಂದಳದಲ್ಲಿ ಹೊಕ್ಕು ಆಡ ತಿಂದಹವು. ಆಡ ಕೂಡುವ ಕಳನಿಲ್ಲ, ತೋಳನ ಬಾಧೆ ಬಿಡದು. ಕೋಳುಹೋಗದ ಮುನ್ನವೆ ಅರಿ, ಅಲೇಖನಾದ ಶೂನ್ಯ ಕಲ್ಲಿನೊಳಗಾದವನ.
--------------
ವಚನಭಂಡಾರಿ ಶಾಂತರಸ
ಕುದುರೆಯ ಕುಪ್ಪಟ ಘನವಾಯಿತ್ತು. ಆನೆಯ ಹರಿದಾಟ ನಿಲಬಾರದು. ಒಂಟೆಯ ಕತ್ತು ನೆಟ್ಟಗಾಯಿತ್ತು. ಬಂಟರ ಹರಿದಾಟ ಉಂಟು ಕಟ್ಟಿಗೆಯವರು ಉಗ್ಗಡಿಸುತ್ತ, ಭಟರುಗಳು ಪೊಗಳುತ್ತ , ಸಕಲವಾದ್ಯ ರಭಸದೊಳಗೆ ಸಂದಳಿಯೆಂಬ ಅಂದಳದ ಮೇಲೆ ಚಂದವಾಗಿ ಮನೋರಾಜ್ಯಂಗೆಯ್ವುತ್ತಿರಲು, ಈ ಸುಖವನೊಲ್ಲದೆ, ಮುಂದೆ ದುಃಖ ಉಂಟೆಂದು ಶರಣನರಿದು, ತಲೆ ಎತ್ತಿ ನೋಡಿ, ಘನಗುರುವಿನ ಹಸ್ತದಿಂದ ಅನುಜ್ಞೆಯಂ ಪಡೆದು, ಧ್ಯಾನ ಧಾರಣ ಸಮಾಧಿಯಿಂದ ತಿಳಿದು ನೋಡಲಾಗಿ, ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗ ಅರಸು, ಆ ಅರಸಿನ ಗೊತ್ತುವಿಡಿದು ಇತ್ತಲೆ ಮನವೆಂಬ ಅರಸನು ಹಿಡಯಲಾಗಿ ಹಿಡಿದು, ಆನೆ, ಕುದುರೆ, ಸೇನೆಯನೆಲ್ಲ ಸೂರೆಗೊಂಡು, ಭಂಡಾರ ಬೊಕ್ಕಸ ಅರಮನೆಯನೆಲ್ಲ ಸುಟ್ಟು ಬಟ್ಟಬಯಲಮಾಡಿದ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಲು ಆರೂರೊಳಗಾಡುವ ಪಕ್ಷಿ ಐವತ್ತೆರಡು ವೃಕ್ಷಂಗಳ ಹತ್ತುತ್ತ ಇಳಿಯುತ್ತ ಇರಲಾಗಿ ಉಲುಹು ಘನವಾಯಿತ್ತು ನೋಡಾ. ಒಂಬತ್ತು ಬಾಗಿಲೊಳಗೆ ಹೋಗುತ್ತ ಬರುತ್ತಿಪ್ಪುದಯ್ಯ. ಇದುಕಾರಣ, ಒಂಬತ್ತು ಬಾಗಿಲ ಮುಚ್ಚಿ ಐವತ್ತೆರಡು ವೃಕ್ಷಂಗಳ ಉಲುಹನಡಗಿಸಿ ಏಕವೃಕ್ಷದಲ್ಲಿ ಸ್ವಸ್ಥಿರವಾಗಿ ನಿಲಿಸಿ ಆರೂರಲಾಡುವ ಪಕ್ಷಿಯ ಪ್ರಳಯವ ತಪ್ಪಿಸಬಲ್ಲರೆ ಪ್ರಾಣಲಿಂಗಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬೆಳಗು ಬರಲು ಕತ್ತಲೆ ಹರಿಯಿತ್ತು. ಸುಳಿಗಾಳಿ ಸುಸರವಾಯಿತ್ತು. ಇಳೆ ಜಲ ವಹ್ನಿಯೊಳಗಡಗಿತ್ತು. ಮೇಲೆ ಮಳೆಗಾಲ ಘನವಾಯಿತ್ತು. ಅರಳಿದ ಪುಷ್ಪದೊಳಗೆ ಘಳಿಲನೆ ಮೂರ್ತಿಗೊಂಡನೊಬ್ಬ ಶರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗದೊಳಗಾದನು ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ತಲೆಯಲಟ್ಟುಂಬುದ ಒಲೆಯಲಟ್ಟುಂಡಡೆ ಹೊಗೆ ಘನವಾಯಿತ್ತು. ತಲೆಯಲಟ್ಟುಂಡಾತ ಮಹಾಪ್ರಸಾದಿ, ಈಶ್ವರಸ್ವರವ ನುಡಿಯಲರಿಯದೆ ಬೀಸರವೋದರಣ್ಣಗಳೆಲ್ಲ. ಈಶ್ವರ ಸ್ವರವ ನುಡಿದರೆ ತಾನೆ ಶಿವನು ಗುಹೇಶ್ವರನೆಂಬುದು ಬೇರಿಲ್ಲ ಕಾಣಿರೊ.
--------------
ಅಲ್ಲಮಪ್ರಭುದೇವರು
ಅರಿದಿಹೆನೆಂಬ ಅವಸ್ಥೆಯಿದ್ದಡೇನು? ಮತ್ತೆ ಮರವೆಗೆ ಕಾರಣವಾದ ಸಂಸಾರದ ಕಾಯ ಕಳವಳಕ್ಕೊಳಗಾದಡೆ ಮಾಯೆ ಮನವನೆಡೆಗೊಂಡಿತ್ತು. ಮಾಯೆ ಮನವನೆಡೆಗೊಂಡಲ್ಲಿ ಅರಿವು ಜಾರಿತ್ತು. ಮರಹು ಘನವಾಯಿತ್ತು. ಅರಿವುದಿನ್ನೇನು ಹೇಳಾ?. ಕೈಯ ತುತ್ತು ಬಾಯ್ಗೆ ಬಾರದಂತಾಯ್ತು. ಇನ್ನೆಲ್ಲಿಯದು ಲಿಂಗ? ಇನ್ನೆಲ್ಲಿಯದು ಜಂಗಮ? ಇನ್ನೆಲ್ಲಿಯದು ಪ್ರಸಾದ? ಅಕಟಕಟಾ ಹಾನಿಯ ಹಿಡಿದು ಹೀನವಾದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಮೃತ ಸೇವನೆಯ ಮಾಡಿ ಆಪ್ಯಾಯನ ಘನವಾಯಿತ್ತು. ಪರುಷವೇದಿಯ ಸಾಧಿಸ ಹೋದಡೆ ದಾರಿದ್ರ್ಯ ಘನವಾಯಿತ್ತು. ಮರುಜೇ (ಜ?)ವಣಿಯ ಹಣ್ಣ ಮೆದ್ದು, ಮರಣವಾಯಿತ್ತ ಕಂಡೆ. ಎಲ್ಲವನೂ ಸಾಧಿಸ ಹೋದಡೆ ಏನೂ ಇಲ್ಲದಂತಾಯಿತ್ತು. ನಾನು ನಿಜವ ಸಾಧಿಸಿ ಬದುಕಿದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
-->