ಅಥವಾ

ಒಟ್ಟು 10 ಕಡೆಗಳಲ್ಲಿ , 8 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ಘನಗಂಭೀರವಪ್ಪ ಸಮುದ್ರದೊಳಗೊಂದು ರತ್ನ ಹುಟ್ಟಿದಡೆ, ಆ ಸಮುದ್ರದೊಳಗಡಗಿರ್ಪುದಲ್ಲದೆ ಘನವಾಗಿ ತೋರಬಲ್ಲುದೆ ? ನಿಮ್ಮ ಕರುಣಕಟಾಕ್ಷದಿಂದುದಯಿಸಿ, ಅನಂತ ಪುರಾಣವೆಲ್ಲವು ನಿಮ್ಮ ಕೃಪೆಯಿಂದ ಸಾಧ್ಯವಾಯಿತ್ತೆನಗೆ. ಆದಿಯನಾದಿ ಇಲ್ಲದಂದು ನೀನೊಬ್ಬನೆ ಪ್ರಸಾದಿ. ಉಮೆಯ ಕಲ್ಯಾಣವಿಲ್ಲದಂದು ನೀನೊಬ್ಬನೆ ಪ್ರಸಾದಿ. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಬಸವಣ್ಣಾ, ನಿಮ್ಮ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನಯ್ಯಾ.
--------------
ಚನ್ನಬಸವಣ್ಣ
ಜಂಬೂದ್ವೀಪದ ವ್ಯವಹಾರಿ ಖಂಡ ಭಂಡವ ತುಂಬಿ ಕುಂಭಿನಿಯುದರದ ಮೇಲೆ ಪಸರವನಿಕ್ಕಿದ. ಉಷ್ಣ ತೃಷ್ಣೆ ಘನವಾಗಿ, ಕಡಲೇಳು ಸಮುದ್ರವ ಕುಡಿದು ನೀರಡಿಸಿದಾತ ಅರಲುಗೊಂಡು ಬೆರಗಾದ. ಶಿಶು ತಾಯ ಹೆಣನ ಹೊತ್ತುಕೊಂಡು ಹೆಸರ ಹೇಳುತ್ತೈದಾನೆ ! ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು.
--------------
ಅಲ್ಲಮಪ್ರಭುದೇವರು
ಇರುಳಿನ ಜಕ್ಕವಕ್ಕಿಯಂತೆ ಅಗಲಿ ಹಲುಬುತಿರೆ ಇರುಳಿನ ತಾವರೆಯಂತೆ ಮುಖ ಬಾಡಿ, ಇರುಳಿನ ನೆಯ್ದಿಲಂತೆ ಕಣ್ಣಮುಚ್ಚದೆ, ಇರುಳಿನ ಸಮುದ್ರದಂತೆ ಘನವಾಗಿ, ಸಲೆ ಉಮ್ಮಳಿಸಿ ಸಂಜೆವರಿದು ಮಹಾಲಿಂಗ ಗಜೇಶ್ವರನ ಬರವಿಂಗೆ ಬೆಳಗಾಯಿತು.
--------------
ಗಜೇಶ ಮಸಣಯ್ಯ
ನಿರಾಕಾರದ ಶಕ್ತಿಯಲ್ಲಿ ನಿರಾಳವೆಂಬ ತನು, ನಿಃಶೂನ್ಯವೆಂಬ ಶೂನ್ಯಸಿಂಹಾನದ ಮೇಲೆ ಘನವಾಗಿ ತೊಳಗಿ ಬೆಳಗುತ್ತಿರ್ದನು. ದೆಸೆಯಲ್ಲಾ ಮುಖವಾಗಿ, ಮುಖವೆಲ್ಲಾ ಜಗವಾಗಿ, ಅಖಂಡಪರಿಪೂರ್ಣ ಪರಬ್ರಹ್ಮ ತಾನಾದನು. ಈ ಮಹಿಮನ ನೆನೆದಡೆ ಮನೋಮುಕ್ತಿ , ಕಂಡಡೆ ರೂಪುಮುಕ್ತಿ, ನುಡಿಸಿದಡೆ ಶಬ್ದಮುಕ್ತಿ , ಸಂಗವ ಮಾಡಿದಡೆ ಸರ್ವಾಂಗಲಿಂಗೈಕ್ಯ. ಬಸವಪ್ರಿಯ ಕೂಡಲಚೆನ್ನಸಂಗಯ್ಯಾ, ನಿಮ್ಮ ಪ್ರಭುವಿನ ಶ್ರೀಪಾದಕ್ಕೆ ಶರಣೆಂದು ಬದುಕಿದೆನು.
--------------
ಸಂಗಮೇಶ್ವರದ ಅಪ್ಪಣ್ಣ
ಅನುಭವವಾಗಲೆಂದು ಬಂದು ಘನವಾಗಿ ಒಂದು ಕಿರಿದಾಗಿ ಹೇಳಿದೆನಲ್ಲದೆ, ಲಿಂಗವ ಕಿರಿದಾಗಿ ಹೇಳಿದೆನೆ ಅಯ್ಯಾ? ನೀರಲ್ಲಿದ್ದ ತೆರೆಗಳೆಲ್ಲ ನೀರಲ್ಲವೆ? ಲಿಂಗಮಧ್ಯೇ ಜಗತ್ಸರ್ವಂ' ಎಂದ ಬಳಿಕ? ಪಾಷಾಣಂಗಳೆಲ್ಲ ಲಿಂಗಂಗಳು, ಲಿಂಗಂಗಳೆಲ್ಲ ಪಾಷಾಣಂಗಳು. `ಶ್ರೀಶೈಲೇ ವಸತೀ ಶಿಲಾ ಶಿವಮಯೀ ಸತ್ಯಂ ಶಿವೇ' ಎಂಬ ಶಿವವಾಕ್ಯವದು ಪುಸಿಯೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ತಾನೇ ಶಿವನೆಂದು ಅರಿದು ಸತ್ತ ಬಳಿಕ ನಿತ್ಯಾನಂದ ನಿಜಸುಖಿಯೆಂದಿತ್ತು. ತಾನೇ ದೇಹಿಯೆಂದು ಮರೆದು ಸತ್ತ ಬಳಿಕ ಮಿಥ್ಞ್ಯಿನಂದ ಭವದುಃಖಿಯೆಂದಿತ್ತು. ತನ್ನ ತಾನರಿಯದೆ ತಾನೆಯೆಂದು ತನು ಭಾವ-ಮನ-ಪ್ರಾಣಧರ್ಮದಲ್ಲಿರ್ದು ಸತ್ತ ಬಳಿಕ ತ್ರಿದೈವ ಕುಳವೆಂದಿತ್ತು. ತನುಭಾವನಾಗಿ ಮಹಾನುಭಾವ ಶಿವನ ಘನವಾಗಿ ಪೂಜಿಸಿ ತನುವಳಿದ ಬಳಿಕ ದೇವಾದಿ ಮನುಜಾಂತ್ಯ ಪದದೊಳೊಂದುಂಟು ಮೂಲಕ್ಕೆಂದಿತ್ತು ಗುರುನಿರಂಜನ ಚನ್ನಬಸವಲಿಂಗದಲ್ಲಿ ಶಿವಶರಣರ ವಾಕ್ಯ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ವೈಷ್ಣವರಾದವರು ತಮ್ಮ ವಿಷ್ಣುವ ಬಿಟ್ಟು ಕಳೆದು, ಲಿಂಗಭಕ್ತರಾದರನೇಕರು. ಅಯ್ಯಾ, ಜೈನರಾದವರು ತಮ್ಮ ಜಿನನ ಬಿಟ್ಟು ಕಳೆದು, ಲಿಂಗಭಕ್ತರಾದರನೇಕರು. ಅಯ್ಯಾ, ದ್ವಿಜರಾದವರು ತಮ್ಮ ಕರ್ಮಂಗಳ ಬಿಟ್ಟು ಕಳೆದು, ಲಿಂಗಭಕ್ತರಾದರನೇಕರು. ಲಿಂಗವ ಬಿಟ್ಟು, ಇತರವ ಹಿಡಿದವರುಳ್ಳರೆ ಹೇಳಿರಯ್ಯಾ ? ಉಳ್ಳಡೆಯೂ ಅವರು ವ್ರತಗೇಡಿಗಳೆನಿಸಿಕೊಂಬರು. ಇದು ಕಾರಣ, ಋಷಿ ಕೃತಕದಿಂದಲಾದ ಕುಟಿಲದೈವಂಗಳ ದಿಟವೆಂದು ಬಗೆವರೆ, ಬುದ್ಧಿವಂತರು ? ಸಟೆಯ ಬಿಡಲಾರದೆ, ದಿಟವ ನಂಬಲಾರದೆ, ನಷ್ಟವಾಗಿ ಹೋಯಿತ್ತೀ ಜಗವು ನೋಡಾ. ಸಕಲದೈವಂಗಳಿಗೆ, ಸಕಲಸಮಯಂಗಳಿಗೆ ನೀವೇ ಘನವಾಗಿ, ನಿಮಗೆ ಶರಣುವೊಕ್ಕೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಸಂಸಾರಸುಖಕ್ಕೆ ಕಟ್ಟಿದ ಮನೆ, ಸಂಸಾರಸುಖಕ್ಕೆ ಕೊಂಡ ಹೆಣ್ಣು, ಸಂಸಾರಸುಖಕ್ಕೆ ಆದ ಮಕ್ಕಳು, ಸಂಸಾರಸುಖಕ್ಕೆ ನೆರೆದ ಬಂಧುಬಳಗ, ಸಂಸಾರಸುಖಕ್ಕೆ ಗಳಿಸಿದ ದ್ರವ್ಯ, ಸಂಸಾರಸುಖಕ್ಕೆ ಹೊಂದಿದ ಕ್ಷೇತ್ರ ಬೇಸಾಯ, ಸಂಸಾರ ಸುಖ-ದುಃಖ ಘನವಾಗಿ ಸತ್ತು ಸತ್ತು ಹುಟ್ಟುವ ಮಾನವರು ನಿಃಸಂಸಾರದಿಂದ ನಿಮ್ಮನರಿದು, ನಿಮ್ಮ ಜ್ಞಾನದೊಳಿಂಬುಗೊಂಡು, ಭವವಿರಹಿತರಾಗುವುದಿದನೇನಬಲ್ಲರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. ?
--------------
ಹೇಮಗಲ್ಲ ಹಂಪ
ಮರವೆಗೆ ಅರಿವು ಸಂಬಂಧವಹಲ್ಲಿ ಮನ ತುಂಬಿದ ತಮಕ್ಕೆ ಜ್ಯೋತಿ ಒಂದೆ ಅವಗವಿಸಿದಂತೆ, ಪ್ರಕೃತಿ ಚಿತ್ತವನರಿವುದಕ್ಕೆ ಮತ್ತಗಜವ ಹಾರೆಯಲ್ಲಿ ಒತ್ತೆ, ಮೇಲಿದ್ದವನ ಚಿತ್ತನರಿದಡಗುವಂತೆ ಸಂಸಾರಯುಕ್ತಿಯನರಿವವನ ಮಥನ. ಲೋಹ ಘನವಾಗಿ, ಸಿದ್ದಿಯ ಸಾರ ಅಲ್ಪವಾಗಿ ವೇಧಿಸುವಂತೆ ಘನ ಶೈಲಕ್ಕೆ ಅಂಗುಲದೊಳಗಡಗಿದ ಕುಲಿಶದಂತೆ, ಮರೆದಲ್ಲಿ ಅರಿದು ಎಚ್ಚತ್ತು ಅರಿವವನ ವಿವರ; ಪೂಜಿಸಿ ಪುಣ್ಯವನರಿವ ಭಾವಶುದ್ಧಾತ್ಮನ ಭಾವಸ್ಥಲ; ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಉಭಯ ನಾಮತೆರನಿಲ್ಲದ ತೆರ.
--------------
ಡಕ್ಕೆಯ ಬೊಮ್ಮಣ್ಣ
ಅಯ್ಯಾ, ಸೂರ್ಯನು ನಿತ್ಯ ಭೂಪ್ರದಕ್ಷಿಣೆಯಾದರೆ ಅದು ಚೋದ್ಯವಲ್ಲ. ಚಂದ್ರನು ತಾರೆಗಳೊಡವೆರೆದು ತಿಥಿ ವತ್ಸರಾದಿ ಸಕಲವ ನಡಸಿ ಕ್ಷೀಣ ಘನವಾಗಿ ತೋರಿದಡೆಯು ಅದು ಚೋದ್ಯವಲ್ಲ. ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶದೊಳಗೆ ತಮ್ಮ ತಮ್ಮ ಪರುಷಪಂಚಕವ ನಿರ್ಮಿಸಿದಡೆಯು ಅದು ಆಶ್ಚರ್ಯವಲ್ಲ. ಮತ್ತಾವುದು ಆಶ್ಚರ್ಯವೆಂದೊಡೆ ಗುರುನಿರಂಜನ ಚನ್ನಬಸವಲಿಂಗಾ ನೀವು ನಾಮ ಸೀಮೆಗೆ ತೋರಿ ನಾಮ ನಿರ್ನಾಮ ನಿಸ್ಸೀಮ ನಿರ್ವಯಲಾದುದೇ ಘನಚೋದ್ಯ ಕಾಣಾ
--------------
ದೇಶಿಕೇಂದ್ರ ಸಂಗನಬಸವಯ್ಯ
-->