ಅಥವಾ

ಒಟ್ಟು 18 ಕಡೆಗಳಲ್ಲಿ , 11 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರೋಧವೆಂಬ ಹೊಲಗೇರಿಯ ಹೊರವಂಟು, ಭೇದವೆಂಬೈವರನತಿಗಳೆದನು. ನಾದಬಿಂದುವೆಂಬ ತೀರ್ಥವನು ಮಿಂದು, ಆದಿ ಎಂಬ ಅಷ್ಟದಳವಂ ಕಿತ್ತೆತ್ತಿ ಹೋದನು. ನಾದ ಬಿಂದು ಆದಿ ಬೋಧೆಗೆ ಒಳಗಾದ ಘನವನು ಸಾಧಿಸಿದಂ ಭೋ ಎನ್ನ ಅಜಗಣ್ಣತಂದೆ
--------------
ಮುಕ್ತಾಯಕ್ಕ
ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು, ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ. ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು. ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ. ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ. ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ, ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಕರದ ಮಹಾತ್ಮೆಯನು ಹೊಗಳುವರೆ ಎನ್ನಳವೆ? ಕರುಣಾಕರನೆ ಬಲ್ಲ ಗುರುರಾಯನು. ಹಲವು ಬ್ರಹ್ಮಾಂಡವನು ಒಳಗಿಟ್ಟ ಘನವನು ಧರಿಸಿಪ್ಪುದದು ಭಕ್ತಿಕರವು ನೋಡಾ. ಆ ಶರಣರ ಕರವನು ಹೊಗಳುವವು ವೇದಂಗಳಯ್ಯ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನಾನೆಂದೆನಲಿಲ್ಲ, ನುಡಿದು ಹೇಳಲಿಕ್ಕಿಲ್ಲ. ತನ್ನಲ್ಲಿ ಬಯಲ ಘನವನು ಹರಿದು ಹತ್ತುವುದೆ ತನ್ನಲ್ಲಿ ತಾನಾದ ಬಯಲ ಘನವನು? ಇನ್ನೇನನರಸಲಿಲ್ಲ, ಅದು ಮುನ್ನ ತಾನಿಲ್ಲ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ತನ್ನನರಿಯೆನೆಂಬುದು ಅಜ್ಞಾನ ನೋಡಾ. ಅರಿಯದ ಅಜ್ಞಾನವ ಅಗಳೆದು ಜ್ಞಾನವ ಕಾಣೆನೆಂಬುದು ವಿಪರೀತ ಭಾವ ನೋಡಾ ! ಎಲ್ಲವನು ತೋರುವ ಘನವನು ಎಲ್ಲಿಯೂ ಕಾಣಬಾರದು. ಕಾಣಬಾರದ ನಿಜವ ತೋರಬಾರದು, ತೋರಬಾರದ ನಿಜವ ತಿಳಿಯಬಾರದು,. ಗುಹೇಶ್ವರಲಿಂಗದಲ್ಲಿ ಬಯಕೆಯುಳ್ಳನ್ನಕ್ಕ ತವಕ ಎಡೆಗೊಂಡಿಪ್ಪ ಕಾರಣ ತಿಳುಹಲಿಲ್ಲವೆಂಬುದ ನಿನ್ನ ನೀ ತಿಳಿದು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಶಿವಶಿವಾ, ಏನೆಂಬೆನಯ್ಯಾ ಶಿವಶರಣರ ಘನವನು ! ಶಿವಶರಣರ ಮಹಿಮೆಯನು, ಶಿವಶರಣರ ಚಾರಿತ್ರವನು, ಶಿವನೇ ಬಲ್ಲನಲ್ಲದೆ ಉಳಿದವರದನೆಂತು ತಿಳಿವರಯ್ಯಾ ? ಹೊರಗಣ ಕ್ರಿಯೆಯು ಹಲವು ಪ್ರಕಾರವಾದಡೂ ಒಳಗೆ ನೀರು ನೀರ ಕೂಡಿದಂತೆ, ಕ್ಷೀರ ಕ್ಷೀರವ ಬೆರೆದಂತೆ, ಮಾರುತಾಂಬರ ಸಂಯೋಗವಾದಂತೆ, ಶಿಖಿಕರ್ಪುರದ ನಿಷ್ಪತ್ತಿಯಂತೆ, ಸಚ್ಚಿದಾನಂದಪರಬ್ರಹ್ಮವ ಕೂಡಿ ಬಿಚ್ಚಿ ಬೇರಾಗದಿರ್ಪ ಭವರಹಿತ ಶರಣರೆ ಕೇವಲಜ್ಞಾನಸ್ವರೂಪರು, ಜೀವನ್ಮುಕ್ತರು. ಅವರೇ ನಿಮ್ಮ ಶರಣರು, ಅವರೇ ಮಹಾಜ್ಞಾನಘನವ ನುಂಗಿದ ಮಹಾಂತರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಕರಸ್ಥಲವೇ ಬಸವಣ್ಣನಯ್ಯಾ. ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಾ. ಎನ್ನ ಭಾವಸ್ಥಲವೇ ಪ್ರಭುದೇವರಯ್ಯಾ. ಇಂತೆನ್ನ ಕರ ಮನ ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳು ತಲ್ಲೀಯವಾಗಿ ಮಹಾಲಿಂಗ ಗಜೇಶ್ವರಾ, ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲಿ ಕಂಡು ಪರಮಸುಖಿಯಾಗಿರ್ದೆನು.
--------------
ಗಜೇಶ ಮಸಣಯ್ಯ
ಅಂಗವನಾಚಾರಕ್ಕರ್ಪಿಸಿ, ಆಚಾರವನಂಗಕ್ಕರ್ಪಿಸಿ ಆಚಾರಲಿಂಗಪ್ರಸಾದಿಯಾದ. ಪ್ರಾಣವ ಲಿಂಗಕ್ಕರ್ಪಿಸಿ, ಆ ಲಿಂಗವ ಪ್ರಾಣಕ್ಕರ್ಪಿಸಿ ಪ್ರಾಣಲಿಂಗಪ್ರಸಾದಿಯಾದ. ದೇಹಭಾವದಹಂಕಾರ ದಾಸೋಹಭಾವದೊಳಗಲ್ಲದೆ ಅಳಿಯದೆಂದು ಲಿಂಗಜಂಗಮಕ್ಕೆ ತೊತ್ತುವೊಕ್ಕು ಲಿಂಗಜಂಗಮಪ್ರಸಾದಿಯಾದ. ಸತ್ಯಶರಣರ ಅಂಗಳದೊಳಗೆ ಬಿದ್ದಗುಳನೆತ್ತಿಕೊಂಡಿಪ್ಪೆನೆಂದು, ನಿಮ್ಮ ಪ್ರಸಾದದ ಕುಳಿಯೊಳಗೆ ಹನ್ನೆರಡು ವರ್ಷ ನಿರಂತರ ಪ್ರಸಾದಿಯಾಗಿರ್ದ, ಕೂಡಲಚೆನ್ನಸಂಗಮದೇವರಲ್ಲಿ ಮರುಳಶಂಕರದೇವರ ಶ್ರೀಪಾದದ ಘನವನು ನಿಮ್ಮಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಚನ್ನಬಸವಣ್ಣ
ಎನ್ನಂಗದ ಆಚಾರದಲ್ಲಿ ಸಂಗನಬಸವಣ್ಣನ ಕಂಡೆನು. ಎನ್ನ ಮನದ ಅರಿವಿನಲ್ಲಿ ಚೆನ್ನಬಸವಣ್ಣನ ಕಂಡೆನು. ಎನ್ನ ಭಾವದ ಕೊನೆಯ ಮೊನೆಯ ಮೇಲೆ ಅಲ್ಲಮಪ್ರಭುದೇವರ ಕಂಡೆನು. ಎಲೆ ಕಲಿದೇವರದೇವಯ್ಯ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು, ನಮೋನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
`ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂಬ ಶ್ರುತಿಮತವಿಡಿದು ಏಕಲಿಂಗನಿಷಾ*ಪರನಾದನು ಮಾಹೇಶ್ವರನು. `ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಾಜ್ಯಂ' ಎಂಬ ಶ್ರುತಿ ಮತವಿಡಿದು ಅನ್ಯದೈವಂಗಳಂ ಬಿಟ್ಟು ನಿಮ್ಮನೇ ಧ್ಯಾನಿಸುವನಯ್ಯಾ, ನಿರಂತರ ನಿಮ್ಮ ಮಾಹೇಶ್ವರನು. `ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್' ಎಂಬ ಶ್ರುತಿಮತವಿಡಿದು ನಿಮ್ಮನೆ ಉಪಾಸ್ತಿಯ ಮಾಡಿ ಲಿಂಗಾರ್ಚನೆಯ ಮಾಡುವರಯ್ಯಾ ನಿಮ್ಮ ಮಾಹೇಶ್ವರರು. ಅದು ಕಾರಣ ನಿಮ್ಮ ಐಕ್ಯವ ನಿಮ್ಮ ಮಾಹೇಶ್ವರನೆ ಬಲ್ಲ. ನಿಮ್ಮ ಮಾಹೇಶ್ವರಾಧಿಕ್ಯವ ನೀವೇ ಬಲ್ಲಿರಿ. ಉಳಿದ ದೇವ ದಾನವ ಮಾನವಾದಿಗಳು ಅರಿಯಬಹುದೆ ? ನಿಮ್ಮ ಘನವನು, ನಿಮ್ಮ ಮಾಹೇಶ್ವರರ ಘನವನು ಶಿವನೆ ಬಲ್ಲ, ಶಿವನ ಮೀರುವ ಪದವುಂಟೆ ? ಸಕಲಬ್ರಹ್ಮಾಂಡವನೂ ಅವಗ್ರಹಿಸಿಕೊಂಡಿಪ್ಪನಾಗಿ ಶಿವನು, ಆ ಶಿವನನವಗ್ರಹಿಸಿಕೊಂಡಿಪ್ಪರು ಮಾಹೇಶ್ವರರು ಅಣುಮಹತ್ತಿನೊಳಗೆ ಸಂಪೂರ್ಣರಪ್ಪರು. 'ಅಣೋರಣೀಯಾನ್ಮಹತೋ ಮಹೀಯಾನ್' ಎಂದುದಾಗಿ, `ಯಥಾ ಶಿವಸ್ತಥಾ ಭಕ್ತಃ' ಎಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣರ ಮೀರಿದ ಪದ ಉಂಟಾದರೆ ಬಲ್ಲರೆ ಹೇಳ ?
--------------
ಉರಿಲಿಂಗಪೆದ್ದಿ
ನಿಮ್ಮ ಕಂಡು, ಕೈಮುಗಿದು, ನಿಮಗೆ ಭಕ್ತನಾದೆನಲ್ಲದೆ, ನಿಮ್ಮ ಕಾಣದಲೆ ಕೈಮುಗಿವ ಭಕ್ತಿಯುಂಟೆ ಅಯ್ಯಾ ನಿಮ್ಮ ಮುಟ್ಟಿ ಪೂಜಿಸಿ ಆಚಾರಿಯಾದೆನಲ್ಲದೆ, ನಿಮ್ಮ ಮುಟ್ಟದಲೆ ಎನಗಾಚಾರವೆಲ್ಲಿಯದಯ್ಯಾ ನಿಮ್ಮ ಘನವನು ಮನದಲ್ಲಿ ನೆನೆದು ಧರಿಸಿದ ಕಾರಣ ಜ್ಞಾನೋದಯವಾಯಿತ್ತಲ್ಲದೆ, ನೀವಿಲ್ಲದಡೆ ಎನಗೆ ಜ್ಞಾನವೆಲ್ಲಿಯದಯ್ಯಾ ಇಂತು ಆವ ಮುಖದಲ್ಲಿಯೂ ಎನ್ನನಾಗುಮಾಡಲೆಂದು ನೀವು ಮುಂದುಗೊಂಡಿದ್ದ ಕಾರಣ, ನಿಮ್ಮ ಸನ್ನಿಧಿಯಲಾನು ಸದಾಚಾರಿಯಾದಡೆ, ನಿಮಗಾನು ಸರಿಯೆ ಕೂಡಲಸಂಗಮದೇವಾ, ಜಂಗಮಮುಖದಿಂದ ಸಂಗನಬಸವಣ್ಣ ಬದುಕಿದನೆಂಬುದ ಮೂರು ಲೋಕವೆಲ್ಲವೂ ಬಲ್ಲುದು ಕಾಣಾ ಪ್ರಭುವೆ.
--------------
ಬಸವಣ್ಣ
ಮಥನದ ಲೀಲೆಯಲ್ಲಿ ಹುಟ್ಟುವುದೇ ಬ್ರಹ್ಮವು ? ಶ್ರುತಿ ಸ್ಮೃತಿಗಳಿಗೆ ಅಳವಡದು ನೋಡಾ ! ಪೃಥ್ವಿಯೊಳಗಿಲ್ಲದ ಅಚಲವಪ್ಪ ಘನವನು, ಸಚರಾಚರದಲ್ಲಿ ಭರಿತವೆಂತೆಂಬೆ ? ಇಲ್ಲದ ಲಿಂಗವನಲ್ಲಲ್ಲಿಗೆ ಉಂಟುಮಾಡುವ ಈ ಲೀಲೆಯ ವಾರ್ತೆ ಎಲ್ಲಿಯದೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಎನ್ನ ತನುವೆ ಚನ್ನಬಸವಣ್ಣನಯ್ಯಾ, ಎನ್ನ ಮನವೆ ಮಡಿವಾಳನಯ್ಯಾ, ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ, ಗುಹೇಶ್ವರಾ_ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮಸುಖಿಯಾಗಿರ್ದೆನು.
--------------
ಅಲ್ಲಮಪ್ರಭುದೇವರು
ಅಂಗದಲಳವಟ್ಟ ಲಿಂಗೈಕ್ಯನ ಸಂಗವನಾರಿಗೂ ಕಾಣಬಾರದು ನೋಡಾ. ಪ್ರಾಣದ ಕೊನೆಯ ಮೊನೆಯ ಮೇಲೆ, ಭಾವಸೂತಕದ ಹೊದಕೆಯ ಕಳೆದು, ನಿರ್ಭಾವ ನಿಸ್ಸೂತಕಿಯಾಗಿಪ್ಪ ನಿಜಲಿಂಗ ಸಮಾಧಿಯ ಘನವನು ಆರಿಗೆಯೂ ಕಾಣಬಾರದು ನೋಡಾ. ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನ ನಿಲವ ಕಂಡು ನಾನು ಬದುಕಿದೆನು ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ದೂರದ ತುದಿಗೊಂಬನಾರಯ್ಯ ಗೆಲುವರು ? ಮೀರಲಿಲ್ಲದ ನಿರಾಳದ ಘನವನು (ನಿಲವನು ?), ಮೀರಿ, ಕಾಬ ಘನವನು ಬೇರೆ ತೋರಲಿಲ್ಲ. ತೋರಿ ಕಾಬಡೆ ತನ್ನ ಹಿಡಿಯಲಿಲ್ಲ. ಓರೆ ಆವಿನ ಹಾಲನಾರಯ್ಯ ಕರೆವರು ? ಮೂರು ಲೋಕದೊಳಗೆ ತಾನಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->