ಅಥವಾ

ಒಟ್ಟು 19 ಕಡೆಗಳಲ್ಲಿ , 14 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗಲಿಂಗಸಂಬಂಧದಿರವು, ಬೀಜವೊಡೆದು, ಮೊಳೆದೋರುವಂತೆ, ಕುಸುಮ ಬಲಿದು, ದೆಸೆಗೆ ವಾಸನೆ ಪಸರಿಸುವಂತೆ, ಘನಲಿಂಗ ಘಟ, ಕುರುಹಿನಲ್ಲಿ ನಿಜದೋರುತ್ತದೆ. ಐಘಟದೂರ ರಾಮೇಶ್ವರಲಿಂಗ ಮೂರ್ತಿ, ಅಮೂರ್ತಿ ಆಗುತ್ತದೆ.
--------------
ಮೆರೆಮಿಂಡಯ್ಯ
ಶ್ರೀಗುರುಕರುಣಕಟಾಕ್ಷೆಯಿಂದ ತಮ್ಮ ತಾವರಿದ ನಿತ್ಯಮುಕ್ತ ನಿಜೋತ್ತಮ ಸದ್ಭಕ್ತ ಮಹೇಶ್ವರರು, ಹಿಂದೆ ಹೇಳಿದ ಬಹಿರಂಗ ಪಂಚಪಾತಕಮಂ ನಿರಸನಂಗೈದು ಮಾರ್ಗಕ್ರಿಯೆ ಶುದ್ಧರೆನಿಸಿ, ಅಂತರಂಗದ ಗುಪ್ತಪಾತಕಮಂ ನಿರಸನಗೈವ ವಚನಸೂತ್ರವದೆಂತೆಂದೊಡೆ : ತನಗುಳ್ಳ ಗಂಧ ರಸ ಮೊದಲಾದ ಸುಪದಾರ್ಥದ್ರವ್ಯಗಳ ಗುರು ಚರ ಪರ ಸ್ಥಿರ ತಂದೆ ತಾಯಿ ಘನಲಿಂಗ ಸಮ್ಮೇಳಕ್ಕೆ ಮಾಡದೆ ನಿರವಯಪರಿಪೂರ್ಣ ನಿರಂಜನ ಗುರುಲಿಂಗಜಂಗಮ ಪ್ರಸನ್ನೋದಯವಾದ ಚಿತ್ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮಹಾಮಂತ್ರ ಕೊನೆಮೊನೆಯಲ್ಲುದಯವಾದ ಮಹದರಿವು ಮಹಾಜ್ಞಾನ ಮಹಾನುಭಾವಾಚಾರ ಸಂಬಂಧದಾಚರಣೆಗಳೆ ಕೇವಲ ಎನ್ನ ಜನನಾಂಕುರದ ಮುಕ್ತಿದ್ವಾರವಾಗಿರುವ ಸ್ಥಿತಿಯ ಗೊತ್ತಿನ ಹಕ್ಕೆ, ನಾ ನಿರವಯಲಾಗುವ ಲಯಸ್ಥಾನದ ಉಳುವೆಯ ಮಹಾಮನೆಯೆಂದು ಭಾವಭರಿತವಾಗಿ ಹಿಂದುಮುಂದಣ ಫಲಪದದ ಭೋಗಮೋಕ್ಷದಾಪೇಕ್ಷೆಗಳಂ ನೆರೆನೀಗಿ, ಬಯಲಬ್ರಹ್ಮದಿರವ ಹೊದ್ದಲೊಲ್ಲದೆ ಪಾಪದಪುಂಜ, ಕರ್ಮದೋಕುಳಿ, ಮಲದಾಗರ, ಅನಾಚಾರದಕ್ರಿಯೆ, ಅಜ್ಞಾನ ವಿಷಯಾತುರದ ಭವಜೀವಿಗಳಾಗಿರುವ ಪರಮಪಾತಕರ ಮೋಹವಿಟ್ಟು, ನನ್ನ ಪೂರ್ವಾಶ್ರಯವೆಂದು, ಅತಿ ಪ್ರೇಮದಿಂದ ತನುಮನಧನವ ಸವೆದು, ಅವರೊಡಗೂಡಿ ತೀರ್ಥಯಾತ್ರೆಗಳಂ ಮಾಡಿ, ತಾ ಸ್ವೀಕರಿಸಿದ ಪ್ರಸಿದ್ಧಪ್ರಸಾದ ಪಾದೋದಕಪ್ರಸಾದಮಂ ಆ ತ್ರಿವಿಧ ದೀಕ್ಷಾಚಾರಹೀನವಾದ ಭೂಪ್ರತಿಷಾ*ದಿಗಳಿಗೆ ಕೊಟ್ಟು ಕೊಂಬುವ ಭ್ರಷ್ಟ ನಡಾವಳಿಯೆ ಅಂತರಂಗದ ಪ್ರಥಮಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅಂತಾದ ಕೈಲಾಸ ಮಹಾಮೂರ್ತಿಪರಮಾತ್ಮನು ತನ್ನ ವಕ್ಷ ಭಸ್ಮೋದ್ಭವ ರೇಣುರೂಪೆನಿಸಿದ ರೇಣುಕಾಖ್ಯ ತಾನಾಗಿ ಲೋಕಪಾವನಾರ್ಥವಾದ ನಾರದಮುನಿ ವಿನಂತಿಗೆ ಭೂವನಿತೆಯ ಭ್ರೂಮಧ್ಯ ಮಹಾಲಿಂಗವಾದ ಕೊಲ್ಲೀಪಾಕಿ ಸೋಮೇಶ್ವರನೊಳುದ್ಭವಿಸಿ, ಅರಿಯದೇಳುನೂರುವರ್ಷ ಸರ್ವೇಂದ್ರಿಯಗಳ ಶಿಕ್ಷಿಸಿ, ನಿಜತತ್ತ್ವ ತಿಳಿಯುವುದಕ್ಕೆ ತನ್ನ ಬಯಸುವರ್ಗೆ ತತ್ವೋಪದೇಶವ ಕೈಗೊಳಿಸಿ, ಸರ್ವತೀರ್ಥ ಸರ್ವದೇಶವ ನೋಡುವುದಕ್ಕೆ ಖೇಚರಿಯ ಗಮನದಲ್ಲಿ ನೋಡುತ್ತ ಸಂಚರಿಸುತಿರ್ದು ಮತ್ತೇಳ್ನೂರುವರ್ಷ ಲೋಕೋಪಕಾರವಾಗಿ ಸರ್ವಜನ ಅಭೀಷೆ*ಯನು ಸಲ್ಲಿಸಿ, ಮುನ್ನೂರು ರಾಜಕುಮಾರಿಯರ ಮದುವೆಯಾಗಿ, ಪೊಡವಿಡಿ ರುದ್ರಮುನಿಸ್ವಾಮಿಗಳ ಪಡೆದು, ಷಡ್ವಿಧಾಚಾರ್ಯರೊಳಗೆ ಪಂಚಾಚಾರ್ಯರಂ ಪ್ರತಿಷಿ*ಸಿ, ಪಂಚಬಗೆಯ ನಾಮವಿಟ್ಟು ಪಂಚಸಿಂಹಾಸನಕ್ಕೆ ಕರ್ತವ್ಯಮಾಡಿ ಘನಲಿಂಗ, ಅತೀತ, ಪಟ್ಟ, ಪರದೇಶಿ, ಮಹಾಂತ, ನಿರಂಜನನೆಂಬ ಆರರೊಳಗೆ ಐದು ಇದಿರಿಟ್ಟು, ರುದ್ರಮುನಿಸ್ವಾಮಿಗಳ ಪಾದದಲ್ಲಿ ಹಲವು ಶಿಷ್ಯರ ಪಡೆಸಿ, ಮಂತ್ರೋಪದೇಶವ ಕೊಡಿಸಿ, ಭುವನಜನ ಶಿಕ್ಷ ದೀಕ್ಷೋಪದೇಶಕ್ಕೆ ಕರ್ತೃತ್ವ ಕೈಗೂಡಿಸಿ, ದೇಶ ದೇಶದಲ್ಲಿ ನೆಲೆಗೊಳಿಸಿ ಸರ್ವಭೋಗ ಬಂಧ ಸುಖ ತನ್ನ ಪುತ್ರಂಗೆ ಇತ್ತು, ಪೊಡವಿಡಿ ರುದ್ರಮುನಿಸ್ವಾಮಿಯೆಂಬ ನಾಮ ಗುರ್ತಿಟ್ಟು ಬಹುನಾಮವನಂಗೀಕರಿಸಿ ಈ ಭುವನದಲ್ಲಿ ಮೆರೆಯುವಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತೃಷ್ಣೆ ಹಿಂಗಿದ ಲಿಂಗಾಂಗಿಯ ಅಂಗದ ಇರವು. ಬಸುರಿಯ ಗರ್ಭದಲ್ಲಿ ತೋರುವ ಶಿಶುವಿನ ದೆಸೆಯ ಇರವು. ಅನ್ನರಸಕೆ ಭಿನ್ನವಾಗಿ ಬಾಯಿಯಿಲ್ಲದೆ, ತಾಯ ಪಥ್ಯದಲ್ಲಿ ಆತ್ಮಂಗೆ ಸುಖವಾಗಿ ಇಪ್ಪುದು. ಘಟಮಟ ಭಿನ್ನವಹನ್ನಕ್ಕ ಸುಖದುಃಖ. ಶಿಶುವ ತಾಳಿದ್ದ ಆ ತೆರ, ಲಿಂಗದ ಎಸಕವನರಿವವೊಲು, ಇಷ್ಟಪ್ರಾಣ ಹೆರೆಹಿಂಗದ ಮೂರ್ತಿ ಧ್ಯಾನ ನೆಲೆಗೊಂಡು, ಕಂಗಳು ಗರ್ಭ, ಮನ ಶಿಶುವಾಗಿ, ಲಿಂಗವೆಂಬ ಅಂಗದ ತೊಟ್ಟಿಲಲ್ಲಿ ವಿಶ್ವಾಸ ಘನಲಿಂಗ ಇಂಬಿಟ್ಟು ಕಂಡೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗದಲ್ಲಿ.
--------------
ಮನುಮುನಿ ಗುಮ್ಮಟದೇವ
ಅಂದು ಹೋಗಿ ಇಂದು ಬಾ ಎಂದಾಗ ದಂದುಗಕ್ಕೊಡಲುಂಟೆ? ಘನಲಿಂಗ ಎಲ್ಲಿದ್ದಡೂ ಪರಿಪೂರ್ಣ, ಚಂದೇಶ್ವರಲಿಂಗವು.
--------------
ನುಲಿಯ ಚಂದಯ್ಯ
ಅಂಗದ ಕಳೆ ಲಿಂಗದಲ್ಲಿ; ಲಿಂಗದ ಕಳೆ ಅಂಗದಲ್ಲಿ, ಅಂಗಕಳೆ ಲಿಂಗಕಳೆ ಎಂಬುಭಯವಳಿದು ಆತನ ಅಂಗವೆಲ್ಲವು ಲಿಂಗಮಯವಾಗಿ ಅಂಗಲಿಂಗ ಪದಸ್ಥನಯ್ಯ ಶರಣನು. ಮನದಲ್ಲಿ ಲಿಂಗ; ಲಿಂಗದಲ್ಲಿ ಮನಬೆರಸಿ ಮನವು ಮಹಾಘನವನಿಂಬುಗೊಂಡಿಪ್ಪುದಾಗಿ ಪ್ರಪಂಚುಪದಂಗಳನರಿಯನಯ್ಯ ಶರಣನು. ಮನಲಿಂಗ ಪದಸ್ಥನಾದ ಕಾರಣ ಪ್ರಾಣದೊಡನೆ ಲಿಂಗ; ಲಿಂಗದೊಡನೆ ಪ್ರಾಣ ಕೂಡಿ ಪ್ರಾಣನ ಗುಣವಳಿದು ಪ್ರಾಣಲಿಂಗ ಪದಸ್ಥನಯ್ಯ ಶರಣನು. ಭಾವ ಬ್ರಹ್ಮವನಪ್ಪಿ ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಸರ್ವಾವಸ್ಥೆಯನಳಿದ ಪರಮಾವಸ್ಥನಯ್ಯ ಶರಣನು. ಎಲ್ಲಾ ಪದಂಗಳ ಮೀರಿ ಮಹಾಘನವನಿಂಬುಗೊಂಡ ಘನಲಿಂಗ ಪದಸ್ಥನಯ್ಯ ಶರಣನು. ಇಂತಪ್ಪ ಘನಮಹಿಮ ಶರಣಂಗೆ ಅವಲೋಕದಲ್ಲಿಯೂ ಇನ್ನಾರು ಸರಿಯಿಲ್ಲ; ಪ್ರತಿಯಿಲ್ಲ ಅಪ್ರತಿಮ ಶರಣಂಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಣಿಗೆ ಹೋರಿ ಕಡವರವ ನೀಗಲೇತಕ್ಕೆ ? ಅಲುಗಾಡಿ ತುಂಬಿದ ಕೊಡನ ಹೊಡೆಗೆಡಹಲೇತಕ್ಕೆ ? ನಿನ್ನಂಗದಲ್ಲಿ ಗುರುಕೊಟ್ಟ ಲಿಂಗವೆಂಬುದೊಂದು ಕುರುಹು ಇರುತ್ತಿರಲಿಕ್ಕೆ ಆ ನಿಜಲಿಂಗದ ಸಂಗವನರಿಯದೆ ಸಂದಿಗೊಂದಿಯಲ್ಲಿ ಹೊಕ್ಕೆಹೆನೆಂಬ ಗೊಂದಣವೇತಕ್ಕೆ ? ತಾ ನಿಂದಲ್ಲಿ ಕೆಡಹಿದ ಒಡವೆಯ, ಆಚೆಯಲ್ಲಿ ನೆನೆದು ಅರಸಿದಡಿಲ್ಲ. ಅದು ಮತ್ತೆ ತನಗೆ ಸಂದಿಸುವುದೆ ? ಘನಲಿಂಗ ನಿನ್ನಂಗದಲ್ಲಿದ್ದಂತೆ ಕಂಡೆ ಕಾಣೆನೆಂಬ ನಿನ್ನ ನಿಜ ನಿಂದಲ್ಲಿಯೆ ಸಂದೇಹವ ತಿಳಿದುಕೊ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ಮುಖದಲ್ಲಿ ಮಂತ್ರ ಹೃದಯದಲ್ಲಿ ಧ್ಯಾನ, ಪ್ರಾಣದಲ್ಲಿ ಲಿಂಗ ನೆನಹು ಕರಿಗೊಂಡ ಶಿವಾತ್ಮಶರಣನ ಹೃದಯವೇ ಪರಮೇಶ್ವರರಿಗೆ ನಿವಾಸಸ್ಥಾನ, ನೆರೆಮನೆಯಾಗಿಪ್ಪುದಯ್ಯ. ಆ ಪರಮೇಶ್ವರನೊಳಗಣ ಸಮರಸ ಭಾವವೆ ಆ ಶರಣಂಗೆ ನಿತ್ಯ ನೇಮ ಪೂಜೆಯಾಗಿಪ್ಪುದಯ್ಯ. ಇದೇ ಪೂರ್ಣ ಶರಣಭಾವ. ಅಲ್ಲಿಯ ಲಿಂಗಸಿದ್ಧಿ, ಘನಲಿಂಗ ಪದಸ್ಥಿತಿ. ಲಿಂಗಪೂಜೆ. ಮತ್ತಲ್ಲಿಯೆ ನಿಶ್ಚಯವದೇ ಪರಮಾರ್ಥ. ಇದಲ್ಲದೆ ಅನ್ಯವಪ್ಪೆಲ್ಲವು ಆತ್ಮ ದುಃಖ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುವಿಗೆ ಘನಗುರು ಮಾಚಿತಂದೆಗಳು; ಲಿಂಗಕ್ಕೆ ಘನಲಿಂಗ ಮಾಚಿತಂದೆಗಳು; ಜಂಗಮಕ್ಕೆ ನಿರಂಜನ ವಸ್ತು ನಮ್ಮ ಮಾಚಿತಂದೆಗಳು. ಅಂತಪ್ಪ ಮಾಚಿತಂದೆಗೆ ಪೇಳ್ವ ತ್ರಾಣ ಎನ್ನಹುದೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಷ*ದೊಳಗೆ ಅಗ್ನಿ ಇಪ್ಪಂತೆ, ಹಾಲೊಳಗೆ ತುಪ್ಪವಿದ್ದಂತೆ ತನುವಿನಲ್ಲಿ ಚೇತನವಿಪ್ಪಂತೆ, ಪಿಂಡದಲ್ಲಿ ಘನಲಿಂಗ ಪೂರ್ಣವಾಗಿಪ್ಪನಾಗಿ ಇಹಪರನಾಸ್ತಿ. ಇಹಪರನಾಸ್ತಿಯಾಗಿ, ನಿರ್ವಯಲನೈದಿಪ್ಪನಯ್ಯಾ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಕಾಯವೆರಸಿ ಕೈಲಾಸಕ್ಕೆ ಹೋಹೆನೆಂಬರು, ಇದು ಕ್ರಮವಲ್ಲ. ಘನಲಿಂಗ ಕರಸ್ಥಲದೊಳಗಿಪ್ಪ ಅನುವನರಿಯದೆ ಇಲ್ಲಿ ಕರ್ಮ, ಅಲ್ಲಿ ನಿಃಕರ್ಮವೆ ? ಹೇಮದ ಮಾಟದ ಒಳಹೊರಗಿನಂತೆ ಮರ್ತ್ಯ ಕೈಲಾಸವೆಂಬ ಕಟ್ಟಳೆಯಿಲ್ಲ. ಆತ್ಮ ನಿಶ್ಚಯವಾದಲ್ಲಿಯೆ ಕೈವಲ್ಯ. ಮತ್ತತ್ವವಾದಲ್ಲಿಯೆ ಮರ್ತ್ಯದೊಳಗು. ಈ ಗುಣ ಸದಮಲಭಕ್ತನ ಯುಕ್ತಿ; ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಿಕ್ಕಿದ ಗೊತ್ತು.
--------------
ಮೋಳಿಗೆ ಮಹಾದೇವಿ
ಅಂಗಕ್ಕೆ ಲಿಂಗೋಪದೇಶ, ಮನಕ್ಕೆ ಮಂತ್ರೊಪದೇಶವೆ ಘನವೆಂದು ನಂಬಿದೆನಯ್ಯಾ, ನಂಬಿದೆನಯ್ಯಾ. ಈ ಎರಡರ ಬೋಧೋದ್ಗಾರಕ್ಕೆ ಚೆನ್ನಬಸಣ್ಣನೆ ಘನಗುರು, ಘನಲಿಂಗ, ಘನಜಂಗಮವೆಂದು ನಂಬಿದೆನಯ್ಯಾ. ಇದನಲ್ಲೆಂದಡೆನ್ನಗುಣವೆನ್ನನೆ ಸುಡಲೀಯದೆ, ಅಲ್ಲಯ್ಯಾ, ಕಪಿಲಸಿದ್ಧಮಲ್ಲಯ್ಯಾ?
--------------
ಸಿದ್ಧರಾಮೇಶ್ವರ
ಲೋಕದ ನಚ್ಚಮಚ್ಚನೆ ನೀಗಿ ನಿಚ್ಚಟನಾಗಿ ಜ್ಞಾನ ಕ್ರೀಗಳಿಂದಾಚರಿಸಿ ಅಂಗಲಿಂಗದ ಸಂಬಂಧಿಗಳಾದ ಶಿವಲಿಂಗಮೋಹಿಗಳು ನೀವು ಕೇಳಿರಯ್ಯ. ಶರಣರು ಮುಕ್ತಿಪುರಕ್ಕೆ ಹೋಗುವ ಬಟ್ಟೆಯ ಬೆಡಗು ಬಿನ್ನಾಣದ ಪರಿಯ. ಆ ಮುಕ್ತಿಪುರಕ್ಕೆ ಹೋಗುವ ಹಾದಿಯಲ್ಲಿ ಒಂದು ಪಂಚವರ್ಣದ ಕಣ್ಣು ಮನಕ್ಕೆ ಮುಟ್ಟದ ಮಹಾಪಟ್ಟಣವೊಂದೇ. ಆ ಪಟ್ಟಣವ ಕಟ್ಟಿದುದು ಮೊದಲಾಗಿ ಊರು ಹಾಳಾಗಿಪ್ಪುದು. ಆ ಪಟ್ಟಣದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಅಹಂಕಾರ ಮಮಕಾರಂಗಳೆಂಬ ಎರಡು ಪಟ್ಟಣಂಗಳು ತುಂಬಿ ತುಳುಕುತ್ತಿವೆ. ಆ ಎರಡು ಪಟ್ಟಣಕ್ಕೆ ಹೋದ ಹಾದಿ ಹೆಬ್ಬಟ್ಟೆಗಳಾಗಿಪ್ಪವು. ಆ ಎರಡು ಪಟ್ಟಣದ ವಿದಿಕ್ಕಿನಲ್ಲಿ ಒಂದು ಭಕ್ತಿಪುರವಿದೆ. ಆ ಭಕ್ತಿಪುರಕ್ಕೆ ಹಾದಿಯಿಲ್ಲ. ಆ ಭಕ್ತಿಪುರಕ್ಕೆ ಹೋದಲ್ಲದೆ ಮುಂದಣ ಮುಕ್ತಿಪುರದ ಬಟ್ಟೆಯ ಕಾಣಬಾರದು. ಆ ಮುಂದಣ ಪಯಣಗತಿಯ ಸಂಚುವರಿಯುವ ಸಂಬಂಧಮಂ ಶರಣ ಮನದಲ್ಲಿ ತಿಳಿದು ಆ ಹೆಬ್ಬಟ್ಟೆಗಳಲ್ಲಿ ಹೋದರೆ ಎಂಬತ್ತುನಾಲ್ಕುಲಕ್ಷ ಪ್ರಕಾರದ ಪರಮಂಡಲದಲ್ಲಿ ಸುಳಿವುದು ತಪ್ಪದೆಂದು ಅದಕ್ಕೆ ಹೇಹಮಂ ಮಾಡಿ ತಮ್ಮವರು ಹೋದ ನಸುದೋಯಲ ಬೆಂಬಳಿವಿಡಿದು ಹೋಗಿ ಭಕ್ತಿಪುರಮಂ ಕಂಡು ಆ ಭಕ್ತಿಪುರದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಹೆಬ್ಬುಲಿ ಕರಡಿ ಕಳ್ಳ ರಕ್ಕಸಿ ಕರಿಘಟೆಯಿಪ್ಪ ಮಹಾಸರೋವರದ ಅರಣ್ಯವಿದೆ. ಆ ಸರೋವರದ ಮಧ್ಯದಲ್ಲಿ ಎಂಟುಕಲಶದ ಚೌಕಾಮಂಟಪದ ಸುವರ್ಣದ ದೇಗುಲವಿದೆ. ಆ ದೇಗುಲದಲ್ಲಿ ಮುಕ್ತಿರಾಜ್ಯಕ್ಕೆ ಪಟ್ಟುವ ಕಟ್ಟುವ ಸಮರ್ಥಿಕೆಯನುಳ್ಳ ಜಂಗಮಲಿಂಗವಿದೆ. ಆ ಜಂಗಮಲಿಂಗಮಂ ಶರಣ ಕಂಡು ಹರುಷಗೊಂಡು ಭಾವದಲ್ಲಿಯೇ ಷೋಡಶೋಪಚಾರ ಅಷ್ಟವಿಧಾರ್ಚನೆಗಳಿಂದ ಪೂಜೆಯಂಮಾಡಿ ತನ್ನ ಮನದಭೀಷ್ಟೆಯಂ ನೆನೆದಂತೆ ಮನದಲ್ಲಿ ಬೇಡಿ ದೇಹ ಮನ ಪ್ರಾಣಕುಳ್ಳ ಸಮಸ್ತ ಕರಣಾದಿ ಗುಣಗಳೆಲ್ಲಮಂ ಸುಟ್ಟು ಬೊಟ್ಟಿಕ್ಕಿ ನಿರ್ಮಲ ಸ್ವರೂಪನಾಗಿ ಅಲ್ಲಿಂದ ಮುಂದೆ ನಡೆವುತಿಪ್ಪಾಗ ಊಧ್ರ್ವದಿಕ್ಕಿನ ಆಕಾಶದಲ್ಲಿ ಅನೇಕ ಚೋದ್ಯವನೊಳಕೊಂಡಿಪ್ಪ ತ್ರಿಪುರಮಂ ಕಂಡು ಆ ತ್ರಿಪುರವ ಮೇಲೆ ಬ್ರಹ್ಮರಂಧ್ರವೆಂಬ ಕೈಲಾಸದ ಕಡೆಯ ಬಾಗಿಲೊಳಿಪ್ಪ ಐಕ್ಯಸ್ಥಲವೆನಿಸುವ ಆರುನೆಲೆಯ ಮಾಣಿಕ್ಯವರ್ಣದ ಉಪ್ಪರಿಗೆ ತಳಮಂ ಕಂಡು ಪತಿಯಿದ್ದ ಮನೆಯ ಬಾಗಿಲಂ ಸತಿ ಸಾರುವಂತೆ ಆ ಶರಣ ಆ ಉಪ್ಪರಿಗೆಯ ಬಾಗಿಲಂ ಸಾರೆ ಆ ಬಾಗಿಲಿನಲ್ಲಿ ಡಾಕಿನಿ ಶಾಕಿನಿ ರಾಕಿನಿ ಲಾಕಿನಿ ಕಾಕಿನಿ ಹಾಕಿನಿಯರೆಂಬ ಷಡ್ವಿಧಶಕ್ತಿಗಳಿಗೆ ಆದಿನಾಯಕಿಯಾಗಿಪ್ಪಳು, ಊಧ್ರ್ವಕುಂಡಲಿನಿಯೆಂಬ ಜ್ಞಾನಶಕ್ತಿ. ಆ ಶಕ್ತಿ ಆ ಬಾಗಿಲಿಗೆ ದ್ವಾರಪಾಲಕಿಯಾಗಿಪ್ಪಳು. ಅವಳು ಅಂಗರ ತಡೆವಳು ನಿರಂಗರ ಬಿಡುವಳೆಂಬುದ ಶರಣ ತನ್ನ ಮನದಲ್ಲಿ ತಾನೆ ತಿಳಿದು ಅಲ್ಲಿಪ್ಪ ಮಹಾಲಿಂಗಮಂ ಶರಣ ಮಂತ್ರಮಾಲೆಯಂ ಮಾಡಿ ಮನದಲ್ಲಿ ಧರಿಸಿ ಸೋಮ ಸೂರ್ಯರ ಕಲಾಪಮಂ ನಿಲಿಸಿ ಕುಂಭಮಂ ಇಂಬುಗೊಳಿಸಿ ರೆುsುೀಂ ರೆುsುೀಂ ಎಂದು ರೆುsುೀಂಕರಿಸುತಿಪ್ಪ ಪೆಣ್ದುಂಬಿಯ ನಾದಮಂ ಚಿಣಿಮಿಣಿ ಎಂದು ಸಣ್ಣರಾಗದಿಂದ ಮನವ ಸೋಂಕುತಿಪ್ಪ ವೀಣಾನಾದಮಂ ಲಿಂಗ ಲಿಂಗವೆಂದು ಕರೆವುತಿಪ್ಪ ಘಂಟಾನಾದಮಂ ಢಮ್ಮ ಢಮ್ಮ ಎನುತಿಪ್ಪ ಪೂರಿತವಾದ ಭೇರಿನಾದಮಂ ಚಿಟಿಲು ಪಿಟಿಲು ಧಿಗಿಲು ಭುಗಿಲೆನುತಿಪ್ಪ ಮೇಘನಾದಮಂ ಓಂ ಓಂ ಎಂದು ಎಲ್ಲಿಯೂ ಎಡೆವಿಡದೆ ಉಲಿವುತಿಪ್ಪ ಪ್ರಣವನಾದಮಂ ಓಂ ಹ್ರಾಂ ಹ್ರೀಂ ಹ್ರೂಂ ಹ್ರೇಂ ಹ್ರೆ ೈಂ ಹ್ರೌಂ ಹ್ರಂ ಹ್ರಃ ಎಂದು ಬೆಳಗ ಬೀರುತಿಪ್ಪ ದಿವ್ಯನಾದಮಂ ಅರಣ್ಯ ಘೋಳಿಡುವಂತೆ ಹೂಂಕರಿಸುತಿಪ್ಪ ಸಿಂಹನಾದಮಂ ಈ ಪ್ರಕಾರದ ನಾದಂಗಳಂ ಶರಣ ಕೇಳಿ ಮನದಣಿದು ಹರುಷಂ ಮಿಕ್ಕು ಆ ಬಾಗಿಲು ದಾಂಟಿ ಪಶ್ಚಿಮ ದಿಕ್ಕಿಗೆ ಮುಖವಾಗಲೊಡನೆ ಚೌಕಮಧ್ಯದಲ್ಲಿ ವಜ್ರ ವೈಡೂರ್ಯ ಪುಷ್ಯರಾಗ ಗೋಮೇಧಿಕ ಇಂತಿವರೊಳಗಾದ ನವರತ್ನಂಗಳ ಕಂಭ ಬೋದಿಗೆ ಹಲಗೆಗಳಿಂದ ಅನುಗೈದು ತೀರಿಸಿದ ಮಹಾ ಶ್ರೀ ಗುರುವಿನ ಒಡ್ಡೋಲಗದ ಹಜಾರದ ಪ್ರಭೆಯು ಆಕಾಶವನಲೆವುತಿಪ್ಪುದಂ ಕಂಡು ಬಹಿರಾವರಣವ ಸೇರಿಪ್ಪ ಪ್ರಾಕಾರದ ಗೋಡೆಯ ಎರಡು ಹದಿನಾರು ಗೊತ್ತುಗಳಲ್ಲಿ ಈಶಾನ ಪರ್ಜನ್ಯ ಜಯಂತರೊಳಗಾದ ಮೂವತ್ತೆರಡು ತಂಡದ ಅನಂತ [ವಾ]ಸ್ತುದೇವತೆಗಳ ಕಾವಲ ಅತ್ಯುಗ್ರವಂ ಕಂಡು ಶರಣರ್ಗೆ ತಡೆಹಿಲ್ಲವೆಂಬುದಂ ತನ್ನ ಮನಜ್ಞಾನದಿಂದವೇ ಅರಿದು ಕಾವಲಾಗಿಪ್ಪ [ವಾ]ಸ್ತುದೇವತೆಗಳ ಕೃಪಾದೃಷ್ಟಿಯಿಂದ ಸಂತೈಸಿ ಮುಕ್ತಿಪುರಕ್ಕೆ ಮೂಲ ಸೂತ್ರವಾದ ಬ್ರಹ್ಮರಂಧ್ರದ ಪೂರ್ವ ದಿಕ್ಕಿನ ಚಂದ್ರಮಂಡಲದಲ್ಲಿಪ್ಪ ಬಾಗಿಲ ಬೀಗಮಂ ತೆಗೆದು ಶರಣನು ಒಳಹೊಗಲೊಡನೆ ಬಹಿರಾವರಣದ ವೀಥಿ ಓಲಗದೊಳಿಪ್ಪ ಹರಿ ಸುರ ಬ್ರಹ್ಮಾದಿ ದೇವತೆಗಳು ಮನು ಮುನಿ ಗರುಡ ಗಂಧರ್ವ ಇಂದ್ರ ಚಂದ್ರರೊಳಗಾದ ಅನಂತರೆಲ್ಲರು ಬೆದರಿ ಕೆಲಸಾರೆ ಸೋಮವೀಥಿಯೊಳಿಪ್ಪ ಅನಂತರುದ್ರರೊಳಗಾದ ಇಪ್ಪತ್ತನಾಲ್ಕುತಂಡದ ಅನಂತರು ಶಿವನ ಒಡ್ಡೋಲಗದ ವೈಭವವ ನಡೆಸುವ ಪರಿಚಾರಕರು ಬಂದು ಶರಣ ಲಿಂಗದೃಷ್ಟಿ ಸಂಧಾನವಾಗಲೆಂದು ಸಮ್ಮುಖವಂ ಮಾಡೆ ಸೂರ್ಯವೀಥಿಯೊಳಿಪ್ಪ ಉಮೆ ಚಂಡೇಶ್ವರ ನಂದಿಕೇಶ್ವರರೊಳಗಾದ ಹದಿನಾರುತಂಡದ ಅನಂತರುದ್ರರು ಬಂದು ಶರಣನ ಸನ್ಮಾನವಂ ಮಾಡೆ ಅಗ್ನಿವೀಥಿಯೊಳಿಪ್ಪ ವಾಮೆ ಜ್ಯೇಷೆ*ಯರೊಳಗಾದ ಎಂಟುತಂಡದ ಅನಂತಶಕ್ತಿಯರು ಬಂದು ಶರಣನ ಇದಿರ್ಗೊಳೆ ಕರ್ನಿಕಾವೀಥಿಯೊಳಿಪ್ಪ ಅಂಬಿಕೆ ಗಣಾನಿಯರೊಳಗಾದ ನಾಲ್ಕುತಂಡದ ಶಕ್ತಿಯರು ಬಂದು ಶರಣನ ಕೈವಿಡಿದು ಕರೆತರೆ ಈ ಸಿಂಹಾಸನಕ್ಕೆ ಮೇಲುಗದ್ದಿಗೆಯೆನಿಪ ಸಿಂಹಾಸನ ಶುಭ್ರವರ್ಣದ ಹತ್ತುನೂರುದಳವ ಗರ್ಭೀಕರಿಸಿಕೊಂಡು ಬೆಳಗುತಿಪ್ಪ ಒಂದು ಮಹಾಕಮಲ. ಆ ಕಮಲದಳಂಗಳೊಳಗಿಪ್ಪ ಪ್ರಣವ. ಆ ಪ್ರಣವ ಸ್ವರೂಪರಾದ ಬಸವಾದಿ ಅಸಂಖ್ಯಾತ ಪ್ರಮಥಗಣಂಗಳು ಆ ಪ್ರಮಥಗಣಂಗಳಿಗೆ ಶರಣಭಾವದಲ್ಲಿಯೇ ಸಾಷ್ಟಾಂಗವೆರಗಿ ನಮಸ್ಕಾರವ ಮಾಡೆ ಆ ಗಣಂಗಳು ಕೃಪಾದೃಷ್ಟಿಯಿಂದ ಶರಣನ ಮೈದಡವಿ ಅನಂತಕೋಟಿ ಸೋಮ ಸೂರ್ಯ ಕಾಲಾಗ್ನಿ ಮಿಂಚು ನಕ್ಷತ್ರಂಗಳು ತಮ್ಮ ತಮ್ಮ ಪ್ರಕಾಶಮಂ ಒಂದೇ ವೇಳೆ ತೋರಿದ ಬೆಳಗಿನೊಡ್ಡವಣೆ ಪಂಚಪತ್ರಂಗಳಾವರಣಂಗಳಾಗಿ ತೋರ್ಪ ಹದಿನಾರುದಳಂಗಳೊಳಿಪ್ಪ ಷೋಡಶಕಳಾಪುಂಜವೆನಿಸುವ ಪದ್ಮಿನಿ ಚಂದ್ರಿಣಿಯರೊಳಗಾದ ಷೋಡಶ ಲಾವಣ್ಯಶಕ್ತಿನಿಯರ ಬೆಳಗಂ ಕಂಡು ಆ ಬೆಳಗಿನೊಡ್ಡವಣೆ ಬಯಲಾಯಿತ್ತು. ಈ ಕರ್ಣಿಕಾಪ್ರದೇಶದ ಪಂಚಪತ್ರಂಗಳೊಳಗಿಪ್ಪ ಪಂಚಪ್ರಣವಂಗಳ ಬೆಳಗಂ ಕಂಡು ಆ ಲಾವಣ್ಯಶಕ್ತಿನಿಯರ ಬೆಳಗು ತೆಗೆದೋಡಿತ್ತು. ಕರ್ಣಿಕಾಗ್ರದೊಳು ನಿಜನಿವಾಸವಾಗಿ ಮೂರ್ತಿಗೊಂಡಿಪ್ಪ ನಿಷ್ಕಲಬ್ರಹ್ಮದ ಚರಣದಂಗುಲಿಯ ನಖದ ಬೆಳಗಂ ಕಂಡು ಆ ಪ್ರಣವಂಗಳ ಬೆಳಗು ತಲೆವಾಗಿದವು. ಇಂತಪ್ಪ ಘನಕ್ಕೆ ಘನವಾದ ಮಹಾಲಿಂಗವಂ ಶರಣಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ಮನಂ ನಲಿದು ಆನಂದಾಶ್ರುಜಲಂ ಸುರಿದು ಪುಳಕಂಗಳುಣ್ಮೆ ರೋಮಾಂಚನಂ ಗುಡಿಗಟ್ಟೆ ಪ್ರಣವದ ನುಡಿ ತಡೆಬಡಿಸಿ ನಡೆ ದಟ್ಟಡಿಸುವ ಕಾಲದಲ್ಲಿ ಕರ್ಪೂರದ ಪುತ್ಥಳಿ ಬಂದು ಉರಿಯ ಪುತ್ಥಳಿಯನಾಲಂಗಿಸಿದಂತೆ ಶರಣಂ ಬಂದು ಆ ಘನಲಿಂಗಮಂ ಅಮರ್ದಪ್ಪಿ ಪುಷ್ಪ ಪರಿಮಳದಂತೆ ಏಕವಾಗಿ ಘನಲಿಂಗ ತಾನೆಯಾದ, ಮಹಾಗುರು ಸಿದ್ಧೇಶ್ವರಪ್ರಭುವಿನ ಚರಣಮಂ ನಾನು ಕರಸ್ಥಲದಲ್ಲಿ ಪಿಡಿದು ಪೂಜೆಯಂ ಮಾಡಲೊಡನೆ ಎನ್ನ ತನುವೇ ಪಂಚಬ್ರಹ್ಮ ಪ್ರಾಣವೇ ಪರಬ್ರಹ್ಮವಾಯಿತು. ಪ್ರವೃತ್ತಿಯ ಬಟ್ಟೆ ಹುಲ್ಲು ಹುಟ್ಟಿತು. ನಿವೃತ್ತಿಯ ಬಟ್ಟೆ ನಿರ್ಮಲವಾಯಿತು. ಉಯ್ಯಾಲೆಯ ಮಣೆ ನೆಲೆಗೆ ನಿಂದಂತೆ ಆದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಘಟಸ್ಥಾವರದೊಳಗನೊಡೆದು ಕಿಚ್ಚಿನ ಹೊರೆಯ ಕಂಡೆ. ಕಾಣಿಸಿ ಮಿಕ್ಕಾದ ಹೊರಗಣ ಹೊರೆಯ ತಿಗುಡಂ ಕೆತ್ತಿ ಕಂಬವ ಶುದ್ಧೈಸಿ ನೆಲವಟ್ಟಕ್ಕೆ ಚದುರಸವನಿಂಬುಗೊಳಿಸಿ ಮೇಲಣವಟ್ಟಕ್ಕೆ ಎಂಟುಧಾರೆಯ ಏಣಂ ಮುರಿದು ಕಡಿಗೆವಟ್ಟ ವರ್ತುಳಾಕಾರದಿಂ ಶುದ್ಧವ ಮಾಡಿ ಏಕೋತ್ತರಶತಸ್ಥಲವನೇಕೀಕರಿಸಿ ಒಂದು ದ್ವಾರದ ಬೋದಿಗೆಯಲ್ಲಿ ಕಂಬವ ಶುದ್ಧೈಸಿ ಕಂಬ ಎರವಿಲ್ಲದೆ ನಿಂದ ಮತ್ತೆ ಚದುರಸಭೇದ. ಅಷ್ಟದಿಕ್ಕಿನ ಬಟ್ಟೆಕೆಟ್ಟು ನವರಸ ಬಾಗಿಲು ಮುಚ್ಚಿ, ತ್ರಿಕೋಣೆಯನುಲುಹುಗೆಟ್ಟು, ಮುಂದಣ ಬಾಗಿಲು ಮುಚ್ಚಿ ಹಿಂದಣ ಬಾಗಿಲು ಕೆಟ್ಟು, ನಿಜವೊಂದೆ ಬಾಗಿಲಾಯಿತ್ತು. ಈ ಕೆಲಸವ ಆ ಕಂಬದ ನಡುವೆ ನಿಂದು ನೋಡಲಾಗಿ ಮಂಗಳಮಯವಾಗಿ, ಇದು ಯೋಗಸ್ಥಲವಲ್ಲ. ಇದು ಘನಲಿಂಗ ಯೋಗಸ್ಥಲ, ಇಂತೀ ಭೇದವ ತಿಳಿದಡೆ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದಿಲ್ಲಾ ಎಂದೆ.
--------------
ಬಾಚಿಕಾಯಕದ ಬಸವಣ್ಣ
ಬಿಂದುವ ಹರಿದೆಯಲ್ಲಾ ಬಸವಣ್ಣ. ನಾದವ ಸಿಂಹಾಸನವ ಮಾಡಿಕೊಂಡು ಇದ್ದೆಯಲ್ಲಾ ಬಸವಣ್ಣ. ಅಷ್ಟಗುಣಂಗಳ ನಷ್ಟವ ಮಾಡಿದೆಯಲ್ಲಾ ನಿಜಲಿಂಗ ಬಸವಣ್ಣ. ಶುಕ್ಲಶೋಣಿತ ಮೇಧಸ್ಸು ಇವರಿಂದಾದ ಕಾಯವೆತ್ತ ಹೋಯಿತ್ತಯ್ಯಾ ಘನಲಿಂಗ ಬಸವಣ್ಣ. ಭಕ್ತಿಯ ರೂಪುಗೆಟ್ಟು ಮತ್ತೊಂದು ರೂಪಾದೆಯಲ್ಲಾ ನಿರೂಪಿ ಬಸವಣ್ಣ. ಶೂನ್ಯಪ್ರಸಾದಿಯಲ್ಲ, ನಿಶ್ಯೂನ್ಯಪ್ರಸಾದಿಯಲ್ಲ. ಆವ ಪ್ರಸಾದವನೂ ಸೋಂಕದ ಪ್ರಸಾದಿ. ಯೋನಿಜನಲ್ಲದ, ಅಯೋನಿಜಲ್ಲದ, ನಿಜಮೂರ್ತಿಯೆನಿಸುವ ಬಸವಣ್ಣ. ಭಕ್ತಿಯ ಹರಹಿಹೋದೆಯಲ್ಲಾ ಬಸವಣ್ಣ. ಮೂರ್ತನಲ್ಲದ, ಅಮೂರ್ತನಲ್ಲದ ಲಿಂಗವ ತೋರಿದೆಯಲ್ಲಾ ಬಸವಣ್ಣ. ನಿರವಯವಾಗಿ ಹೋದನು ನಮ್ಮ ಬಸವರಾಜನು. ಬೆಳಗನುಟ್ಟು ಬಯಲಾಗಿ ಹೋದನು ನಮ್ಮ ಬಸವಲಿಂಗನು. ಬಸವಣ್ಣ ಬಸವಣ್ಣ ಬಸವಣ್ಣ ಎನಲಮ್ಮೆನು, ಎನ್ನ ವಾಙಶನಕ್ಕಗೋಚರನಾಗಿ. ಬಸವಣ್ಣಂಗೆ ಶರಣೆಂಬ ಪಥವ ತೋರಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->