ಅಥವಾ

ಒಟ್ಟು 16 ಕಡೆಗಳಲ್ಲಿ , 6 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುಶುದ್ಧಿಯನರಿಯದೆ ಜೀವಭಾವಿಯಾಗಿ ಕೆಟ್ಟನು ವೇದಾಂತಿ. ಪ್ರಾಣಶುದ್ಧಿಯನರಿಯದೆ ಭಿನ್ನಭಾವಿಯಾಗಿ ಕೆಟ್ಟನು ಸಿದ್ಧಾಂತಿ. ಆತ್ಮಶುದ್ಧಿಯನರಿಯದೆ ಹುಸಿಕಲಾಭಾವಿಯಾಗಿ ಕೆಟ್ಟನು ಭಿನ್ನಯೋಗಿ. ಈ ವಿಚಾರವಂತಿರಲಿ, ತ್ರಿವಿಧ ಶುದ್ಧಿಯನರಿದು, ತ್ರಿವಿಧ ಭಕ್ತಿಪ್ರಭೆಯೊಳು ನಿಂದು, ತ್ರಿವಿಧಲಿಂಗಕೃಪಾಂಬುವಿನಭಿಷೇಕಪರಿಣಾಮಿಯಾಗಿ ವರ್ತಿಸುವುದೇ ಘನಗಂಭೀರ ವರ್ತನವಹುದೆಂಬೆ; ಆ ವರ್ತನದೊಳಗೆ ಕರ್ತು ಚನ್ನವೃಷಭೇಂದ್ರಲಿಂಗವು ಸುಖಮುಖಿಯಾಗಿಪ್ಪನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ದೇಶಿಕಶಿವಯೋಗಿ ಭುವನಾಕಾಶವಿಡಿದು ದೇಶಾಂತರವ ಮಾಡುವ ಪರಿಯೆಂತೆಂದೊಡೆ: ಕನ್ನಡದೇಶದಿಂದೆ ನೋಡಿ, ಮರಾಠ ಮಲಯ ದೇಶವ ಹಿಂದೆ ಬಿಟ್ಟು, ಕೊಂಕಣದೇಶವಿಡಿದು ಕಲ್ಯಾಣಪುರವರಾಧೀಶ್ವರ ಬಸವರಾಜೇಂದ್ರನ ಕಂಡು ಶರಣುಹೋಗಬೇಕೆಂದು ಮಧ್ಯದೇಶದ ಧರ್ಮರಾಯನ ಕಂಡು ಮೂಕೋಟಿ ದ್ರವ್ಯವನಿತ್ತು ತೋರೆಂದಡೆ ಮುಟ್ಟಿ ಕರ್ನಾಟಕದೇಶದಿಂದೆ ತೋರಿದ ನೋಡಾ. ಕಂಡ ಕಲ್ಯಾಣದೊಳೊಪ್ಪುವ ಬಸವಣ್ಣಂಗೆ ಹೊರಗೊಳಗೊಳಗೆ ಕರಣತ್ರಯಗೂಡಿ ಚರಣಗಳ ಪಿಡಿದು ಸಕಲ ಜನರಿಗೆ ಉತ್ತರದೇಶದ ಪರಿಯನರುಪಲು ಸುಖಮುಖಿಗಳಾದವರು. ಅಲ್ಲಿಂದೆ ಮೂಡಣದೇಶವ ತಿರುಗಿ, ಬಂಗಾಳದೇಶಕ್ಕೆ ದಕ್ಷಿಣವಾದ ನಂಜುಂಡನ ಜಾತ್ರೆಯ ನೋಡಲು, ಆ ನಂಜುಂಡನ ಜಾತ್ರೆಯ ಮುನ್ನವೆ ಕೂಡಲಸಂಗಮನಾಥನ ಜಾತ್ರೆಯಾಗಿ ಕಾಣುತಿರ್ದಿತ್ತು. ಆ ಜಾತ್ರೆಯೊಳು ನಿಂದು ಪಾಂಡವದೇಶದ ಸುಖವನು ಕುಂತಣದೇಶದತ್ತ ಆರು ಮಠವ ನಿರ್ಮಿಸಿದ ಆರು ದರ್ಶನ ಗತಿಮತಿಯನರಿದು ಕುಂಭಕೋಣೆಯ ರಂಭೆಯ ಕೈವಿಡಿದು, ಪಶ್ಚಿಮದೇಶದಲ್ಲಿ ಪರಮಹರುಷವೆರೆದು ಘನಗಂಭೀರ ಕಡಲೋಕುಳಿಯಾಡುತಿರ್ದು ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಅನಂತ ದೇಶವ ಪಾವನಮಾಡಿ ಮೀರಿದ ದೇಶದತ್ತ ಸಾರಿದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿರವಯರ್ಪಿತವಾದ ತದನಂತರದೊಳು ಚಿದ್ಭಸ್ಮಧಾರಣಂಗೈದು, ಸರ್ವೋಪಚಾರವನುಳಿದು, ಪತ್ರಿ ಪುಷ್ಪಗಳ್ಯಾವುದಾದರೂ ಒಂದೇ ಧರಿಸಿ, ತನ್ನ ಹೃನ್ಮಂದಿರದಲ್ಲಿ ನೆಲೆಸಿರುವ ವಸ್ತುವು ಬೇರೆ, ನಾ ಬೇರೆಂಬ ಉಭಯಭಾವಮಂ ಭಾವಸ್ಥಲ ಮನಸ್ಥಲ ಕರಸ್ಥಲ ಪರಿಪೂರ್ಣಸ್ಥಲವ ಕಾಣದೆ ಇದ್ದಾಗೆ ಸರಿಮಾಡಿ, ಈ ತತ್ಸಮಯವೆಂತಾಯಿತೆಂದೊಡೆ : ಕ್ಷೀರ ಕ್ಷೀರ ಕೂಡಿದಂತೆ, ಘೃತ ಘೃತ ಕೂಡಿದಂತೆ, ಜ್ಯೋತಿ ಜ್ಯೋತಿ ಒಂದಾದಂತೆ, ಉದಕ ಉದಕವ ಕೂಡಿದಂತೆ, ಕೇವಲ ಅಂಗ ಲಿಂಗದಲ್ಲಿ ಲಿಂಗಗುರುಚರಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರವೆಂಬ ಚಿದಾಬ್ಧಿಸಂಗ ಚಿದ್ಬೆಳಗಿನ ಸಮರಸದಲ್ಲಿ ಆ ಸಮರಸಪರಮಾಣುಮಹಾಂತದೈಕ್ಯದಲ್ಲಿ ಆ ಐಕ್ಯ ನಿರವಯಬ್ರಹ್ಮವೆಂಬ ಕುರುಹು ನಷ್ಟವಾಗಿ, ತಾನೆ ತಾನಾದಂತೆಯೆಂದು, ಒಳಹೊರಗೆನ್ನದೆ, ಈ ಕೂಟವೆ ನಿರಂಜನ ಚಿನ್ಮಯರೂಪ ಘನಗಂಭೀರ ಜಂಗಮಮೂರ್ತಿ ಭಾವಲಿಂಗಾರ್ಚನೆ ಇದೆಯೆಂದು, ಮಹಾಜ್ಞಾನ ಪರಿಪೂರ್ಣಾನುಭಾವದಿಂದ ಪರಮಕಾಷಿ*ಯನೈದು, ಹಿಂದುಮುಂದಣ ಭವಮಂ ನೀಗಿ, ತನ್ನ ಘನಮನೋಲ್ಲಾಸ ನಿಜನೈಷೆ* ಬೆಳಗೆ, ಅಷ್ಟವಿಧಾರ್ಚನೆ ಷೋಡಶೋಪಚಾರವಾಗಿ, ಭಕ್ತಜಂಗಮವೆಂಬುಭಯವಳಿದುಳಿದು ನಿಂದ ನಿರ್ವಾಣಪದಸ್ಥಾನಿಗಳೆ ನಿರವಯಪ್ರಭು ಮಹಾಂತರೆಂದವರಲ್ಲಿ ಅಚ್ಚೊತ್ತಿದಂತಿರ್ಪರು ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಬಯಲ ಸ್ತ್ರೀಯಳ ನಿರವಯಲ ಪುರುಷ ಬಂದು ಕೂಡಲು ಚಿದ್‍ಬಯಲೆಂಬ ಶಿಶು ಹುಟ್ಟಿತ್ತು. ಆ ಶಿಶುವನು ಮಹಾಬಯಲೆಂಬ ತೊಟ್ಟಿಲಲ್ಲಿ ಮಲಗಿಸಿ ನಿರಾಳ ನಿಃಶೂನ್ಯವೆಂಬ ನೇಣ ಕಟ್ಟಿ ತೂಗಿ ಜೋಗುಳವಾಡಲು, ಆ ಶಿಶುವು ತನ್ನಿಂದ ತಾನೇ ತಂದೆ ತಾಯಿಗಳಿಬ್ಬರನೂ ನುಂಗಿತ್ತು. ಆ ತಂದೆ ತಾಯಿಗಳ ನುಂಗಲೊಡನೆ ಜೋಗುಳದ ಉಲುಹು ಅಡಗಿತ್ತು. ಆ ಜೋಗುಳದ ಉಲುಹು ಅಡಗಿದೊಡನೆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಿತ್ತು. ಆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಲೊಡನೆ ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಯಿತ್ತು. ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಗಲೊಡನೆ ಅಖಂಡೇಶ್ವರನೆಂಬ ಬಯಲಿನ ಬಯಲ ಬಚ್ಚಬರಿಯ ಘನಗಂಭೀರ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.
--------------
ಷಣ್ಮುಖಸ್ವಾಮಿ
ಘನಗಂಭೀರ ಮಹಾಘನದೊಳಗೆ ಘನಕ್ಕೆ ಘನವಾಗಿದ್ದೆನಯ್ಯಾ. ಕೂಡಲಸಂಗಮದೇವಯ್ಯನೆಂಬ ಮಹಾಬೆಳಗಿನ ಬೆಳಗಿನೊಳಗಿದ್ದೇನೆಂಬ ಶಬ್ದ ಮುಗ್ಧವಾದುದೆನೇನೆಂಬೆನಯ್ಯಾ
--------------
ಬಸವಣ್ಣ
ಸಿಂಹನ ಹಾಲ ಆನೆಯಮರಿ ಉಣಬಲ್ಲುದೆ ? ಹುಲಿಯ ಹಾಲ ಹುಲ್ಲೆಯಮರಿ ಉಣಬಲ್ಲುದೆ ? ಗರುಡನಿಂದೆ ಗುಟುಕ ಹಂದಿಯಮರಿ ಕೊಳಬಲ್ಲುದೆ, ತಮ್ಮ ಮರಿಯಲ್ಲದೆ ? ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಘನಗಂಭೀರ ಗುರುಚರಲಿಂಗದ ದಯರಸವನುಣಬಲ್ಲರೆ ಮಲಭುಂಜಕರು ? ನಿಮ್ಮವರಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಘನಗಂಭೀರ ಮಹಾಘನ ಬೆಳಗಿನೊಳಗೆ ನಾನೆಂಬುದನರಿಯದಿರ್ದೆನಯ್ಯಾ. ನೀನೆಂಬುದನರಿಯದಿರ್ದೆನಯ್ಯಾ. ಏನೇನೂ ಅರಿಯದೆ ಮೌನದಿಂದೆ ಮರೆದಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹರಿವಿರಂಚಿಗಳಿಗೆ ನಿಲುಕದ ಪರಬ್ರಹ್ಮಪ್ರಸಾದ. ನರ ಸುರ ಯಕ್ಷ ರಾಕ್ಷಸರಿಗೆ ಸಿಲುಕದ ತ್ರಿಯಕ್ಷಪ್ರಸಾದ. ಮನುಮುನಿಗಳಿಗೆ ಒಲಿಯದ ಮಹಾಪ್ರಸಾದ. ಅಖಂಡೇಶ್ವರನ ಘನಗಂಭೀರ ಪ್ರಸಾದ ಎನಗೊದಗಿತ್ತು ನೋಡಾ !
--------------
ಷಣ್ಮುಖಸ್ವಾಮಿ
ಹಲವು ವೇಷವ ಧರಿಸಿ ಹಲವು ಭಾಷೆಯ ಕಲಿತು ಹಲವು ದೇಶಕ್ಕೆ ಹರಿದಾಡಿದಡೇನು ? ಕಾಲಾರಿಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ : ತನುವಿನ ಆಶೆಯಾಮಿಷ ಹಿಂಗದಾಗಿ. ಊರಾಶ್ರಯವ ಬಿಟ್ಟು ಕಾಡಾಶ್ರಮ ಗಿರಿಗಂಹರದಲ್ಲಿರ್ದಡೇನು ? ಹಗಲು ಕಣ್ಣುಕಾಣದ ಗೂಗೆಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ : ಮನದ ಮಾಯವಡಗದಾಗಿ. ಹಸಿವು ತೃಷೆಯ ಬಿಟ್ಟು ಮಾತನಾಡದೆ ಮೌನವಾಗಿರ್ದಡೇನು ? ಕಲ್ಲು ಮರ ಮೋಟು ಗುಲ್ಮಂಗಳಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ : ವಿಷಯವ್ಯವಹಾರ ಹಿಂಗದಾಗಿ. ನಿದ್ರೆಯ ತೊರೆದು ಎದ್ದು ಕುಳ್ಳಿರ್ದಡೇನು ? ಕಳ್ಳ ಊರಹೊಕ್ಕು ಉಲುಹು ಅಡಗುವನ್ನಬರ ಮರೆಯಲ್ಲಿ ಕುಳಿತಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ: ಅಂತರಂಗದ ಘನಗಂಭೀರ ಮಹಾಬೆಳಗಿನ ಶಿವಸಮಾಧಿಯನರಿಯದ ಕಾರಣ. ಇಂತಪ್ಪ ಹೊರವೇಷದ ಡಂಭಕ ಜೊಳ್ಳುಮನದವರ ವಿರಕ್ತರೆಂದಡೆ ಮಚ್ಚರಯ್ಯ ನಿಮ್ಮ ಶರಣರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಪ್ರಭು ಜಂಗಮವೆ ಸರ್ವಾಧಾರಪರಬ್ರಹ್ಮ ಘನಗಂಭೀರ ಪರತತ್ವಮೂರ್ತಿ ನೋಡ. ಜಂಗಮವೆ ನಿರುಪಮ ನಿರಾವಯವಸ್ತು ನೋಡ. ಜಂಗಮವೆ ನಿಷ್ಕಳಂಕ ನಿಶ್ಚಿಂತ ನೋಡಯ್ಯ. ಜಂಗಮವೆ ಸ್ವಯಚರಪರವಸ್ತು ನೋಡಯ್ಯ. ಜಂಗಮವೆ ಭೂರುದ್ರಮೂರ್ತಿ ನೋಡಯ್ಯ. ಜಂಗಮವೆ ಸತ್ಯಸದಾಚಾರಮೂರ್ತಿ ನೋಡಯ್ಯ. ಜಂಗಮವೆ ಸತ್ಕಿಯಾಸಮ್ಯಜ್ಞಾನಮೂರ್ತಿ ನೋಡಯ್ಯ. ಜಂಗಮವೆ ಸದ್ಭಕ್ತಿಪ್ರಿಯ ನೋಡಯ್ಯ. ಜಂಗಮವೆ ಗುರುಲಿಂಗಭಕ್ತರಿಗೆ ಹರಣಕಿರಣ ಚೈತನ್ಯಮೂರ್ತಿ ನೋಡಯ್ಯ. ಜಂಗಮವೆ ಪರಮಾನಂದ ಪರಿಣಾಮಿ ನೋಡಯ್ಯ. ಜಂಗಮವೆ ಸಚ್ಚಿದಾನಂದಭರಿತ ನೋಡಯ್ಯ. ಜಂಗಮವೆ ಜಗತ್ಪಾವನಮೂರ್ತಿ ನೋಡಯ್ಯ. ಜಂಗಮವೆ ಕಾರಣಾವತಾರಮೂರ್ತಿ ನೋಡಯ್ಯ. ಜಂಗಮವೆ ಅಂಗಲಿಂಗವೆರಡಕ್ಕೆ ಹರಣಕಿರಣ ಚೈತನ್ಯಮೂರ್ತಿ ನೋಡಯ್ಯ. ಜಂಗಮವೆ ಸದ್ಭಕ್ತ ಮಾಹೇಶ್ವರರ ಸದ್ಧರ್ಮಸರ್ವಾಚಾರ ಸಂಪತ್ತಿನಾಚರಣೆಗೆ ಕಾರಣಕರ್ತ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ನಾದ ಬಿಂದು ಕಳೆ ನಿರಂಜನ ಘನಗಂಭೀರ ಮಹಾಪ್ರಸಾದಲಿಂಗವು ತನ್ನ ತಾನರ್ಚಿಸಿ ವಿನೋದಿಸಬೇಕೆಂಬ ಲೀಲೆಗೆ, ತಾನೇ ಲಿಂಗವಾಗಿ, ತಾನೇ ಅಂಗವಾಗಿ, ತಾನೇ ದ್ರವ್ಯವಾಗಿ, ಶರಣಸತಿ ಲಿಂಗಪತಿಯೆಂಬ ಭಾವದಿಂದೆ ತಾ ನೆರವಿದ ಲೋಕೋಪಕಾರವಾಗಿ ಆಚರಿಸುತಿರ್ದನು ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಕಾಶತತ್ವದಿಂದುದುರಿ ಬಂದ ಬೀಜವು ಧರೆಯುದಕ ಸಂಗದಲ್ಲಿ ಅಡಗಿರ್ದಡೇನು ಅಂಕುರಿಸಿ ಆಕಾಶಕ್ಕೆ ತಲೆಯದೋರುವುದಲ್ಲದೆ, ಭುವನದತ್ತ ತಲೆಯಿಡದು ನೋಡಾ. ಘನಗಂಭೀರ ಶರಣನು ತಾನೊಂದು ಕಾರ್ಯಕ್ಕೆ ಹೇಗೆ ಹಿಡಿದು ಮುಸುಕಿರ್ದಡೇನು, ಕ್ರಿಯಾಭೋಗಿತ್ತ ಜ್ಞಾನಭೋಗತ್ತ ನಡುವೆ ಪರಿಪೂರ್ಣ ಭಕ್ತಿನಿರಂತರ. ಇದು ಗೌರವಾಂಗದತಿಶಯದ ನಿಲವು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವರುಷದಬ್ಬರದೊಳುದುರಿಬಿದ್ದು ಒದರುವ ಮಂಡೂಕಾಳಿಯಂತೆ, ಹರಗುರುವಾಕ್ಯಾನುಭಾವದುಲುಹನೆಬ್ಬಿಸಿ ಉದರಪೋಷಣದ ಅನುವಿಡಿದು, ಅಬ್ಬರಿಸಿ ಹೇಳಿ ಅನಾಚಾರ ವರ್ತನೆಯೊಳ್ಮುಳುಗಿ ಘನಗಂಭೀರ ಶರಣಪದ ಸನ್ನಿಹಿತರೆಂದರೆ, ಯಮನಾಳು ಸೀಳಿ ಬಂಧಿಸರೇ, ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಥಮದಲ್ಲಿ ಪೀಠಿಕಾಸೂತ್ರವದೆಂತೆಂದೊಡೆ : ಶೈವಪಾಷಂಡಿಗಳು ಆಚರಿಸಿದ ಪಿಪೀಲಿಕಜ್ಞಾನ, ವಿಹಂಗಜ್ಞಾನ, ಮರ್ಕಟಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನ, ಶ್ವಾನಜ್ಞಾನ, ವೇದಾಂತಜ್ಞಾನ, ಸಿದ್ಧಾಂತಜ್ಞಾನ, ಭಿನ್ನಯೋಗ, ಚರ್ಯಾ-ಕ್ರಿಯಾ-ಕರ್ಮಜ್ಞಾನಂಗಳನ್ನು ತೊರೆದು ಕೇವಲ ಸುಜ್ಞಾನವೆ ಚಿತ್ಪಿಂಡಾಕೃತಿಯ ಧರಿಸಿ, ಆ ಪಿಂಡಮಧ್ಯದಲ್ಲಿ ಮಹಾಜ್ಞಾನವೆ ಚಿತ್ಪ್ರಾಣವಾಗಿ ಶೋಭಿಸಿ, ಅವೆರಡರ ಮಧ್ಯವೆ ಪರಿಪೂರ್ಣ ಸ್ವಾನುಭಾವ, ಉನ್ಮನಜ್ಞಾನವೇ ಸಾಕಾರಲೀಲೆಯ ಧರಿಸಿ, ಪರಮಜ್ಞಾನಾಂಜನ ಸದ್ವಾಸನಪರಿಮಳವೆ ಕ್ರಿಯಾಭಕ್ತಿ, ಜ್ಞಾನಭಕ್ತಿ, ಮಹಾಜ್ಞಾನಭಕ್ತಿ , ನಿರವಯಭಕ್ತಿ , ಸಚ್ಚಿದಾನಂದಭಕ್ತಿ, ಪರಿಪೂರ್ಣಭಕ್ತಿ ಮೊದಲಾದ ಷಡ್ವಿಧಭಕ್ತಿ ಯೆ ಅಂತರಂಗದ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವಂಗಳಲ್ಲಿ, ಕ್ಷೀರದೊಳು ಘೃತ, ಬೀಜದೊಳು ವೃಕ್ಷ, ಪಾಷಾಣದೊಳಗ್ನಿ ಅಡಗಿಪ್ಪಂತೆ, ಅಂಗಾಪ್ತಸ್ಥಾನ ಸದ್ಭಾವವೆಂಬ ಚತುರ್ವಿಧಭಕ್ತಿಯೆ ಸಾಕಲ್ಯವಾಗಿ, ಪುಷ್ಪದೊಳು ಪರಿಮಳ, ಫಲಾದಿಗಳಲ್ಲಿ ಫಳರಸವೆಸೆದಂತೆ, ಘಟಸರ್ಪ ತನ್ನ ಮಾಣಿಕ್ಯದ ಬೆಳಕಿನಲ್ಲಿ ಆಹಾರವ ಕೊಂಡಂತೆ, ಸಾಕಾರವಾಗಿ ಪರಿಶೋಭಿಸಿ, ಗುರುಚರಮಾರ್ಗದಿಂದ ಅಷ್ಟವಿಧಭಕ್ತಿವಿಡಿದು ಬೆಳಗುವ ಮಹಾಲಿಂಗಶರಣನ ವಿವರವೆಂತೆಂದಡೆ : ಮಹದರುವೆಂಬ ಗುರುವಿನಲ್ಲಿ ಶ್ರದ್ಧೆ, ಮಹಾಜ್ಞಾನವೆಂಬ ಲಿಂಗದಲ್ಲಿ ನೈಷೆ* , ಪೂರ್ಣಾನುಭಾವವೆಂಬ ಜಂಗಮದಲ್ಲಿ ಸಾವಧಾನ, ಕರುಣಾಮೃತವೆಂಬ ಪಾದೋದಕದಲ್ಲಿ ಅನುಭಾವ, ಕೃಪಾನಂದರಸವೆಂಬ ಪ್ರಸಾದದಲ್ಲಿ ಆನಂದ, ಚಿದ್ಬೆಳಗಿನ ಪ್ರಕಾಶವೆಂಬ ಭಸಿತದಲ್ಲಿ ಸಮರಸ, ದೃಗ್ದೃಷ್ಟಿ ಪುಂಜರಂಜನೆಯೆಂಬ ಮಣಿಮಾಲೆ ಕುಕ್ಷಿಗಳಲ್ಲಿ , ನಿಃಕಳಂಕ ಆನಂದಮಯವೆಂಬ ಚಿದ್ಘೋಷ ಮಂತ್ರದಲ್ಲಿ , ನಿರವಯಭಕ್ತಿ ಕಡೆಯಾದ ಅಷ್ಟವಿಧಭಕ್ತಿಯೆ ನಿಧಿನಿಧಾನವಾಗಿ, ಜಗಜಗಿಸಿ ಬೆಳಗುವ ಮಹಾಲಿಂಗಶರಣಚರಗುರುಗಳ ತನ್ನ ಸ್ವಾನುಭಾವಜ್ಞಾನದಿಂದರಿದು, ಅಂಗ ಮನಪ್ರಾಣಭಾವನಿಷಾ*ಚಾರದಲ್ಲಿ ಸಾಕಾರಲೀಲೆಗೆ ಪಾವನಾರ್ಥವಾಗಿ, ಷೋಡಶಭಕ್ತಿ ಜ್ಞಾನ ವೈರಾಗ್ಯ ಸ್ಥಳ ಕುಳ ಸಕೀಲ ಸಂಬಂಧಾಚರಣೆಯ ವೀರಶೈವ ಪರಿವರ್ತನೆ ಅರ್ಪಿತಾವಧಾನ ಕೊಟ್ಟುಕೊಂಬ ನಿಲುಕಡೆ, ಸಗುಣ ನಿರ್ಗುಣ ಸತ್ಯಶುದ್ಧಕಾಯಕ, ಸದ್ಧರ್ಮ ನಡೆನುಡಿ, ಘನಗಂಭೀರ ಪರುಷಸೋಂಕುಗಳೆ ಸಾರಿ ತೋರಿ ಬೀರಿ ಊರಿ ಜಾರಿ ಹಾರಿ ಸೈರೆಮೀರಿ ಮಹಾಬಯಲೊಳಗೆ ಬಯಲಾಗಿ ತೋರುವ ನಿಃಕಳಂಕ ನಿರಾಲಂಬ ನಿಃಪ್ರಪಂಚ ನಿರಾತಂಕ ನಿರುಪಾಧಿಕ ನಿರ್ಭೇದ್ಯ ನಿಶ್ಚಿಂತ ನಿಃಕಾಮ ನಿಃಫಲದಾಯಕ ನಿಃಕ್ರೋಧ ನಿರಾಸಿಕ ನಿರ್ವಾಣಿ ನಿರ್ಮರಣ ನಿರ್ಜಾತ ನಿಜಾನಂದಭರಿತಚರಿತ ನಿರಹಂಕಾರ ನಿರ್ದೇಹ ನಿರ್ಲಂಪಟ ನಿರ್ವ್ಯಸನಿ ನಿರ್ಭಾಗ್ಯ ನಿಃಸಂಸಾರಿ ನಿವ್ರ್ಯಾಪಾರಿ ನಿರ್ಮಲ ನಿಸ್ಸಂಗ ನಿಃಶೂನ್ಯ ನಿರಂಜನ ನಿರವಯ ಘನಗಂಭೀರ ಪರಾತ್ಪರ ಅಗಮ್ಯ ಅಪ್ರಮಾಣ ಅಗೋಚರ ಅನಾಮಯ ಅಗಣಿತ ಅಚಲಾನಂದ ಅಸಾಧ್ಯಸಾಧಕ ಅಭೇದ್ಯಭೇದಕ ಅನಾದಿಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಘನಗಂಭೀರ ಮಹಾ ವಾರುಧಿಯಲ್ಲಿ ಫೇನ ತರಂಗ ಬುದ್ಬುದಂಗಳಾದವಲ್ಲದೆ ಬೇರಾಗಬಲ್ಲವೆ? ಆತ್ಮನೆಂಬ ಅಂಬುಧಿಯಲ್ಲಿ ಸಕಲ ಬ್ರಹ್ಮಾಂಡಕೋಟಿಗಳಾದವಲ್ಲದೆ ಬೇರಾಗಬಲ್ಲವೆ? ಇದ ಬೇರೆಂಬ ಅರೆಮರುಳುಗಳ ನಾನೇನೆಂಬೆ? ವಿಶ್ವವನರಿದು ನೋಡಲು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಬೇರಿಲ್ಲ.
--------------
ಚಂದಿಮರಸ
-->