ಅಥವಾ

ಒಟ್ಟು 117 ಕಡೆಗಳಲ್ಲಿ , 37 ವಚನಕಾರರು , 106 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದದ ಮೊದಲಧ್ಯಾಯದಲ್ಲಿ ಒಂಕಾರಕ್ಕೆ ಒಡೆಯನಾರೆಂಬುದ ತಿಳಿದು, ಸದ್ಯೋಜಾತಾದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ | ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ || ಇಂತೀ ವೇದವೇದ್ಯರು ಶಿವಭಕ್ತರಲ್ಲದಿಲ್ಲ. ಇಂತಿದನರಿಯದೆ, ಘನ ಕಿರಿದೆಂದು ಹೋರುವವರಿಗೆ ತಿಳಿವಳವ ಕೊಡುವೆ. ನಿಮ್ಮ ಶಾಂಕರಸಂಹಿತೆಯಲ್ಲಿ ದೃಷ್ಟವ ತಿಳಿದುಕೊಳ್ಳಿ. ಲಲಾಮಬ್ಥೀಮಸಂಗಮೇಶ್ವರಲಿಂಗವಲ್ಲದಿಲ್ಲಾ ಎಂದೆ.
--------------
ವೇದಮೂರ್ತಿ ಸಂಗಣ್ಣ
ಅನಾದಿಯಾಗಿ ಪಶು ಪಾಶ ಮಲ ಮಯಾಕರ್ಮಗಳುಂಟಾದರೆ, ಈ ಜಗವನೊಬ್ಬರೂ ಸೃಷ್ಟಿಮಾಡಿದ ಕರ್ತುವಲ್ಲ. ಎಂದೆಂದೂ ಜಗವಿದ್ದಿತ್ತು ನಿತ್ಯವೆನ್ನು. ಎಂದೆಂದೂ ಜಗವಿದ್ದಿತ್ತೆಂಬೆಯಾದರೆ, ಶಿವನ ಸೃಷ್ಟಿ, ಸ್ಥಿತಿ, ಸಂಹಾರ, ಸ್ಥಿರೋಭಾವ, ಅನುಗ್ರಹವೆಂಬ ಪಂಚಕೃತ್ಯಗಳು ಹುಸಿಯೆಂದೆನ್ನು. ಶಿವನಿಗೆ ಸೃಷ್ಟಿ ಸ್ಥಿತಿ ಸಂಹಾರಾರ್ಥವುಂಟಾದರೆ, ಈ ಜಗತ್ತೆಲ್ಲವೂ ಶಿವನ ನೆನಹು ಮಾತ್ರದಿಂದ ಹುಟ್ಟಿತ್ತಲ್ಲದೆ, ಎಂದೆಂದೂ ಉಂಟೆಂಬುದು ಶೈವ ಪಶುಮತವಲ್ಲದೆ, ವೀರಶೈವರ ಮತವಲ್ಲ. ವೀರಶೈವರ ಮತವೆಂತೆಂದಡೆ: ಘನ ಗಂಬ್ಥೀರ ವಾರಿದ್ಥಿಯೊಳಗೆ ಫೇನತರಂಗ ಬುದ್ಬುದ ಶೀಕರಾದಿಗಳು ತೋರಿದಡೆ, ಆ ಸಾಗರ ಹೊರಗಾಗಿ ತೋರಬಲ್ಲವೇ? ಆ ಪರಶಿವಸಾಗರದಲ್ಲಿ ತೃಣಾದಿ ಬ್ರಹ್ಮಾಂತವಾದ ದೇಹಿಗಳು ಉತ್ಪತ್ತಿಯಾಗಿ ಮತ್ತಲ್ಲಿಯೇ ಅಡಗುತ್ತಿಪ್ಪರು ನೋಡಾ. ಇದು ಕಾರಣ, ಲಿಂಗನಿರ್ಮಿತದಿಂದ ಜಗತ್ತಾಯಿತೆಂದೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಮೇಲೊಂದು ಲಿಂಗವು, ಲಿಂಗದ ಮೇಲೊಂದು ಅಂಗವು. ಆವುದು ಘನವೆಂಬೆ ? ಆವುದು ಕಿರಿದೆಂಬೆ ? ತಾಳೋಷ್ಠಸಂಪುಟಕ್ಕೆ ಬಾರದ ಘನ, ಉಭಯಲಿಂಗವಿರಹಿತವಾದ ಶರಣ. ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ ಅರಿವೆಂಬುದಿಲ್ಲ, ಮರವೆಂಬುದಿಲ್ಲ, ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ, ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ, ಸಂಗ ನಿಸ್ಸಂಗವೆಂಬುದಿಲ್ಲ, ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ, ಭ್ರಮರದೊಳಡಗಿದ ಕೀಟದಂತೆ ಉರಿಯೊಳಡಗಿದ ಕರ್ಪುರದಂತೆ ಕ್ಷೀರದೊಳು ಬೆರೆದ ಪಯದಂತೆ ಅಂಬುದ್ಥಿಯೊಳಡಗಿದ ವಾರಿಕಲ್ಲಿನಂತೆ ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ ?
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ; ಮೂರ್ತಿಯಲ್ಲಿ ನಿಂದುದಲ್ಲ, ಅಮೂರ್ತಿಯಲ್ಲಿ ಭಾವಿಯಲ್ಲ; ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ; ಎಂತಿರ್ದಡಂತೆ ಬ್ರಹ್ಮ ನೋಡಾ ! ಮನ ಮನ ಲೀಯವಾಗಿ ಘನ ಘನ ಒಂದಾದಡೆ ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ ? ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಭಕ್ತನಾಗಲಿ ಜಂಗಮನಾಗಲಿ ಭಕ್ತಿ ಭೃತ್ಯಾಚಾರ ಸಂಪನ್ನರಾಗಿ ಗುರುಲಿಂಗ ಜಂಗಮವನಾರಾಧಿಸಿ, ಪ್ರಸಾದವಕೊಂಡು ನಿಜಮುಕ್ತರಾಗಲರಿಯದೆ ಪರಮಪಾವನಪ್ಪ ಗುರುರೂಪ ಹೊತ್ತು ಮತ್ತೆ ತಾವು ಪರಸಮಯದಂತೆ ದೂಷಕ ನಿಂದಕ ಪರವಾದಿಗಳಾಗಿ ಭಕ್ತ ಜಂಗಮ ಪ್ರಸಾದವನೆಂಜಲೆಂದು ಅತಿಗಳೆದು ತೊತ್ತು ಸೂಳೆಯರೆಂಜಲ ತಿಂದು ಮತ್ತೆ ನಾ ಘನ ತಾ ಘನವೆಂದು ಸತ್ಯ ಸದ್ಭಕ್ತಯಕ್ತರಾದ ಭಕ್ತಜಂಗಮವ ಜರೆದು, ಅವರ ಕುಲವೆತ್ತಿ ಕೆಡೆನುಡಿದು ಹೊಲತಿ ಮಾದಿಗಿತ್ತಿಯರಿಗುರುಳಿ ಹಲವು ದೈವದೆಂಜಲತಿಂದು ಮತ್ತೆ ತಾವು ಕುಲಜರೆಂದು ಬಗುಳುವ ಹೊಲೆ ಜಂಗುಳಿಗಳೆಲ್ಲರು ಈ ಗುರು ಕೊಟ್ಟಲಿಂಗವಿರಲು ಅದನರಿಯದೆ ಶ್ರೀಶೈಲ, ಹಂಪಿ, ಕಾಶಿ, ಕೇತಾರ ಗಯಾ ಪ್ರಯಾಗ ರಾಮೇಶ್ವರ ಆದಿಯಾದ ಹೊಲೆಕ್ಷೇತ್ರಂಗಳಲ್ಲಿ ಆಸಕ್ತರಾಗಿ ಹೋಗಿ ಅಲ್ಲಲ್ಲಿಯ ಭವಿಶೈವದೈವಂಗಳ ದರ್ಶನ ಸ್ಪರುಶನ ಆರಾಧನೆಗಳ ಮಾಡಿ ಅವಕ್ಕೆ ಶರಣೆಂದು ಅವರೆಂಜಲ ತಿಂದು ಆ ಕ್ಷೇತ್ರಂಗಳಲ್ಲಿ ಆಶ್ರಮಸ್ಥರಾಗಿರ್ದು ಗತಿಪದ ಮುಕ್ತಿಯ ಪಡೆವೆನೆಂಬ ವೇಷಧಾರಿಗಳೆಲ್ಲರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರವೇಳೆ ಬಪ್ಪುದು ತಪ್ಪುದು. ಅದೆಂತೆಂದೊಡೆ ; ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ ಶಿವಜ್ಞಾನೇನ ಜಾನಂತಿ ಸರ್ವತೀರ್ಥನಿರರ್ಥಕಂ ಪ್ರಾಣಲಿಂಗಮವಿಶ್ವಾಸ್ಯ ತೀರ್ಥಲಿಂಗಂತು ವಿಶೇಷತಃ ಶ್ವಾನಯೋನಿಶತಂ ಗತ್ವಾಶ್ಚಾಂಡಾಲಂ ಗೃಹಮಾಚರೇತ್ ಚರಶೇಷ ಪರಿತ್ಯಾಗಾದ್ಯೋಜನಾದ್ಭಕ್ತ ನಿಂದಕಾಃ ಅನ್ಯಪಣ್ಯಾಂಗನೋಚ್ಚಿಷ್ಟಂ ಭುಂಜಯಂತಿರೌರವಂ-ಇಂತೆಂದುದಾಗಿ, ಇದು ಕಾರಣ, ಇಂತಪ್ಪ ಅನಾಚಾರಿಗಳು ಭಕ್ತ ಜಂಗಮ ಸ್ಥಲಕ್ಕೆ ಸಲ್ಲರು. ಅವರಿರ್ವನು ಕೂಡಲಚೆನ್ನಸಂಗಯ್ಯ ಸೂರ್ಯ-ಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ದೇವಿಯರೊಳಗೆ ದೇವನೆ ಕೂಡಿದ. ಹರಹರ ಮಾಯೆ[ಯ] ಘನವ ಮನವ ತನುವನಾರಿಗೆಯು ತಿಳಿಯಬಾರದು. ತಿಳಿದೆನೆಂಬೊ ಭ್ರಮಿ[ತರಿಗೆ] ಕರ ಸನ್ನಿಹಿತವಳವಡುವಳಲ್ಲ . ತಂದೆ ಅಣ್ಣ ತಮ್ಮ ಬಂಧು ಬಳಗ ಕುಲ ಆವುದೆನ್ನದೆ ಕುಲಗೆಡುವಂಥವಳಲ್ಲ. ನಮ್ಮ ಘನ ಗುರು ಅಲ್ಲಮ ಪ್ರಭುದೇವನು ಶಾಂತಿ ಸೈರಣೆ ಉಳ್ಳಂಥವಂಗೆ ತದ್ರೂಪದ ಮಹಿಮೆಯ ಉಸುರಿ ಹೇಳುವನು ನಮ್ಮ ತನಯ ಶಿವಶಾಂತ ಮೂರುತಿ ಕಾಣಾ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ಎಂಬತ್ತು (ಎರಡೆಂಬತ್ತು?) ಕೋಟಿ ವಚನವ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು, ಮನ ಘನವನರಿಯದು, ಘನ ಮನವನರಿಯದು. ಗುಹೇಶ್ವರನೆಂಬ ಲಿಂಗವನರಿದ ಬಳಿಕ ಗೀತವೆಲ್ಲ ಒಂದು ಮಾತಿನೊಳಗು !
--------------
ಅಲ್ಲಮಪ್ರಭುದೇವರು
ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ ಪರಕೆ ಪರವಾದ ಪರಾಪರವು ತಾನೆ ನೋಡಾ. ಆ ಪರಾಪರವು ತಾನೆ ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ, ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ ಅಕಳಂಕನು ನೋಡಾ. ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ ಅದ್ವಯನು ನೋಡಾ. ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು. ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ. ಆ ಚಿದದ್ವಯವಾದ ಬಸವಣ್ಣನೇ ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ, ಎನ್ನ ಸರ್ವಾಂಗಲಿಂಗವು ಕಾಣಾ. ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು ಬಸವಣ್ಣನಾದ ಕಾರಣ, `ಬಸವಲಿಂಗ ಬಸವಲಿಂಗ ಬಸವಲಿಂಗಾ'ಯೆಂದು ಜಪಿಸಿ ಭವಾರ್ಣವ ದಾಂಟಿದೆನು ಕಾಣಾ. ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ ಶರಣನಾದೆನು ಕಾಣಾ. ಬಸವನೇ ಲಿಂಗವಾದ ಕಾರಣ ನಾನಂಗವಾದೆನು. ಕರ್ತೃವೇ ಬಸವಣ್ಣ, ಭೃತ್ಯನೇ ನಾನು. ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ. ಇದು ಕಾರಣ, ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ, ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ. ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ ನಾನು ಶರಣನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪಶ್ಚಿಮಚಕ್ರದಲ್ಲಿ ನಿತ್ಯ ನಿರಂಜನನ ಬೆಳಗು ತತ್ತ್ವಬ್ರಹ್ಮಾಂಡದಿಂದತ್ತತ್ತಲಾದ ಘನ ನೋಡಾ. ಅದು ಪರಂಜ್ಯೋತಿ ಪರತತ್ವ ಪರಾಪರವಸ್ತುವೇ ಪ್ರಸಾದ ನೋಡಾ. ಪ್ರತಿಯಿಲ್ಲದ ಅಪ್ರತಿಮ ಪ್ರಸಾದದಲ್ಲಿ ನಿಃಪತಿಯಾಗಿ ಮಹಾಪ್ರಸಾದಿಯಾದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಲ್ಲ ಇಲ್ಲೆಂಬೊ ನಿರ್ಬೈಲೊಳು ತಾನೇನು ಇಲ್ಲದವಾಚ್ಯ ಸ್ವಯಂಭು ಬೈಲ್ಹೆಂಗಾದುದೊ ತಾನೇ ತಾನೆಂದರೆ | ಪಲ್ಲ | ನಿರುಪಮ ನಿಃಕಳ ಪರಬ್ರಹ್ಮವಾದುದು ತಾನೆ ತಾನೆ ಆ- ಪರಬ್ರಹ್ಮದೊಳಗೆ ಚಿತ್ಕಳೆ ಅರವು ಆದುದು ತಾನೆ ತಾನೆ ಅರವಿನೊಳು ಅರವು ಅರಿತುದೆ ಮನವಾದುದು ತಾನೆ ಆ ಅರಿತ ಮನವೆ ನೆನವಿಗೆ ಘನವಾದುದು ತಾನೆ ತಾನೆ ಘನವಾದ ಘನವೇ ತಾ ಘನಲಿಂಗವಾದುದು ತಾನೆ ತಾನೆ ಆ ಘನಲಿಂಗದೊಳಗೆ ತಾ ನವಲಿಂಗವಾದುದು ತಾನೆ ತಾನೆ ಆ ಘನಲಿಂಗವೇ ಅವನ ಅಂಗವಾದುದು ತಾನೆ ತಾನೆ ಘನ ನವಲಿಂಗವೇ ಬಹುಬಗೆಯಾದುದು ತಾನೆ ನವಶಕ್ತಿ ನವಭಕ್ತಿ ನವನಾದವಾದುದು ತಾನೆ ತಾನೆ ನವಚಕ್ರ ನವವರ್ಣ ನವಮಂತ್ರವಾದುದು ತಾನೆ ತಾನೆ ನವಹಸ್ತ ನವಮುಖ ನವದೈವವಾದುದು ತಾನೆ ತಾನೆ ಈ ನವರೂಪು ನವರುಚಿ ನವತೃಪ್ತಿಯಾದುದು ತಾನೆ ತಾನೆ ಮೂರಾರು ಮುಂದೆ ಮೂವತ್ತಾರಾದುದು ತಾನೆ ತಾನೆ ಈ ಮೂರಾರೇ ಇನ್ನೂರಾಹದಿನಾರಾದುದು ತಾನೆ ತಾನೆ ಮೂರಾರೇ ಹನ್ನೆರಡುನೂರಾ ತೊಂಬತ್ತಾರಾದುದು ತಾನೆ ತಾನೆ ಈ ಮೂರಾರೇ ಮೀರಿ ಈ ಜಗಮಯವಾದುದು ತಾನೆ ತಾನೆ ಒಂದೇ ಮೂರಾದುದು ಒಂದೇ ಆರಾದುದು ತಾನೆ ತಾನೆ ಆ ಒಂದೇ ಆರು ಮೂರು ಒಂದೇ ಬರಿ ಆದುದು ತಾನೆ ತಾನೆ ಒಂದಾದ ಅಂದದಾನಂದ ನಾಮವಾದುದು ತಾನೆ ತಾನೆ ಈ ಸಂದ ಮಹಾಂತನ ಕಂದನಾದುದು ತಾನೆ ತಾನೆ
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಂಗದಲ್ಲಿ ಸೋಂಕಿದ ಸುಳುಹ ಮನವರಿದು, ಅಲ್ಲ ಅಹುದೆಂದು ಸಂದೇಹ ಬಿಟ್ಟಲ್ಲಿ ಅರ್ಪಿತವಲ್ಲದೆ, ಬಂದುದ ಬಂದಂತೆ, ಕಂಡುದ ಕಂಡಂತೆ, ದೃಕ್ಕಿಂಗೊಳಗಾದುದೆಲ್ಲವು ಲಿಂಗಾರ್ಪಿತವುಂಟೆ ? ಅರ್ಪಿಸಬಲ್ಲಡೆ ಅಲ್ಲ ಅಹುದೆಂಬುದ ಮುನ್ನವೆ ಅರಿದು, ಆ ಮನ ಲಿಂಗದೊಳಗಡಗಿ, ಅಂಬಿನ ಕಣೆಯಂತೆ ಮನ ಲಿಂಗದ ಅನು. ಈಶಾನ್ಯಮೂರ್ತಿ ಮಲ್ಲಿಕಾರ್ಜುನದ ಘನ
--------------
ಶಿವಲೆಂಕ ಮಂಚಣ್ಣ
ಸಾಗರ ಘನವೆಂದಡೆ, ಧರೆಯೊಳಗಡಗಿತ್ತು. ಧರೆ ಘನವೆಂದಡೆ, ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು. ನಾಗೇಂದ್ರನ ಘನವೆಂದಡೆ, ದೇವಿಯರ ಕಿರುವೆರಳಿನ ಮುದ್ರಿಕೆಯಾಯಿತ್ತು. ಅಂಥ ದೇವಿಯ ಘನವೆಂದಡೆ, ಶಿವನರ್ಧಾಂಗಿಯಾದಳು, ಶಿವ ಘನವೆಂದಡೆ, ಬಾಣನ ಬಾಗಿಲ ಕಾಯ್ದ, ನಂಬಿಯ ಹಡಪವ ಹಿಡಿದ. ಇದು ಕಾರಣ, ಸೊಡ್ಡಳಾ ನಿಮ್ಮ ಭಕ್ತರೇ ಘನ.
--------------
ಸೊಡ್ಡಳ ಬಾಚರಸ
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ, ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು. ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ. ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ? ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು. ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ? ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರತಹೆ ? ``ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ _ಇದು ಕಾರಣ ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ ಜಂಗಮವೆ ಪ್ರಾಣಲಿಂಗವಾದ ಕಾರಣ ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.
--------------
ಚನ್ನಬಸವಣ್ಣ
ತೊಗಲಬೊಕ್ಕಣದಲ್ಲಿ ಪಾಷಾಣವ ಕಟ್ಟುವರಲ್ಲದೆ ಪರುಷವ ಕಟ್ಟುವರೆ ? ಮಣ್ಣಹರವಿನಲ್ಲಿ ಸುರೆಯ ತುಂಬುವರಲ್ಲದೆ ರತ್ನವ ತುಂಬುವರೆ ? ಆದ್ಯರ ವಚನಂಗಳಿರ್ದುದ ಕಾಣಲರಿಯದೆ ನಾ ಘನ ತಾ ಘನವೆಂದು ಅಗಮ್ಯವ ಬೀರುವ ಅಜ್ಞಾನಿಗಳ ವಿರಕ್ತರೆಂಬೆನೆ ? ಅನುಭಾವಿಗಳೆಂಬೆನೆ ? ನಿಜವನರಿದ ಲಿಂಗೈಕ್ಯರೆಂಬೆನೆ ? ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಆರೂಢರೆಂಬೆನೆ ?
--------------
ಅಮುಗೆ ರಾಯಮ್ಮ
ಇನ್ನಷ್ಟು ... -->