ಅಥವಾ

ಒಟ್ಟು 9 ಕಡೆಗಳಲ್ಲಿ , 6 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಟಾಕಾಶ ಮಠಾವಕಾಶ ದಿಗಾಕಾಶ ಬಿಂದ್ವಾಕಾಶ ಭಿನ್ನಾಕಾಶ ಮಹದಾಕಾಶವೆಂಬ ಆಕಾಶಕೊಂಬತ್ತು ಬಾಗಿಲು. ಹೊಗಲಿಕಸಾಧ್ಯ ಹೊರಹೊಂಡಲಿಕಸಾಧ್ಯ. ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ ಸಾಧ್ಯವಲ್ಲದೆ ಉಳಿದವರಿಗಸಾಧ್ಯವು.
--------------
ಚನ್ನಬಸವಣ್ಣ
ಘಟಾಕಾಶ ಮಠಾಕಾಶದಲ್ಲಿ ತೋರುವ ಬೆಳಗು ಘಟಮಠವೆಂಬ ಉಭಯ ಇರುತಿರಲಿಕ್ಕೆ ರೂಪುಗೊಂಡಿತ್ತು. ಬಯಲು ಘಟಮಠವೆಂಬ ಭೇದಂಗಳಳಿಯಲಾಗಿ ಆಕಾಶತತ್ವದಲ್ಲಿ ನಿಶ್ಚಿಂತವನೆಯ್ದಿ ಮಹದಾಕಾಶದಲ್ಲಿ ಲೀಯವಾದುದು ವ್ಯತಿರಿಕ್ತವೆಂಬುದು ನಾಮಶೂನ್ಯ, ಐಕ್ಯನ ಅರ್ಪಿತಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಮಹದಾಕಾಶ ಘಟ ಭೇದದಿಂದ ಘಟಾಕಾಶ ಮಹದಾಕಾಶವಾಗಿ ತೋರಿದರೆ ಆಕಾಶವೊಂದಲ್ಲದೆರಡುಂಟೇ ಮರುಳೆ? ಪರಶಿವ ತಾನೆ ತನ್ನ ಶಕ್ತಿಭೇದದಿಂದ ಶರಣ ಲಿಂಗವೆಂದಡೆ ಶರಣ ಲಿಂಗಕ್ಕೆ ಬ್ಥಿನ್ನವೆಲ್ಲಿಯದೋ? ಈ ಶರಣಮತವು ಪ್ರಕೃತಿಯಿಂದಾದ ದೈ ್ವತಾದ್ವೆ ೈತ ಮತವಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದಿಂತು ಲಿಂಗಸ್ಥಲವಾರಕ್ಕಂ ವಿವರ: ಆಚಾರಲಿಂಗಸ್ಥಲ ತ್ರಿವಿಧ:ಸದಾಚಾರ, ನಿಯತಾಚಾರ, ಗಣಾಚಾರ ಇದಕ್ಕೆ ವಿವರ: ಎಲ್ಲ ಜನವಹುದೆಂಬುದೆ ಸದಾಚಾರ. ಹಿಡಿದ ವ್ರತನಿಯಮವ ಬಿಡದಿಹುದೆ ನಿಯತಾಚಾರ. ಶಿವನಿಂದೆಯ ಕೇಳದಿಹುದೆ ಗಣಾಚಾರ. ಗುರುಲಿಂಗಸ್ಥಲ ತ್ರಿವಿಧ:ದೀಕ್ಷೆ, ಶಿಕ್ಷೆ, ಸ್ವಾನುಭಾವ. ಇದಕ್ಕೆ ವಿವರ : ದೀಕ್ಷೆಯೆಂದಡೆ ಗುರು, ಶಿಕ್ಷೆಯೆಂದಡೆ ಜಂಗಮ, ಸ್ವಾನುಭಾವವೆಂದಡೆ ತನ್ನಿಂದ ತಾನರಿವುದು. ಶಿವಲಿಂಗಸ್ಥಲ ತ್ರಿವಿಧ:ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗ ಇದಕ್ಕೆ ವಿವರ : ಶ್ರೀಗುರು ಕರಸ್ಥಲದಲ್ಲಿ ಅನುಗ್ರಹವ ಮಾಡಿಕೊಟ್ಟುದೀಗ ಇಷ್ಟಲಿಂಗ, ತನುಗುಣ ನಾಸ್ತಿಯಾದುದೇ ಪ್ರಾಣಲಿಂಗ, ಜಾಗ್ರಸ್ವಪ್ನಸುಷುಪ್ತಿಯಲ್ಲಿ ಲಿಂಗವಲ್ಲದೆ ಪೆರತೊಂದನರಿಯದಿಪ್ಪುದೆ ತೃಪ್ತಿಲಿಂಗ. ಜಂಗಮಲಿಂಗಸ್ಥಲ ತ್ರಿವಿಧ :ಸ್ವಯ, ಚರ, ಪರ, ಇದಕ್ಕೆ ವಿವರ : ಸ್ವಯವೆಂದಡೆ ತಾನು. ಚರವೆಂದಡೆ ಲಾಂಛನ ಮುಂತಾಗಿ ಚರಿಸುವುದು. ಪರವೆಂದಡೆ ಅರಿವು ಮುಂತಾಗಿ ಚರಿಸುವುದು. ಪ್ರಸಾದಲಿಂಗಸ್ಥಲ ತ್ರಿವಿಧ :ಶುದ್ಧ, ಸಿದ್ಧ, ಪ್ರಸಿದ್ಧ ಇದಕ್ಕೆ ವಿವರ : ಶುದ್ಧವೆಂದಡೆ ಗುರುಮುಖದಿಂದ ಮಲತ್ರಯವ ಕಳೆದುಳಿದ ಶೇಷ, ಸಿದ್ಧವೆಂದಡೆ ಲಿಂಗಮುಖದಿಂದ ಕರಣಮಥನಂಗಳ ಕಳೆದುಳಿದ ಶೇಷ. ಪ್ರಸಿದ್ಧವೆಂದಡೆ ಜಂಗಮಮುಖದಿಂದ ಸರ್ವಚೈತನ್ಯಾತ್ಮಕ ತಾನೆಯಾಗಿ ಖಂಡಿತವಳಿದುಳಿದ ಶೇಷ. ಮಹಾಲಿಂಗಸ್ಥಲ ತ್ರಿವಿಧ:ಪಿಂಡಜ, ಅಂಡಜ, ಬಿಂದುಜ. ಇದಕ್ಕೆ ವಿವರ : ಪಿಂಡಜವೆಂದಡೆ ಘಟಾಕಾಶ. ಅಂಡಜವೆಂದಡೆ ಬ್ರಹ್ಮಾಂಡ. ಬಿಂದುಜವೆಂದಡೆ ಮಹಾಕಾಶ. ಇಂತು ಲಿಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಇನ್ನು ಅಂಗಸ್ಥಲವಾವುವೆಂದಡೆ: ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ. ಇನ್ನು ಅಂಗಸ್ಥಲವಾರಕ್ಕೆ ವಿವರ : ಭಕ್ತಸ್ಥಲ ತ್ರಿವಿಧ :ಗುರುಭಕ್ತ, ಲಿಂಗಭಕ್ತ, ಜಂಗಮಭಕ್ತ. ತನುಕ್ರೀಯಿಂದ ತನುಮನಧನವನರ್ಪಿಸುವನಾಗಿ ಗುರುಭಕ್ತ. ಮನಕ್ರೀಯಿಂದ ಮನತನುಧನವನರ್ಪಿಸುವನಾಗಿ ಲಿಂಗಭಕ್ತ. ಧನಕ್ರೀಯಿಂದ ಧನಮನತನುವನರ್ಪಿಸುವನಾಗಿ ಜಂಗಮಭಕ್ತ. ಮಾಹೇಶ್ವರಸ್ಥಲ ತ್ರಿವಿಧ:ಇಹಲೋಕವೀರ, ಪರಲೋಕವೀರ, ಲಿಂಗವೀರ. ಅದಕ್ಕೆ ವಿವರ : ಮತ್ರ್ಯಲೋಕದ ಮಹಾಗಣಂಗಳು ಮೆಚ್ಚುವಂತೆ, ಷಡ್ದರ್ಶನಂಗಳ ನಿರಸನವ ಮಾಡಿ, ತನ್ನ ಸಮಯಕ್ಕೆ ಪ್ರಾಣವ ವೆಚ್ಚಿಸುವನಾಗಿ ಇಹಲೋಕವೀರ. ದೇವಲೋಕದ ದೇವಗಣಂಗಳು ಮೆಚ್ಚುವಂತೆ, ಸರ್ವಸಂಗಪರಿತ್ಯಾಗವ ಮಾಡಿ ಚತುರ್ವಿಧಪದಂಗಳ ಧರ್ಮಾರ್ಥಕಾಮಮೋಕ್ಷಂಗಳ ಬಿಟ್ಟಿಹನಾಗಿ ಪರಲೋಕವೀರ. ಅಂಗಲಿಂಗಸಂಗದಿಂದ ಸರ್ವಕರಣಂಗಳು ಸನ್ನಹಿತವಾಗಿಪ್ಪನಾಗಿ ಲಿಂಗವೀರ. ಪ್ರಸಾದಿಸ್ಥಲ ತ್ರಿವಿಧ :ಅರ್ಪಿತಪ್ರಸಾದಿ, ಅವಧಾನಪ್ರಸಾದಿ, ಪರಿಣಾಮಪ್ರಸಾದಿ ಅದಕ್ಕೆ ವಿವರ : ಕಾಯದ ಕೈಯಲ್ಲಿ ಸಕಲಪದಾರ್ಥಂಗಳು ಇಷ್ಟಲಿಂಗಕ್ಕೆ ಕೊಟ್ಟು ಕೊಂಬನಾಗಿ ಅರ್ಪಿತಪ್ರಸಾದಿ. ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷೆ*ಯ ಮಾಡಿ, ಅಲ್ಲಲ್ಲಿ ಬಂದ ಸುಖವನಲ್ಲಲ್ಲಿ ಮನದ ಕೈಯಲ್ಲಿ ಕೊಟ್ಟು ಕೊಂಬನಾಗಿ ಅವಧಾನಪ್ರಸಾದಿ. ಅಂಗಾಶ್ರಯವಳಿದು ಲಿಂಗಾಶ್ರಯವುಳಿದು, ಭಾವಭರಿತನಾಗಿಪ್ಪನಾಗಿ ಪರಿಣಾಮಪ್ರಸಾದಿ. ಪ್ರಾಣಲಿಂಗಿಸ್ಥಲ ತ್ರಿವಿಧ :ಆಚಾರಪ್ರಾಣಿ, ಲಿಂಗಪ್ರಾಣ, ಜಂಗಮಪ್ರಾಣಿ. ಅದಕ್ಕೆ ವಿವರ : ಮನೋವಾಕ್ಕಾಯದಲ್ಲಿ ಆಚಾರವ ಅವಗ್ರಹಿಸಿಹನಾಗಿ ಆಚಾರಪ್ರಾಣಿ. ಬಾಹ್ಯೋಪಚಾರಂಗಳ ಮರೆದು ಲಿಂಗಕ್ಕೆ ತನ್ನ ಪ್ರಾಣವನೆ ಪೂಜೆಯ ಮಾಡುವನಾಗಿ ಲಿಂಗಪ್ರಾಣಿ. ಬಾಹ್ಯಭಕ್ತಿಯ ಮರೆದು ಜಂಗಮಕ್ಕೆ ತನ್ನ ತನುಮನಪ್ರಾಣಂಗಳ ನಿವೇದಿಸುವನಾಗಿ ಜಂಗಮಪ್ರಾಣಿ ಶರಣಸ್ಥಲ ತ್ರಿವಿಧ:ಇಷ್ಟಲಿಂಗಾರ್ಚಕ, ಪ್ರಾಣಲಿಂಗಾರ್ಚಕ, ತೃಪ್ತಿಲಿಂಗಾರ್ಚಕ ಅದಕ್ಕೆ ವಿವರ : ಅನಿಷ್ಟ ನಷ್ಟವಾಯಿತ್ತಾಗಿ ಇಷ್ಟಲಿಂಗಾರ್ಚಕ. ಸ್ವಯಪರವನರಿಯನಾಗಿ ಪ್ರಾಣಲಿಂಗಾರ್ಚಕ. ಇಹಪರವನರಿಯನಾಗಿ ತೃಪ್ತಿಲಿಂಗಾರ್ಚಕ. ಐಕ್ಯಸ್ಥಲ ತ್ರಿವಿಧ :ಕಾಯಲಿಂಗೈಕ್ಯ, ಜೀವಲಿಂಗೈಕ್ಯ, ಭಾವಲಿಂಗೈಕ್ಯ. ಅದಕ್ಕೆ ವಿವರ : ಕ್ರಿಯೆಯರತುದೆ ಕಾಯಲಿಂಗೈಕ್ಯ. ಅನುಭಾವವರತುದೆ ಜೀವಲಿಂಗೈಕ್ಯ. ಅರಿವು ಸಿನೆ ಬಂಜೆಯಾದುದೆ ಭಾವಲಿಂಗೈಕ್ಯ. ಇಂತೀ ಅಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಉಭಯಸ್ಥಲ ಮೂವತ್ತಾರರೊಳಗಾದ ಸರ್ವಾಚಾರಸಂಪತ್ತನು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಘಟಾಕಾಶ ಮಠಾಕಾಶ ಬಿಂದ್ವಾಕಾಶ ಭಿನ್ನಾಕಾಶ ಮಹದಾಕಾಶ ನಿಜದಾಕಾಶ ಚೈತನ್ಯಾತ್ಮನಾತ್ಮಚೈತನ್ಯವೆಂದಡೆ ಒಂದೆಂದರಿತರಿತು ಮರೆ ಮಾಡಿ ಹುಸಿ ಎಂಬ ಪರಿಯ ನೋಡಾ. ಗರುಡಿ ಚೋರನಂತೆ ಘಟಾಕಾಶ ಘಟವಿದ್ದಲ್ಲಿ ಇದ್ದು, ಘಟವಳಿದಲ್ಲಿ ಘಟಾಕಾಶವಳಿಯದಂತೆ. ಮಠಾಕಾಶ ಮಠವಿದ್ದಲ್ಲಿ ಇದ್ದು, ಮಠ ಬಿಚ್ಚಿದಲ್ಲಿ ಮಠಾಕಾಶ ಬಿಚ್ಚದಂತೆ. ಬಿಂದ್ವಾಕಾಶ ಬಿಂದುವಿದ್ದಲ್ಲಿ ಇದ್ದು, ಬಿಂದು ನಷ್ಟವಾದಲ್ಲಿ ಬಿಂದ್ವಾಕಾಶ ನಷ್ಟವಾಗದಂತೆ. ಭೀನ್ನಾಕಾಶ ಪೃಥ್ವಿಯಿದ್ದಲ್ಲಿ ಇದ್ದು, ಪೃಥ್ವಿ ಭಿನ್ನವಾದಲ್ಲಿ ಭಿನ್ನಾಕಾಶ ಭಿನ್ನವಾಗದಂತೆ. ಮಹದಾಕಾಶವೇ ನಿಜದಾಕಾಶ. ಆ ನಿಜದಾಕಾಶವೇ ನಿರ್ಧರವಹ ಹಾಂಗೆ. ಇದೇ ಆತ್ಮನ ಮರ್ಮ ನೋಡಾ. ಆದಿ ಅನಾದಿ ಇಲ್ಲದಂದು, ನಾದಬಿಂದುಕಳೆ ಮೊಳದೋರದಂದು, ಇದು ಒಂದೆಂದರಿತು ಉಂಟಿಲ್ಲವೆಂಬ ಗೆಲ್ಲಸೋಲದ ಮಾತಿನ ಮಾಲೆಯ ತೊಡಿಗೆಯಳಿದಂದು ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಆನೆಂಬುದು ನೀನೆಂಬುದೊಂದೇ ಕಾಣಾ ಮಲ್ಲಿಕಾರ್ಜುನಾ.
--------------
ಆದಯ್ಯ
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದವು. ಪ್ರಸಾದವೆ ಕೋಟಿಲಿಂಗವೆಂದರಿವುದು. ಪ್ರಸಾದಮೂರ್ತಿಯಾದ ಶರಣನ ರೋಮ ರೋಮಂಗಳು ಕೋಟಿಲಿಂಗವೆಂದುಚ್ಚರಿಸುವರಲ್ಲಾ ! ಘ್ರಾಣಮುಖ ನಾಸಿಕ ಆಚಾರಲಿಂಗವಾಗಿ, ಗಂಧದ್ರವ್ಯವ ಗ್ರಹಿಸಿ ಗಂಧವಾದ ಪ್ರಸಾದವೆ ಬಿಂದು, ಸರ್ವಾಂಗಮಯವಾದ ಮಹೇಶ್ವರನ ಷಡುರಸವ ಭುಂಜಿಸುವ ಜಿಹ್ವೆಯೆ ಗುರುಲಿಂಗ. ಷಡಕ್ಷರಿಮಂತ್ರನಾದ ಪ್ರಸಾದಿ, ಅಗ್ನಿಯೇ ಚರ್ಮ ಸ್ವರ ಸರ್ವಾಂಗಮೂರ್ತಿ ಶಿವಲಿಂಗ. ದೃಶ್ಯಾದೃಶ್ಯ ದೃಕ್ಕು ಜಾತಿ ಜ್ಯೋತಿಸ್ವರೂಪು ತಾನಾದ ಪ್ರಸಾದಿ. ಸ್ಥಾವರ ಜಂಗಮ ಪ್ರಣಮಸ್ವರೂಪು ತ್ವಕ್ಕು ಸರ್ವಾಂಗ ಸ್ಪರ್ಶನ ಜಂಗಮಲಿಂಗನಾದ ಪ್ರಸಾದಿ. ಆಕಾಶ, ಘಟಾಕಾಶ, ಮಠಾಕಾಶ, ಬಿಂದ್ವಾಕಾಶ, ಚಿದಾಕಾಶ, ವ್ಯೋಮಾಕಾಶ ಗೋತ್ರ ಸಹಲಿಂಗನಾದ ಪ್ರಸಾದಿ. ಜೀವಾತ್ಮ ಅಂತರಾತ್ಮ ಪರಮಾತ್ಮ ಸರ್ವೇಂದ್ರಿಯ ತೃಪ್ತಿಯಾದ ಮಹಾಲಿಂಗನಾದ ಪ್ರಸಾದಮೂರ್ತಿ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಘಟಾಕಾಶ ಮಹದಾಕಾಶದ ಪರಿಯಲ್ಲವೆಂಬಿರಿ. ಸಿಡಿಲು ಮಿಂಚು ಮಹದಾಕಾಶದಲ್ಲಿಯೇ ಲೀಯ. ನಡೆವುದು ನುಡಿವುದು ಘಟಕಾಶದಲ್ಲಿಯೇ ಲೀಯ. ಶಬ್ದ ನಿಶ್ಶಬ್ದವೆಂದೇನೋರಿ ಚೈತನ್ಯಾತ್ಮಕವೆಂದಡೂ ಆತ್ಮಚೈತನ್ಯವೆಂದಡೂ ನಾಮವೆಂದಡೆ ರೂಪು, ರೂಪೆಂದಡೆ ನಾಮ, ನಾಮ ಏಕಸ್ವರೂಪವೆಂದರಿಯದೆ ಕಂಗಳಯ್ಯಗಳು ಕಂಡೆವೆಂಬ ಕಳವಳದಂತೆ ಮರೆದೊರಗಿದವರು ಒರಗಿದಾಗ ಸುಖಿಸಿದೆವೆಂಬ ಮಾತಿನಂತೆ ಇಲ್ಲದುದನುಂಟೆಂದು ನೆನೆವನಂತೆ, ನಿಃಕಳಂಕ ಶಾಂತಮಲ್ಲಿಕಾರ್ಜುನದೇವಯ್ಯ ಕೇಳಿದ ಮಾತ್ರದಲ್ಲಿ ಮಗ್ನವಾದವರಂತೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಘಟಾಕಾಶ ಮಹಾಕಾಶ ಮಹದಾಕಾಶ ಆವುವೆಂದಡೆ : ಘಟಾಕಾಶವೆ ಇಷ್ಟಲಿಂಗಕ್ಕೆ ಮನೆಯಾಗಿಪ್ಪುದು, ಜಿಹ್ವೆಯೆ ತಾಯಾಗಿಪ್ಪುದು, ನೇತ್ರವೆ ತಂದೆಯಾಗಿಪ್ಪುದು, ದ್ವಿಕರ್ಣಂಗಳೆ ಅಣ್ಣತಮ್ಮಂದಿರಾಗಿಪ್ಪವು, ಹಸ್ತಪಾದಂಗಳೆ ಕುಟುಂಬವಾಗಿಪ್ಪವು, ಚಿತ್ತಶುದ್ಧವೆ ಅರಮನೆಯಾಗಿಪ್ಪುದು. ಇವರು ಇಷ್ಟಲಿಂಗಕ್ಕೆ ಉಪಚಾರವ ಮಾಡುತ್ತಿಹರು. ಸಾಕ್ಷಿ : ' ಮಾತಾ ಜಿಹ್ವಾ ಪಿತಾ ಚಕ್ಷುಃ ದ್ವಿಕರ್ಣಶ್ಚ ಸಹೋದರಂ | ಹಸ್ತಪಾದ ಕುಟುಂಬೇನ ಚಿತ್ತಶುದ್ಧೇ ಯಥಾ ಮಠಃ ||' ಇನ್ನು ಮಠಾಕಾಶವೆ ಪ್ರಾಣಲಿಂಗಕ್ಕೆ ಮನೆಯಾಗಿಪ್ಪುದು, ಸತ್ಯವೆ ತಾಯಾಗಿಪ್ಪುದು, ಜ್ಞಾನವೆ ತಂದೆಯಾಗಿಪ್ಪುದು, ಧರ್ಮವೇ ಅಣ್ಣತಮ್ಮಂದಿರಾಗಿಪ್ಪರು, ದಯವೆ ಗೆಳೆಯನಾಗಿಪ್ಪನು, ಶಾಂತಿಯೆ ಸ್ತ್ರೀಯಾಗಿಪ್ಪಳು, ಕ್ಷಮೆಯೇ ಪುತ್ರರಾಗಿಪ್ಪರು, ಇವರು ಬಂಧುಗಳಾಗಿ ಪ್ರಾಣಲಿಂಗಕ್ಕೆ ಉಪಚರಿಸುತ್ತಿಹರು. ಸಾಕ್ಷಿ : 'ಸತ್ಯಂ ಮಾತಾ ಪಿತಾ ಜ್ಞಾನಂ ಧರ್ಮೋ ಭ್ರಾತಾ ದಯಾ ಸಖಾ | ಶಾಂತಿಃ ಪತ್ನೀ ಕ್ಷಮಾ ಪುತ್ರಾಃ ಷಡೇತೇ ಮಮ ಬಾಂಧವಾಃ ||' ಮಹದಾಕಾಶವೆ ಭಾವಲಿಂಗಕ್ಕೆ ಮನೆಯಾಗಿಪ್ಪುದು, ತೃಪ್ತಿಯೆ ತಾಯಾಗಿಪ್ಪಳು, ಆನಂದವೆ ತಂದೆಯಾಗಿಪ್ಪನು, ಸಂತೋಷವೆ ಅಣ್ಣತಮ್ಮಂದಿರಾಗಿಪ್ಪರು, ಹರುಷಾಬ್ಧಿಯೆ ಸ್ತ್ರೀಯಾಗಿಪ್ಪಳು, ಸದ್ಭಾವವೆ ಮಕ್ಕಳಾಗಿಪ್ಪರು, ಇವರು ಭಾವಲಿಂಗಕ್ಕೆ ಉಪಚರಿಸುತ್ತಿಹರು. ಘಟಾಕಾಶವೆಂದಡೆ ಜೀವಾತ್ಮ, ಮಠಾಕಾಶವೆಂದಡೆ ಅಂತರಾತ್ಮ, ಮಹದಾಕಾಶವೆಂದಡೆ ಪರಮಾತ್ಮ, ಚೆನ್ನಂಗಿಬೇಳೆಗಿಂದ ಸಣ್ಣನಾಗಿಪ್ಪ ನೇತ್ರವು ತ್ರಿವಿಧಲಿಂಗವು. ಈ ತ್ರಿವಿಧಾಕಾಶವನೊಳಕೊಂಡ ಭೇದವ ನಮ್ಮಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ !
--------------
ಗಣದಾಸಿ ವೀರಣ್ಣ
-->