ಅಥವಾ

ಒಟ್ಟು 8 ಕಡೆಗಳಲ್ಲಿ , 8 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಟದೊಳಗೆ ರಸವಿದ್ದು, ರಸದೊಳಗೆ ಘಟವಿದ್ದು, ಸಂಗಗುಣದಿಂದ ನೀರಾಗಿ. ಸಂಗ ಹಿಂಗಲಿಕೆ ಉಭಯದಂಗ ಒಂದಾದ ತೆರನಂತೆ, ಈ ಗುಣ ಲಿಂಗಾಂಗಿಯ ಸಂಗದ ವಿವರ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಕೂಡಿದ ಪರಮಸುಖಿಯಂಗ.
--------------
ಮೋಳಿಗೆ ಮಾರಯ್ಯ
ಘಟದೊಳಗೆ ತೋರುವ ಸೂರ್ಯನಂತೆ ಎಲ್ಲರೊಳಗೆ, ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು. ಇದ್ದರೇನು, ಸರ್ವರಿಗೆ ಸಾಧ್ಯವಲ್ಲ. ಮುಟ್ಟಿ ಮುಟ್ಟದು ಅದು ಕೂಡುವಡೆ, ಗುರುವಿಂದಲ್ಲದಾಗದು ಕಾಣಾ, ಕಲಿದೇವಾ.
--------------
ಮಡಿವಾಳ ಮಾಚಿದೇವ
ಪಲ್ಲ :ಬಂಧನ ಸಂಸಾರದಂದುಗದ ದಾಳಿಯಲ್ಲಿ ನೊಂದು ಬೆಂದೆನೊ ಎನ್ನ ಹುಯ್ಲು ತಂಬಿಸು ಗುರುವೆ ಭವಹರ ನಿತ್ಯನಿರ್ಮಳಾತ್ಮಕ ಶಂಭುವೆ. ಪದ :ಹಲವು ಜನ್ಮದಿ ಹುಟ್ಟಿ ಹಲವಾಹಾರವನುಂಡು ಹಲವು ಭೂಮಿಯ ಮೆಟ್ಟಿ ಹಲವು ಕರ್ಮವ ಕಂಡು ಹಲವು ಭವಕೀಡಾಗಿ ಹಲವು ಹಂಬಲಿಸುತಿರುವ ಹೊಲೆಜನ್ಮ ಸಂಸಾರ ಮಾಯಾರಕ್ಕಸಿ ತುಡುರೆ ನಿಲ್ಲಲಾರದಲಿ ನಿಮ್ಮ ಮರೆಹೊಕ್ಕೆ ಎನ್ನ ಕೊಡದೆ ಗೆಲಿದುಕೊ ದುರಿತಹರ ಕರುಣಾಳು ಪರಮಗುರುವೆ. | 1 | ಸಟೆ ಠಕ್ಕು ಠೌಳಿ ಅಟಮಟದ ಬಂಧನದ ಕುಟಿಲಸಂಸಾರಸಾಗರದ ತೊರೆನೆರೆಗಳೊಳು ಪುಟನೆಗೆದು ತಲೆ ಮುಣುಗುತಲಿರುವನ ಕಂಡು ನಿಟಿಲಾಕ್ಷ ಕೃಪೆಯೆಂಬ ಹಡಗವನು ತಂದೊಲಿ ತಟಕೆನ್ನನೆಳೆದು ತಗೆದೀಗ ಇನಿತಾತ್ಮ ಘಟದೊಳಗೆ ಜ್ಞಾನಜ್ಯೋತಿಯ ತೀವು ಪರಮಗುರುವೆ. | 2 | ರಸವಿಷಯ ಮೋಹನದ ಕೂಪಜಲದೊಳು ಮುಳುಗಿ ದೆಸೆದೆಸೆಗೆ ಚಾಲಿವರಿವನ ಕಂಡು ಬೇಗದಲಿ ವಿಷಕಂಠ ದುರಿತಸಂಹರ ಕರುಣಾಕರ ತೊಟ್ಟಿಲಿಗೆ ಎಸೆವ ಹಗ್ಗವ ಕಟ್ಟಿ ಎಳೆದು ತಗೆಯೆನ್ನ ರಂ ಬಿಸುತ ಸಂತೈಸಿ ದುಃಖದಲ್ಲಿ ಭೋರ್ಗರೆದಳುವ ಶಿಶುವ ಬೋಳೈಸುವಂದದಲೆನ್ನ ಬೋಳೈಸು ಅಸಮಾಕ್ಷ ಪರಮಗುರುವೆ.| 3 | ತೆರಣಿಯ ಹುಳು ನೂಲು ಸುತ್ತಿಕೊಂಡು ಎಸೆವ ತೆರದಿ ಈ ಸಂಸಾರ ಸುಖದುಃಖ ಎನ್ನನು ಸುತ್ತಿ ಪರಿಭವಕ್ಕೆ ಗುರಿಯಾಗಿ ಯೋನಿಯಂತ್ರದೆ ತಿರುಗಿಯೆ ಬರುತಲಿರ್ದೆನು ಘೋರ ಅರಣ್ಯದೊಳು ಸುತ್ತಿ ಹರಹರ ನಿಮ್ಮ ಸ್ಮರಣೆಯ ಮರೆದ ಕಾರಣದಿ ದುರಿತನ್ಯಾಯದ ಬಂಧನಕೆ ಗುರಿಯಾಗಿದ್ದೆನಯ್ಯಾ ಶಿವನೆ. | 4 | ಮಾಯಾಸಂಸಾರಸರ್ಪನ ವಿಷವು ತಲೆಗೇರಿ ನೋಯುತಿದ್ದೆನು ಹಲವುವಿಧದಾಸೆಪಾಶದಲಿ ಬೇಯುವವನ ಕಂಡು ನೀ ಬೇಗಲೊಯಿದ್ಯವ ಮಾಡಿಯೆ ಶವವನುಳುವಿಕೋ ಭವರೋಗವೈದ್ಯ ನಿತ್ಯ ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು ನೀವಲ್ಲದೆನಗನ್ಯವಿಲ್ಲ ಕಾಯೋ ಕಾಯೋ ದೇವಾ. | 5 |
--------------
ಹೇಮಗಲ್ಲ ಹಂಪ
ಘಟದೊಳಗೆ ತೋರುವ ಸೂರ್ಯನಂತೆ ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು. ಇದ್ದರೇನು? ಅದ ಕೂಡುವರೆ ಗುರುವಿನಿಂದಲ್ಲದಾಗದು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಪರಾತ್ಪರವಾದ ವಸ್ತುವನೊಡಗೂಡಿದ ಪ್ರಾಣಲಿಂಗಿಯ ಒಡಲ ಬೆಡಗಿನ ಗಡಣವೆಂತಿರ್ಪುದೆಂದಡೆ : ಸ್ಫಟಿಕದ ಘಟದೊಳಗೆ ಜ್ಯೋತಿಯನಿರಿಸಿದಂತೆ, ಕತ್ತಲೆಯ ಮನೆಯಲ್ಲಿ ರತ್ನವ ಹರಡಿದಂತೆ ರನ್ನದ ಗಿರಿಗೆ ರವಿಕೋಟಿ ಕಿರಣಂಗಳು ಮುಸುಕಿದಂತೆ, ಬೆಳಗು ಹಳಚಿದ ಮಹಾಬೆಳಗಿನೊಬ್ಬುಳಿಯನೊಳಕೊಂಡು ಘನಗಂಭೀರವಾದ ಪ್ರಾಣಲಿಂಗಿಗಳ ಪಾದಕಮಲದಲ್ಲಿ ಸದಮಲ ತುಂಬಿಯಾಗಿರಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮದ್ಗುರುವೆ ಸದ್ಗುರುವೆ ತ್ರಿಜಗದ್ಗುರುವೆ ಶಿವಂಗೆ ಮಾತೆಯಾದ ಮನೋರಥವೀವ ಮಹದ್ಗುರುವೆ ಶಿವ ಇವ ಉಪಮಾತೀತನೆ ಮನ್ನಾಥಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ ಮಮಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಶ್ರೀಗುರುವೆ, ನಿನ್ನ ನಿರೀಕ್ಷಣೆ ಮಾತ್ರದಲ್ಲಿ ಸಕಲಯೋನಿಜರು ಪಶುಪಾಶಹರರು, ಪಶುರ್ನಾಥಃ ಶಿವಸ್ತಸ್ಮಾತ್ ಪಶೂನಾಂ ಪತಿರಿತ್ಯಭೂತ್ ಎಂದುದಾಗಿ ಪಶುಪಾಶವಿನಿರ್ಮುಕ್ತೈ ಗುರೋರಾಜ್ಞಾಂ ನಿರೀಕ್ಷಯೇತ್ ಸಂಸ್ಕಾರಿಗಳಿಗಲ್ಲದೆ ಅಪ್ಪುದೆ ನಿನ್ನ ನಿರೀಕ್ಷಣೆ? ಹೋಹುದೆ ಅವನ ಭವಪಾಶವು ? ``ಅಣುರೇಣುತೃಣಕಾಷ* ಶಿಲಾಗುಲ್ಮಲತಾವಳಿ ಭೂತೋಯಾನಲಮರುದಾಕಾಶಸ್ಥಃ ``ಏಕ ಏವ ನ ದ್ವಿತೀಯಾವಸ್ಥೇ ಎಂದುದಾಗಿ, ಇದು ಕಾರಣ, ಪರಿಪೂರ್ಣ ಶಿವನು. ಅದು ಹೇಗೆಂದಡೆ : ಘಟದೊಳಗೆ ಇದ್ದ ಜಲಕ್ಕೆ ಉಷ್ಣವಿಸಿ ಆ ಜಲವು ತದ್ರೂಪಹಂಗೆ ಸದ್ಗುರುಸ್ವಾಮಿ ಅಂಗಲಿಂಗವ ಸಂಬಂಧಮಾಡಿದ ಬಳಿಕ ಪ್ರಾಣಲಿಂಗಸಂಬಂಧವಾದ ಭೇದ : ಸ್ವಾನುಭಾವೇ ತು ಸಂಬಂಧಿ ಕ್ರಿಯಾಲಿಂಗಸ್ಯ ಪೂಜನಂ ನಿಷ್ಕ್ರಿಯಂ ಪ್ರಾಣಲಿಂಗಂ ತು ಕ್ರಿಯಾಲಿಂಗಸ್ಯ ಪೂಜನಂ ಬಾಹ್ಯಲಿಂಗಾರ್ಚನಂ ಯತ್ ಸ್ಯಾತ್ ತತ್ ಕ್ರಿಯಾಲಿಂಗಪೂಜನಂ ಎಂದುದಾಗಿ, ಕ್ರಿಯಾಕಾರದಿಂ ಗುರು ತೋರಿದ ಲಿಂಗದಿಂದ ಸ್ವಾನುಭಾವಲಿಂಗವ ಕಂಡರಿತು ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಓಂಕಾರನಾದವು ಪಿಂಡಬ್ರಹ್ಮಾಂಡ ತುಂಬಿಕೊಂಡಿಪ್ಪುದು. ಮಹಾಜ್ಞಾನಿಗಳಿಗೆ ಪ್ರತ್ಯಕ್ಷವಾಗಿಪ್ಪುದು. ಆ ನಾದವಿಲ್ಲದಿರ್ದಡೆ ನಿರ್ಜೀವಿಗಳು ಹೇಗೆ ನುಡಿವವು? ನಿರ್ಜೀವಿ ಯಾವು ಯಾವುವೆಂದಡೆ: ಕಡುವಿಡಿದ ಶಬ್ದ - ಚರ್ಮವಿದ್ಯೆ ಭೇರಿ ತಮ್ಮಟ; ಲೋಹವಿಡಿದ ಶಬ್ದ - ತಾಳ ಕಂಸಾಳ ಗಂಟೆ ಕಾಳೆ ಕರ್ನೆ ಸಪೂರಿ ಸನಾಯಿ; ತಂತಿವಿಡಿದ ಶಬ್ದ - ಕಿನ್ನರಿ ವೀಣೆ ಕಾಮಾಕ್ಷಿ ತಂಬೂರಿ ರುದ್ರವೀಣೆ. ಇನ್ನು ಆಕಾಶದೊಳಗೆ ಶಬ್ದವನಿಕ್ಕಿದಡೆ ಪ್ರತಿಶಬ್ದವ ಕೊಡುವುದು. ದೇಗುಲದೊಳಗೆ ಹೇಗೆ ನುಡಿದಡೆ ಹಾಗೆ ನುಡಿವುದು. ಪರಿಪೂರ್ಣವಸ್ತುವಿಲ್ಲದಿರ್ದಡೆ ಈ ನಿರ್ಜೀವಿಗಳು ಹೇಗೆ ನುಡಿವವು? ಈ ನಾದ ಶಬ್ದವು ಆವಾವ ಘಟದೊಳಗೆ ಹೊಕ್ಕು, ಆ ಘಟಶಬ್ದವ ಕೊಡುತ್ತಿಹುದು ಆ ಘಟದ ಗುಣವೆಂದು ತಿಳಿವುದು. ನಮ್ಮ ಗಣಂಗಳು ಆ ಘಟದ ಗುಣಮಂ ಬಿಟ್ಟು ಪಿಂಡಬ್ರಹ್ಮಾಂಡದೊಳಗಿಪ್ಪ ಪರಿಪೂರ್ಣ ವಸ್ತುವಿನೊಳಗೆ ಬೆರೆದುದ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಸ್ಫಟಿಕಪ್ರಜ್ವಲಜ್ಯೋತಿ ಘಟದೊಳಗೆ ತೋರುತ್ತಿರೆ, ದಿಟಪುಟವನತಿಗಳೆದು ಸಟೆಯ ಬಳಸುವರೆ ? ಅಂತರಂಗದ ಶುದ್ಭಿಯ ಬಹಿರಂಗಕ್ಕೆ ತಂದು ಸಂತೈಸಲರಿಯದೆ ಮರುಳಾದಿರಣ್ಣಾ ? ಜಂತ್ರದ ಕೀಲಕೂಟದ ಸಂಚದ ಭೇದವು ತಪ್ಪಿ, ಮಂತ್ರಭಿನ್ನವಾಗಿ ನುಡಿವರೆ ಅಜಗಣ್ಣಾ ?
--------------
ಮುಕ್ತಾಯಕ್ಕ
-->