ಅಥವಾ

ಒಟ್ಟು 10 ಕಡೆಗಳಲ್ಲಿ , 7 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ, ಒಳಹೊರಗೆ ನೋಡುವಡೆ ಕಾಣಬರುತ್ತಿದೆ. ನುಡಿಸುವಂಥಾದಲ್ಲ, ಸಾರಿ ಇದ್ದಿಹುದು, ಮುಟ್ಟುವೊಡೆ ಕೈಗೆ ಸಿಕ್ಕದು. ಶಾಸ್ತ್ರಸಂಬಂಧದ ಕಲಿಕೆಯೊಳಗಲ್ಲ. ವ್ಯಕ್ತಾವ್ಯಕ್ತವನೊಳಕೊಂಡು ಬಯಲಸಮಾಧಿಯಲ್ಲಿ ಸಿಲುಕಿತ್ತು, ಸೌರಾಷ್ಟ್ರ ಸೋಮೇಶ್ವರಲಿಂಗವು ಪ್ರಾಣವಾಗಿ.
--------------
ಆದಯ್ಯ
ಘಟದೊಳಗಣ ಬಯಲು, ಮಠದೊಳಗಣ ಬಯಲು, ಬಯಲು ಬಯಲು ಬಯಲು! ತಾನೆಲ್ಲಾ ಬಯಲು, ಬಿಡಾಡಿ ಬಯಲು.
--------------
ಬೊಂತಾದೇವಿ
ಘಟಪಟದ ಭಿತ್ತಿಯಂತೆ ಭಿನ್ನವೆಂಬ ಹಾಂಗೆ ಇಹುದು. ತಿಳಿದು ನೋಡಿದಡೆ ಭಿನ್ನವುಂಟೆ ? ಘಟದೊಳಗಣ ಬಯಲು, ಪಟದೊಳಗಣ ನೂಲು; ಭಿತ್ತಿಯ ಮೃತ್ತಿಕೆಯಂತೆ ಒಂದಲ್ಲದೆ ಎರಡಿಲ್ಲ. ದೇಹಿಗಳೊಳಗೆ ಗುಹೇಶ್ವರನಲ್ಲದೆ ಮತ್ತಾರೂ ಇಲ್ಲ.
--------------
ಅಲ್ಲಮಪ್ರಭುದೇವರು
ಸಾವಯವವೆಂದರೆ ನಿರವಯವಾಯಿತ್ತು. ನಿರವಯವೆಂದರೆ ಸಾವಯವಾಯಿತ್ತು. ಸಾವಯ ನಿರವಯ ತನ್ನೊಳಡಗಿತ್ತು. ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ ಕೂಡಲಚೆನ್ನಸಂಗನ ಶರಣರ ಇರವು.
--------------
ಚನ್ನಬಸವಣ್ಣ
ಹೊಸ ಮುತ್ತಿನ ಸುಪ್ಪಾಣಿಯಂತೆ ಲಿಂಗೈಕ್ಯವು. ಸ್ಫಟಿಕದ ಘಟದೊಳಗಣ ಪ್ರಭೆಯಂತೆ ಲಿಂಗೈಕ್ಯವು. ವಾಯುವಿನ ಸಂಚದ ಪರಿಮಳದ ನಿಲವಿನಂತೆ ಲಿಂಗೈಕ್ಯ ಸಂಬಂಧವದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹುಟ್ಟಿದ ಮಾನ್ಯರೆಲ್ಲ ದಶವಾಯು ಪಂಚಭೂತ ಸಪ್ತಧಾತು ಅರಿಷಡ್ವರ್ಗ ಅಷ್ಟಮದಂಗಳನೆಲ್ಲ ಸುಟ್ಟು ಸೂರೆಮಾಡಿ ನಿನ್ನೊಳು ಬೆರೆದರೆ, ಅಂಡಜ ಶ್ವೇದಜ ಉದ್ಬಿಜ ಜರಾಯುಜವೆಂಬ ನಾಲ್ಕು ತೆರದ ಯೋನಿಯಲ್ಲಿ ಹುಟ್ಟಿ, ಚೌರಾಸಿಲಕ್ಷ ಜೀವರಾಸಿಯಾಗಿ ಪಾಪಕರ್ಮವ ಗಳಿಸಿ ಯಮಂಗೆ ಗುರಿಯಾಗುವರಾರು ? ಅದು ಕಾರಣ, ಮೋಡದಮರೆಯ ಸೂರ್ಯನಂತೆ, ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ, ಸರ್ವರ ಆತ್ಮದೊಳು ಮರೆಗೊಂಡುಯಿಪ್ಪ ತನುಗುಣ ಮನಗುಣ ಅಹಂಕಾರ ಮಾಯಾಮದದ ತಮಂಧದ ಕತ್ತಲೆಯ ಮರೆಮಾಡಿ ಕಾಣಗೊಡದೆಯಿಪ್ಪ ಮರೆಗೊಂಡ ಭೇದವ ಶಿವಶರಣರು ಬಲ್ಲರುಳಿದ ನರಗುರಿಗಳಿಗಸಾಧ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಾಕಾರ ನಿರಾಕಾರದೊಳಗೆ ಚಿದ್ರೂಪವ ತಳೆದ ಮಹಾಮಹಿಮನ ಇರವು: ಬೆಳುದಿಂಗಳೊಳಗಣ ಅಚ್ಚ ಪಳುಕಿನ ಪರ್ವತ ಬೆಳುದಿಂಗಳೆಂಬ[ಂ]ತಿರ್ಪಂತೆ, ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ ಸದ್ಭಾವಪ್ರಕಾಶಿಸಲು ಒಳಹೊರಗೆಂಬುದಿಲ್ಲ ಸೌರಾಷ್ಟ್ರ ಸೋಮೇಶ್ವರನ ಶರಣಂಗೆ.
--------------
ಆದಯ್ಯ
ಬಯಲೊಳೆರಗಿದ ಸಿಡಿಲಿನಂತಾಯಿತ್ತೆನ್ನ ಗುರುವಿನುಪದೇಶ. ಮಿಂಚಿನ ಪ್ರಭೆಯ ಸಂಚದಂತಾಯಿತ್ತೆನ್ನ ಗುರುವಿನುಪದೇಶ. ಸ್ಫಟಿಕದ ಘಟದೊಳಗಣ ಜ್ಯೋತಿಯಂತಾಯಿತ್ತೆನ್ನ ಗುರುವಿನುಪದೇಶ ಮಹಾಲಿಂಗ ವೀರರಾಮೇಶ್ವರನಂತಾಯಿತ್ತೆನ್ನ ಗುರುವಿನುಪದೇಶವೆನಗಯ್ಯಾ.
--------------
ವೈನಿಪುರದ ಸಂಗಮೇಶ್ವರ
ಕಾಣಬಾರದ ಲಿಂಗವ ಕಾಬ ಪರಿಯಿನ್ನೆಂತೊ ? ಕುರುಹಿಲ್ಲದ ಜ್ಞಾನವ ಕುರುಹಿಟ್ಟರಿವ ಪರಿಯಿನ್ನೆಂತೊ ? ನೋಟಕ್ಕೆ ಬಾರದ ರೂಪ, ಕೂಟದಲ್ಲಿ ಸುಖವನರಿವ ಪರಿಯಿನ್ನೆಂತೊ ? ಅರಿದೆಹೆನೆಂಬುದೇನು, ಇದಿರಿಟ್ಟರಿಸಿಕೊಂಡಿಹೆನೆಂಬುದೇನು ? ಅರಿವಿಂಗೂ ಮರವೆಗೂ ಒಡಲಾಯಿತ್ತೆ ಲಿಂಗವು ? ಘಟದೊಳಗಣ ಜ್ಯೋತಿ ಮಠಕ್ಕೆ ಭಿನ್ನವುಂಟೆ ? ಘಟಕ್ಕೆ ಮಠ ಬೇರೆಯುಂಟೆ ? ಅರಿಯಲಿಲ್ಲವಾಗಿ ಮರೆಯಲಿಲ್ಲ, ಮರೆದರಿಯಲಿಲ್ಲವಾಗಿ, ತೆರಹಿಲ್ಲದ ಮತ್ತೆ ಕುರುಹಿಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅನುಪಮ ಲಿಂಗವೆ, ಎನ್ನ ನೆನಹಿಂಗೆ ಬಾರೆಯಾ, ಅಯ್ಯಾ? ಎನ್ನ ತನುಮನ ಶುದ್ಧವಿಲ್ಲೆಂದು, ಎನ್ನ ನೆನಹಿನಲ್ಲಿ ನೀ ನಿಲ್ಲೆಯಾ, ಅಯ್ಯಾ ? ಎನ್ನಪಾತಕದ ಪುಂಜವ ನೀ ಅತಿಗಳೆಯಾ. ಎನ್ನ ಹಸುವಿಂಗೆ ಅಸು ನೀನೆ, ವಿಷಯಕ್ಕೆ ಮನ ನೀನೆ, ಭೋಗಿಸುವುದಕ್ಕೆ ಅಂಗ ನೀನೆ. ಸ್ಫಟಿಕದ ಘಟದೊಳಗಣ ಬಹುರಂಗಿನಂತೆ, ಎನ್ನ ಅಂಗಮಯ ನೀನಾಗಿ ಹಿಂಗಲೇಕೆ ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
-->