ಅಥವಾ

ಒಟ್ಟು 42 ಕಡೆಗಳಲ್ಲಿ , 2 ವಚನಕಾರರು , 42 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಕರತರ್ಕದ ಪ್ರಸ್ತಾವನ ವಚನ : ಅರಿಷಡ್ವರ್ಗವೆಂಬ ಆರು ನಾಯಿಗಳು ಬೊಗಳುತ್ತಿರೆ, ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ನರಿ ಕೂಗುತ್ತಿರೆ, ಹಸಿವು ತೃಷೆ ನಿದ್ರೆ ಜಾಡ್ಯವೆಂಬ ನಾಲ್ಕು ಸೂಕರ ಮುತ್ತಿಕೊಂಡಿರೆ, ಸಪ್ತವ್ಯಸನಗಳೆಂಬ ಏಳು ಬೆಕ್ಕು ಸುಳಿವುತ್ತಿರೆ, ಪಂಚೇಂದ್ರಿಯವೆಂಬ ಐದು ವರ್ಣದ ಹುಲಿ ನುಂಗುತ್ತಿರೆ, ಸಪ್ತಧಾತುಗಳೆಂಬ ಏಳುಮಂದಿ ಹೊಲೆಯರು ಮುಟ್ಟಿ ತನ್ನಂಗದೊಳು ನಾನು ನೀನೆಂಬ ಅಹಂಕಾರದ ಜಾಗಟೆಯ ಪಿಡಿದು ಅಜಾÕನವೆಂಬ ಕುಡಿಯಲ್ಲಿ ಬಾರಿಸಿ, ಇಂತಪ್ಪ ಪರಿಯಲ್ಲಿದ್ದ ಸೂತಕಂಗಳ ಪರಿಯದೆ ಹೊರಮಾತ ಕೇಳಬಾರದೆಂದು ಜಾಗಟೆಯ ಹೊಯ್ಸಿ ನಾದದ ಮರೆಯಲ್ಲಿ ಆಹಾರವ ಕೊಂಬ ಸೇವಕರ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಗುರುಲಿಂಗಜಂಗಮವೆಂದು ನುಡಿವ ಬಹುವಾಕ್ಯರು ನೀವು ಕೇಳಿರೊ. ಗುರುವಾವುದು? ಲಿಂಗವಾವುದು? ಜಂಗಮವಾವುದು? ಲಿಂಗವೆಂದವರ ಕರಸ್ಥಲದಲ್ಲಿ ಜಂಗಮವೊಂದೆಂದರಿಯದಿರದೆ ಚರಿಸಿದ ಗುರುಸ್ಥಲದ ಹೊಲಬನರಿಯದೆ ಗುರುಭಕ್ತರೆನ್ನಿಸುವ ಗುರುದ್ರೋಹಿಗಳ ಮಾತ ಕೇಳಲಾಗದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ದಾನಿಯಾದಡೇನು? ಅವನ ಬೇಡಿದಲ್ಲದೆ ಅರಿಯಬಾರದು. ರಣರಂಗ ದ್ಥೀರನಾದಡೇನು ? ಅಲಗು ಅಲಗು ಹಳಚಿದಲ್ಲದೆ ಅರಿಯಬಾರದು. ಗೆಳೆಯನಾದಡೇನು ? ಅಗಲಿದಲ್ಲದೆ ಅರಿಯಬಾರದು. ಹೇಮವಾದಡೇನು ? ಒರೆಗಲ್ಲುಯಿಲ್ಲದೆ ಅರಿಯಬಾರದು. ನಿನ್ನನರಿದೆಹೆನೆಂದಡೆ : ಸಂಸಾರ ಸಾಗರವ ದಾಟಿದಲ್ಲದೆ ಅರಿಯಬಾರದು ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಇದರ ನಿರ್ವಚನ : ಬ್ರಹ್ಮೇಶ್ವರಿ ವಿಷ್ಣೇಶ್ವರಿ ರುದ್ರೇಶ್ವರಿ ಮಹೇಶ್ವರಿಯೆಂಬ ಆ ರುದ್ರಶಕ್ತಿಸಹ ಸಪ್ತವ್ಯಸನಗಳೆಂಬ ಮೆಟ್ಟನಿಕ್ಕಿ, ಪ್ರಣಮವೆಂಬ ವೀಣೆಯ ವಿಸ್ತರಿಸಿ, ಸಪ್ತಸ್ಥಾನದಲ್ಲಿ ಎಳೆಯಂ ಬಿಗಿದು, ಹಂಸ ಹಂಸವೆಂಬ ಬೆರಳಲ್ಲಿ ನುಡಿಸುತ್ತ ಗೊಹೇಶ್ವರನಾಳದಲ್ಲಿ ಮಹಾ ಮಹಾತ್ಮನೆಂಬ ವಚನವ ಪಾಡುತ್ತ ಉರಿಗೆಂಡದ ಕಣ್ಣತೆರೆದು, ವಕ್ರಂಗಳ ವಿಸರ್ಜಿಸಿ, ಕಂಗಳ ಮುಚ್ಚಿ, ಸದೈಶ್ವರಿಯ ಸರವಿಗೈದು ಪರಸ್ಥಾನದಲ್ಲಿ ಒಲದಾಡುತಿರ್ದ ಜೋಗಿಯ ಕಂಡು, ಸಾರಾಯ ಸಂತೋಷಮಂ ಮಾಡುತ್ತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ, ಕಾಲಕರ್ಮಂಗಳ ದಂಡಿಸಿದಡಿಲ್ಲ, ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ. ಜಲಸಮಾದ್ಥೀಯಲ್ಲಿ ಕುಳಿತಡಿಲ್ಲ, ಇದಕ್ಕೆ ಶ್ಲೋಕ : ಪೂಜಾಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ | ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಮನೋಲಯಂ || ಇಂತೆಂದುಂದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು ಮತ್ತೆ ಅರಸಲುಂಟೇನಯ್ಯಾ? ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ ಚಿತ್ತ ಸಮಾಧನವುಳ್ಳ ಪುರುಷಂಗೆ ? ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ?
--------------
ಗುಹೇಶ್ವರಯ್ಯ
ಆರುಲಿಂಗದಲ್ಲಿ ಅರತೆನೆಂಬ ಅರಿವುಗೇಡಿಗಳು ನೀವು ಕೇಳಿರೊ. ಆರುಲಿಂಗ ನಿಮಗೆಂತಪ್ಪವು? ಆಚಾರಲಿಂಗ ಬ್ರಹ್ಮಂಗೆ ಸಂಬಂಧವಾಯಿತ್ತು. ಗುರುಲಿಂಗ ವಿಷ್ಣುವಿಂಗೆ ಸಂಬಂಧವಾಯಿತ್ತು. ಶಿವಲಿಂಗ ರುದ್ರಂಗೆ ಸಂಬಂಧವಾಯಿತ್ತು. ಜಂಗಮಲಿಂಗ ಈಶ್ವರಂಗೆ ಸಂಬಂಧವಾಯಿತ್ತು. ಪ್ರಸಾದಲಿಂಗ ಸದಾಶಿವಂಗೆ ಸಂಬಂಧವಾಯಿತ್ತು. ಮಹಾಲಿಂಗ ಪರಶಿವಂಗೆ ಸಂಬಂಧವಾಯಿತ್ತು. ಇಂತೀ ಆರುದರುಶನಕ್ಕೆ ಸಂಬಂಧವಾಯಿತ್ತು. ನಿಮ್ಮ ಸಂಬಂಧವ ಬಲ್ಲರೆ ಹೇಳಿರೊ? ಗುರುಲಿಂಗಜಂಗಮವೆಂಬ ತ್ರಿವಿಧಸಂಬಂಧ; ಆರು ಪರಿಯ ಶಿಲೆಯ ಮೆಟ್ಟಿ ಮುಂಬಾಗಿಲವ ತೆರೆದು ಶ್ರೀಗುರುವಿನ ಪ್ರಸಾದವ ಸವಿದು ಮುಂದಿರ್ದ ಲಿಂಗಸಂಗದ ಅರ್ಪಿತ ದರುಶನವೆಂಬೊ ಜಂಗಮವ ನೋಡುತ್ತ ನೋಡುತ್ತ ನಿಬ್ಬೆರೆಗಾದರು ನೋಡಾ. ಆರನು ಮೀರಿ, ಮೂರನು ಮೆಟ್ಟಿ, ತಟ್ಟುಮುಟ್ಟುಗಳೆಂಬ ಭ್ರಮೆಗಳನೊಲ್ಲದೆ ಐವತ್ತೆರಡರೊಳಗಾಗಿ ಅರಿಯಲಾರದೆ ಮೀರಿಹೋದರು ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಆರು ಗುಣವೆಂಬೊ ಅರಿಕೆಯನೈದೆವೆಂಬ ಅರುಹಿರಿಯರು ನೀವು ಕೇಳಿರೋ. ಅರುವೆಂಬುದನೆ ಅರಿದು, ಮರಬೆಂಬುದನೆ ಮರದು, ಪರಶಿವಗುರುಮೂರ್ತಿಯೆಂದು ಗುರುವ ಕೊಂಡಾಡುತ್ತ ಆ ಗುರುಮೂರ್ತಿ ಗುರುದೀಕ್ಷವನೆ ಶಿರದಮೇಲಿಹ ಹಸ್ತವನು ಆ ತತ್‍ಕ್ಷಣದಲ್ಲಿ ಕಾರುಣ್ಯದಿಂದಲಿ ಪರಮಪ್ರಸಾದವ ಸಾರಾಯವ ಕೊಂಡದನು ಅರಿತು, ಮನದಲ್ಲಿ ಆಧಾರಚಕ್ರವಂ ಬಲಿದು ಇಡಾ ಪಿಂಗಳ ಸುಷುಮ್ನವೆಂಬ ಸಂದೇಹವನಳಿದು, ಏಕನಾಳವ ಕೂಡುತ್ತ ಮೂರುಪುರದ ಬಾಗಿಲಂಗಳ ಪೊಕ್ಕು ಪರಮಪ್ರಸಾದವ ಕೊಡುತಿರ್ದ ಘನಲಿಂಗವ ಕೊಡಬಲ್ಲರೆ ಅದೇ ಅರುವು ಹಿರಿಯತನ. ಇದನರಿಯದೆ ಅರುಹಿರಿಯರೆಂದು ತಿರುಗುವ ಬೂಟಕರಿಗೆ ನಾನೇನೆಂಬೆನಯ್ಯಾ ಗೊಹೇಶ್ವರಪ್ರಿಯ ನಿರಾಳಲಿಂಗಾ !
--------------
ಗುಹೇಶ್ವರಯ್ಯ
ಅಂಗಗರಡಿಯೊಳು ನಿಜಲಿಂಗದ ಸಾಧನವ ಬಲ್ಲಡೆ ಹಂಗಿನ ಮನುಜಂಗೆ ಅರಿವುಂಟೆ ? ಡಂಗುರದೊಳು ಸ್ವಯವಿಲ್ಲದೆ ಕೆಟ್ಟತ್ತು. ಡಿಂಗರಿಗನೆಂದಲ್ಲಿ ಮುಕ್ತಿ ಕಂಡಿತ್ತು ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಅರಿವಿನ ನಡೆ, ಅರಿವಿನ ನುಡಿ, ಭಕ್ತಿಯ ಮೂಲವನರಿತ ಶರಣರ ಚರಣದೊಳೆನ್ನನಿಟ್ಟು ಸಲಹಯ್ಯ, ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಆರು ಚಕ್ರದಲ್ಲಿ ಅರಿತೆನೆಂದು ನುಡಿವ ಅರಿವುಗೇಡಿಗಳು ನೀವು ಕೇಳಿರೋ. ಆಧಾರಚಕ್ರ ಪೃಥ್ವಿಗೆ ಸಂಬಂಧ ; ಅಲ್ಲಿಗೆ ಬ್ರಹ್ಮ ಅದ್ಥಿದೇವತೆ, ಆಚಾರಲಿಂಗವಿಡಿದು ಯೋಗಿಯಾಗಿ ಸುಳಿದ. ಸ್ವಾದ್ಥಿಷ್ಠಾನಚಕ್ರ ಅಪ್ಪುವಿಗೆ ಸಂಬಂಧ: ಅಲ್ಲಿಗೆ ವಿಷ್ಣು ಅದ್ಥಿದೇವತೆ, ಶ್ರೀಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ. ಮಣಿಪೂರಕ ಚಕ್ರ ಅಗ್ನಿಗೆ ಸಂಬಂಧ ; ಅಲ್ಲಿಗೆ ರುದ್ರನದ್ಥಿದೇವತೆ, ಜಂಗಮಲಿಂಗವ ಪಿಡಿದು ಶ್ರಾವಣಿಯಾಗಿ ಸುಳಿದ. ವಿಶುದ್ಧಿಚಕ್ರ ವಾಯುವಿಗೆ ಸಂಬಂಧ ; ಅಲ್ಲಿಗೆ ಸದಾಶಿವನದ್ಥಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ. ಆಜ್ಞಾಚಕ್ರಕ್ಕೆ ಪರತತ್ವದ ಸಂಬಂಧ ; ಅಲ್ಲಿಗೆ ಪರಶಿವನದ್ಥಿದೇವತೆ, ಮಹಾಲಿಂಗವಪಿಡಿದು ಪಶುಪತಿಯಾಗಿ ಸುಳಿದ. ಇಂತೀ ಆರು ದರುಶನಕ್ಕೆ ಬಂದರೆ ಅಂಗಳ ಪೊಗಿಸಿರಿ. ಆ ಲಿಂಗವು ನಿಮಗೆ ತಪ್ಪಿದವು, ಮುಂದಿರ್ದ ಗುರುಲಿಂಗಜಂಗಮದ ಭೇದವನರಿಯದೆ ಆರು ಸ್ಥಲದಲ್ಲಿ ತೃಪ್ತಿಯಾಯಿತ್ತೆಂಬವರ ಕಂಡು ನಾಚಿತ್ತು ಎನ್ನ ಮನವು ಗೊಹೇಶ್ವರಪ್ರಿಯ ನಿರಾಳಲಿಂಗಾ
--------------
ಗುಹೇಶ್ವರಯ್ಯ
ಅಕ್ಷರದ ಆದಿಮೂಲವನರಿಯಬಲ್ಲರೆ ಪ್ರಾಣಲಿಂಗದ ಅಕ್ಷರದ ಹುಟ್ಟಾವಳಿಯು ಸ್ಥೂಲದಲ್ಲಿಹುದು. ಅಕ್ಷರದ ನಿಲವು ಸೂಕ್ಷ್ಮದಲ್ಲಿಹುದು. ಮಾತಿಗೆ ಮೊದಲು ಶಬ್ದಮುಗ್ಧವಾಗಿರಲು ಕಾರಣದಲ್ಲಿಹುದು. ಇಂತೀ ತ್ರಿವಿಧಪರಿಯ ಭೇದಾಭೇದಂಗಳ ಸಂಬಂದ್ಥಿಸಿಕೊಂಡು ಪ್ರಾಣಲಿಂಗಸಾಹಿತ್ಯವಾದ ಕಾರಣ ಭಕ್ತರ ಶ್ರೀಚರಣಕ್ಕೆ ನಮೋ ನಮೋ ಎನುತಿರ್ದೆ ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಕವಿಗಳ ತರ್ಕದ ಪ್ರಸ್ತಾವನ ವಚನ: ಪಾದ ಪ್ರಾಸ ಗಣವ ಬಲ್ಲೆನೆಂಬ ಅಣ್ಣಗಳು ನೀವು ಕೇಳಿರೊ. ತನ್ನಂಗಪಥದಲ್ಲಿದ್ದ ಪೃಥ್ವಿಯ ಮೂಲವನಳಿದು ಆ ನಾಗಲೋಕದ ಸರ್ಪನ ಎಬ್ಬಿಸಿ, ಆಕಾಶಮೂಲಕ್ಕೆ ನಡೆಸಬಲ್ಲಡೆ ಆತ ಪಾದಕಾರುಣ್ಯದ ಬಲ್ಲನೆಂದೆನಿಸಬಹುದು. ಅಷ್ಟದಳಕಮಲದ ಹುಗುಲ ಹಿಡಿದು ಮೆಟ್ಟಿ ಒಂಬತ್ತು ಪರಿಯಲ್ಲಿ ಸುತ್ತಿ ಆಡುವ ಅಗ್ರವ ನಿಲ್ಲಿಸಿ, ನಾಲ್ಕು ಮುಖದ ಬಿರಡದಲ್ಲಿ ಸಿಂಹಾಸನವನಿಕ್ಕಿದ ಮಹಾರಾಯನ ನಿರೀಕ್ಷಣವ ಮಾಡಬಲ್ಲರೆ ಆತ ಪ್ರಾಸವ ಬಲ್ಲವನೆಂದೆನಿಸಬಹುದು. ಹತ್ತುಮುಖದಲ್ಲಿ ಹರಿದಾಡುವ ವಾಯುವ ಏಕವ ಮಾಡಬಲ್ಲರೆ, ಮೂರು ಪವನವೊಂದರೊಳು ಕೂಡಿ ಪಂಚದ್ವಾರದಲ್ಲಿ ತುಂಬಿ ಮೇಲ್ಗಿರಿಗೆ ನಡಸಿ ಪರಮಾಮೃತದ ಹೊಳೆಯ ನಿಲ್ಲಿಸಬಲ್ಲರೆ ಆತ ಗಣವ ಬಲ್ಲವನೆಂದೆನಿಸಬಹುದು. ಇದನರಿಯದೆ ಛಂದ ನಿಘಂಟು ಅಸಿ ವ್ಯಾಕರಣಂಗಳು ಪಂಚಮಹಾಕಾವ್ಯಂಗಳುಯೆಂಬ ಮಡಕಿಯ ಅಟ್ಟುಂಡ ಹಂಚಮಾಡಿ ಬಿಟ್ಟುಹೋಹುದನರಿಯದೆ ಆ ಹಂಚನೆ ಹಿಡಿದು ಕವಿಯೆಂದು ತಿರಿದುಂಬ ದೀಕ್ಷವಿಲ್ಲದ ತಿರುಕರಿಗೆ ಕವಿಗಳೆನುವವರ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಕವಿಗಳುಯೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ. ಪ್ರಥಮ ಶಿವಾಲ್ಯದಲ್ಲಿ ಮೂಲಸ್ಥಾನದ ಲಿಂಗವನರಿದು ಅಲ್ಲಿದ್ದ ವಿಮಳವಾದ ಗಂಟ ಕೊಯಿದು, ಸಕಲ ಪರಿಮಳ ದ್ರವ್ಯಂಗಳ ಆ ಮೂಲಲಿಂಗಕ್ಕೆ ಕೊಡಬಲ್ಲಡೆ ಕ ಎಂಬ ಅಕ್ಷರದ ಭೇದವ ಬಲ್ಲನೆಂದೆನ್ನಬಹುದು. ಪರಬ್ರಹ್ಮನ ಆಶ್ರೈಸಬಲ್ಲಡೆ ವಿ ಎಂಬ ಅಕ್ಷರದ ಭೇದವ ಬಲ್ಲಡೆ ನಿಮ್ಮ ಹೆಸರ ನೀವೇ ಇಟ್ಟುಕೊಂಡು, ಕವಿಯೆಂಬ ಎರಡಕ್ಷರದ ಬೇದವನರಿಯದೆ ವಾದ ತರ್ಕವ ಮಾಡಿ ಗುರುಗುಡುವುದು ಕಾರಣವಲ್ಲ. ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕವಿಯೆಂಬ ಎರಡು ಐವತ್ತೆರಡು ಅಕ್ಷರದ ಭೇದವ ಅಷ್ಟದಳಕಮಲವ ವಿಚಾರಿಸುವುದು, ಅಲ್ಲದ ಕಾರಣ (?) ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಇಷ್ಟಲಿಂಗವೆಂಬ ಭ್ರಾಂತಿಗೇಡಿಗಳು ನೀವು ಕೇಳಿರೋ ಇಷ್ಟಲಿಂಗದ ಪೂಜೆಯ ನಿಷೆ*ಯಲ್ಲಿ ಮಾಡಿದರೆ ಅಷ್ಟೈಶ್ವರ್ಯ ದೊರಕೊಂಬುದೇನಯ್ಯ? ಪ್ರಾಣಲಿಂಗದ ನೆಲೆಯನರಿತು ಪೂಜೆಯಂ ಮಾಡಲು ಸಕಲ ಭವಬಂಧನಗಳು ಬಿಟ್ಟು ಚತುರ್ವಿಧ ಫಲಂಗಳು ಆ ಶರಣನ ಬಟ್ಟೆಯ ಸೋಂಕಲೊಲ್ಲವು. ಇದು ಕಾರಣ ಅಂಗಸಂಗವಾಗಿರ್ದ ಪ್ರಾಣ ಬಿಟ್ಟುಹೋಗುವಾಗ ಅಂಗವೊಂದೆಸೆಯಾಗಿ ಪ್ರಾಣವೊಂದೆಸೆಯಾಗಿ ಬಿದ್ದು ಹೋಗುವುದ ಕಂಡು ನಾಚಿತ್ತು ಎನ್ನ ಮನವು. ಇದು ಕಾರಣ ಪ್ರಾಣಲಿಂಗದ ಸಂಬಂಧದ ಭೇದವ ನಮ್ಮ ಪೂವಾಚಾರ್ಯ ಸಂಗನಬಸವಣ್ಣನ ಸಂತತಿಗಳಿಗಲ್ಲದೆ ಉಳಿದಂಥ ತಾಮಸದೇಹಿಗಳಿಗೆ ಅರಿಯಬಾರದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಪೃಥ್ವಿಯ ಮಧ್ಯದಲ್ಲೊಂದು ಬೀಜವಲ್ಲದ ವೃಕ್ಷ ಹುಟ್ಟಿತ್ತು. ಆ ವೃಕ್ಷಕ್ಕೆ ಒಂದು ಪೂರ್ವಭಾಗವೆಂಬ ಗೊನೆ ಹುಟ್ಟಿತ್ತು. ಆ ಕಮಲದ ಎಸಳು ಮತ್ರ್ಯಮುಖ : ಅದರ ಪೂರ್ವಮುಖವೇ ಆಕಾಶ. ಆ ಕಮಲಕ್ಕೆ ನವಪರಿ ಕಾಯಿ ನಾಲ್ಕರಲಿ ರಸತುಂಬಿ ಹಣ್ಣಾಯಿತ್ತು. ನಾಲ್ಕು ಆರು ಹತ್ತು ಹನ್ನೆರಡು ಹದಿನಾರು ಇಂತೀ ನಾಲ್ವತ್ತೆಂಟು ಮಂದಿ ಆ ಹಣ್ಣಿನ ಗ್ರಾಹಕರು. ಆ ಹಣ್ಣ ಮಾರುವವರು ಸಾವಿರಾಳಿನ ನಾಯಕರು. ಆ ಹಣ್ಣಿನ ಗ್ರಾಹಕರು, ಆ ಹಣ್ಣ ಮೂರು ರತ್ನಕ್ಕೆ ಬೆಲೆಯನಿಟ್ಟರು. ಮೂರು ರತ್ನಕ್ಕೆ ಕೊಡಬಹುದೆ? ಎಂದು ಆ ಸಾವಿರಾಳಿನ ನಾಯಕರು ಹಿಡಿದು ಶಿಕ್ಷೆಯ ಮಾಡಿದರು. ಮೂರುಪುರದ ಅರಸು ಅಶ್ವಾರೋಹಿ ಸಾವಿರಾಳಿನ ನಾಯಕರು ಆ ಹಣ್ಣ ಕೊಂಡು ಮೇಲುಗಿರಿಯ ಕೈಲಾಸದ ಅರಸನ ಸಂದರುಶನವ ಮಾಡಿದರು. ಆ ಗಿರಿರಾಜನು ಆ ಹಣ್ಣ ಕಂಡು ಬೆರಗಾದ. ಆ ಹಣ್ಣಿನ ಸವಿಯ ಬಲ್ಲವರ ತೋರಿಸಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಇನ್ನಷ್ಟು ... -->