ಅಥವಾ

ಒಟ್ಟು 120 ಕಡೆಗಳಲ್ಲಿ , 2 ವಚನಕಾರರು , 120 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ_[ಎಂದ]À ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ? ಬಂದ ಜಂಗಮದ ನಿಲವನರಿಯದೆ, ಹಿಂದನೆಣಿಸಿ ಹಲವ ಹಂಬಲಿಸುವರೆ ? ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಪರಿಣಾಮವಹುದು ನೋಡಾ. ಗುಹೇಶ್ವರನೆಂಬ ಲಿಂಗದ ನಿಲವನರಿಯದೆ ಮರುಳಾದೆಯಲ್ಲಾ ಸಂಗನಬಸವಣ್ಣಾ
--------------
ಅಲ್ಲಮಪ್ರಭುದೇವರು
ಮೊಲೆಯಿಲ್ಲದಾವಿಂಗೆ ತಲೆ[ಯೆ] ಮೊಲೆ ! ಮನದಲ್ಲಿ ಉಣ್ಣು ಕಂಡಾ, ಮನದಲ್ಲಿ ಉಣ್ಣು ಕಂಡಾ ! ತಾ ಸತ್ತು, ಹಾಲ ಕುಡಿಯ ಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ !
--------------
ಅಲ್ಲಮಪ್ರಭುದೇವರು
ನಿಮ್ಮ ನೆನೆವುತ್ತಿದ್ದಿತ್ತು_ನೆನೆವ ಮುಖವಾವುದೆಂದರಿಯದೆ, ಪೂಜೆಯ ಪೂಜಿಸುತ್ತಿದ್ದಿತ್ತು_ಪೂಜೆಯ ಮುಖವಾವುದೆಂದರಿಯದೆ; ಆಡಿ ಹಾಡಿ ಬೇಡುತ್ತಿದ್ದಿತ್ತು_ಬೇಡುವ ಮುಖವಾವುದೆಂದರಿಯದೆ; ಕಾಯದಲ್ಲಿ ಇಲ್ಲ, ಜೀವದಲ್ಲಿಇಲ್ಲ, ಭಾವದಲ್ಲಿ ಇಲ್ಲ; ಭರಿತವು ಅದು ತಾನಪ್ಪುದು. ತಾನಲ್ಲದುದೇನ ಹೇಳುವೆ ಕೌತುಕವ? ಗುಹೇಶ್ವರನೆಂಬ ಹೆಸರೊಳಗಿದ್ದುದ ಬೆಸಗೊಂಬವರಿಲ್ಲ ನಿರಾಳದ ಘನವ !
--------------
ಅಲ್ಲಮಪ್ರಭುದೇವರು
ಶಬ್ದಿಯಾದಾತ ತರುಗಳ ಹೋತ, ನಿಶ್ಶಬ್ದಿಯಾದಾತ ಪಾಷಾಣವ ಹೋತ. ಕೋಪಿಯಾದಾತ ಅಗ್ನಿಯ ಹೋತ, ಶಾಂತನಾದಾತ ಜಲವ ಹೋತ. ಬಲ್ಲೆನೆಂಬಾತ ಇಲ್ಲವೆಯ ಹೋತ, ಅರಿಯೆನೆಂಬಾತ ಪಶುವ ಹೋತ. ಇದು ಕಾರಣ_ಅರಿಯೆನೆನ್ನದೆ ಬಲ್ಲೆನೆನ್ನದೆ ಅರುಹಿನ ಕುರುಹನಳಿದುಳಿದು ಗುಹೇಶ್ವರನೆಂಬ ಲಿಂಗವ ಹೋತವರನಾರನೂ ಕಾಣೆ.
--------------
ಅಲ್ಲಮಪ್ರಭುದೇವರು
ಭವಿಬೀಜವೃಕ್ಷದ ಫಲದೊಳಗೆ, ಭಕ್ತಿಬೀಜವೃಕ್ಷ ಪಲ್ಲವಿಸಿತ್ತು ! ಭಕ್ತಿಬೀಜವೃಕ್ಷದ ಫಲದೊಳಗೆ, ಶರಣಬೀಜವೃಕ್ಷ ಪಲ್ಲವಿಸಿತ್ತು ! ಶರಣಬೀಜವೃಕ್ಷದ ಫಲದೊಳಗೆ; ಕುಲನಾಶಕನಾದ ಶರಣ ಒಂದೆ ಬಸುರಲ್ಲಿ ಬಂದ_ ಬಂದು, ಬಳಗಕ್ಕೆ ತನ್ನ ಕುಲಕ್ಕೆ ತಾನೆ ಮಾರಿಯಾದ ಶರಣ. ಭವಿಭಕ್ತ ಭವಿಬೀಜವೃಕ್ಷದ ತಂಪು ನೆಳಲ ಬಿಟ್ಟು, ಕುಳ್ಳಿರ್ದಲ್ಲಿಯೆ; ಬಳಿ ಬಳಿಯೆ ಬಯಲಾದ ಶರಣ ! [ನಾದ]ಬಿಂದು ಬೀಜವಟ್ಟ ಹಾಳಾಗಿ ಹಾರಿಹೋದಲ್ಲಿ; ಇನ್ನೇನ ಹೇಳಲುಂಟು ? ಗುಹೇಶ್ವರನೆಂಬ ಲಿಂಗವನರಿದು ಭವಿಗೆ ಭವಿಯಾದಾತಂಗೆ ಇನ್ನೇನು ಪಥ (ಪದ?)ವುಂಟಯ್ಯಾ ?
--------------
ಅಲ್ಲಮಪ್ರಭುದೇವರು
ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು.
--------------
ಅಲ್ಲಮಪ್ರಭುದೇವರು
ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ. ಮಾಡಿದಡೇನಹುದೊ? ಮಾಡದಿರ್ದಡೇನಹುದೊ? ಗುಹೇಶ್ವರನೆಂಬ ಅರುಹಿನ ಕುರುಹು ಮಂದಿಲ್ಲ, ಇಲ್ಲ. ಮಾಡಿದಡೇನಹುದೊ?
--------------
ಅಲ್ಲಮಪ್ರಭುದೇವರು
ಎಂಬತ್ತು (ಎರಡೆಂಬತ್ತು?) ಕೋಟಿ ವಚನವ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು, ಮನ ಘನವನರಿಯದು, ಘನ ಮನವನರಿಯದು. ಗುಹೇಶ್ವರನೆಂಬ ಲಿಂಗವನರಿದ ಬಳಿಕ ಗೀತವೆಲ್ಲ ಒಂದು ಮಾತಿನೊಳಗು !
--------------
ಅಲ್ಲಮಪ್ರಭುದೇವರು
ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ. ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ. ತನಗೆ ಗುರುವಿಲ್ಲ, ಗುರುವಿಗೆ ತಾನಿಲ್ಲ ಗುರುವಿಗೆ ಶಿಷ್ಯನು ಹೊಡವಡುವ ಕಾರಣ ಮುನ್ನಿಲ್ಲ. ಬಯಲ ಬಿತ್ತಲಿಲ್ಲ, ಬೆಳೆಯಲಿಲ್ಲ, ಒಕ್ಕಲಿಲ್ಲ, ತೂರಲಿಲ್ಲ, ಗುಹೇಶ್ವರನೆಂಬ ಲಿಂಗಕ್ಕೆ ಕುರುಹು ಮುನ್ನಿಲ್ಲ.
--------------
ಅಲ್ಲಮಪ್ರಭುದೇವರು
ಕಾಯದ ಒಲವರದಲ್ಲಿ ನಿಲುವ ಚಿತ್ತ, ಕಂಗಳ ಗೊತ್ತಿನಲ್ಲಿ ಕಟ್ಟುವಡೆದು ದೃಷ್ಟದ ಇಷ್ಟದಲ್ಲಿ ಕಂಗಳ ಸೂತಕ ಹಿಂಗಿ ಮನದ ಸೂತಕ ಹರಿದು ಗುಹೇಶ್ವರನೆಂಬ ಭಾವದ ಭ್ರಮೆ ಅಡಗಬೇಕು.
--------------
ಅಲ್ಲಮಪ್ರಭುದೇವರು
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ ! ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ! ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ !
--------------
ಅಲ್ಲಮಪ್ರಭುದೇವರು
ಕಾಯವುಳ್ಳನ್ನಕ್ಕ ಶರಣರ ಸಂಗದಿಂದ ಅರಿಯಬೇಕು. ಜೀವವುಳ್ಳನ್ನಕ್ಕ ಅರಿವಿನ ಮುಖದಿಂದ ಹರಿಯಬೇಕು. ಅರಿವನ್ನಬರ ಗುಹೇಶ್ವರನೆಂಬ ಕುರುಹಾಯಿತ್ತು.
--------------
ಅಲ್ಲಮಪ್ರಭುದೇವರು
ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ. ಮತ್ತೆ ದೇವರ ಪೂಜಿಸುವರಾರೂ ಇಲ್ಲ. ಉತ್ತರಾಪಥದ ದಶನಾಡಿಗಳಿಗೆ, ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು ? ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ ! ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು
--------------
ಅಲ್ಲಮಪ್ರಭುದೇವರು
ಸುತ್ತಿಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ. ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ. ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ. ನಿಚ್ಚಕ್ಕಿನ ಗಮನವಂದಂದಿಗೆ; ಅತ್ತಲಿತ್ತ ಹರಿವ ಮನವ ಚಿತ್ರದಲಿ ನಿಲಿಸಬಲ್ಲಡೆ ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು.
--------------
ಅಲ್ಲಮಪ್ರಭುದೇವರು
ಭಾನು ಶಶಿ ಕಳೆಗುಂದಿ, ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ_ ವಾಯುವನರಿಯವೊ! ಆದಿಪ್ರಣಮವನರಿದಹೆನೆಂಬವಂಗೆ, ಬಯಲು ಆಕಾಶದೊಳಗೊಂದು ರಸದ ಬಾವಿ! ಮುನ್ನಾದವರೆಲ್ಲಿಯವರೆಂದೆನಬೇಡ ಗುಹೇಶ್ವರನೆಂಬ ಲಿಂಗವು ತಾನೆ ಕಂಡೆಲವೊ!
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->