ಅಥವಾ

ಒಟ್ಟು 97 ಕಡೆಗಳಲ್ಲಿ , 2 ವಚನಕಾರರು , 97 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಗೆ ಕಾಬಡೆ ರೂಪಲ್ಲ, ಕೈಗೆ ಸಿಲುಕವಡೆ ದೇಹಿಯಲ್ಲ. ನಡೆವಡೆ ಗಮನಿಯಲ್ಲ, ನುಡಿವಡೆ ವಾಚಾಳನಲ್ಲ. ನಿಂದಿಸಿದಡೆ ಹಗೆಯಲ್ಲ, ಹೊಗಳಿದವರಿಗೆ ಕೆಳೆಯಲ್ಲ. ಗುಹೇಶ್ವರನ ನಿಲುವು ಮಾತಿನ ಮಾಲೆಗೆ ಸಿಲುಕುವುದೆ ? ಸಿದ್ಧರಾಮಯ್ಯ ನೀನು ಮರುಳಾದೆಯಲ್ಲಾ
--------------
ಅಲ್ಲಮಪ್ರಭುದೇವರು
ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು. ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ_ ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು
--------------
ಅಲ್ಲಮಪ್ರಭುದೇವರು
ನೀರಿಲ್ಲದ ಒರಳಿಂಗೆ ನೆಳಲಿಲ್ಲದ ಒನಕೆ ! ರೂಹಿಲ್ಲದ ನಾರಿಯರು ಬೀಜವಿಲ್ಲದಕ್ಕಿಯ ತಳಿಸುತ್ತಲಿ ಬಂಜೆಯ ಮಗನ ಜೋಗುಳವಾಡುತ್ತೈದಾರೆ, ಉರಿಯ ಚಪ್ಪರವನಿಕ್ಕಿ_ ಗುಹೇಶ್ವರನ ಕಂದನು ಲೀಲೆಯಾಡಿದನು !
--------------
ಅಲ್ಲಮಪ್ರಭುದೇವರು
ಉಲಿವ ಉಯ್ಯಲೆಯ ಹರಿದು ಬಂದೇರಲು, ತಾಗದೆ ತೂಗುವುದು, ಭವಸಾಗರ ಮರಳಿ ಬಾರದಂತೆ ! ಹಂಸೆಯ ಮೇಲೆ ತುಂಬಿ ಕುಳ್ಳಿರ್ದು ಸ್ವರ ಗೆಯ್ಯುವ ಘೋಷವಿದೇನೊ ? ಆತನಿರ್ದ ಸರ ಹರಿಯದೆ ಇದ್ದಿತ್ತು. ದೇಹಿಗಳೆಲ್ಲ ಅರಿವರೆ, ಗುಹೇಶ್ವರನ ಆಹಾರಮುಖವ ?
--------------
ಅಲ್ಲಮಪ್ರಭುದೇವರು
ಕೆಳಗೇಳು ಭುವನಂಗಳಿಲ್ಲದಂದು, ಮೇಲೇಳು ಭುವನಂಗಳಿಲ್ಲದಂದು,_ ಅಂದು ಆದ ಗುರು, ಅಂದು ಆದ ಲಿಂಗ, ಅಂದು ಆದ ಜಂಗಮ, ಅಂದು ಆದ ಪ್ರಸಾದ, ಅಂದು ಆದ ಪಾದೋದಕ. ಇಂದಿನದಾವುದೂ ಹೊಸತಿಲ್ಲಯ್ಯಾ. ಶಶಿಧರಂಗೆ ವೃಷಭನಾಗಿದ್ದಂದು ಗುಹೇಶ್ವರನ ಶರಣ ಸಂಗನಬಸವಣ್ಣನಂದೆ ಸಾಹಿತ್ಯನು.
--------------
ಅಲ್ಲಮಪ್ರಭುದೇವರು
ಹರನ ಕರುಣವ ಪಡೆದ ಸಾಮರ್ಥ್ಯವ ಬಲುಹಿಂದ, ಶಿವಶರಣರೊಡನೆ ಸೆಣಸಿದಡೆ ಲೇಸುಂಟೆ ? ಅಘಟಿತಘಟತರಿಗೆ ಅಘಟಿತರುಂಟು ನೋಡಾ ! ನೊಸಲಲೊಬ್ಬ ಕಣ್ಣ ತೆಗೆದಡೆ, ಅಂಗಾಲಲೊಬ್ಬ ಕಣ್ಣ ತೆಗೆವನು. ಗುಹೇಶ್ವರನ ಶರಣರು ಉಪಮಾತೀತರು.
--------------
ಅಲ್ಲಮಪ್ರಭುದೇವರು
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ, ಶಾರದೆಯೆಂಬವಳ ಬಾಯ ಕಟ್ಟಿ, ಕಾರ ಮೇಘದ ಬೆಳಸ ನೀರ ಹರಿ ನುಂಗಲು ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು. ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು, ನೀರ ಹೊಳೆಯವರೆಲ್ಲರ ಕೊಡನೊಡೆದವು. ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ, ಸೋರುಮುಡಿಯಾಕೆ ಗೊರವನ ನೆರೆದಳು. ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು, ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ, ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು! ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ, ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು, ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ, ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!
--------------
ಅಲ್ಲಮಪ್ರಭುದೇವರು
ಗಗನಪವನದ ಮೇಲೆ ಉದಯಮುಖದನುಭಾವ, ಸದಮದದ ಗಜವ ನಿಲಿಸುವ ಮಾವತಿಗ ಬಂದ. ಅಷ್ಟದಳಕಮಲದೊಳು ಸೃಷ್ಟಿಯಂಕುರ ಭಜನೆ; ಮೆಟ್ಟಿ ನಿಂದಾತ ಪರಮಯೋಗಿಯಾಗದೆ ಮಾಣ ! ಬಯಲ ಬಣ್ಣವ ತುಂಬಿ, ನೆಳಲ ಶೃಂಗಾರವ ಮಾಡಿದ ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು.
--------------
ಅಲ್ಲಮಪ್ರಭುದೇವರು
ಪರಿಪರಿಯ ಅವಲೋಹ[ವ]ಪರುಷ ಮುಟ್ಟಲು ಹೊನ್ನು ಪರಿವರ್ತನಕ್ಕೆ ಬಂದು ಸಲುತ್ತಿರ್ದುವು ನೋಡಾ ಪರುಷವ ಮಾಡುವ ಪುರುಷರೆಲ್ಲರು ಪರುಷ ಮುಟ್ಟಿದ ಹೊನ್ನಿನಂತಿದ್ದರು ನೋಡಾ. ಪರುಷ ತಾನಾಗಲು, ಹರಿಬ್ರಹ್ಮರಿಗಳವಲ್ಲ. ಸುರರು ಕಿನ್ನರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದ್ದರು. ಪರುಷದಂತಿದ್ದರು ನಮ್ಮ ಗುಹೇಶ್ವರನ ಶರಣರು.
--------------
ಅಲ್ಲಮಪ್ರಭುದೇವರು
ಪಂಚವರ್ಣದಬಿಂದು ಪ್ರಪಂಚವನಳಿದುಳಿದಿರಲು, ಸಂಚರಿಸುವಡೆ ಆವೆಡೆಯೂ ಇಲ್ಲ. ನಿಂದ ಚಿತ್ತಿನ ಪ್ರಭೆ ಅಂಗವನು ನೆರೆ ನುಂಗೆ, ಹಿಂದು ಮುಂದು ಎಡಬಲನೆಂಬುದಿಲ್ಲ ! ಅಡಿಯಾಕಾಶವೆಂಬುದಿಲ್ಲ ಕೆಳಗೆ ನಿಲಲು, ಆಧಾರ ಮೊದಲಿಂಗಿಲ್ಲ ಕಡೆಗೆ ಸಾರುವೆನೆನಲು ಊಧ್ರ್ವವಿಲ್ಲ. ನಡುವೆ ನಾನಿದ್ದಿಹೆನೆಂದಡೆ, ತನ್ನೊಡಲೊಳಗೆ ಒಡೆದು ಮೂಡಿತ್ತು ತನ್ನಂತೆ ಬಯಲು ! ಈ ಬೆಡಗು ಬಿನ್ನಾಣವ ಬಡವರರಿವರೆ ? ಇದನರಿದು ನುಡಿದು ತೋರಿದನು ಗುಹೇಶ್ವರನ ಶರಣ ಚನ್ನಬಸವಣ್ಣನು.
--------------
ಅಲ್ಲಮಪ್ರಭುದೇವರು
ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು, ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ. ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು. ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ. ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ. ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ, ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು, ಎನಗಾಯಿತ್ತು ನೋಡಾ ಬಸವಣ್ಣಾ ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ನಿನ್ನ ಪೂರ್ವಾಪರಸಂಗವ ಮಾಡಬಂದಡೆ ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು ದಿಟವಾಯಿತ್ತು ನೋಡಾ ಬಸವಣ್ಣಾ. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ತಾಯಿಯಿಲ್ಲದ ಶಿಶುವಿಂಗೆ, ಶಿಶುವಿಲ್ಲದ ತಾಯಿ ಮೊಲೆಯನೂಡಿದಳು. ಮೊಲೆವಾಲನುಂಡ ಶಿಶು ತಾಯ ತಕ್ಕೈಸಿದಡೆ ತಾಯಿ ಆ ಶಿಶುವಿಂಗೆ ಸತಿಯಾದಳಲ್ಲಾ ! ಸತಿಯ ಸಂಗದ ಸುಖವ ಪತಿಯಿಲ್ಲ (ಯಿಂ?)ದರಿದಲ್ಲಿ ಸತಿ ಪತಿ ಎಂಬೆರಡೂ ಅಳಿಯಿತ್ತು ನೋಡಾ ! ಈ ನಿಜದ ನಿರ್ಣಯವ ಎನಗೆ ತೋರಿದ ಗುಹೇಶ್ವರನ ಶರಣ ಮಡಿವಳ ಮಾಚಿತಂದೆಗಳ ಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಕಾಮನ ಕಣ್ಣ ಮುಳ್ಳ ಕಳೆದು ಭೂಮಿಯ ತೈಲದ ಸೀಮೆಯ ಕೆಡಿಸಿ ಹೋಮವನುರುಹಿ ದಕ್ಷನ ತಲೆಯನರಿದು ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ ? ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು ! ಗುಹೇಶ್ವರನ ಕರುಣಪ್ರಸಾದಿ ಮರುಳಶಂಕರದೇವರೆಂತಪ್ಪನೆಂಬುದ ತಿಳಿದು ನೋಡಾ ಸಂಗನಬಸವಣ.
--------------
ಅಲ್ಲಮಪ್ರಭುದೇವರು
ಕರಗಿಸಿ ನೋಡಿರೆ ಅಣ್ಣಾ ಕರಿಯ ಘಟ್ಟಿಯನು. ಆ ಕರಿಯ ಘಟ್ಟಿಯೊಳಗೊಂದು ರತ್ನವಿಪ್ಪುದು. ಆ ರತ್ನದ ಪರೀಕ್ಷೆಯ ಬಲ್ಲೆವೆಂಬವರೆಲ್ಲರ ಕಣ್ಣುಗೆಡಿಸಿತ್ತು ನೋಡಾ ! ಅರುಹಿರಿಯರೆಲ್ಲರೂ ಮರುಳಾಗಿ ಹೋದರು. ಕರಿಯ ಘಟ್ಟಿಯ ಬಿಳಿದು ಮಾಡಿ ಮುಖದ ಮುದ್ರೆಯನೊಡೆಯಬಲ್ಲವರಿಗಲ್ಲದೆ ಗುಹೇಶ್ವರನ ನಿಲವನರಿಯಬಾರದು ನೋಡಿರಣ್ಣಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->