ಅಥವಾ

ಒಟ್ಟು 116 ಕಡೆಗಳಲ್ಲಿ , 2 ವಚನಕಾರರು , 115 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದ ಬಟ್ಟೆಯ ನಿಂದು ನೋಡಲೊಲ್ಲೆ ಕಂದಾ, ಅದೇನು ಸೋಜಿಗವೊ ? ಬಿಂದು ಛಂದವಲ್ಲ ಬಂದ ಪರಿಯನು ಗುಹೇಶ್ವರ ಬಲ್ಲ ಕಂದಾ.
--------------
ಅಲ್ಲಮಪ್ರಭುದೇವರು
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ. ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ. ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
--------------
ಅಲ್ಲಮಪ್ರಭುದೇವರು
ನಿಮ್ಮ ಲೀಲೆ, ನಿಮ್ಮ ವಿನೋದ, ನಿಮ್ಮ ಹರೆ, ನಿಮ್ಮ ಕೊಳಲು, ಆನಿದಕ್ಕೆ ಬೇಕೆನ್ನೆ ಬೇಡೆನ್ನೆ. ಮೇಘವಹ್ನಿ ಧರೆಗೆರಗುತ್ತ ಭೂಲೋಕವ ಬೆಸಗೊಂಡಿತ್ತೆ ? ಉದರಾಗ್ನಿ ಧರೆಗೆರಗುತ್ತ ಭೂತಂಗಳ ಬೆಸಗೊಂಡಿತ್ತೆ ? ಗುಹೇಶ್ವರ ಅಲ್ಲಮನ ನಿರುಪಮ ಮಹಿಮೆ ಎಂತಿದ್ದಿತ್ತು ಆ ಹಾಂಗೆ ನೀನು ಮಾಡುವುದಲ್ಲದೆ ನಾನಿದಕ್ಕೆ ಬೇಕೆನ್ನೆನು ಬೇಡೆನ್ನೆನು
--------------
ಅಲ್ಲಮಪ್ರಭುದೇವರು
ಕರು(ರ?)ಣ ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕೈಯ ನೀಡಿದಡೆ ಆ ಪುಷ್ಪ ಕರಣದೊಳಗಡಗಿತ್ತಯ್ಯ. ಷೋಡಶ ಕಳೆ ಹದಿನಾರರೆಸಳು ವಿಕಸಿತವಾಯ್ತು. ಪುರುಷ ಪುಷ್ಪದ ಮರನು, ಅದು ಓಗರದ ಗೊಬ್ಬರವನುಣ್ಣದು, ಕಾಮದ ಕಣ್ಣಿರಿಯದು. ನಿದ್ರೆಯ ಕಪ್ಪೊತ್ತದು. ಅರುಣ ಚಂದ್ರಾದಿಗಳಿಬ್ಬರ ತೆರೆಯುಂಡು ಬೆಳೆಯದ ಪುಷ್ಪ ಲಿಂಗವೆ ಧರೆಯಾಗಿ ಬೆಳೆಯಿತ್ತು, ಆ ಪುಷ್ಪ ನೋಡಾ ! ಆ ಪುಷ್ಪವೆಂದಿಗೂ ನಿರ್ಮಾಲ್ಯವಲ್ಲೆಂದು ಗುಹೇಶ್ವರ, ನಿಮ್ಮ ಶರಣ ಪ್ರಾಣಲಿಂಗಕ್ಕೆ ಪ್ರಾಣಪೂಜೆಯ ಮಾಡಿದ.
--------------
ಅಲ್ಲಮಪ್ರಭುದೇವರು
ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವಾ ನೀ ಕೇಳಾ, ಮೀಯದೆ ಮೀನು ? ಮೀಯದೆ ಮೊಸಳೆ ? ತಾ ಮಿಂದು, ತನ್ನ ಮೀಯದನ್ನಕ್ಕರ ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರ ?
--------------
ಅಲ್ಲಮಪ್ರಭುದೇವರು
ವಚನದ ರಚನೆಯೆಂಬ ಮಾತಿನ ಬಣ್ಣದ ಪರಿಯಲ್ಲ ನೋಡಾ. ಹೊಲಳಿ ಕಂಡವರೆಲ್ಲರು ಮೂರ್ತಿಗೊಳಗಾದರು. ವೇದ ಶಾಸ್ತ್ರ ಮಾರ್ಗವೆಲ್ಲವೂ ಹೊಗಳಿ ಕಾಣವೆಂಬುದ, ಗುಹೇಶ್ವರ ಸಾಕ್ಷಿಯಾಗಿ ಮೂರುಲೋಕ ಬಲ್ಲುದು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು. ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ, ಪರಾಪರವೆಂದು ನುಡಿಯುತ್ತಿದ್ದಿತ್ತು. ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು. ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ? ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ' ವಾಕ್ಯಂಗಳೆಲ್ಲವೂ ಹುಸಿಯಾಗಿ ಹೋದವು. ಸಚ್ಚಿದಾನಂದವೆಂದುದಾಗಿ ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು. ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ, ಭವ ಹಿಂಗದು, ಪ್ರಕೃತಿ ಬಿಡದು. ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು, ಈ ವಾಯದ ಮಾತಿಂಗೆ ಆನು ಬೆರಗಾದೆನು. ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ ಬೇರಿಲ್ಲ, ಗುಹೇಶ್ವರ ತಾನೆ !
--------------
ಅಲ್ಲಮಪ್ರಭುದೇವರು
ಘುಟಿಕಾಸಿದ್ಧರ ಘುಟಿಕೆಯುರುಳಿತ್ತು ಯಂತ್ರಿಗಳ ಯಂತ್ರ ಎದ್ದು ಹೋಯಿತ್ತು ಮಂತ್ರಿಗಳ ಮಂತ್ರ ಮರೆತುಹೋಯಿತ್ತು ಔಷಧಿಗರ ಔಷಧವನಾರಡಿಗೊಂಡಿತ್ತು ಸರ್ವವಿದ್ಯಾಮುಖದ ಜ್ಯೋತಿ ನಂದಿತ್ತು ಈ ವಿಷಯದ ಲಹರಿಯಲ್ಲಿ ಮೂರುಲೋಕದವರೆಲ್ಲರು ಮೂರ್ಛಿತರಾದರು ಕಾಣಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು. ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು. ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ? ಭ್ರಾಂತು ಭ್ರಾಂತನೆ ನುಂಗಿ ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ
--------------
ಅಲ್ಲಮಪ್ರಭುದೇವರು
`ಹೆಸರು ಹಾಲಯ್ಯ ಎರೆದುಂಬುದಂಬಿಲ' ಎಂಬ ಲೋಕದ ಗಾದೆಯ ಮಾತು ದಿಟವಾಯಿತಲ್ಲಾ ! ಮಾತು ಕಲಿತು ಮಂಡೆಯ ಬೋಳಿಸಿಕೊಂಡು ಊರ ಮಾರಿಯ ಮರನೇರಿದಂತೆ ಮಾಯೆಯ ಕೊರಳಲ್ಲಿ ಕಟ್ಟಿಕೊಂಡು ಘಟಸರಣಿಯ ಪಶುಗಳು ಜಂಗಮವೆಂದು ಸುಳಿವ ನಾಚಿಕೆಯ ನೋಡಾ ಗುಹೇಶ್ವರ
--------------
ಅಲ್ಲಮಪ್ರಭುದೇವರು
ಆಗ ಹುಟ್ಟಿ ಬೇಗ ಸಾವ ಕಾಯಗೊಂಡ ಮಾನವಾ, ನೀ ದೇವರೆನಿಸಿಕೊಂಬುದೊಂದು ಆವುದಂತರ ಹೇಳಾ ? ದೇವರು ಸಾವಡೆ, ದೇವರಿಗೂ ಸಾವರಿಗೂ ಆವುದಂತರ ಹೇಳಾ ? ದೇವರಿಗೆ ದೇವಲೋಕ, ಮಾನವರಿಗೆ ಮತ್ರ್ಯಲೋಕ, ಗುಹೇಶ್ವರ ಅಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ.
--------------
ಅಲ್ಲಮಪ್ರಭುದೇವರು
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ, ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ, ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ ತೂರ್ಯದ ಕ್ರಿಯೆ ವೇಧಿಸಿ ನಿಂದವನ ನಿಲವು ಎಂತುಟೆಂದರೆ: ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ. ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು ದೃಷ್ಟವ ಕಂಡು ಬರ....ಕೇಳಲಾಗಿ, ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು. ಅದೇನು ಕಾರಣವೆಂದರೆ: ಮೊಟ್ಟ ಮೊದಲಲ್ಲಿ ಮೂರು ಭಿನ್ನವ ಕೇಳುವದು ಆ ಮೂರು ಭಿನ್ನಯೆಂತಾದವಯ್ಯಯೆಂದರೆ, ಅದರೊಳಗೈದು ಭಿನ್ನ ಉಂಟು. ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂಧಿಸೂದು. ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು. ನೋಡಿ ನಿಶ್ಚಯವಾದ ಮತ್ತೆ ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ, ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು, ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ ತಮ್ಮ ತ್ಯಾಗದ ಮೈಮರೆದಿರ್ದಾತನ ಎಚ್ಚರ ಮಾಡಿ, ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಎರಡೆಂಬತ್ತು ಕೋಟಿ ಗೀತವ ಹಾಡಿದರೇನಯ್ಯಾ ? ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ. ಮನವು ಘನವ ನೆಮ್ಮದು, ಘನವು ಮನವ ನೆಮ್ಮದು. ಹಾಡಿದರೇನು ಓದಿದರೇನು ? ಗುಹೇಶ್ವರ ನೀನೊಲಿದ ಕಾಲಕ್ಕೆ ಎರಡೆಂಬತ್ತು ಕೋಟಿ ಗೀತವೆಲ್ಲವೂ ನಿಮ್ಮದೊಂದು ಮಾತಿನೊಳಡಕವಯ್ಯಾ.
--------------
ಅಲ್ಲಮಪ್ರಭುದೇವರು
ಸೆರಗ ಹಿಡಿದನು ಸೀರೆಯ ಹರಿದನು. ಹುಟ್ಟ ಮುರಿದನು ಕಂದಲನೊಡೆದನು. ಭಂಡನವ್ವಾ ಲಜ್ಜೆಭಂಡನವ್ವಾ ಕಂಡಡೆ ನುಡಿಸದಿರು ಎಲೆ ಮಾಯಾದೇವಿ. ಆಯುಷ್ಯ ಹಿರಿದು ಭವಿಷ್ಯ ಕಿರಿದು, ಭವಗೆಟ್ಟು ಹೋದ ಗುಹೇಶ್ವರ ಅಲ್ಲಯ್ಯಂಗೆ ಮೂಗಿಲ್ಲ ತಂಗಿ
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->