ಅಥವಾ

ಒಟ್ಟು 38 ಕಡೆಗಳಲ್ಲಿ , 18 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರ ಗುರುಸ್ಥಲ, ಅನುಭಾವ ಲಿಂಗಸ್ಥಲ, ಅವಧಾನ ಅರ್ಪಿತಸ್ಥಲ, ಪರಿಣಾಮ ಪ್ರಸಾದಿಸ್ಥಲ, ಸಮಾಧಾನ ಶರಣಸ್ಥಲ, ಅರಿವು ನಿಃಪತಿಯಾಗಿ ತೆರಹಿಲ್ಲದ ನಿಜದಲ್ಲಿಲಿಂಗೈಕ್ಯವು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುಸ್ಥಲ ಮೂರಾಗಿ ನಡೆವ ಭೇದವನಾರೂ ಅರಿಯರಲ್ಲಾ. ಭವಿಗೆ ಲಿಂಗವ ಕೊಡುವಲ್ಲಿ, ಲಿಂಗವಂತಂಗೆ ಹರರೂಪ ಮಾಡುವಲ್ಲಿ, ಹರರೂಪಿಂಗೆ ಅರಿವ ಹೇಳುವಲ್ಲಿ, ತ್ರಿವಿಧ ಗುರುರೂಪಾಯಿತ್ತು. ಅಂಗಕ್ಕೆ ಲಿಂಗವ ಕೊಡುವಲ್ಲಿ, ಜಂಗಮಸ್ಥಲವ ಮಾಡುವಲ್ಲಿ, ಆತ್ಮಬೋಧನೆಯ ಹೇಳುವಲ್ಲಿ, ಲಿಂಗಕ್ಕೆ ಆಚಾರ, ಸಮಯಕ್ಕೆ ದರಿಸಿನ, ಆತ್ಮಕ್ಕೆ ಬೋಧೆ, ಇಂತಿವನಾಧರಿಸಿ ಮಾಡಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ ಕಟ್ಟಳೆಯ ವರುಷಕ್ಕೆ ತಪ್ಪದೆ ಅಂಗವಸ್ತ್ರವೆಂದು ಲಿಂಗವಸ್ತ್ರವೆಂದು ಕನಕ ಪರಿಮಳವೆಂದು ಅಂದಣ ಛತ್ರ ಚಾಮರ ಕರಿ ತುರಗಂಗಳೆಂದು ಇವು ಬಂದುದಿಲ್ಲ ಎಂದು ಸಂದಣಿ ಲಂದಣಗಾರರ ಕೈಯಲ್ಲಿಹೇಳಿಸಿ ಅವು ಬಾರದಿರೆ ತಾ ಸಂದ್ಥಿಸಿ ಸೂಚಿಸುವ ಲಿಂಗ ಲಿಂಗಮಾರಿಗೆ ಗುರುಸ್ಥಲ ಎಂದಿಗೂ ಇಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 39 ||
--------------
ದಾಸೋಹದ ಸಂಗಣ್ಣ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶ್ರೀಪತಿ ಶಿವಲೆಂಕ ಪಂಡಿತಾರಾಧ್ಯ ಏಕಾಂತದರಾಮ ಇಂತೀ ಪ್ರಥಮದ ಆಚಾರ್ಯರು ಇಟ್ಟ ಮತಂಗಳಿಂದ ಗುರುಸ್ಥಲ ಲಿಂಗಸ್ಥಲ ಉಭಯಮಾರ್ಗ ಆಚಾರ್ಯಸ್ಥಲ ಷಡುಸ್ಥಲ ಒಳಗಾದ ನಾನಾಸ್ಥಲಜ್ಞರುಗಳಲ್ಲಿ ವರಪ್ರಸಾದಿ ಚನ್ನಬಸವಣ್ಣ ಅವರ ಕಾರುಣ್ಯಪ್ರಸಾದ ಎನಗಾಯಿತ್ತು. ಸಂಚಿತ ಪ್ರಾರಬ್ಧ ಆಗಾಮಿಗಳಲ್ಲಿ ಉಪಚಕ್ಷು ನೀನಾಗಿ ಸಲಹಿದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಶ್ರೀ ಗುರುಸ್ವಾಮಿ ಶಿಷ್ಯನನನುಗ್ರಹಿಸುವ ಪರಿಯೆಂತೆಂದರೆ: ಆಚಾರಸ್ಥಲ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರ್ಪಿತಸ್ಥಲ ಪ್ರಸಾದಸ್ಥಲವೆಂದು ಕರುಣಿಸುವುದು ದೀಕ್ಷೆ. ಈ ಕ್ರಮವರಿದು ಮಹಾಪ್ರಸಾದವೆಂದು ಕೈಕೊಂಡ ಬಳಿಕ ಪರಪಾಕಂ ನ ಕರ್ತವ್ಯಂ ಲಿಂಗನೈವೇದ್ಯಕಿಲ್ಬಿಷಂ ಸ್ವಯಂಪಾಕಂ ಪವಿತ್ರಾಣಾಂ ಲಿಂಗನೈವೇದ್ಯಮುತ್ತಮಂ ಎಂಬುದಾಗಿ, ಒಡಲ ಕಕ್ಕುಲತೆಗೆ, ಭಕ್ತನ ದಾಕ್ಷಿಣ್ಯಕ್ಕೆ ಅನ್ಯದೈವ ಭವಿನೇಮಸ್ತರುಳ್ಳಲ್ಲಿ ಹೊಕ್ಕರೆ, ಕೂಡಲಚೆನ್ನಸಂಗಾ ಅವರಂದೆ ದೂರ.
--------------
ಚನ್ನಬಸವಣ್ಣ
ಸರ್ವ ನಿರ್ವಾಣದಲ್ಲಿ ಗುರುಸ್ಥಲ, ಲಯ ನಿರ್ವಾಣದಲ್ಲಿ ಲಿಂಗಸ್ಥಲ. ಇಷ್ಟ ಕಾಮ್ಯ ಮೋಕ್ಷಂಗಳು, ಉತ್ಪತ್ಯಸ್ಥಿತಿಲಯ ಆಣವ ಮಾಯಾ ಕಾರ್ಮಿಕ ನವಗುಣಂಗಳು ನಿಂದು, ಶಬ್ದಮುಗ್ಧವಾದುದು ಜಂಗಮಸ್ಥಲ. ಇಂತೀ ಕುಳ ವಿವರವ ವೇದಿಸಿ ಸರ್ವಜ್ಞಾನ ಪರಿಪೂರ್ಣವಾಗಿಪ್ಪ ತ್ರಿವಿಧಮೂರ್ತಿಯೆ ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಗುರುಸ್ಥಲ ಭಕ್ತಿವಂಶಿಕ, ಲಿಂಗಸ್ಥಲ ಮಾಹೇಶ್ವರ ವಂಶಿಕ, ಜಂಗಮಸ್ಥಲ ಪ್ರಸಾದಿಯ ವಂಶಿಕ. ಪ್ರಾಣಲಿಂಗಿ ಶರಣ ಐಕ್ಯನೆಂಬೀ ತ್ರಿವಿಧ ಅನಾದಿಯ ಸೋಂಕು. ಅವು ಪೂರ್ವಗತಿಗೆ ಬಂದು, ಉತ್ತರಗತಿಯನೆಯ್ದಿಸುವುದಕ್ಕೆ ಗೊತ್ತಾಗಿ, ನಿತ್ಯ ಅನಿತ್ಯವೆಂಬ ಉಭಯದ ಹೆಚ್ಚುಕುಂದ ತಿಳಿವುದಕ್ಕೆ ದೃಷ್ಟವ ಕೊಟ್ಟೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೂರ್ವವನಳಿದು ಪುನರ್ಜಾತನ ಮಾಡಿದೆವೆಂಬಿರಿ. ಪೂರ್ವವನಳಿದುದಕ್ಕೆ ಭವ ಹಿಂಗಬೇಕು. ಪುನರ್ಜಾತನಾದ ಮತ್ತೆ ಪುನರಪಿ ಇಲ್ಲದಿರಬೇಕು. ಹೀಂಗಲ್ಲದೆ ಗುರುಕರಜಾತನಾಗಬಾರದು. ತಾನರಿದು ಸರ್ವೇಂದ್ರಿಯವ ಮರೆದು, ಅಳಿವು ಉಳಿವು ಉಭಯವ ಪರಿದ ಸುಖನಿಶ್ಚಯ ಜ್ಯೋತಿರ್ಮಯ ಪ್ರಕಾಶಂಗೆ, ಪಿಂಡದ ಜನ್ಮವ ಕಳೆದುಳಿಯಬೇಕು. ಹೀಂಗಲ್ಲದೆ ಗುರುಸ್ಥಲ ಇಲ್ಲ. [ತ್ರಿವಿಧಕ್ಕೋಲು], ಅದಾರಿಗೆ ದೃಷ್ಟ ? ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎನ್ನಂತರಂಗದೊಳಗೆ ಅರಿವಾಗಿ, ಎನ್ನ ಬಹಿರಂಗದೊಳಗೆ ಆಚಾರವಾಗಿ ನೀನೆಡೆಗೊಂಡು, ಎನ್ನ ಮನದೊಳಗೆ ಘನ ನೆನಹಾಗಿ ಮೂರ್ತಿಗೊಂಡು, ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವೆಂಬ ಚತುರ್ವಿಧವನೂ ಎನಗೆ ಸ್ವಾಯತವ ಮಾಡಿ ತೋರಿ, ಪ್ರಾಣಲಿಂಗವೆಂಬ ಹಾದಿಯ ಸೆರಗ ತೋರಿಸಿ, ಎಲ್ಲಾ ಅಸಂಖ್ಯಾತರನೂ ಪಾವನವ ಮಾಡಿದಿರಾಗಿ- ಕೂಡಲಸಂಗಮದೇವಾ, ನಿಮ್ಮಿಂದ ಸಕಲ ಸನುಮತವ ನಾನರಿದೆನಲ್ಲದೆ, ಎನ್ನಿಂದ ನೀನಾದೆ ಎಂಬುದ ನಿಮ್ಮ ಪ್ರಮಥರು ಮೆಚ್ಚರು ನೋಡಯ್ಯಾ.
--------------
ಬಸವಣ್ಣ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ_ ಬಸವಣ್ಣನ ಕರಸ್ಥಲದೊಳಗೆ ಅಡಗಿತ್ತಲ್ಲ ! ಇನ್ನಾರಿಗೆ ಭಕ್ತಿಸ್ಥಲ, ಇನ್ನಾರಿಗೆ ಸಾರುವುದೀ ಲಿಂಗಸ್ಥಲ ? ಗುಹೇಶ್ವರಾ ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು.
--------------
ಅಲ್ಲಮಪ್ರಭುದೇವರು
ಒಬ್ಬರಸು ಮೋಹಿತನಾಗಿ, ಅಂದೇ ಲಗ್ನವಾಗಿ, ಅಂದೇ ರತಿಯಾಗಿ ಅಂದೇ ಪತಿ ಮೃತಿಯಾದ ದರಿದ್ರ ನಾರಿಯ ತೆರನಾಯಿತ್ತೆನ್ನ ಮನ. ಒಬ್ಬರಸು ಭೂಪ್ರದಕ್ಷಿಣೆ ಮಾಡಿ ಭೂದೇವಿಯ ಮಗನ ಜನನ ವಾರ್ತೆಯನಂದೇ ಕೇಳಿ, ಅಂದೇ ಮಗನ ಮೃತಿಯಾದರಸನ ಮನವಾದ ತೆರನಾಯಿತ್ತೆನ್ನ ಮನ. ತನ್ನ ಕೊಟ್ಟು ತಾ ಹೋದಡೆ ಗುರುಸ್ಥಲ ಹೋಯಿತ್ತು. ಲಿಂಗಸ್ಥಲ ಹೋಯಿತ್ತು, ಜಂಗಮಸ್ಥಲ ಮೊದಲೆ ಹೋಯಿತ್ತು. ಇನ್ನಾರ ಪಾದವಿಡಿವೆ? ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವ ಮಹಾಪ್ರಭುವೆ.
--------------
ಸಿದ್ಧರಾಮೇಶ್ವರ
ಆದಿ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ ಪಾದೋದಕಸ್ಥಲಂಗಳನಾರು ಬಲ್ಲರಯ್ಯಾ ? ಆದಿಯ ತೋರಿದ, ಅನಾದಿಯನರುಪಿದ, ನಾದ ಬಿಂದು ಕಳೆಗಳ ಭೇದಮಂ ಭೇದಿಸಿ ತೋರಿದ, ಹುಟ್ಟುವುದ ಮುಟ್ಟದೆ ತೋರಿದ ಹುಟ್ಟದೆ ಇದ್ದುದ ಮುಟ್ಟಿ ತೋರಿದ. ಎನ್ನ ಅಂತರಂಗವನನುಮಾಡಿ ನಿಜಲಿಂಗವ ನೆಲೆಗೊಳಿಸಿದ. ಗುಹೇಶ್ವರನ ಶರಣ ಸಂಗನಬಸವಣ್ಣನಿಂದ ಸಕಲಸನುಮತವನರಿದೆನಯ್ಯಾ.
--------------
ಅಲ್ಲಮಪ್ರಭುದೇವರು
ಅಯ್ಯಾ, ಅಂತರಂಗದಲ್ಲಿ ಅಷ್ಟಮಲಂಗಳಿಗೆ ಮೋಹಿಸಿ, ಬಹಿರಂಗದಲ್ಲಿ ಭಕ್ತಿ-ಜ್ಞಾನ-ವೈರಾಗ್ಯ-ಷಟ್ಸ್ಥಲದ ಸುದ್ದಿಯ ಹೇಳಿ, ದಶಾವತಾರದಾಟವ ತೊಟ್ಟಂತೆ ಗುರುಮುಖವಿಲ್ಲದೆ ವಿಭೂತಿ ರುದ್ರಾಕ್ಷಿ ಶಿವಲಿಂಗ ಲಾಂಛನವ ಧರಿಸಿ, ಒಳಗೆ ಶುದ್ಧವಿಲ್ಲದೆ ಬರಿದೆ ಶಿವಪ್ರಸಾದದ ಸುದ್ಧಿಯ ಹೇಳುವವರಲ್ಲಿ ಅಷ್ಟಾವರಣ ಪರಿಚಾರವಿಲ್ಲ ನೋಡ! ತನ್ನಂತರಂಗ ಬಹಿರಂಗದಲ್ಲಿ ಚಿಜ್ಯೋತಿರ್ಲಿಂಗವೆಂಬ ರಮಣನ ಸದ್ಗುರುಮುಖದಿಂ ಕೂಡಿ ಎರಡಳಿದು, ಆ ಲಿಂಗದ ಚಿಚ್ಚೆತನ್ಯವೆ ನಿರಂಜನ ಜಂಗಮವೆಂದು ಆ ಜಂಗಮವೆ ತಾನೆಂದರಿದು, ತನ್ನ ಚಿತ್ಕಳೆಯ ಚಿದ್ವಿಭೂತಿ-ರುದ್ರಾಕ್ಷಿ, ಲಾಂಛನ, ತನ್ನ ಪರಮಾನುಭಾವನೆ ಮಹಾಮಂತ್ರ, ತನ್ನ ನಿಜಾನಂದವೆ ಪಾದೋದಕ-ಪ್ರಸಾದ, ತನ್ನ ಸತ್ಯ ಸದಾಚಾರ ನಡೆನುಡಿಯೆ ಪರಮ ಕೈಲಾಸ! ಇಂತು ಪ್ರಮಥರು ಆಚರಿಸಿದ ಭೇದವ ತಿಳಿಯದೆ ಬರಿದೆ ಅಹಂಕರಿಸಿ ಗುರುಸ್ಥಲ, ಚರಸ್ಥಲ, ಪರಸ್ಥಲ, ಶಿವಭಕ್ತಿ, ಶಿವಭಕ್ತ, ಶಿವಶರಣ, ಶಿವಪ್ರಸಾದಿಗಳೆಂದು ವಾಗದ್ವೆ ೈತವ ನುಡಿವವರಲ್ಲಿ ಪರತತ್ತ್ವಸ್ವರೂಪ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ!
--------------
ಘಟ್ಟಿವಾಳಯ್ಯ
ಕನ್ನಡಿಗೆ ಕಪ್ಪಾದಡೆ ಬೆಳಗಿದಡೆ ದೋಷವ ಕಟ್ಟಬಹುದೆ? ಅರಿ ಕೊಲಬಂದಿದ್ದಲ್ಲಿ ಅರುಪಿದಡೆ ವಿರೋಧವುಂಟೆ? ಸಂಸಾರ ಸಂಪತ್ತಿನಲ್ಲಿ ರಾಜಸದಲ್ಲಿ ಗುರುವಿಂಗೆ ತಾಮಸ ಬಂದಡೆ ಭೃತ್ಯ ಬಿನ್ನಹವ ಮಾಡುವಲ್ಲಿ ಸತ್ಯರೆಂದು ಪ್ರಮಾಣಿಸುವುದು ಗುರುಸ್ಥಲ. ಇಂತೀ ಉಭಯ ಏಕವಾಗಿಯಲ್ಲದೆ ಗುರು-ಶಿಷ್ಯ ಜ್ಞಾನಸ್ಥಲವಿಲ್ಲ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇನ್ನಷ್ಟು ... -->