ಅಥವಾ

ಒಟ್ಟು 58 ಕಡೆಗಳಲ್ಲಿ , 26 ವಚನಕಾರರು , 46 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವನೆ, ನೀನು ಗುರುವಾದೆ ಲಿಂಗವಾದೆ ಜಂಗಮವಾದೆ ಭಕ್ತನಾದೆ. ಗುರುವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಗುರುವಿಂಗೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಗುರುವು ತನ್ನೊಳಡಗಿದ. ಲಿಂಗವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಲಿಂಗಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಲಿಂಗವು ಭಕ್ತನೊಳಡಗಿದ. ಜಂಗಮವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆ ಜಂಗಮವು ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಜಂಗಮವು ಭಕ್ತನೊಳಡಗಿದ. ಇಂತಡಗುವರೆ ಹಿರಿಯರು; ಇಂತಡಗುವರೆ ಗುರುವರು; ಇಂತಡಗುವರೆ ಮಹಿಮರು; ಇವರಿಗೆ ಭಾಜನವೊಂದೆ ಭೋಜನವೊಂದೆ. ಈ ನಾಲ್ಕು ಒಂದಾದ ಘನಕ್ಕೆ ಪರಿಯಾಣಬೇರೆಂಬ ಶಾಸ್ತ್ರದ ಸೂತಕಿಗಳನೆನಗೆ ತೋರದಿರಯ್ಯಾ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ, ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ ಜಂಗಮದೀಕ್ಷಾಪಾದೋದಕವ ತುಂಬಿ, ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ, ನವಧಾನ್ಯ, ನವಸೂತ್ರ, ವಿಭೂತಿವಿಳ್ಯೆ, ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ ಷೋಡಶೋಪಚಾರಂಗಳಿಂದೊಪ್ಪುವ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ, ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ, ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ, ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ, ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ ಗಣಸಾಕ್ಷಿಯಾಗಿ ಶ್ರೀ ಗುರುದೇವನು ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ, ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ, ಆ ಪಂಚÀಕಲಶಂಗಳಲ್ಲಿ ಶೋಬ್ಥಿಸುವಂಥ ದೇವಗಂಗಾಜಲಸ್ವರೂಪವಾದ ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಆ ಕಲಶಂಗಳೈದರಲ್ಲಿ ತೆಗೆದುಕೊಂಡು ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ, ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು, ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ ಮಾಡುವಂಥಾದೆ ಕಲಶಾಬ್ಥಿಷೇಕದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕರ್ಮವೆಂಬ ಕತ್ತಲೆಯಲ್ಲಿ ಒಬ್ಬ ಮಾನವನು ವರ್ಮಗೆಟ್ಟು ಬಿದ್ದಿರುವುದ ಕಂಡೆನಯ್ಯ. ಧರ್ಮವೆಂಬ ಗುರುವು ನಿರ್ಮಳವೆಂಬ ಚಬಕ ಹಾಕಲು, ಕರ್ಮವೆಂಬ ಕತ್ತಲೆ ಹರಿದು, ವರ್ಮವೆಂಬ ದಾರಿಯನೇರಿ, ಧರ್ಮವೆಂಬ ಗುರುವ ಕೂಡಿ ನಿರವಯವೆಂಬ ಕರಸ್ಥಲದಲ್ಲಿ ನಿಂದಿರುವ ಬೆಡಗ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುಲಿಂಗಜಂಗಮಾರ್ಚನೆಯ ಕ್ರಮವ ದಯೆಯಿಂದ ಕರುಣಿಪುದು ಸ್ವಾಮಿ. ಕೇಳೈ ಮಗನೆ : ತಾನಿದ್ದ ಊರಲ್ಲಿ ಗುರುವು ಇದ್ದಡೆ ನಿತ್ಯ ತಪ್ಪದೆ ದರುಶನವ ಮಾಡುವುದು. ಗುರುಪೂಜೆಯ ಮಾಡುವಾಗ ಆ ಗುರುವಿನೊಳಗೆ ಲಿಂಗ-ಜಂಗಮವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಗುರುಪೂಜೆ. ಲಿಂಗಪೂಜೆಯ ಮಾಡುವಾಗ ಆ ಲಿಂಗದೊಳಗೆ ಜಂಗಮ-ಗುರುವುಂಟೆಂದುಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಲಿಂಗಪೂಜೆ. ಇನ್ನು ಜಂಗಮದ ಪೂಜೆ ಮಾಡುವಾಗ ಆ ಜಂಗಮದೊಳಗೆ ಗುರು-ಲಿಂಗವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಜಂಗಮಪೂಜೆ. ಈ ತ್ರಿವಿಧಮೂರ್ತಿ ಭಕ್ತನ ತ್ರಿವಿಧ ತನುವಿಗೋಸ್ಕರವಾಗಿ ಇಷ್ಟ ಪ್ರಾಣ ಭಾವಲಿಂಗಸ್ವರೂಪವಾಗಿಹರೆಂದು ನಿರೂಪಿಸಿದಿರಿ ಸ್ವಾಮಿ. ಆ ತ್ರಿವಿಧಲಿಂಗದ ಪೂಜೆಯ [ಕ್ರಮವ] ಕರುಣಿಪುದು ಎನ್ನ ಶ್ರೀಗುರುವೇ. ಕೇಳೈ ಮಗನೆ : ಇಷ್ಟಲಿಂಗದ ಪೂಜೆಯ ಮಾಡುವಾಗ ಆ ಇಷ್ಟಲಿಂಗದೊಳಗೆ ಪ್ರಾಣಲಿಂಗ ಭಾವಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಇಷ್ಟಲಿಂಗದಪೂಜೆ. ಪ್ರಾಣಲಿಂಗದ ಪೂಜೆಯ ಮಾಡುವಾಗ ಆ ಪ್ರಾಣಲಿಂಗದೊಳಗೆ ಇಷ್ಟಲಿಂಗ ಭಾವಲಿಂಗವುಂಟೆಂದು ಭಾವಿಸಿ ಭಾವ-ಮನ-ಕರದೊಳಗಿರಿಸಿ ಪೂಜಿಸುವುದು ಪ್ರಾಣಲಿಂಗದಪೂಜೆ. ಭಾವಲಿಂಗದ ಪೂಜೆಯ ಮಾಡುವಾಗ ಆ ಭಾವಲಿಂಗದೊಳಗೆ ಇಷ್ಟಲಿಂಗ ಪ್ರಾಣಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಭಾವಲಿಂಗದಪೂಜೆ. ಸಾಕ್ಷಿ : 'ಏಕಮೂರ್ತಿಸ್ತ್ರಯೋ ಭಾಗಾಃ ಗುರುರ್ಲಿಂಗಂತು ಜಂಗಮಃ | ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ||' ಎಂದುದಾಗಿ, ತ್ರಿವಿಧವು ಒಂದೇ ಎಂದರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಉಣ್ಣದೆ ತೃಪ್ತನಾದ ಗುರು. ಆ ಗುರುವು ಪೆಸರ್ಗೊಳ್ಳದೆ ಮುನ್ನವಾದ ಶಿಷ್ಯ. ಇದು ಅನ್ಯರಿಗೆ ಕಾಣಬಾರದು. ತನ್ನೊಳಗಿರ್ದ ಲಿಂಗೈಕ್ಯದ ಭಕ್ತಿಯನು, ಪಸಾರಕಿಕ್ಕುವ ಅಜ್ಞಾನಿಗಳೆತ್ತ ಬಲ್ಲರು ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಸಂಗನಬಸವಣ್ಣನೇ ಎನ್ನ ಗುರುವು. ಚನ್ನಬಸವಣ್ಣನೇ ಎನ್ನ ಲಿಂಗವು. ಅಲ್ಲಮಪ್ರಭುವೇ ಎನ್ನ ಜಂಗಮವು ಇದು ಕಾರಣ, ಈ ಗುರುಲಿಂಗಜಂಗಮವನರಿತು ನಾನು ಬದುಕಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ಲಿಂಗವ ಹಿರಿದುಮಾಡಿ, ತನ್ನ ಇಷ್ಟಲಿಂಗವ ಕಿರಿದುಮಾಡುವ ಮೂಳಹೊಲೆಯರಿರಾ, ಅಣುರೇಣುತೃಣಕಾಷ್ಠ ಮೊದಲಾದ ಬ್ರಹ್ಮಾಂಡ ಪರಿಪೂರ್ಣವಾದ ಮಹಾಲಿಂಗವೆ ಅಂಗಕ್ಕೆ ಗುರುವು ಎಂದು ಸಂಬಂದ್ಥಿಸಿ ಸರ್ವಸಂ[ಕು]ಲವ ತೋರಿದ ಬಳಿಕ, ಇಂತಪ್ಪ ಮೋಕ್ಷಕ್ಕೆ ಕಾರಣವಾದ ಲಿಂಗವನು ಅಡಿಮಾಡಿ ನಟ್ಟ ಕಲ್ಲಿಂಗೆ ಅಡ್ಡಬೀಳುವ ಹೊಲೆಯರಿಗೆ ಲಿಂಗ ಕಟ್ಟುವುದು ಕಿರಿದು, ಗೊಡ್ಡೆಮ್ಮೆಗೆ ಲಿಂಗವದು ಕರ ಲೇಸು. ಇಂಥ ಮೂಳ ಹೊಲೆಯರು ಶಿವಭಕ್ತರೆಂದು ನುಡಿವ ಭ್ರಷ್ಟರನು ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯನೆಂಬ ನಿಜಶರಣನು.
--------------
ಅಂಬಿಗರ ಚೌಡಯ್ಯ
ಎಲಾ, ಶೈವ ವೀರಶೈವ ಎಂಬುವವು ಉಭಯ ಮತಗಳುಂಟು. ಅವು ಎಂತೆಂದಡೆ, ಸ್ಥಾಪ್ಯಲಿಂಗವ ಪೂಜೆಮಾಡುವುದೇ ಶೈವ; ಗುರುವು ಕೊಟ್ಟ ಇಷ್ಟಲಿಂಗವ ಪೂಜೆಮಾಡುವುದೇ ವೀರಶೈವ. ಅದರೊಳಗೆ ಲಿಪ್ತವಾಗಿರ್ಪರೇ ಭಕ್ತರು, ನೀವು ಕೇಳಿರಯ್ಯಾ : ಸ್ಥಾಪ್ಯಲಿಂಗವ ಪೂಜಿಸಿದ ಕರ ಪೋಗಿ ಪರಸ್ತ್ರೀಯರ ಕುಚಂಗಳ ಪಿಡಿಯಬಹುದೆ ? ಈಗ ಯತಿಯ ನುಡಿದ ಜಿಹ್ವೆ ಪೋಗಿ ಪರಸ್ತ್ರೀಯರ ಅಧರಪಾನ ಮಾಡಬಹುದೆ ? ಮಹಾಮಂತ್ರವ ಕೇಳಿದ ಕರ್ಣ ಪೋಗಿ ಪರತಂತ್ರವ ಕೇಳಬಹುದೆ ? ಲಿಂಗಪೂಜಕರ ಅಂಗ ಪೋಗಿ ಪರರಂಗವನಪ್ಪಬಹುದೆ ? ಇವನು ಶೈವ ಭಕ್ತನಲ್ಲಾ ! ಶೈವನಾಗಲಿ ವೀರಶೈವನಾಗಲಿ ಏಕಲಿಂಗನಿಷ್ಠಾಪರನಾಗಿ, ಅಷ್ಟಮದಂಗಳೊಳ್ದಳಗೊಂಡು ಸಂಹರಿಸಿ, ಪಂಚಕ್ಲೇಶ ದುರಿತ ದುರ್ಗುಣಗಳ ಕಳೆದುಳಿದು, ಆರು ಚಕ್ರವ ಹತ್ತಿ ಮೀರಿದ ಸ್ಥಲದೊಳಗಿಪ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ವೀರಶೈವನೆಂದು ನಮೋ ಎಂಬುವೆನಯ್ಯಾ ಬರಿದೆ ವೀರಶೈವನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಗುರುವು ಉಂಡು ಉಟ್ಟನು, ಇಟ್ಟು ತೊಟ್ಟನು, ಕೊಟ್ಟು ಕೊಂಡಾಡುತಾನೆಂದು ಹೊಟ್ಟೆಯ ಹೊಟ್ಟೆಯ ಹೊಸಕೊಂಬ ಕೆಟ್ಟ ಹೊಲೆಯರ ಮನೆಯ ಅನ್ನ ಸುಟ್ಟ ಸುಡುಗಾಡೊಳಗಣ ಅರೆವೆಣ ಕೊರೆವೆಣನೆಂದು ಮುಟ್ಟರು ಗುರುಪಾದನಿಷ್ಠೆವುಳ್ಳವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಅಯ್ಯ ಸದಾಚಾರಸದ್ಭಕ್ತಿಯಿಲ್ಲದ ಗುರುವು ನರಜೀವಿ. ಆತನಿಂದ ಹುಟ್ಟಿದ ಲಿಂಗಾಂಗವೆರಡು ಜಡಜೀವಿ. ಅವರಿಬ್ಬರಲ್ಲಿ ಹೊಕ್ಕು ಕೊಟ್ಟು ಕೊಂಬುವ ಜಂಗಮ ಭೂತಪ್ರಾಣಿ. ಈ ನರಜೀವಿ, ಜಡಜೀವಿ, ಭೂತಪ್ರಾಣಿಗಳಿಗೆ ಕೊಟ್ಟುಕೊಂಬ ಭಕ್ತಂಗೆ ಏಳನೆಯ ಪಾತಕ ಬಿಡದು ಕಾಣಾ. ಗುಹೇಶ್ವರಲಿಂಗದ ಸದಾಚಾರಸದ್ಭಕ್ತಿಯಿಂದಲ್ಲದೆ ಮುಕ್ತಿಯಿಲ್ಲ ನೋಡಾ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅತ್ತಲಿಂದ ಒಂದು ಪಶುವು ಬಂದು, ಇತ್ತಲಿಂದ ಒಂದು ಪಶುವು ಬಂದು, ಒಂದರ ಮೋರೆಯನೊಂದು ಮೂಸಿ ನೋಡಿದಂತೆ, ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ, ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ. ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ, ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ? ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ? ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ? ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ. ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ. ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಯ್ಯ, ಶ್ರೀಗುರುಲಿಂಗಜಂಗಮವೇ ರುದ್ರಲೋಕದ ರುದ್ರಗಣಂಗಳಿಗೆ, ಶಾಂಭವಲೋಕದ ಶಾಂಭವಗಣಂಗಳಿಗೆ, ನಾಗಲೋಕದ ನಾಗಗಣಂಗಳಿಗೆ, ದೇವಲೋಕದ ದೇವಗಣಂಗಳಿಗೆ, ಮರ್ತೃಲೋಕದ ಮಹಾಗಣಂಗಳಿಗೆ ಅವರವರ ಮನ-ಭಾವ-ಕಾರಣಂಗಳು ಹೇಗುಂಟೊ ಹಾಂಗೆ ಆಯಾಯ ಪ್ರಸನ್ನೇತಿ ಪ್ರಸಾದವಾಗಿರ್ಪರು ನೋಡ. ಸ್ವರ್ಗ-ಮರ್ತೃ-ಪಾತಾಳಲೋಕದಲ್ಲಿ ಚರಿಸುವ ಹÀರಿಸುರಬ್ರಹ್ಮಾದಿ ದೇವದಾನವಮಾನವ ಮನಮುನಿಗಳೆಲ್ಲ ಅತ್ಯತಿಷ*ದ್ದಶಾಂಗುಲವೆಂದು ಹೊಗಳುವ ಶ್ರುತಿಯಂತೋ ಹಾಂಗೆ ಅವರವರ ಮನದಂತೆ ಮಹಾದೇವನಾಗಿ ಫಲಪದಂಗಳ ಕೊಟ್ಟು, ದುಷ್ಟನಿಗ್ರಹ ಶಿಷ್ಟಪ್ರತಿಪಾಲಕತ್ವದಿಂದ ಸರ್ವಲೋಕಂಗಳಿಗೆಲ್ಲ ಸೂತ್ರಧಾರಿಗಳಾಗಿರ್ಪರು ನೋಡ. ಇಂತು ಏಕಮೇವ ಪರಬ್ರಹ್ಮವೆಂಬ ಶ್ರುತಿಯ ದಿಟವಮಾಡಿ ಪರಮಸ್ವಸ್ಥಿರದ ಮಂಡಲದ ಮೇಲೆ ಶಿವ-ಶಕ್ತಿ, ಅಂಗ-ಲಿಂಗವೆಂಬ ಉಭಯನಾಮವಳಿದು ಶಿಷ್ಯರೂಪಿನಿಂದ ಕುಳ್ಳಿರಿಸಿ ದೀಕ್ಷಾಪಾದೋದಕ ಮಿಶ್ರವಾದ ಗೋಮೂತ್ರದಿಂದ ಸಪ್ತವ್ಯಸನ ಸಂಬಂಧವಾದಂಗ, ಸಪ್ತಧಾತುಸಂಬಂಧವಾದ ಲಿಂಗ, ಇಂತು ಅಂಗದ ಮಲಿನಭಾವ, ಲಿಂಗದ ಶಿವಭಾವವ ಕಳದು, ಕ್ಷೀರ, ಘೃತ, ರಂಭಾ, ಇಕ್ಷು, ಮಧುಯುಕ್ತವಾದ ರಸಪಂಚಾಮೃತವ ಜಂಗಮಚರಣೋದಕ ಮಿಶ್ರದಿಂದ ಅಭಿಷೇಕಮಾಡಿಸಿ, ಅದರಿಂ ಮೇಲೆ ಗುರುಪಾದೋದಕದಲ್ಲಿ ಶರಣಗಣಂಗಳು ಹಸ್ತೋದಕ, ಮಂತ್ರೋದಕ, ಶುದ್ಧೋದಕ, ಗಂಧೋದಕ, ಪುಷ್ಪೋದಕವೆಂಬ ಪಂಚಪರಮಾನಂದ ಜಲದಿಂದ ಅಭ್ಯಂಗಸ್ನಾನ ಮಾಡಿಸಿ, ಹಿಂದು-ಮುಂದಣ ಕಾಲಕಾಮರ ಭಯಕ್ಕೆ ಅಂಜಬೇಡವೆಂದು ತ್ರಿವಿಧಂಗುಲಪ್ರಮಾಣವಾದ ದರ್ಭೆಯ ಅಂತು ಮಾಡಿ ತ್ರಿವಿಧಮಂತ್ರಸ್ಮರಣೆಯಿಂದ ಕಟಿಯಲ್ಲಿ ಧರಿಸಿದರಯ್ಯ. ಆರುವೈರಿಗಳಿಗೆ ಒಳಗಾಗಬೇಡವೆಂದು ಷಡಂಗುಲಪ್ರಮಾಣವಾದ ರಂಭಾಪಟ್ಟೆಯ ಕೌಪೀನವ ಮಾಡಿ ಷಡಕ್ಷರಮಂತ್ರಸ್ಮರಣೆಯಿಂದ ಹರಿಯಜದ್ವಾರಗಳ ಬಂಧಿಸಿದರಯ್ಯ. ಅದರಿಂದ ಮೇಲೆ ನಾರಂಗಶಾಟಿಯ ಪವಿತ್ರತೆಯಿಂ ಹೊದ್ದಿಸಿ, ಶ್ರೀ ಗುರುದೇವನ ಚರಣಕಮಲಕ್ಕೆ ಅಷ್ಟಾಂಗಪ್ರಣಿತನ ಮಾಡಿಸಿ, ಶಿವಶರಣ ಭಕ್ತ ಮಾಹೇಶ್ವರರುಗಳಿಗೆ ಹುಸಿಯ ನುಡಿಯದೆ, ದಿಟವ ಬಿಡದೆ, ಆಪ್ತತ್ವದಿಂದ ನಡೆ-ನುಡಿ, ಕೊಟ್ಟುಕೊಂಬ ವಿಚಾರಂಗಳ ಶ್ರುತಮಾಡಿದಲ್ಲಿ ಶ್ರೀ ಗುರುದೇವನು ಶರಣಗಣ ಒಪ್ಪಿಗೆಯಿಂದ ಶಿಷ್ಯನ ಮಸ್ತಕದ ಮೇಲೆ ಅಭಯಹಸ್ತವನ್ನಿಟ್ಟು, ಗುರುಶಿಷ್ಯಭಾವವಳಿದು, ಗುರುವಿನ ಸೂತ್ರದ ಶಿಷ್ಯಹಿಡಿದು, ಶಿಷ್ಯನ ಸೂತ್ರವ ಗುರುವು ಹಿಡಿದು, ಅಂತರಂಗಬಹಿರಂಗದಲ್ಲಿ ಶಿವಯೋಗಾನುಸಂಧಾನದಿಂದ ಏಕರೂಪವಾಗಿ ಭೃತ್ಯರಿಂದ ಕಳಸಾರ್ಚನೆಯ ರಚಿಸಿ, ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಡಗೂಡಿ ನವರತ್ನಖಚಿತವಾದ ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡಿರುವಂಥ ಮಂತ್ರಮೂರ್ತಿ ನಿರಂಜನಜಂಗಮಕ್ಕೆ ವಿಭೂತಿ ವೀಳ್ಯ, ಸುವರ್ಣಕಾಣಿಕೆ, ದಶಾಂಗಘನಸಾರ, ಪುಷ್ಪದಮಾಲೆ, ವಸ್ತ್ರಾಭರಣ ಮೊದಲಾಗಿ ಸಪ್ತಪದಾರ್ಥಂಗಳ ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರ ಮಧ್ಯದಲ್ಲಿ ಇಟ್ಟು ಅಷ್ಟಾಂಗಯುಕ್ತರಾಗಿ ಸ್ವಸ್ಥದೃಢಚಿತ್ತದಿಂದ ಬಹು ಪರಾಕು ಭವರೋಗ ವೈದ್ಯನೆ ಎಂದು ತ್ರಿಕರಣಶುದ್ಧತಿಯಿಂದ ಅಭಿವಂದಿಸುವಂಥಾದ್ದೆ ಸ್ವಸ್ತಿಕಾರೋಹಣದೀಕ್ಷೆ. ಇಂತುಟೆಂದು ಶ್ರೀ ಗುರುನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಮತ್ತಮಾ ಸ್ವಾಯತದೀಕ್ಷೆಯು ವೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆ ಎಂದು ಮೂರು ಪ್ರಕಾರಮಪ್ಪುದು. ಅವಾವೆಂದೊಡೆ:ಗುರು ಶಿಷ್ಯನ ಮಸ್ತಕದಲಿ ಆಗಮೋಕ್ತ ವಿಧಾನದಿಂ ಶಿವಾಸನವನು ಧ್ಯಾನಿಸಿ, ಅಲ್ಲಲ್ಲಿ ಅವುದಾ ನೊಂದು ಶಿವತತ್ವಸಮಾವೇಶವು ವೇಧಾದೀಕ್ಷೆ ಎನಿಸಿಕೊಂಬುದು. ದೇವತಾದಿ ಗಳು ಸಹವಾಗಿ ಮಂತ್ರೋಪದೇಶವನು ಮಾಡುವುದು ಮಂತ್ರದೀಕ್ಷೆ ಎನಿಸಿ ಕೊಂಬುದು. ದೀಕ್ಷೋತ್ತರ ಕ್ರಿಯೆಗೂಡಿ ಪ್ರಾಣಲಿಂಗೋಪದೇಶವನು ಮಾಡು ವುದು ಕ್ರಿಯಾದೀಕ್ಷೆ ಎನಿಸಿಕೊಂಬುದು. ಇಂತೆಂದು[ದು]ವಾ ತೂಳಂ. ಮತ್ತಮಾ ಗುರುವು ಶಿಷ್ಯನ ಕರ್ಣದಲ್ಲಿ ಮಂತ್ರೋಪದೇಶವ ಮಾಡೂದೇ ಮಂತ್ರದೀಕ್ಷೆ. ಶಿಷ್ಯನ ಹಸ್ತದಲ್ಲಿ ಗುರುವು ಲಿಂಗವ ಕೊಡುವುದೆ ಕ್ರಿಯಾದೀಕ್ಷೆ. ಗುರು ತನ್ನ ಹಸ್ತವ ಶಿಷ್ಯನ ಮಸ್ತಕದಲ್ಲಿಡುವುದೆ ವೇಧಾದೀಕ್ಷೆ ಎನಿಸುವುದ[ಯ್ಯಾ] ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಕಳ್ಳಆಡಿನ ಕಾಲ ಕಡಿದು, ಕೋಡಗನ ಹಲ್ಲುಕ್ಕಿತ್ತು, ಓಡ್ಯಾಡುವ ಎರಳೆಯ ತಿರುಳ ತಿಂದು, ಉಡುವಿನ ಕುಡಿನಾಲಗೆಯ ಕೂಡೆವೆಡವರಿದು ತಿಂದು, ದಿನವ ಕಳಿದುಳಿದಾತ ಎನ್ನ ಗುರುವು. ಯಾತಕೆಂದರೆ ಅರಿಕೇಶ್ವೆಲಿಂಗವನರಿವುದಕ್ಕೆ ತೆರಪಾಗಿರಣ್ಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ದಕ್ಷಿಣದಲ್ಲಿರ್ಪ ಯಮನೇ ವಿಷ್ಣುವು; ಉತ್ತರದಲ್ಲಿರ್ಪ ಕುಬೇರನೇ ಲಕ್ಷ್ಮಿಯು. ಪಶ್ಚಿಮದಲ್ಲಿರ್ಪ ವರುಣನೇ ವಿಷ್ಣುವು; ಪೂರ್ವದಲ್ಲಿರ್ಪ ಇಂದ್ರನೇ ಲಕ್ಷ್ಮಿಯು. ಈಶಾನ್ಯದಲ್ಲಿರ್ಪ ಈಶಾನನೇ ಶಿವನು; ನೈರುತ್ಯದಲ್ಲಿರ್ಪ ನೈರುತಿಯೇ ಶಕ್ತಿಯು. ಅಗ್ನೇಯಲ್ಲಿರ್ಪ ಅಗ್ನಿಯೇ ಶಿವನು; ವಾಯುವ್ಯದಲ್ಲಿರ್ಪ ವಾಯುವೇ ಶಕ್ತಿಯು. ಇವು ನಿಜನಾಮಸಂಬಂಧಗಳಾಗಿಹವು. ಅವು ಭಿನ್ನನಾಮಸಂಬಂಧಗಳಾಗಿ ಸಾಕಾರ ನಿರಾಕಾರಮೂರ್ತಿಗಳಾಗಿಹವು. ಶಿವನು ಸಾಕಾರದಲ್ಲಿ ಸಂಹರಿಸಿ, ನಿರಾಕಾರದಲ್ಲಿ ರಕ್ಷಿಸುತ್ತಿಹನು. ವಿಷ್ಣವು ಸಾಕಾರದಲ್ಲಿ ರಕ್ಷಿಸಿ, ನಿರಾಕಾರದಲ್ಲಿ ಸಂಹರಿಸುತ್ತಿಹನು. ಕೆಳಗೆ, ಬಿಂದುಮುಖದಲ್ಲಿ ಸೃಷ್ಟಿಸುವನೇ ಬ್ರಹ್ಮನು, ಮೇಲೆ, ನಾದ ಮುಖದಲ್ಲಿ ಸೃಷ್ಟಿಸುತ್ತಿರ್ಪಳೇ ಸರಸ್ವತಿಯು. ಅಷ್ಟದಳಕಮಲದ ಮೂಲವೇ ಬ್ರಹ್ಮನು, ಅದರಗ್ರದಲ್ಲಿ ತೋರುವ ವಾಸನೆಯು ಸರಸ್ವತಿಯು. ಆ ಕಮಲದ ಹೃದಯವೇ ಮೇರುವು, ಆ ಮೇರುಮಧ್ಯದಲ್ಲಿರ್ಪುದೇ ಮಹಾಲಿಂಗವು. ಅಲ್ಲಿರ್ಪ ಮಹಾಲಿಂಗವಂ ಗುರುವು ಬಾಹ್ಯಕ್ಕೆ ತಂದಿದಿರಿಟ್ಟಲ್ಲಿ, ಸ್ಫಟಿಕಭಾಂಡದಲ್ಲೊಳಗಿರ್ಪ ವಸ್ತುವೇ ಹೊರಗೆ, ಹೊರಗಿರ್ಪ ವಸ್ತುವೇ ಒಳಗೆ ತೋರಿ, ಆ ಭಾಂಡವು ತನ್ನ ನಿಜಗುಣವನಳಿದು ವಸ್ತುವು ಗುಣರೂಪಮಾಗಿ ತೋರ್ಪಂದದಿ, ಇಷ್ಟ ಪ್ರಾಣಗಳೇಕಮಾದಲ್ಲಿ, ಶರೀರವು ತನ್ನ ಮುನ್ನಿನ ಗುಣವನಳಿದು, ಅಗ್ನಿಸ್ವರೂಪಮಾದಿಷ್ಟಲಿಂಗದಲ್ಲಿ ಐಕ್ಯವಾದುದರಿಂ ದಹನಕ್ಕಯೋಗ್ಯಮಾಯಿತ್ತು. ನಿರಾಕಾರವಾದ ಪ್ರಾಣವು ಈಶಾನ್ಯಸ್ವರೂಪಮಾದ ಪ್ರಾಣಲಿಂಗದಲ್ಲಿ ಲೀನಮಾದುದರಿಂ ಕರ್ಮಸಂಸ್ಕಾರಯೋಗ್ಯಮಲ್ಲಮಾಯಿತ್ತು. ಆದುದರಿಂದಾ ಶಿವಭಕ್ತನಿಗೆ ದಹನಸಂಸ್ಕಾರಮಿಲ್ಲಮಾಯಿತ್ತು. ಇಂತಪ್ಪ ಸಾಕಾರ ನಿರಾಕಾರ ಶಿವಶಕ್ತಿಸ್ವರೂಪಗಳೆಲ್ಲವೂ ಭಾವದಲ್ಲೊಂದೇ ಆಗಿ ಪರಿಪೂರ್ಣತೃಪ್ತಿಯಲ್ಲಿ ನಿಜಸ್ವಭಾವನಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇನ್ನಷ್ಟು ... -->