ಅಥವಾ

ಒಟ್ಟು 104 ಕಡೆಗಳಲ್ಲಿ , 37 ವಚನಕಾರರು , 97 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮವೆಂಬ ಕತ್ತಲೆಯಲ್ಲಿ ಒಬ್ಬ ಮಾನವನು ವರ್ಮಗೆಟ್ಟು ಬಿದ್ದಿರುವುದ ಕಂಡೆನಯ್ಯ. ಧರ್ಮವೆಂಬ ಗುರುವು ನಿರ್ಮಳವೆಂಬ ಚಬಕ ಹಾಕಲು, ಕರ್ಮವೆಂಬ ಕತ್ತಲೆ ಹರಿದು, ವರ್ಮವೆಂಬ ದಾರಿಯನೇರಿ, ಧರ್ಮವೆಂಬ ಗುರುವ ಕೂಡಿ ನಿರವಯವೆಂಬ ಕರಸ್ಥಲದಲ್ಲಿ ನಿಂದಿರುವ ಬೆಡಗ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ ನೆನೆವ ಮನವು ತಾನು ಗುರುವಾಯಿತು ನೋಡಾ. ಆಹಾ ! ಮಹಾದೇವ, ಇನ್ನಾವುದರಿಂದ ? ಆವುದನು ? ಏನೆಂದು ನೆನೆವೆ ? ಮನವೆ ಗುರುವಾದ ಕಾರಣ,_ ಮನವೆ ಗುರುವಾಗಿ ನೆನಹನಿಂಬುಗೊಂಡನು ಗುಹೇಶ್ವರಲಿಂಗ ಚೋದ್ಯಚರಿತ್ರನು !
--------------
ಅಲ್ಲಮಪ್ರಭುದೇವರು
ಅಯ್ಯ, ಒಂದು ಜೀವಾತ್ಮನೆ ನಾಲ್ಕು ತೆರನಾಗಿರ್ಪುದಯ್ಯ. ಅದೆಂತೆಂದಡೆ : ಒಂದು ಜೀವನೆ ಅಂಡಜಪ್ರಾಣಿಯಾಗಿರ್ಪುದಯ್ಯ. ಮತ್ತೊಂದು ಜೀವನೆ ಪಿಂಡಜಪ್ರಾಣಿಯಾಗಿರ್ಪುದಯ್ಯ. ಮಿಗಿಲೊಂದು ಜೀವನೆ ಉದ್ಬಿಜಪ್ರಾಣಿಯಾಗಿರ್ಪುದಯ್ಯ. ಮತ್ತೊಂದು ಜೀವನೆ ಜರಾಯುಜಪ್ರಾಣಿಯಾಗಿರ್ಪುದಯ್ಯ. ಈ ಚತುರ್ವಿಧ ಜೀವನೊಳಗೆ ಏಳುಲಕ್ಷ ಮಲಜೀವನಯ್ಯ, ಏಳುಲಕ್ಷ ಜಡಜೀವನಯ್ಯ, ಏಳುಲಕ್ಷ ಕುಜೀವನಯ್ಯ, ಏಳುಲಕ್ಷ ದುರ್ಜೀವನಯ್ಯ, ಏಳುಲಕ್ಷ ಕಪಟಜೀವನಯ್ಯ, ಏಳುಲಕ್ಷ ಸಂಚಲಜೀವನಯ್ಯ, ಏಳುಲಕ್ಷ ವಂಚಕಜೀವನಯ್ಯ, ಏಳುಲಕ್ಷ ನಿರ್ಮಲಜೀವನಯ್ಯ, ಏಳುಲಕ್ಷ ಅಜಡಜೀವನಯ್ಯ, ಏಳುಲಕ್ಷ ಸುಜೀವನಯ್ಯ, ಏಳುಲಕ್ಷ ಸಂಜೀವನಯ್ಯ, ಏಳುಲಕ್ಷ ಪರಮಜೀವನಯ್ಯ. ಈ ತೆರನಾಗಿ ಎಂಬತ್ತುನಾಲ್ಕುಲಕ್ಷ ಜೀವಪ್ರಾಣಿಗಳೆಲ್ಲ ಶಿವನ ಪೂರ್ವಭಾಗದ ಪ್ರವೃತ್ತಿಮಾರ್ಗದ ಕರ್ಮೇಂದ್ರಿಯ, ಜ್ಞಾನೇಂದ್ರಿಯವೆಂಬ ದ್ವಾದಶೇಂದ್ರಿಯಂಗಳಲ್ಲಿ ಜೀವಿಸುತಿರ್ಪವಯ್ಯ. ಆ ದ್ವಾದಶ ಜೀವನ ವರ್ತನಾಭೇದದಿಂದ ಒಂದು ಜೀವನೆ ಹನ್ನೆರಡು ತೆರನಾಗಿರ್ಪುದಯ್ಯ. ಅದರ ಗುಣಭೇದವೆಂತೆಂದಡೆ : ಉಚ್ಫಿಷ್ಟವ ತಿಂದು ಬದುಕುವ ಜೀವನೆ ಮಲಜೀವನೆನಿಸುವುದಯ್ಯ. ಮಾಂಸಭಕ್ಷಣೆಯಿಂದ ಬದುಕುವ ಜೀವನೆ ಜಡಜೀವನೆನಿಸುವುದಯ್ಯ. ಚಾಡಿ ಕ್ಷುದ್ರತನದಿಂದ ಒಡಲ ಹೊರವ ಜೀವನೆ ದುರ್ಜೀವನೆನಿಸುವುದಯ್ಯ. ಕಡಿದು, ಹೊಡದು, ಬಡಿದು, ಬಂದ್ಥಿಸಿ ಒಡಲ ಹೊರವ ಜೀವನೆ ಕಪಟಜೀವನೆನಿಸುವುದಯ್ಯ. ಗಾರುಡಿಗವಿದ್ಯದಿಂದ ಒಡಲಹೊರವಜೀವನೆ ಸಂಚಲಜೀವನೆನಿಸುವುದಯ್ಯ. ದೇಶಕ್ಕೊಂದು ಭಾಷೆ, ದೇಶಕ್ಕೊಂದು ವೇಷವ ಧರಿಸಿ, ಅಜಾತತನದಿಂದ ಒಡಲ ಹೊರವ ಜೀವನೆ ವಂಚಕಜೀವನೆನಿಸುವುದಯ್ಯ. ಷಟ್ಕøಷಿ ವ್ಯಾಪಾರದೊಳಗೆ ಆವುದಾದರೂ ಒಂದು ವ್ಯವಹಾರವ ಮಾಡಿ, ಸತ್ಯದಿಂದ ಬಾಳುವವನೆ ನಿರ್ಮಲಜೀವನೆನಿಸುವುದಯ್ಯ. ಆವ ಮತವಾದರೇನು ? ಆವ ಜಾತಿಯಾದರೇನು ? ಮಲಮಾಯಾ ಸಂಸಾರಬಂಧಮಂ ತ್ಯಜಿಸಿದ ಅಷ್ಟಾಂಗಯೋಗಾಭ್ಯಾಸಿಯೆ ಅಜಡಜೀವನೆನಿಸುವುದಯ್ಯ. ಅಷ್ಟಾಂಗಯೋಗವ ತ್ಯಜಿಸಿ ಶ್ರೀಗುರುಪರಮಾರಾಧ್ಯನ ಉಪಾವಸ್ತೆಯಂ ಮಾಡುವವನೆ ಸುಜೀವನೆನಿಸುವುದಯ್ಯ. ಮಹಾಚಿದ್ಘನ ಗುರುದೇವನ ಪ್ರತ್ಯಕ್ಷವಮಾಡಿಕೊಂಡು ಘನಗುರುಭಕ್ತಿಯಲ್ಲಿ ನಿಷ್ಠೆಯುಳ್ಳಾತನೆ ಸಜ್ಜೀವನೆನಿಸುವುದಯ್ಯ. ಶ್ರೀಮದ್ಘನ ಗುರುವ ಮೆಚ್ಚಿಸಿ ಇಷ್ಟ-ಪ್ರಾಣ-ಭಾವಲಿಂಗವ ಪಡದಾತನೆ ಪರಾತ್ಪರಮಜೀವನೆನಿಸುವುದಯ್ಯ. ಇಂತೀ ಜೀವನ ಬುದ್ಧಿಯ ಗುರುಕಟಾಕ್ಷದಿಂದ ನಿವೃತ್ತಿಯಮಾಡಿ, ತ್ರಿವಿಧಾಂಗವೆಲ್ಲ ದೀಕ್ಷಾತ್ರಯಂಗಳಿಂದ ಶುದ್ಧಪ್ರಸಾದವಾಗಿ, ಭಾವತ್ರಯಂಗಳೆಲ್ಲ ಮೋಕ್ಷತ್ರಯಂಗಳಿಂದ ಪ್ರಸಿದ್ಧಪ್ರಸಾದವಾಗಿ, ಸತ್ಯವಾಣಿ, ಸತ್ಯಪ್ರಾಣಿ, ಸತ್ಯಮಾಣಿ, ಉಳಿದವಯವಂಗಳೆಲ್ಲ ಸತ್ಯವನೆ ಹಾಸಿ, ಸತ್ಯವನೆ ಹೊದ್ದು,
--------------
ಗುರುಸಿದ್ಧದೇವರು
ಗುರುವಿನಲ್ಲಿ ಗುಣ ವಿದ್ಯೆ ಕುಲ ಬಾಲ್ಯ ಯೌವನ ವೃದ್ಧನೆಂದು ಅರಸಲುಂಟೇ ? ಅರಸಿದರೆ ಮಹಾಪಾತಕ. ಸಾಕ್ಷಿ :`` ಆಚಾರ್ಯೇ ಬಾಲಬುದ್ಧಿಶ್ಚ ನರಬುದ್ಧಿಸ್ತಥೈವ ಚ | ಅಸಿಷ್ಟ ಬುದ್ಧಿಭಾವೇನ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಎನ್ನ ಗುರು ಬಾಲನೂ ಅಲ್ಲ, ಯೌವನನೂ ಅಲ್ಲ, ವೃದ್ಧನೂ ಅಲ್ಲ. ಮೃತರಹಿತ ಪರಶಿವ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಗುರು-ಲಿಂಗ-ಜಂಗಮವೆಂದರಿಯದ ಗೊಡ್ಡುಗಳ ಶಿಷ್ಯನ ಮಾಡಿಕೊಂಬುವ ಹೆಡ್ಡಜಡಜೀವಿಗಳನೇನೆಂಬೆನಯ್ಯ ! ಆಚಾರ-ಅನಾಚಾರದ ಭೇದವನರಿಯದ ಹೆಡ್ಡ ಮಾನವರಿಗೆ ಉಪದೇಶವ ಕೊಡುವ ಮತಿಭ್ರಷ್ಟರನೇನೆಂಬೆನಯ್ಯ ! ಅವನ ಅಜ್ಞಾನವನಳಿಯದೆ, ಅವನ ನಡೆನುಡಿಯ ಹಸ ಮಾಡದೆ, ಅವನ ಆದಿ-ಅಂತ್ಯವ ತಿಳಿಯದೆ, ಧನಧಾನ್ಯದ್ರವ್ಯದಾಸೆಗೆ ಶಿವದೀಕ್ಷೆಯ ಮಾಡುವನೊಬ್ಬ ಗುರುವ ಹುಟ್ಟಂಧಕನೆಂಬೆನಯ್ಯ ! ತನ್ನ ಗುರುತ್ವವನರಿಯದ ಗುರುವಿಂದ ಉಪದೇಶವ ಪಡವನೊಬ್ಬ ಶಿಷ್ಯನ ಕೆಟ್ಟಗಣ್ಣವನೆಂಬೆನಯ್ಯ ! ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮಚ್ಚರಯ್ಯ ! ನಮ್ಮ ಪ್ರಮಥರು ಮಚ್ಚದಲ್ಲಿ ಇಂತಪ್ಪ ಗುರುಶಿಷ್ಯರಿಬ್ಬರಿಗೆಯೂ ಯಮದಂಡಣೆ ತಪ್ಪದೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ರಾಜಲಿಂಗವ ತಂದು ಪೂಜೆ ಕರದೊಳಗಿಟ್ಟು ಭೇದಿಸ ಬಾರದದ ಆನಂದವ. ಅಭೇದ್ಯಕರನಿತ್ಯವೆಂದಾ ಗುರುವ ಪಾಲಿಸಿದ ಅಭೇದ್ಯ ಶಿಷ್ಯನು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತನುವ ಮರೆಯಬೇಕೆಂದು ಗುರುವ ತೋರಿ, ಮನವ ಮರೆಯಬೇಕೆಂದು ಲಿಂಗವ ತೋರಿ, ಧನವ ಮರೆಯಬೇಕೆಂದು ಜಂಗಮವ ತೋರಿ, ಲೇಸ ಮರೆದು ಕಷ್ಟಕ್ಕೆ ಕಡಿದಾಡುವ ಭಾಷೆಹೀನರ ಕಂಡು ನಾಚಿಕೆಯಾಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಹಿಂದೇನು ಸುಕೃತವ ಮಾಡಿದ ಕಾರಣ ಇಂದೆನಗೆ ಗುರುಪಾದ ದೊರೆಯಿತ್ತು ನೋಡಾ. ಗುರುವೆಂಬೆರಡಕ್ಷರದ ಸ್ಮರಣೆಯ ನೆನೆದು ಪರಿಭವವ ತಪ್ಪಿಸಿಕೊಂಡೆ ನೋಡಾ. ಗುರುವೆಂಬೆರಡಕ್ಷರವನೇನೆಂದು ಉಪಮಿಸವೆನಯ್ಯಾ, ಸಾಕ್ಷಿ :``ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜನಮ್ | ಗುಣರೂಪಮತೀತೊ ಯೋ ಸದೃಷ್ಟಃ [ಸ]ಗುರುಃ ಸ್ಮøತಃ ||'' ಎಂದುದಾಗಿ, ಇಂತಪ್ಪ ಗುರುವನೆಂತು ಮರೆವೆನಯ್ಯಾ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗಿಂದೇ ನರಕ.
--------------
ಹೇಮಗಲ್ಲ ಹಂಪ
ಗುರುವ ಕುರಿತು ಮಾಡುವಲ್ಲಿ ಬ್ರಹ್ಮನ ಭಜನೆಯ ಹರಿಯಬೇಕು. ಲಿಂಗವ ಕುರಿತು ಮಾಡುವಲ್ಲಿ ವಿಷ್ಣುವಿನ ಸಂತೋಷಕ್ಕೆ ಸಿಕ್ಕದಿರಬೇಕು. ಜಂಗಮವ ಕುರಿತು ಮಾಡುವಲ್ಲಿ ರುದ್ರನ ಪಾಶವ ಹೊದ್ದದಿರಬೇಕು. ಒಂದನರಿದು ಒಂದ ಮರೆದು ಸಂದಿಲ್ಲದ ಸುಖ ಜಂಗಮ ದಾಸೋಹದಲ್ಲಿ ಸಂಗನಬಸವಣ್ಣ ನಿತ್ಯ ಚಂದೇಶ್ವರಲಿಂಗಕ್ಕೆ ತಲುಪಿ.
--------------
ನುಲಿಯ ಚಂದಯ್ಯ
ಹಡಗ ಹರಿಗೋಲ ನಂಬಿದವರು ಕಡಲತೊರೆ ದಾಂಟರೇನಯ್ಯಾ ? ಧನು ಖಡ್ಗವ ಪಿಡಿದು ಕಾಳಗವ ಮಾಡಿದವರು ರಣವ ಗೆಲ್ಲರೇನಯ್ಯಾ ? ಗುರುವ ನಂಬಿದವರು ಭವವ ಗೆಲ್ಲರೇನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಆ ಪರಶಿವನ ಚಿದ್ವಿಲಾಸದಿಂದಾದ ಇಹದೊಳಗೆ ನರನಾಗಿ ಅರುವುಹಿಡಿದು ಕುರುಹುಕಂಡವಂಗೆ ಗರ್ವವುಂಟೆ ? ಅರುವು ಪಿಡಿಯದೆ ಕುರುಹುಗಾಣದೆ ಬರಿಯ ಬಾಯಿಲೆ ಬ್ರಹ್ಮವ ನುಡಿದರೆ ಬ್ರಹ್ಮನಾಗಬಲ್ಲರೆ ? ಬ್ರಹ್ಮನಾದ ಮೇಲೆ ಇಮ್ಮನ ಎಲ್ಲಿಹದೊ ? ತಾನು ಅದ್ವೆ ೈತನಾದ ಮೇಲೆ ದ್ವೆ ೈತವನಾಚರಿಸುವದುಂಟೆ ? ತಾನೇ ನಿಜ ಸರ್ವವೂ ಸುಳ್ಳೆಂಬುದುಂಟೆ ? ಅಹುದು ಅಲ್ಲ ಎಂಬುವುದುಂಟೆ ? ಗುರುವ ಹಿಂದುಗಳೆದು, ಕಟ್ಟಿದಾ ಲಿಂಗವ ಬಿಟ್ಟು, ಜಂಗಮವ ಜರಿಯಲುಂಟೆ ? ಅಖಂಡವ ತಿಳಿದು ಆ ಅಖಂಡವು ತಾನಾಗದೆ ಭಂಗಿ ಮುಕ್ಕಿದವನಂತೆ, ಅಂಗ ಬತ್ತಲೆಯಾಗಿ, ಮಂಗಮತಿಗೂಡಿ ಸಂಗವ ಸಂದು, ಒಂದಾಗದೆ ಭಂಗಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆರು ಗುಣವೆಂಬೊ ಅರಿಕೆಯನೈದೆವೆಂಬ ಅರುಹಿರಿಯರು ನೀವು ಕೇಳಿರೋ. ಅರುವೆಂಬುದನೆ ಅರಿದು, ಮರಬೆಂಬುದನೆ ಮರದು, ಪರಶಿವಗುರುಮೂರ್ತಿಯೆಂದು ಗುರುವ ಕೊಂಡಾಡುತ್ತ ಆ ಗುರುಮೂರ್ತಿ ಗುರುದೀಕ್ಷವನೆ ಶಿರದಮೇಲಿಹ ಹಸ್ತವನು ಆ ತತ್‍ಕ್ಷಣದಲ್ಲಿ ಕಾರುಣ್ಯದಿಂದಲಿ ಪರಮಪ್ರಸಾದವ ಸಾರಾಯವ ಕೊಂಡದನು ಅರಿತು, ಮನದಲ್ಲಿ ಆಧಾರಚಕ್ರವಂ ಬಲಿದು ಇಡಾ ಪಿಂಗಳ ಸುಷುಮ್ನವೆಂಬ ಸಂದೇಹವನಳಿದು, ಏಕನಾಳವ ಕೂಡುತ್ತ ಮೂರುಪುರದ ಬಾಗಿಲಂಗಳ ಪೊಕ್ಕು ಪರಮಪ್ರಸಾದವ ಕೊಡುತಿರ್ದ ಘನಲಿಂಗವ ಕೊಡಬಲ್ಲರೆ ಅದೇ ಅರುವು ಹಿರಿಯತನ. ಇದನರಿಯದೆ ಅರುಹಿರಿಯರೆಂದು ತಿರುಗುವ ಬೂಟಕರಿಗೆ ನಾನೇನೆಂಬೆನಯ್ಯಾ ಗೊಹೇಶ್ವರಪ್ರಿಯ ನಿರಾಳಲಿಂಗಾ !
--------------
ಗುಹೇಶ್ವರಯ್ಯ
ಗಗನದ ತಮವ ಕಳೆವರೆ ರವಿ ಅದ್ಥಿಕ ನೋಡಾ. ವಿಪಿನದ ತರುಗಿರಿಕಾಷ್ಠವೆಲ್ಲಕೆಯು ಸುರತರು ಅದ್ಥಿಕ ನೋಡಾ. ನವರತ್ನ ಮಾಣಿಕ್ಯ ಮೌಕ್ತಿಕ ವಜ್ರ ಪುಷ್ಯರಾಗ ಅರ್ಥಭಾಗ್ಯವೆಲ್ಲಕ್ಕೆಯಾ ಪರುಷವದ್ಥಿಕ ನೋಡಾ. ಧರೆಮೂರುಲೋಕದ ಗೋವುಗಳಿಗೆಲ್ಲ ಸುರಬ್ಥಿಯದ್ಥಿಕ ನೋಡಾ. ಈರೇಳು ಭುವನ ಹದಿನಾಲ್ಕು ಲೋಕವೆಲ್ಲಕ್ಕೆಯಾ ಗುರುವಿಂದದ್ಥಿಕವಿಲ್ಲ ನೋಡಾ. ಸಾಕ್ಷಿ :``ನ ಗುರೋರದ್ಥಿಕಂ ನ ಗುರೋರದ್ಥಿಕಂ ನ ಗುರೋರದ್ಥಿಕಂ | ವಿದಿತಂ ವಿದಿತಂ ವಿದಿತಂ ವಿದಿತಂ ಶಿವಶಾಸನಂ ||'' ಎಂದುದಾಗಿ, ಗುರುವಿಂದದ್ಥಿಕವಿಲ್ಲ, ಗುರುವಿಂದದ್ಥಿಕವಿಲ್ಲ, ಗುರುವೆ ಪರಮಾತ್ಮ. ಎನ್ನ ಮಾನವಜನ್ಮದ ಹೊಲೆಯ ಕಳೆದು ಶಿವದೇಹಿಯ ಮಾಡಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಗುರುವಿನಲ್ಲಿ ಆಚರಣೆಯ, ಲಿಂಗದಲ್ಲಿ ಅನುಸರಣೆಯ, ಜಂಗಮದಲ್ಲಿ ದೂಷಣ ಮಾಡುತ್ತ ಲಿಂಗವನರಿತು, ಗುರುವ ಮರೆಯಬೇಕು. ಅರಿವನರಿತು, ಜಂಗಮವ ಮರೆಯಬೇಕು. ಗುರುವೆ ಲಿಂಗವಾಗಿ, ಲಿಂಗವೆ ಜಂಗಮವಾಗಿ, ಜಂಗಮವೆ ಅರಿವಾಗಿ ನಿಂದಲ್ಲಿ ಲಿಂಗವನರಿತು, ಗುರುವೆಂಬುದ ಮರೆಯಬೇಕು. ಗುರುವನರಿತು, ಜಂಗಮವ ಮರೆಯಬೇಕು. ಜಂಗಮವ ಮರೆದಲ್ಲಿ ಅರಿವು ಕರಿಗೊಂಡಿತ್ತು, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಎಸವಿನ ಗುರು ಹೋಗಿ ಶಿಶುವಧೆಯ ಮಾಡಿದ. ಶಿಶು ಹೋಗಿ ಮರಳಿ ಗುರುವ ಕೊಂದಡೆಯು, ಹೆಸರುಗೊಂಬ ಅಣ್ಣಗಳು ನೀವು ಕೇಳಿರೋ: ವರಿಬ್ಬರೂ ಸತ್ತಠಾವನೊಬ್ಬರೂ ಅರಿಯರು, ನಿರ್ವಯಲೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->