ಅಥವಾ

ಒಟ್ಟು 1088 ಕಡೆಗಳಲ್ಲಿ , 1 ವಚನಕಾರರು , 1087 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವಿಲ್ಲದ ಶರಣಂಗೆ ಕರ್ಮವಿಲ್ಲ ; ಕರ್ಮಶೂನ್ಯವಾದಲ್ಲಿ ಭಾವನಾಸ್ತಿ ಕಾಣಾ. ಭಾವನಾಸ್ತಿಯಾಗಿ ನಿರ್ಭಾವ ನಿಂದು ನಿಜವಾದಲ್ಲಿ ನೋಡಲಿಲ್ಲ ನುಡಿಯಲಿಲ್ಲ ಕೂಡಲಿಲ್ಲ ಅಗಲಲಿಲ್ಲ. ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿರ್ದ ಸುಖವ ತಂದು ಹೇಳುವರಾರೂ ಇಲ್ಲ ಈ ಮೂರುಲೋಕದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೂಟವನರಿಯದೆ ಕೋಟಲೆಗೊಂಡಿತ್ತು ಲೋಕವೆಲ್ಲ. ಹಾದಿಯೆರಡರಲ್ಲಿ ನಡೆವ ಕುಂಟ ಕುರುಡರು ತಂಟಕರಾಗಿ ಹೋಗಿಬರುವರು. ಸಾಧಕ ಸಂದಣಿಗಳೆಲ್ಲ ಮೇದಿನಿಯೊಳುಳಿದರು. ಹಿರಿಯ ಕಿರಿಯರೆನಿಸುವರೆಲ್ಲ ಬಲೆಯೊಳು ಸಿಲುಕಿದರು. ಉಳಿದವರಂತಿರಲಿ, ಇದನರಿದು ನಾನು ಮಾಟವ ಮರೆದು ಕೂಟವ ಕಂಡು ಕಾಣದೆ ಸಮರಸಾನಂದದೊಳಿರ್ದೆನು ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಾಣಲಿಂಗಸಂಬಂದ್ಥಿಯಾದ ಮಹಾತ್ಮನು ಅರಿಷಡ್ವರ್ಗಂಗಳರಿಯ, ಕ್ಷುತ್ತು ಪಿಪಾಸು ಶೋಕ ಮೋಹ ಜರೆ ಮರಣ ಗುಣತ್ರಯದೊಳೊಂದಿ ನಿಲ್ಲ. ತನುತ್ರಯ ಮಲತ್ರಯ ಈಷಣತ್ರಯ ಜೀವತ್ರಯ ಅವಸ್ಥಾತ್ರಯವೆಂಬ ಪಂಚದಶ ಮಾಯಾಪಟಲ ಹರಿದು ಮರೆದು ಮಹಾಘನ ಬೆಳಗಿನ ಸುಖವ ಸುಗ್ಗಿಯೊಳಿರ್ದು ಪ್ರಾಣಲಿಂಗವನರ್ಚಿಸುತ್ತಿಹನು ಭಕ್ತಿತ್ರಯಗೂಡಿ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೆರೆಹಿಂಗದಾಚಾರ ಅಂಗವೇದಿಯಾಗಿ, ಇತರ ಸಂಗಸಂಯೋಗದತಿಶಯವನಳಿದು ನಿರತಿಶಯ ನಿಜಾನಂದಮಹಿಮನು ನೋಡಾ. ಕರಣವೃತ್ತಿ ಚರಣವ ಕೊಯ್ದು ಅರಿದರ್ಪಿತಮುಖಿ ಅನುಭಾವಿ ನೋಡಾ. ಶಿವಾಣತಿವಿಡಿದು ಸತ್ತುಚಿತ್ತಾನಂದ ನಿತ್ಯದಾಸೋಹಿಯಾಗಿರ್ದ ಗುರುನಿರಂಜನ ಚನ್ನಬಸವಲಿಂಗದಲ್ಲಿ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವು ಜ್ಞಾನಸಂಸಾರಿ, ಜಂಗಮವು ವೈರಾಗ್ಯಸಂಸಾರಿ. ಈ ಸಂಸಾರದ ಸಂದನುರುಹಿ ನಿಃಸಂಸಾರಿಯಾದ ನಿರುಪಮಾನಂದೈಕ್ಯನ ಪದವ ತೋರಿಸಾ ನಿಮ್ಮ ಧರ್ಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಿಶ್ವನ ಕಾರ್ಯವ ಕೆಡಿಸಿ ಕಂಡಲ್ಲಿ ತೈಜಸನ ಕಾರ್ಯಕಳವಳ ಕಡೆಗಾಯಿತ್ತು. ಪ್ರಾಜÕನ ಪರಿಣಾಮ ನಿಜ ಪರಿಣಾಮದ ನಿಲವು ನಿಜವಾದಲ್ಲಿ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿಭಕ್ತಿವಿಡಿದು ಮೆಲ್ಲಮೆಲ್ಲನೆ ಸಾದ್ಥಿಸಿ ಕೈಗೊಟ್ಟ ಪರಿಯ ನೋಡಾ ! ಹಾದಿ ಬಟ್ಟೆಯ ಸಾಧಕರತ್ತ ಸವೆಯದೆ ಮೂದೇವರ ಮಾಟದೊಳಗಿರ್ದು ಕೂಟಕೈದಿದ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುತ್ತೈದೆ ಸತ್ಯಕ್ಕಗಳಿರಾ ! ನಿತ್ಯರೆನ್ನ ಮನೆಗೆ ಕರ್ತುವಾಗಿ ಬಂದರೆ ಅರ್ಥವನೀವೆ. ಅವರಿರತಕ್ಕ ಇಚ್ಫೆ ಬಾರದಮುನ್ನ ಎಚ್ಚರವನೀವುತ ಬನ್ನಿರೆ. ಪಂಚವರ್ಣದಾಭರಣವ ನಿಮ್ಮ ಕೈಯಿಂದೆ ಕೊಡಿಸುವೆ, ನಾನಚ್ಚತಗೊಂಬೆ ಎನ್ನ ಬಯಕೆಯನೊಯ್ದೊಪ್ಪಿಸಿ ಅವರ ಸಮರಸಾನಂದವೆನಗಿತ್ತಡೆ ನಿಮ್ಮ ಕೈಯಲ್ಲಿ ನಿರಂತರ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವಣ್ಣನ ಮಗನಹುದೆಂಬುದು ಕಾಣಬಂದಿತ್ತು ನೋಡಾ; ಚನ್ನಬಸವಣ್ಣನ ಮಗನಮಗನೆಂಬುದು ಕಾಣಬಂದಿತ್ತು ನೋಡಾ; ಪ್ರಭುವಿನ ಮಗನಮಗನಮಗನೆಂಬುದು ಕಾಣ ಬಂದಿತ್ತು ನೋಡಾ; ಅವಸ್ಥಾತ್ರಯದಲ್ಲಿ ಗುರುನಿರಂಜನ ಚನ್ನಬಸವಲಿಂಗ ತಾನೆಂಬುದು ಕಂಡು ಮರೆಯಿತ್ತು ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಷ್ಟಲಿಂಗವ ಹಿಡಿದು ಕಷ್ಟಯೋನಿಗೆ ತಿರುಗುವ ಕೆಟ್ಟ ಪಾತಕರ ನೋಡಲಾಗದು. ಜಂಗಮವೆಂದು ಮಾಡಲಾಗದು ಪೂಜೆಯ. ನಮಿಸಿಕೊಳ್ಳಲಾಗದು ಹರನೆಂದು. ಅದೇನು ಕಾರಣವೆಂದೊಡೆ : ತನುಮನಭಾವನಷ್ಟವಾದಿಷ್ಟಲಿಂಗಜಂಗಮವು ಪೂಜೆಗೆ ಯೋಗ್ಯ. ತನುಮನಭಾವವು ತ್ರಿವಿಧಮಲದಲ್ಲಿ ಮುಳುಗಿ ಮಲರೂಪಮನುಜರಿಗೆ, ಗುರುನಿರಂಜನ ಚನ್ನಬಸವಲಿಂಗವೆಂದೊಡೆ ನಾಚಿಕೆಗೊಂಡಿತ್ತು ಆಚಾರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಮದಲ್ಲಿಮುಳುಗಿ ನುಡಿವರು ಶರಣಂಗೆ ಕಾಮಿಯೆಂದು, ಕ್ರೋಧದಲ್ಲಿಮುಳುಗಿ ನುಡಿವರು ಶರಣಂಗೆ ಕ್ರೋದ್ಥಿಯೆಂದು, ಲೋಭದಲ್ಲಿಮುಳುಗಿ ನುಡಿವರು ಶರಣಂಗೆ ಲೋಬ್ಥಿಯೆಂದು, ಮೋಹದಲ್ಲಿಮುಳುಗಿ ನುಡಿವರು ಶರಣಂಗೆ ಮೋಹಿಯೆಂದು, ಮದದಲ್ಲಿಮುಳುಗಿ ನುಡಿವರು ಶರಣಂಗೆ ಮದಭರಿತನೆಂದು, ಮತ್ಸರದಲ್ಲಿಮುಳುಗಿ ನುಡಿವರು ಶರಣಂಗೆ ಮತ್ಸರಭರಿತನೆಂದು, ಅರಿಷಡ್ವರ್ಗದಲ್ಲಿರ್ದು ಒಂದೊಂದು ನುಡಿದರೆ ಸಂದೇಹವಿಲ್ಲ ಶರಣಂಗೆ. ನಿಂದೆಯನಾಡುವ ನರನಿಗೆ ಸೂಕರಜನ್ಮವು ಇದು ಸತ್ಯ ಗುರುನಿರಂಜನ ಚನ್ನಬಸವಲಿಂಗದ ವಚನ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡೆನುಡಿಯಿಲ್ಲದ ಘನವು ನಡೆನುಡಿಗಡಿಯಿಟ್ಟು ಬಂದರೆ ಎನ್ನ ಸಡಗರ ಹೆಚ್ಚಿತ್ತು ನೋಡಾ ! ಬಡಿವಾರದ ಬಲವಯ್ಯಾ, ಕರ್ತು ಭೃತ್ಯಕಳೆ ಉನ್ನತವಾಗಿ ಶಕ್ತಿಯನು ಮುಕ್ತಿದಾಯಕ ಮುನಿಸಿಲ್ಲದೆ ಮುಂದುವರಿ. ನಾದ ಬಿಂದು ಕಳೆ ನವೀನವಯ್ಯಾ. ಮೂದೇವರೊಡೆಯ ಶರಣು ಶರಣು ಕರುಣಾನಿದ್ಥಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅವನಿ ಮಡದಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸಡಗರದಿಂದಡಗಿದ ಸುಖವ ಹೇಳಲಾರೆ ಕಾಣಮ್ಮ. ಅಪ್ಪು ಸತಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೌಖ್ಯದೊಳೊಂದಿದ ಸುಖವ ಹೇಳಲಾರೆ ಕಾಣಮ್ಮ. ಪಾವಕ ನಾರಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಅವಧಾನವೆರೆದ ಸರಸವನು ಹೇಳಲಾರೆ ಕಾಣಮ್ಮ. ಮರುತ ಸ್ತ್ರೀಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೊಂಪಿನೊಳಗಿರ್ದ ಸುಖವ ಹೇಳಲಾರೆ ಕಾಣಮ್ಮ. ಗಗನವೆಣ್ಣಾದಂದು, ಅವ ಎನ್ನ ಕೈಗೆ ಬಂದಂದು, ನಿನ್ನಿಂದ ನಿರ್ಮಲಾನಂದ ಸಮರಸದೊಳಗಿರ್ದೆ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುಜಾÕನಸತ್ಕ್ರಿಯಾನುಭಾವ ಗುರುಲಿಂಗಜಂಗಮವೆನ್ನ ಅಂಗ ಮನ ಪ್ರಾಣವೆಂದರಿದು, ಕಸಗಳೆದು ವಿಷಯ ಪದಾರ್ಥವನು, ಸುಶೀಲ ಸಾವಧಾನದಿಂದರ್ಪಿಸಿ ಅಸಮಪ್ರಸಾದವಕೊಂಡು, ಪರಮಾನಂದಸುಖಿಮುಖಿಯಾಗಿರ್ದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಹದಲ್ಲಿ ಮನಮುಳುಗಿಸಿದ ಮಹಾಂತನ ಬಗೆಗೊಳ್ಳದೆ ಬೊಗಳಲಾಗದು. ಅದೇನು ಕಾರಣವೆಂದೊಡೆ, ಲಿಂಗದೊಳಗಿರ್ದು ಬಲ್ಲಂತೆ ನಡೆವನು ಬಲ್ಲಂತೆ ನುಡಿವನು. ಬಲ್ಲಂತೆ ಸಕಲ ವ್ಯವಹಾರದೊಳಗಿರ್ದರು ಎಂತಿರ್ದಂತೆ ನಿಜವು ತಾನೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->