ಅಥವಾ

ಒಟ್ಟು 47 ಕಡೆಗಳಲ್ಲಿ , 1 ವಚನಕಾರರು , 47 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಫಣಿಯ ಹೆಡೆಯ ಮೇಲೆ, ಒಂದು ಮಣಿಮಾಡದ ಮಂಟಪ. ಒಬ್ಬರಿಗಲ್ಲದೆ ಇಬ್ಬರಿಗಿಂಬಿಲ್ಲ. ಗಂಡಹಂಡೆರಿಬ್ಬರಿಗೆ ಇಹ ತೆರನಾವುದು ? ತೆರಪಿಲ್ಲದುದ ಕಂಡು, ಗಂಡನ ಮಂಡೆಯ ಮೇಲೆ ಹೆಂಡತಿ ಅಡಗಿರಲಾಗಿ, ಬಂದಬಂದವರೆಲ್ಲರೂ ಅವಳ ಕಂಡು ಮನ ಸೋತು, ಗಂಡನ ಕೊಂದು, ಅವಳ ಕೊಂಡು ಹೋಹಾಗ, ಹುದುಗು ಹಿಂಗದೆ, ಇವರೆಲ್ಲರೂ ಕೊಂದಾಡಿ ಸತ್ತರು. ಇದರ ಸಂಗವಾರಿಗೂ ಚೋದ್ಯ, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು. ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು. ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು. ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು. ಶರಣನಾದಲ್ಲಿ ಆ ಸ್ಥಲ ಅಳವಟ್ಟು. ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು. ಆರು ಲೇಪವಾಗಿ, ಮೂರು ಮುಗ್ಧವಾಗಿ, ಒಂದೆಂಬುದಕ್ಕೆ ಸಂದಿಲ್ಲದೆ, ಲಿಂಗವೆ ಅಂಗವಾಗಿಪ್ಪ ಶರಣನ ಇರವು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನು ತಾನಾದ ಶರಣ.
--------------
ಮನುಮುನಿ ಗುಮ್ಮಟದೇವ
ಕುಲ ಜಾತಿ ವರ್ಗದ ಶಿಶುಗಳಿಗೆ ಹಲವು ಭೇದದ ಹಾಲು. ನಲವಿಂದ ತಮ್ಮ ತಮ್ಮ ಮೊಲೆಗಳ ಉಂಡಲ್ಲದೆ ಬೆಳವಣಿಗೆಯಿಲ್ಲ. ಹಾಲು ದೇಹ ಹಲವಾದಡೆ, ಅಳಿವು ಉಳಿವು ಎರಡೇ ಭೇದ. ಏನನರಿತಡೂ ಜೀವನ ನೋವನರಿಯಬೇಕು. ನುಡಿ ನಡೆ ಎರಡಿಲ್ಲದೆ ದೃಢವಾಗಿ ಇರಬೇಕು. ಬಿರುದು ಹಿರಿಯರೆಂದಡೆ ಬಿಡಬೇಕಲ್ಲದೆ, ಕಡಿಯಬಹುದೆ ಅಯ್ಯಾ ? ಮಾತಿನಲ್ಲಿ ಬಲ್ಲವರಾದಡೆ, ನೀತಿಯಲ್ಲಿ ಮರೆದಡೆ ಕೊಡನೊಡೆದ ಏತದ ಕಣೆಯಂತೆ, ಶರೀರದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಹಾವಿನ ಹಲ್ಲಿನ ವಿಷದ ಕೊಳಪೆಯ ಮೂಲೆಯಲ್ಲಿ, ಮೂರು ಕಪ್ಪೆ ಹುಟ್ಟಿದವು. ಒಂದಕ್ಕೆ ಕಾಲಿಲ್ಲ, ಒಂದಕ್ಕೆ ಬಾಯಿಲ್ಲ, ಒಂದಕ್ಕೆ ಕಣ್ಣಿಲ್ಲ. ಕಾಲಿಲ್ಲದ ಕಪ್ಪೆ ಮೂರುಲೋಕವ ಸುತ್ತಿತ್ತು. ಬಾಯಿಲ್ಲದ ಕಪ್ಪೆ ಬ್ರಹ್ಮಾಂಡವ ನುಂಗಿತ್ತು. ಕಣ್ಣಿಲ್ಲದ ಕಪ್ಪೆ ಕಂಗಾಣದವರ ಕಂಡಿತ್ತು. ಈ ಖಂಡಮಂಡಲದ ಅಂಗವ ಬಿಡಿಸು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಧರೆಯ ಉದಕ ಮಾರುತನ ಸಂಗದಿಂದ, ಆಕಾಶಕ್ಕೆ ಎಯ್ದಿ ಭುವನಕ್ಕೆ ಸೂಸುವಂತೆ, ಆತ್ಮವಸ್ತುವಿನಲ್ಲಿ ಎಯ್ದಿ ವಸ್ತುವ ಬೆರಸುವಂತೆ, ಇದು ನಿಶ್ಚಯವೆಂದರಿದ ಆ ಚಿತ್ತ ಇಷ್ಟಲಿಂಗವೇ ಮೂರ್ತಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕಣ್ಣು ಮೂರು, ತಲೆಯಾರು, ಬಾಯಿಯೆಂಟು, ಭಗವೊಂಬತ್ತು. ಆರ ಬಗೆಗೂ ಅಳವಡದ ಬಾಲೆ, ಬಾಲನನರಸಿ ಬಳಲುತ್ತೈದಾಳೆ. ಆ ನಾಳಕ್ಕೆ ಒಡೆಯನಿಲ್ಲದೆ, ಬಾಲನ ಬಗೆ ಎಂತಪ್ಪದು ಎನಗೆ ಹೇಳಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ಪದವನರಿಯದ ವಾಚಕ, ಘಾತಕನ ಇರವು ಪುಸಿ ಧನುವಿನಲ್ಲಿ ಸಿಕ್ಕಿದ ಮಿಸುಕಿದ ಕಣೆಯಂತೆ, ಹುಸಿದವನ ಒಡಲಿನ ಪ್ರತಿಮೂದಲೆಯಂತೆ. ಇಂತೀ ಅರಿವಿನ ಒಳಗನರಿಯದ ಜೂಜಿನ ಹುದುಗಿಂಗೆ ಬಂದು, ಸುರಿಗಾಯ ಸುರಿವವನ ವಿದ್ಥಿಯಂತೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು, ಭೂತಕಾಯವಾಗಿ ತಿರುಗುವ ಆತನನರಿಯದ ಬೌದ್ಧಕಾರಿಗಳು ಕೇಳಿರೊ. ಜಾಗ್ರಸ್ವಪ್ನಸುಷುಪ್ತಿಯಲ್ಲಿ ತಟ್ಟುಗೆಡೆಯದ ತಟ್ಟಲ್ಲದೆ ಹಾಸಿಕೆಯಲ್ಲ. ಮನ ಬುದ್ಧಿ ಚಿತ್ತ ಅಹಂಕಾರ ಎಂಬಿವು ಕೂಡಿ, ಸುಚಿತ್ತವೆಂಬರಿವು ಹಿಂಗದ ಕೋಲಿನಲ್ಲಿ ಕಟ್ಟಿ, ಮೂರಂಗವ ತೊಡೆವುದು ಕುಂಚ. ಹುಟ್ಟುವ ಅಂಡ, ಜನಿಸುವ ಯೋನಿ, ಮರಣದ ಮರವೆಯೆಂಬೀ ಗುಣವ ಅರಿತು, ಕೀಳುವುದು ಮಂಡೆಯ ಲೋಚು. ಹಿಂಗರಿತು ಕರಿಗೊಂಡು, ಭವವಿರೋಧವಂ ಗೆದ್ದು, ಅಘನಾಶನನ ಅಂಗದ ಮೇಲೆ ಇಂಬಿಟ್ಟು, ಹೆರೆಹಿಂಗದ ಸಂಗವೆ ತಾನಾಗಿ, ಆತ ಮಂಗಳಮಯ ಗುರುಮೂರ್ತಿ, ಎನ್ನಂಗದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಶಿಲೆಯೊಳಗಣ ಭೇದದಿಂದ ಒಲವರವಾಯಿತ್ತು. ಹಲವು ಕಡಹಿನಲ್ಲಿ ತೆಪ್ಪವನಿಕ್ಕಿದಡೆ, ಹೊಳೆ ಒಂದೆ, ಹಾದಿಯ ಹೊಲಬು ಬೇರಲ್ಲದೆ, ಧರೆ ಸಲಿಲ ಪಾವಕ ಇವು ಬೇರೆ ದೇವರ ಒಲವರವುಂಟೆ ? ಧರೆ ಎಲ್ಲರಿಗೂ ಆಧಾರ, ಸಲಿಲ ಎಲ್ಲಕ್ಕೂ ಆಪ್ಯಾಯನ ಭೇದ, ಪಾವಕ ಸರ್ವಮಯರಿಗೆ ದಗ್ಧ. ಸರ್ವಮಯ ಪೂಜಿತ ದೈವದ ಆಧಾರ, ನೀನಲ್ಲದೆ ಬೇರೆಯಿಲ್ಲ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ವೇದಂಗಳ ನಾಲ್ಕು ಭೇದಿಸಲರಿಯದೆ, ಹದಿನಾರು ಶಾಸ್ತ್ರ ನಿಮ್ಮ ಶಾಂತಿಯನರಿಯದೆ, ಇಪ್ಪತ್ತೆಂಟು ಪುರಾಣ ನಿಮ್ಮ ಪುಣ್ಯದ ಪುಂಗವನರಿಯದೆ, ತೊಳಲಿ ಬಲುಳವುದಕ್ಕೆ [ಚ]ರ್ಚೆಯ ಮಾಡಿದೆ. ನಾ ಕೆಟ್ಟೆ, ಹುಚ್ಚುಗೊಂಡ ನಾಯಿ ಒಡೆಯನ ಕಚ್ಚಿದಂತೆ, ಕೆಟ್ಟೆ. ಆಗಮಗಳಲ್ಲಿ ಹೋರಿ, ದೃಷ್ಟವ ಕಾಣದೆ ಹೊತ್ತುಹೋರಿದೆನಯ್ಯಾ. ತಿರುಗುವ ಮೃಗವ ಎಚ್ಚಂತೆ, ಎನೆಗದು ಕುರುಹಾಯಿತ್ತು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಸುಜ್ಞಾನ ಅಜ್ಞಾನವೆಂಬ ಉಭಯದ ಭೇದ, ದೀಪದ ಕುಡಿವೆಳಗಿನ ಧೂಮದ ಪರಿಯಂತೆ. ಅರಿವು ಮರವೆ ಬೇರೆ ಎಡೆದೆರಪಿಲ್ಲದೆ ಪುದಿದು, ಆತ್ಮನಲ್ಲಿ ಎಡೆಬಿಡುವಿಲ್ಲದಿಪ್ಪುದು, ಹೆರೆಹಿಂಗುವ ಪರಿಯಿನ್ನೆಂತೊ ? ಪಂಕ ಸಲಿಲದಂತೆ, ಪಾಷಾಣ ಪಾವಕನಂತೆ, ತೈಲ ರಜ್ಜುವಿನ ಯೋಗದಂತೆ ಹೆರೆಹಿಂಗಿದಡೆ ಅರಿಯಬಾರದು. ಕೂಡಿದ್ದಡೆ ಅರಿವಿಂಗೆ ವಿರೋಧ. ಗೋವು ಮಾಣಿಕವ ನುಂಗಿದಂತೆ. ಇದಾರಿಗೂ ಅಸಾಧ್ಯ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ಅವನರಿದವಂಗಲ್ಲದಿಲ್ಲ.
--------------
ಮನುಮುನಿ ಗುಮ್ಮಟದೇವ
ಹಿಮಾಚಲದ ತಳದಲ್ಲಿ, ಮಹೀತಳದ ಮಧ್ಯದಲ್ಲಿ, ಹುಟ್ಟಿದಳೊಬ್ಬ ರಾಕ್ಷಸಿ. ಮುಂದೆ ಮೂವರು ಮಕ್ಕಳು, ಹಿಂದೆ ಐವರು ಒಡಹುಟ್ಟಿದವರು. ತಂದೆ ಎಡದಲ್ಲಿ, ತಾಯಿ ಬಲದಲ್ಲಿ, ಬಂಧುಗಳೆಲ್ಲರು ಹಿಂದೆ ಮುಂದೆ ಸುತ್ತಿ, ರಾಕ್ಷಸಿ ಮುಂದಳ ಹಿಂದಳ ಸುತ್ತಿಪ್ಪ ಬಂಧುಗಳ ಒಂದೆ ಬಾರಿ ನುಂಗಿದಳು. ಕೈಗೆ ಮೈಯವಳಲ್ಲ, ಮನಕ್ಕೆ ಸಂಶಯದವಳಲ್ಲ. ಇವಳ ಕೊಂದಡೆ ಸಂಹಾರಕ್ಕೆ ಇಲ್ಲ. ಇವಳಿದ್ದಡೆ ಎನ್ನ ಮನಕ್ಕೆ ಭಯಂಕರ. ಈ ಭೀತಿಯ ಬಿಡಿಸು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕಣ್ಣಿನೊಳಗಣ ಕಸ, ಕೈಯೊಳಗಣ [ಮೆ]ಳೆ, ಬಾಯೊಳಗಣ ಬಗದಳ, ಮನದ ಶಂಕೆ ಹರಿದಲ್ಲದೆ ಪ್ರಾಣಲಿಂಗಿಯಾಗಬಾರದು. ಕಣ್ಣಿನ ನೋಟ, ಕೈಯ ಕುರುಹು, ಬಾಯ ಬಯಕೆ, ಚಿತ್ತದ ವೈಕಲ್ಯ ನಷ್ಟವಾಗಿಯಲ್ಲದೆ ವಸ್ತುನಿರ್ದೇಶವನರಿಯಬಾರದು. ಅರಕೆ ಅರತು ಅರಿತಡೆ, ಅದೇ ವಸ್ತು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಅಮ್ಮಿಕಲ್ಲಿನಲ್ಲಿ ಅಮಲವ ಅರೆದಡೆ ಹತ್ತುವುದೆ ಬಂಧ ? ನಿರ್ಮಲಚಿತ್ತದಲ್ಲಿ ಪರಿಬಂಧ ಪ್ರವೇಶಿಸುವುದೆ ? ಇದು ಸಾಕು ನಿಲ್ಲು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ತನುವಿನೊಳಗಣ ತನು, ಮನದೊಳಗಣ ಮನ, ಜ್ಞಾನದೊಳಗಣ ಜ್ಞಾನ, ಕಾಣುವ ಕಂಗಳಿಂಗೆ ಮತ್ತಮಾ ಕಣ್ಣು ತೆಗೆದು ನೋಡಲಾಗಿ, ಬ್ರಹ್ಮ ಹರುಗೋಲವಾದ, ವಿಷ್ಣು ಸಟ್ಟುಗವಾದ, ರುದ್ರ ಅಂಬಿಗನಾಗಿ ಒತ್ತಿದ. ಹರುಗೋಲ ಸಿಕ್ಕಿತ್ತು, ಮಾತಂಗವೆಂಬ ಪರ್ವತದ ತಪ್ಪಲಿನ ಸಿಕ್ಕುಗಲ್ಲಿನಲ್ಲಿ. ಹರುಗೋಲು ಕೊಳೆತಿತ್ತು, ಹುಟ್ಟು ಮುರಿಯಿತ್ತು, ಅಂಬಿಗ ಎತ್ತಹೋದನೆಂದರಿಯೆ. ಎನಗಾ ಬಟ್ಟೆಯ ಹೇಳಾ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಇನ್ನಷ್ಟು ... -->