ಅಥವಾ

ಒಟ್ಟು 90 ಕಡೆಗಳಲ್ಲಿ , 18 ವಚನಕಾರರು , 81 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನಗೆ ನೀನಿಂಬುಕೊಡುವಲ್ಲಿ, ಸಕಲವ ಪ್ರಮಾಣಿಸುವುದ ಬಿಟ್ಟು ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನಿಶ್ಶಕ್ತಿನಿರ್ಲೇಪವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದ ಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡಿಹೆನೆಂದು ತೊಟ್ಟ ಠಕ್ಕು ಠವಳವ ಬಿಡು. ಸರ್ವ ರಾಗ ವಿರಾಗನಾಗಿ ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧುಸಂಪೂರ್ಣನಾಗಿ ನಿನ್ನರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೋಡಿಹೆ, ಇದಕ್ಕೆ ಗನ್ನಬೇಡ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು, ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನೀ ಶಕ್ತಿ ನಿರ್ಲೇಹವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡೆಹೆನೆಂದು ಕೊಟ್ಟ ಠಕ್ಕುಠವಾಳವ ಬಿಡು. ಸರ್ವರಾಗ ವಿರಾಗನಾಗಿ, ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧು ಸಂಪೂರ್ಣನಾಗಿ, ನಿನ್ನ ಅರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೊಡಿಹೆ, ಇದಕ್ಕೆ ಗನ್ನಬೇಡ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮನೆಯನೊಪ್ಪಿಸಿ ಕೊಟ್ಟುವಂಗೆ ಹಿಂದೆಸೆಯ ಹಂಗೇಕೆ? ಮಾಡಿಹೆನೆಂಬ ಮಾಟವುಳ್ಳವಂಗೆ ಅವರಿವರಾಡಿಹರೆಂಬ ಸಂದೇಹವೇಕೆ? ಗುಡಿಯ ಕಟ್ಟಿದ ಮತ್ತೆ ಹಡಹಲ್ಲದೆ ಅವರಡಿಯನರಸಲೇಕೆ? ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು. ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು. ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು. ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು. ಶರಣನಾದಲ್ಲಿ ಆ ಸ್ಥಲ ಅಳವಟ್ಟು. ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು. ಆರು ಲೇಪವಾಗಿ, ಮೂರು ಮುಗ್ಧವಾಗಿ, ಒಂದೆಂಬುದಕ್ಕೆ ಸಂದಿಲ್ಲದೆ, ಲಿಂಗವೆ ಅಂಗವಾಗಿಪ್ಪ ಶರಣನ ಇರವು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನು ತಾನಾದ ಶರಣ.
--------------
ಮನುಮುನಿ ಗುಮ್ಮಟದೇವ
ಮಾತಿನ ಗೂಢವ ನುಡಿದಡೆ, ನೀತಿವಂತರು ಅರಿಯರು. ಜ್ಞಾತೃಜ್ಞೇಯ ಭಾವವ ನುಡಿದಡೆ, ಪ್ರಖ್ಯಾತ ಆಗಮಯುಕ್ತಿ ಅವರರಿಯರು. ಇಂತಿವ ಹೇಳಿದಡೆ ಜಗದ ತೊಡಕು, ಉಳಿದಡೆ ಚಿತ್ತಕ್ಕೆ ವಿರೋಧ. ಇದರಚ್ಚುಗ ಬೇಡ, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಗುಡಿಯೊಳಗಿರ್ದು ಗುಡಿಯ ನೇಣ ಕೊಯಿದಡೆ, ಗುಡಿಯ ದಡಿಗೆ ಬಿದ್ದು ಹಲ್ಲು ಹೋಹುದು, ನೋಡಾ, ಪೊಡವಿಗೀಶ್ವರನ ಗರ್ಭಾವಾಸದೊಳಗಿರ್ದು ನುಡಿವರು ಮತ್ತೊಂದು ದೈವವುಂಟೆಂದು. ತುಡುಗುಣಿನಾಯನು ಪಿಡಿತಂದು ಸಾಕಿದಡೆ ತನ್ನೊಡೆಯಂಗೆ ಬಗಳುವಂತೆ ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಧರೆಯ ಉದಕ ಮಾರುತನ ಸಂಗದಿಂದ, ಆಕಾಶಕ್ಕೆ ಎಯ್ದಿ ಭುವನಕ್ಕೆ ಸೂಸುವಂತೆ, ಆತ್ಮವಸ್ತುವಿನಲ್ಲಿ ಎಯ್ದಿ ವಸ್ತುವ ಬೆರಸುವಂತೆ, ಇದು ನಿಶ್ಚಯವೆಂದರಿದ ಆ ಚಿತ್ತ ಇಷ್ಟಲಿಂಗವೇ ಮೂರ್ತಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಐದು ಕಂಬದ ಗುಡಿಯ ಶಿಖರದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತ್ತಿತ್ತು ನೋಡಾ. ಆ ಲಿಂಗದ ಬೆಳಗಿನೊಳಗೆ ತನ್ನ ಮರೆದು ನಿಃಪ್ರಿಯನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಪದವನರಿಯದ ವಾಚಕ, ಘಾತಕನ ಇರವು ಪುಸಿ ಧನುವಿನಲ್ಲಿ ಸಿಕ್ಕಿದ ಮಿಸುಕಿದ ಕಣೆಯಂತೆ, ಹುಸಿದವನ ಒಡಲಿನ ಪ್ರತಿಮೂದಲೆಯಂತೆ. ಇಂತೀ ಅರಿವಿನ ಒಳಗನರಿಯದ ಜೂಜಿನ ಹುದುಗಿಂಗೆ ಬಂದು, ಸುರಿಗಾಯ ಸುರಿವವನ ವಿದ್ಥಿಯಂತೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಆತುರ ಹಿಂಗದವಂಗೆ ವೇಶೆಯ ಪೋಷಿಸಲೇಕೆ ? ಈಶ್ವರನನರಿಯದವಂಗೆ ಸುಕೃತದ ಪೂಜೆಯ ಪುಣ್ಯವದೇಕೆ ? ಹೇಳಿ ಹೊಕ್ಕು ಹೋದ ಮತ್ತೆ ವೇಷದ ಒಲವರವೇಕೆ ? ಭವವಿರೋದ್ಥಿಯ ಭಾವದಲ್ಲಿ ನೆಲಸಿದ ಮತ್ತೆ, ಇದಿರಿಂಗೆ ಸಂಪದಪದವೇಕೆ ? ಒಡಗೂಡಿದಲ್ಲಿ ಅಂಗದ ತೊಡಕೇಕೆ ? ಬಿಡು, ಶುಕ್ಲದ ಗುಡಿಯ ಸುಡು. ಗುಮ್ಮಟನೆಂಬ ನಾಮವ ಅಡಗು, ಅಗಮ್ಯೇಶ್ವರಲಿಂಗದಲ್ಲಿ ಗುಪ್ತನಾಗಿ, ಒಡಗೂಡಿ ಲೇಪಾಂಗವಾಗಿರು.
--------------
ಮನುಮುನಿ ಗುಮ್ಮಟದೇವ
ಬ್ರಹ್ಮಂಗೆ ಇಚ್ಫಾಶಕ್ತಿಯಾಗಿದ್ದಲ್ಲಿ, ವಿಷ್ಣುವಿಂಗೆ ಕ್ರಿಯಾಶಕ್ತಿಯಾಗಿದ್ದಲ್ಲಿ, ರುದ್ರಂಗೆ ಜ್ಞಾನಶಕ್ತಿಯಾಗಿದ್ದಲ್ಲಿ, ಇಂತಿವರು ದಂಪತಿ ಸಹಜವಾಗಿ ಯುಗಜುಗಂಗಳ ಜೋಗೈಸುತ್ತಿದ್ದರು. ಬ್ರಹ್ಮಂಗೆ ಸರಸ್ವತಿಯೆಂದಾರು ! ವಿಷ್ಣುವಿಗೆ ಲಕ್ಷ್ಮೀದೇವಿಯೆಂದಾರು ! ರುದ್ರಂಗೆ ಉಮಾದೇವಿಯೆಂದಾರು ! ಬ್ರಹ್ಮ ಅಂಗವಾಗಿ, ವಿಷ್ಣು ಪ್ರಾಣವಾಗಿ, ರುದ್ರ ಉಭಯಜ್ಞಾನವಾಗಿ, ಅಂದು ತಾಳಿದ ಸಾಕಾರದ ಗುಡಿಯ ಐಕ್ಯನಾದ ಕಾರಣ, ಗುಮ್ಮಟನೆಂಬ ನಾಮವ ತಾಳಿ, ಅಗಮ್ಯೇಶ್ವರಲಿಂಗ ಗುಹೇಶ್ವರನಾದ.
--------------
ಮನುಮುನಿ ಗುಮ್ಮಟದೇವ
ಸಂಗಸಂಯೋಗವೆಂಬ ಪಟ್ಟಣದಲ್ಲಿ ಒಂದು ಲಿಂಗದ ಗುಡಿಯ ಕಂಡೆನಯ್ಯ. ಆ ಗುಡಿಯೊಳಗೆ ಒಬ್ಬ ಪೂಜಿತ ರೂಪನ ಕಂಡೆನಯ್ಯ. ಆ ಪೂಜಿತನ ಪಂಚಮುಖದ ಸರ್ಪ ನುಂಗಿ, ಆ ಸರ್ಪನ ಕೋಳಿ ನುಂಗಿ, ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಕೇರಿಯ ಮುಂದೆ ಒಂದು ಗ್ರಾಮವ ಕಂಡೆನಯ್ಯ, ಆ ಗ್ರಾಮದ ಮುಂದೆ ಒಂದು ಗುಡಿಯ ಕಂಡೆನಯ್ಯ. ಆ ಗುಡಿಯೊಳಗೊಬ್ಬ ಪುರುಷನು ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ! ಆ ಪುರುಷನ ಸರ್ಪ ನುಂಗಿ, ಆ ಸರ್ಪನ ಕಪ್ಪೆ ನುಂಗಿ ನಿರ್ವಯಲಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನ್ನೊಳಗೆ ಮಹಾಲಿಂಗವಿಪ್ಪ ಸುಳುವಿನ ಭೇದವ ಸಮರಸಭಾವದಿಂದ ತಿಳಿದು, ನಿಶ್ಚಿಂತ ನಿರಾಕುಳದ ಮೇಲೆ ಒಂದು ಗುಡಿಯ ಕಂಡೆನಯ್ಯ. ಆ ಗುಡಿಯ ಶಿಖರದ ಮೇಲೆ ತೊಳಗಿ ಬೆಳಗುತ್ತಿತ್ತಯ್ಯ ಪರಬ್ರಹ್ಮದ ಪ್ರಕಾಶವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->