ಅಥವಾ

ಒಟ್ಟು 47 ಕಡೆಗಳಲ್ಲಿ , 7 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಿಂದೆ ಪರೀಕ್ಷಿಸಿ ತಿಳಿದು ನೋಡುವಡೆ, ಪರಿಯಾಯ ಪರಿಯಾಯದಿಂದ ಬಂದಂಗವ ನೀ ಬಲ್ಲೆ ಬಸವಣ್ಣಾ. ನಾ ನೊಂದ ನೋವನು ನೀ ಬಲ್ಲೆ ಬಸವಣ್ಣಾ. ನಾನಂದು ಕಾಲನ ಕಮ್ಮಟಕ್ಕೆ ಗುರಿಯಾಗಿ ಇಪ್ಪಂದು ನೀನು ಶೂನ್ಯರುದ್ರನು ಬಸವಣ್ಣಾ. ನಾನಂದು ಹಲವು ಪರಿಯ ಬಹುರೂಪನಾಡುವಲ್ಲಿ ನೀನು ವಿಚಿತ್ರವಿನೋದನೆಂಬ ಗಣೇಶ್ವರನು ಬಸವಣ್ಣಾ, ಎನ್ನಾದ್ಯಂತವ ನೀ ಬಲ್ಲೆ. ಬಲ್ಲ ಕಾರಣ ಎನ್ನ ಪಾಲಿಸಿದೆ ಬಸವಣ್ಣಾ. ನೀ ಪಾಲಿಸಿದ ಗುಣದಿಂದ ಪಾವನನಾದೆನು ಬಸವಣ್ಣಾ; ಶುದ್ಧ ಸಿದ್ಧ ಪ್ರಸಿದ್ಧವನರಿದೆ ಬಸವಣ್ಣಾ. ಎಲೆ ಗುರುವೆ ಬಸವಣ್ಣಾ, ನೀ ಪಾಸಿದ ಗುಣದಿಂದ ಜೀವನ್ಮುಕ್ತನಾದೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ, ನಿನ್ನವರಿಗೆಯೂ ನಿನಗೆಯೂ ಯೋಗ್ಯನಾದೆ ಬಸವಣ್ಣಾ.
--------------
ಸಿದ್ಧರಾಮೇಶ್ವರ
ಕೇಳು ಕೇಳಾ, ಎಲೆ ಅಯ್ಯಾ, ಬಸವಣ್ಣನು ಅನಿಮಿಷಂಗೆ ಲಿಂಗವ ಕೊಟ್ಟ ಕಾರಣ ಮತ್ರ್ಯಕ್ಕೆ ಬಂದೆನೆಂಬರು. ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ ಜೈನ ಚಾರ್ವಾಕ ಕಾಳಾಮುಖ ಎನಿಸುವ ಷಡ್ದರ್ಶನಾಗಳು ಹೆಚ್ಚಿ, ವಿಭೂತಿ ರುದ್ರಾಕ್ಷಿ ಪಂಚಾಕ್ಷರವನರಿಯದೆ ನರಕಕ್ಕೆ ಭಾಜನವಾಗಿ ಪೋಪರೆಂದು, ದೇವರು ನಂದಿಕೇಶ್ವರನ ಮುಖವ ನೋಡಲು, ಆ ಪ್ರಶ್ನೆಯಿಂದ ಬಂದನಯ್ಯಾ ಬಸವಣ್ಣ ಪರಹಿತಾರ್ಥನಾಗಿ. ದೇವರು ದೇವಿಯರಿಗೆ ಪ್ರಣವಾರ್ಥವ ಬೋಧಿಸುವಾಗ ದೇವಿಯರ ಮುಡಿಯಲ್ಲಿ ಹೊನ್ನ ತುಂಬಿಯಾಗಿ ಷಣ್ಮುಖ ಕೇಳಿದ ಪ್ರಶ್ನೆಯಿಂದ ಬಂದನೆಂಬರಯ್ಯಾ, ಚೆನ್ನಬಸವಣ್ಣನು. ಸಟೆ ಸಟೆ! ಆ ನುಡಿಯ ಕೇಳಲಾಗದು. ಅದೇನು ಕಾರಣವೆಂದಡೆ: ಷಡ್ವಿಧಸ್ಥಲಕ್ಕೆ ಸ್ಥಾಪನಾಚಾರ್ಯನಾಗಿ ಸಕಲ ಪ್ರಮರ್ಥರ್ಗೆ ವೀರಶೈವವ ಪ್ರತಿಷೆ*ಯ ಮಾಡಲೋಸ್ಕರ ಬಂದನಯ್ಯಾ ಚೆನ್ನಬಸವಣ್ಣನು. ದೇವರ ಸಭೆಯಲ್ಲಿ ನಿರಂಜನನೆಂಬ ಗಣೇಶ್ವರನು ಮಾಯಾಕೋಳಾಹಳನೆಂದು ಹೊಗಳಿಸಿಕೊಂಡು ಬರಲಾಗಿ ಆ ಸಮಯದಲ್ಲಿ ದೇವಿಯರು ದೇವರ ಮಾಯಾಕೋಳಾಹಳನಾದ ಪರಿಯಾವುದೆಂದು ಬೆಸಗೊಳಲು, ಆ ಪ್ರಶ್ನೆಯಿಂದ ಪ್ರಭುದೇವರು ಮತ್ರ್ಯಕ್ಕೆ ಬಂದರೆಂಬರಯ್ಯಾ. ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಸುಜ್ಞಾನಿ ನಿರಹಂಕಾರರ ಭಕ್ತಿಗೋಸ್ಕರ ಪ್ರತ್ಯಕ್ಷವಾಗಿ ಬಸವಾದಿ ಪ್ರಮಥರ್ಗೆ ಬೋಧಿಸಿ, ತನ್ನ ನಿಜಪದವ ತೋರಬಂದರಯ್ಯಾ ಪ್ರಭುದೇವರು. ದಕ್ಷಸಂಹಾರದಿಂದ ಬರುವಾಗ ಗುಪ್ತಗಣೇಶ್ವರನ ನಿರಿ ಸೋಂಕಲು, ಆ ಪ್ರಶ್ನೆಯಿಂದ ಬಂದನೆಂಬರಯ್ಯಾ ಮಡಿವಾಳನು. ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಬಿಜ್ಜಳ ಪರವಾದಿಗಳ ಸಂಹರಿಸಲೋಸ್ಕರ ಬಸವಣ್ಣನ ನಿಮಿತ್ತವಾಗಿ ಬಂದನಯ್ಯಾ ಮಡಿವಾಳ ಮಾಚಯ್ಯಗಳು. ಇಂತಿವರು ಮುಖ್ಯವಾದ ಏಳುನೂರು ಎಪ್ಪತ್ತು ಅಮರಗಣಂಗಳಿಗೆ ವಾಸನಾಧರ್ಮವೆಂದಡೆ ಅಘೋರ ನರಕ ತಪ್ಪದಯ್ಯಾ. ಇವರು ಮುಖ್ಯವಾದ ಪ್ರಮಥ ಗಣಂಗಳಿಗೆ ಶಾಪವೆಂದು ಕಲ್ಪಸಿದಡೆ, ನಾಯಕ ನರಕ ತಪ್ಪದು, ಎಲೆ ಶಿವನೆ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮಾಣೆ
--------------
ಸಿದ್ಧರಾಮೇಶ್ವರ
ಹನ್ನೆರಡುಯುಗ ಪ್ರಳಯವಾದಲ್ಲಿ, ಆದಿಬ್ರಹ್ಮಂಗೆ ಪ್ರಳಯ. ಆದಿಬ್ರಹ್ಮನ ಪ್ರಳಯ ಅಳಿದುಳಿದಲ್ಲಿ, ಮೀನಜರಿಗೊಂದು ಸಿಂಪಿನ ಪ್ರಳಯ. ಮೀನಜರಿಗೆ ಮೀನ ಪ್ರಳಯವಾದಲ್ಲಿ, ಅಸಹಸ್ರನೆಂಬ ಗಣೇಶ್ವರಂಗೆ ಒಂದು ಪ್ರಳಯ. ಆ ಅಸಹಸ್ರನೆಂಬ ಗಣೇಶ್ವರನು ಪ್ರಳಯದಲ್ಲಿ ಅಳಿದುಳಿದಲ್ಲಿ, ಅಕ್ಷಯನೆಂಬ ಗಣೇಶ್ವರಂಗೆ ಒಂದು ತಲೆಯ ಪ್ರಳಯ ಆ ಅಕ್ಷಯನೆಂಬ ಗಣೇಶ್ವರಂಗೆ ಅರುವತ್ತುಕೋಟಿ ತಲೆ. ಇಂತಹ ರುದ್ರಾವತಾರ ಹಲವಳಿದಡೆ, ಗುಹೇಶ್ವರಲಿಂಗವನೆಂದೂ ಅರಿಯ !
--------------
ಅಲ್ಲಮಪ್ರಭುದೇವರು
ಅಂದೊಮ್ಮೆ ಧರೆಯ ಮೇಲೆ ಬೀಜವಿಲ್ಲದಂದು ಬಸವನೆಂಬ ಗಣೇಶ್ವರನು ಭೋಂಕರಿಸಿ ಕೆಲೆದಡೆ ಬೀಜ ಉತ್ಪತ್ತಿಯಾಯಿತ್ತು. ಅದೆನೆ ಬಿತ್ತಿ ಅದನೆ ಬೆಳೆದು ಅಟ್ಟಟ್ಟು ಲಿಂಗಕ್ಕೆ ಬೋನವ ಮಾಡಿ- ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ, ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ, ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ, ಎಲೆ ಕೂಡಲಚೆನ್ನಸಂಗಮದೇವಾ, ನಿಮ್ಮಾಣೆ, ನಿಮಗೂ ಎನಗೂ ಬಸವಣ್ಣನ ಪ್ರಸಾದ !
--------------
ಚನ್ನಬಸವಣ್ಣ
ನಾದಬಿಂದುಗಳಿಲ್ಲದಂದು ನಿರ್ಭಯನೆಂಬ ಗಣೇಶ್ವರನು, ಉತ್ಪತ್ತಿ ಸ್ಥಿತಿ ಲಯವಿಲ್ಲದಂದು ಅಕ್ಷಯನೆಂಬ ಗಣೇಶ್ವರನು, ಓದು ವೇದಂಗಳಿಲ್ಲದಂದು ಓಂಕಾರನೆಂಬ ಗಣೇಶ್ವರನು, ಯುಗಜುಗಂಗಳಿಲ್ಲದಂದು ಊಧ್ರ್ವಮುಖನೆಂಬ ಗಣೇಶ್ವರನು, ಗುಹೇಶ್ವರಲಿಂಗವಿಲ್ಲದಂದು ನಿರ್ಮಾಯನೆಂಬ ಗಣೇಶ್ವರನು.
--------------
ಅಲ್ಲಮಪ್ರಭುದೇವರು
ಶುದ್ಧವೆ ತದ್ರೂಪವಾಗಿ ಬಾರನೆ ಅಂದು ಅನಾಹತನೆಂಬ ಗಣೇಶ್ವರನು ಬಂದೆನ್ನ ಜರಿಯನೆ? ಜರಿದರೆ ನೀನು ಕೊಟ್ಟ ತಲೆಯ ಹುಣ್ಣ ಕಣ್ಣೆಂದು ತೆರೆದು ಲಜ್ಜೆಗೆಡನೆ ಆನಾ ಗಣೇಶ್ವರನ ಕೈಯಲ್ಲಿ? ಶುದ್ಧಕಾತನೊಡೆಯ, ಸಿದ್ಧಕಾತನೊಡೆಯ, ಪ್ರಸಿದ್ಧಕಾತನೊಡೆಯ! ಒಪ್ಪಿಪ್ಪಾರು ಆತನ ಸೀಮೆ. ಮೂವತ್ತಾರರ ಮೇಲಿಂದಾತನ ಸಂಯೋಗ. ಇಂತಪ್ಪಾತನ ನೀನೆನ್ನಲರಿಯದೆ ನೊಂದೆ ಕೆಲವು ದಿನ. ಈ ನೋವ ಮಾಣಿಸಿದಾತನೂ ಆತನೆ, ಎನ್ನ ಭವವ ತಪ್ಪಿಸಿದಾತನೂ ಆತನೆ, ಆತನಿಂದ ಉರುತರ ಕೈವಲ್ಯಕ್ಕೆ ಕಾರಣಿಕನಾದೆ! ಆತನ ಪ್ರಸಾದದಿಂದ ನಿನ್ನವರ ಪಾದೋದಕ ಪ್ರಸಾದಕ್ಕೆ ಯೋಗ್ಯನಾದೆ. ಫಲಪದಕ್ಕೆ ದೂರವಾದೆ ಕಪಿಲಸಿದ್ಧಮಲ್ಲಿಕಾರ್ಜುನ, ಬಸವಣ್ಣನಿಂದ!
--------------
ಸಿದ್ಧರಾಮೇಶ್ವರ
ವಿಘ್ನೇಶ್ವರ ಹರನ ಮಗನೆಂಬ ಪಂಚಮಹಾಪಾತಕರ ನುಡಿಯ ಕೇಳಲಾಗದು. ಪಾರ್ವತಿ ಹರನ ಸತಿಯೆಂಬ ಲಿಂಗದ್ರೋಹಿಗಳ ನೆನೆಯಲಾಗದು. ಬಹುರೂಪಿ ಹರನ ಸರಿಯೆಂಬ ಗುರುದ್ರೋಹಿಗಳ ನೆನೆಯಲಾಗದು. ಅಂದೆಂತೆಂದಡೆ:`ಯತ್ರ ಜೀವಾತ್ಮ ತತ್ರ ಶಿವ' ಎಂದೆನಿಸಿಕೊಂಬಾತನೊಬ್ಬ ಗಣೇಶ್ವರನು. ಭೂಮಿಪೀಠಾಕಾಶವಾಗಿರ್ದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಬಾಣಸವ ಮಾಡಿಸಿದಾತನೊಬ್ಬ ಗಣೇಶ್ವರನು. ಅರ್ಜುನನ ಕೂಡ ಯುದ್ಧವ ಮಾಡಿ, ತನ್ನ ಸತಿಯಳಿಗೆ ತೋರಿಸಿದಾತನೊಬ್ಬ ಗಣೇಶ್ವರನು. ಅಂಗಜನ ಸಂಹಾರವ ಮಾಡಿದಾತನೊಬ್ಬ ಆದಿರುದ್ರನೆಂಬ ಗಣೇಶ್ವರನು. ದಕ್ಷನ ಸಂಹಾರವ ಮಾಡಿದಾತನೊಬ್ಬ ವೀರಭದ್ರನೆಂಬ ಗಣೇಶ್ವರನು. ಹತ್ತು ಅವತಾರ ವಿಷ್ಣುವಿಂಗೆ, ಅನಂತ ಅವತಾರ ಬ್ರಹ್ಮಂಗೆ. ಇಂತಿವರೆಲ್ಲರಿಗೂ ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ. ಈ ನಾಲ್ಕೂ ಪ್ರಳಯಚಕ್ರವೆಂದೆನಿಸಿಹವು. ಇಂತಿವರೊಳಗಾದವರೆಲ್ಲರು ಇನ್ನುಳಿದವರು ನರದೇಹಿಗಳಿಗೆ ಪ್ರಳಯವು. ಉಪಮಿಸಲಾಗದು, ಅಜಾತ ಪವಿತ್ರ ನಿರ್ಲೇಪ [ಜಂಗಮಲಿಂಗ ಪ್ರಭುವೆ].
--------------
ಮಾರೇಶ್ವರೊಡೆಯರು
ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು. ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು. ಪೃಥ್ವಿಯೆ ಪೀಠ ಆಕಾಶವೆ ಲಿಂಗ_ಅಂತಹ ಆತನೊಬ್ಬ ಗಣೇಶ್ವರನು. ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಭಿಕ್ಷವ ಬೇಡಿದಾತನೊಬ್ಬ ಗಣೇಶ್ವರನು. ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ ನೀಲಕÀಂಠನೆಂಬಾತನೊಬ್ಬ ಗಣೇಶ್ವರನು._ ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು
--------------
ಅಲ್ಲಮಪ್ರಭುದೇವರು
ಕೇಳಿ ಕೇಳಿರಯ್ಯಾ ಮತ್ರ್ಯಲೋಕದ ಮಹಾಗಣಂಗಳು ನೀವೆಲ್ಲ. ನಾವು ನಮ್ಮ ಲಿಂಗದೊಳಗೆ ಅಂಗಸಹಿತ ಐಕ್ಯವಾಗುವ ಠಾವ ಹೇಳಿಹೆವು ಕೇಳಿರಯ್ಯಾ ! ಕೇಳಿರಯ್ಯಾ, ಏಕಚಿತ್ತರಾಗಿ ಲಾಲಿಸಿರಯ್ಯಾ. ಷಣ್ಮುಖನೆಂಬ ಗಣೇಶ್ವರನ ಹೃದಯಕಮಲದಲ್ಲಿ ಸದಾನಂದನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಸದಾನಂದನೆಂಬ ಗಣೇಶ್ವರನ ಹೃದಯಕಮಲಕರ್ಣಿಕದಲ್ಲಿ ವಿಶ್ವತೋಮುಖನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ವಿಶ್ವತೋಮುಖನೆಂಬ ಗಣೇಶ್ವರನ ಹೃದಯಕಮಲದಲ್ಲಿ ಆದಿನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಆದಿನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅನಾದಿನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅನಾದಿನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ ಗೋಳಕನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಗೋಳಕನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಗಮ್ಮೇಶ್ವರನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಗಮ್ಮೇಶ್ವರನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಖಂಡೇಶ್ವರನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಖಂಡೇಶ್ವರನೆಂಬ ಗಣೇಶ್ವರನ ಹೃದಯಕಮಲದಲ್ಲಿ ಜ್ಯೋತಿರ್ಮಯನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಜ್ಯೋತಿರ್ಮಯನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಭೇದ್ಯನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಭೇದ್ಯನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಪ್ರಮಾಣನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಪ್ರಮಾಣನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅವಾಚ್ಯಾತ್ಮಕನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅವಾಚ್ಯಾತ್ಮಕನೆಂಬ ಗಣೇಶ್ವರನ ಹೃದಯಕಮಲದಲ್ಲಿ ಸರ್ವಶೂನ್ಯ ನಿರಾಲಂಬನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಸರ್ವಶೂನ್ಯ ನಿರಾಲಂಬನೆಂಬ ಗಣೇಶ್ವರನ ಹೃದಯಕಮಲಮಧ್ಯದ ಮಹಾಬಯಲೊಳಗೆ ನಮ್ಮ ಅಖಂಡೇಶ್ವರಲಿಂಗಸಹಿತ ನಿರವಯಲಾಗಿ ಮರಳಿ ಇತ್ತ ಬಾರದಿರ್ಪೆವು ಕೇಳಿರಯ್ಯಾ.
--------------
ಷಣ್ಮುಖಸ್ವಾಮಿ
ಕರಿಯ ಮುಖದ ಸೂಳೆ ಹತ್ತೆಂಟು ಮುಖದೋರಿ ಪರಿಪರಿ ಕೇರಿಯಲ್ಲಿ ಸುಳಿದಾಡಿ, ಈ ಜಗವನೆಲ್ಲಾ ಏಡಿಸ್ಯಾಡುತಿಪ್ಪಳು ನೋಡಾ. ಇದು ಕಾರಣ, ಪ್ರಥಮ ಕಾಲದಲ್ಲಿ ನಿರಂಜನ ಗಣೇಶ್ವರನು ಬಂದು ಆ ಸೂಳೆಯ ಹಿಡಿದು ನೆರೆದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನಾದಿಗಣೇಶ್ವರನ ಶಿಷ್ಯ ಆದಿಗಣೇಶ್ವರ. ಆದಿಗಣೇಶ್ವರನ ಶಿಷ್ಯ ನಿರ್ಮಾಯನೆಂಬ ಗಣೇಶ್ವರ. ನಿರ್ಮಾಯನೆಂಬ ಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ. ನಿರಂಜನನೆಂಬ ಗಣೇಶ್ವರನ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರನು. ಜ್ಞಾನಾನಂದನೆಂಬಗಣೇಶ್ವರನ ಶಿಷ್ಯರು ಆತ್ಮಗಣೇಶ್ವರನು. ಆತ್ಮಗಣೇಶ್ವರನ ಶಿಷ್ಯರು ಅಧ್ಯಾತ್ಮಗಣೇಶ್ವರ. ಅಧ್ಯಾತ್ಮಗಣೇಶ್ವರನ ಶಿಷ್ಯರು ರುದ್ರನೆಂಬ ಗಣೇಶ್ವರ. ರುದ್ರನೆಂಬ ಗಣೇಶ್ವರನ ಶಿಷ್ಯರು ಬಸವಪ್ರಭುದೇವರು. ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು. ಆದಿಲಿಂಗದೇವರ ಶಿಷ್ಯರು ಚೆನ್ನವೀರೇಶ್ವರದೇವರು. ಚೆನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿಯ ಗೋಸಲದೇವರು. ಹರದನಹಳ್ಳಿಯ ಗೋಸಲದೇವರ ಶಿಷ್ಯರು ಶಂಕರದೇವರು. ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು. ದಿವ್ಯಲಿಂಗದೇವರ ಶಿಷ್ಯರು ಚೆನ್ನಬಸವೇಶ್ವರದೇವರು. ಚೆನ್ನಬಸವೇಶ್ವರದೇವರ ಕರಕಮಲದಲ್ಲಿ ಉತ್ಪತ್ತಿಯಾದ ಶಿಶು ಸಿದ್ಧಲಿಂಗ ನಾನಯ್ಯ. ಹೀಂಗೆ ಅನಾದಿವಿಡಿದು ಬಂದ ಗುರು ಅನಾದಿವಿಡಿದು ಬಂದ ಲಿಂಗ ಅನಾದಿವಿಡಿದು ಬಂದ ಜಂಗಮ ಅನಾದಿವಿಡಿದು ಬಂದ ಗುರು-ಶಿಷ್ಯ ಸಂಬಂಧ ಅನಾದಿವಿಡಿದು ಬಂದ ಪಾದೋದಕ-ಪ್ರಸಾದ ಅನಾದಿವಿಡಿದು ಬಂದ ಭಕ್ತಿ-ಜ್ಞಾನ-ವೈರಾಗ್ಯ ಅನಾದಿ ಸಂಸಿದ್ಧವಾದ ವೀರಶೈವಾಚಾರಸಂಪತ್ತು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ರುಂಡವ ಧರಿಸಿದಾತ ರುಂಡಾಭರಣನೆಂಬ ಗಣೇಶ್ವರನು. ಆಕಾಶವ ಧರಿಸಿದಾತ ಅಂಢಾಭರಣನೆಂಬ ಗಣೇಶ್ವರನು. ಭೂಮ್ಯಾಕಾಶವ ತಾಳವ ಮಾಡಿ ಒತ್ತಿದಾತ ಕ್ಷಿತಿವಿಯತ್ತಳನೆಂಬ ಗಣೇಶ್ವರನು. ಬ್ರಹ್ಮಾಂಡವ ಖಂಡಿಸಿದಾತ ಬ್ರಹ್ಮಾಂಡಖಂಡಿತನೆಂಬ ಗಣೇಶ್ವರನು. ತ್ರಿಪುರದಹನವ ಮಾಡಿದಾತ ಪಂಚವಿಕೃತನೆಂಬ ಗಣೇಶ್ವರನು. ಕಾಮದಹನವ ಮಾಡಿದಾತ ಅರ್ಧನಾರೀಶ್ವರನೆಂಬ ಗಣೇಶ್ವರನು. ಬಲ್ಲಾಳನ ವಧುವ ಬೇಡಿದಾತ ಮಹಾರುದ್ರನೆಂಬ ಗಣೇಶ್ವರನು. ಸಿರಿಯಾರನ ಮಗನ ಭಿಕ್ಷವ ಬೇಡಿದಾತ ಬಹುಭಿಕ್ಷುಕನೆಂಬ ಗಣೇಶ್ವರನು. ಪರ್ವತಂಗಳ ಧರಿಸಿದಾತ ಪರ್ವತಾಭರಣನೆಂಬ ಗಣೇಶ್ವರನು. ಇಂತಿವರೆಲ್ಲರೂ ಕೂಡಲಚೆನ್ನಸಂಗಯ್ಯನ ಲೀಲೆಯ ತದರ್ಧಕರು.
--------------
ಚನ್ನಬಸವಣ್ಣ
-->