ಅಥವಾ

ಒಟ್ಟು 60 ಕಡೆಗಳಲ್ಲಿ , 23 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗಂಧವೃಕ್ಷವ ಕಡಿದಲ್ಲಿ ನೊಂದೆನೆಂದು ಗಂಧವ ಬಿಟ್ಟಿತ್ತೆ ಅಯ್ಯಾ? ಚಂದದ ಸುವರ್ಣವ ತಂದು ಕಾಸಿ ಬಡಿದಡೆ, ನೊಂದನೆಂದು ಕಳಂಕ ಹಿಡಿಯಿತ್ತೆ ಅಯ್ಯಾ? ಸಂದು ಸಂದು ಕಡಿದ ಕಬ್ಬು ಯಂತ್ರದಲ್ಲಿಟ್ಟು ತಿರುಹಿ ಕಾಸಿದಡೆ, ನೊಂದೆನೆಂದು ಸಿಹಿಯಾಗುವುದ ಬಿಟ್ಟಿತ್ತೆ ಅಯ್ಯಾ? ತಂದು ತಂದು ಭವಕಟ್ಟಿಬಿಟ್ಟಡೆ, ನಿಮ್ಮರಿವು ಬಿಟ್ಟೆನೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಚಿನ್ನವನೊರೆಯಬಹುದಲ್ಲದೆ ಬಣ್ಣವನೊರೆಯಬಹುದೆ ? ಹೂವ ಮುಡಿಯಬಹುದಲ್ಲದೆ ಗಂಧವ ಮುಡಿಯಬಹುದೆ ? ಕರ್ಮವ ಮಾಡಬಹುದಲ್ಲದೆ ವಸ್ತುವನರಿಯಬಹುದೆ ? ಗುಹೇಶ್ವರನೆನಬಹುದಲ್ಲದೆ, ಲಿಂಗವು ತಾನಾಗಬಾರದು ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ. ಲಿಂಗಕ್ಕೆ ಪ್ರಾಣ ಮೊದಲೋ? ಪ್ರಾಣಕ್ಕೆ ಲಿಂಗ ಮೊದಲೋ? ಈ ಉಭಯವ ವಿಚಾರಿಸಿಕೊಂಡು ನುಡಿಯಿರಣ್ಣಾ. ವಾಯು ಗಂಧವ ಸೋಂಕಿತೊ? ಗಂಧ ವಾಯುವ ಸೋಂಕಿತೊ? ಲಿಂಗವ ಮನವರಿಯಿತೊ? ಮನವ ಲಿಂಗವರಿಯಿತೊ? ಕಾಯದಿಂದ ಸೋಂಕಿದ ಸುಖವ ಮನದಿಂದರಿದವರಾರೊ? ಮನದಲ್ಲಿ ಮುಟ್ಟಿದ ಗುಣವ ತನುವಿನಿಂದರಿದವರಾರೊ? ಇಂತೀ ಉಭಯವನರಿದಡೆ ಪ್ರಾಣಲಿಂಗಿಗಳೆಂಬೆ. ಉರಿ ಸೋಂಕಿದ ಕರ್ಪುರಕ್ಕೆ ನಿಲುವುದಕ್ಕೆ ನೆಲೆವನೆಯಿನ್ನಾವುದೊ? ಭ್ರಮರ ಸೋಂಕಿದ ಸುವಾಸನೆಗೆ ಕಡೆ ನಡು ಮೊದಲಾವುದೊ? ಧೂಳು ಕೊಂಡ ಜಲಕ್ಕೆ ನೆಲೆಯಿನ್ನಾವುದೊ? ಲಿಂಗ ಸೋಂಕಿದ ಮನಕ್ಕೆ, ಲಿಂಗನವರಿವುದಕ್ಕೆ ನೆಲೆಗೊಂಬ ಠಾವಿನ್ನಾವುದೊ? ಇಂತೀ ಗುಣಂಗ[ಳೆಲ್ಲ] ಕಳೆದುಳಿದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಾಣಿಯ ಮೇಲೆ ಶ್ರೀಗಂಧವನಿಟ್ಟು, ಗಂಧ ಗಂಧವೆಂದಡೆ ಗಂಧವ ಕೊಡಬಲ್ಲುದೆ ? ಜಡಚಕ್ರದೊಳಗೆ ಧಾನ್ಯವ ನೀಡಿ ಹಿಟ್ಟೆಂದಡೆ ಹಿಟ್ಟಾಗಬಲ್ಲುದೆ ? ಗಾಣಕ್ಕೆ ಎಳ್ಳು ನೀಡಿ, ಎಣ್ಣೆ ಎಣ್ಣೆ ಎಂದಡೆ ಎಣ್ಣೆ ಬೀಳಬಲ್ಲುದೆ ? ಪಂಚಾಮೃತವ ಪಾಕವ ಮಾಡಿ ಎಡೆಯ ಬಡಿಸಿ ಮುಂದಿಟ್ಟುಕೊಂಡು, ಹೊಟ್ಟೆ ತುಂಬು ತುಂಬು ಎಂದಡೆ ಹೊಟ್ಟೆ ತುಂಬಿ ಹಸುವಡಗಬಲ್ಲುದೆ ? ಹಾಗೆ ಜಡರೂಪವಾದ ಲಿಂಗವ ಜಡಮತಿಗಳಾದ ಗುರುಮುಖದಿಂ ಪಡಕೊಂಡು ಅಂಗದ ಮೇಲೆ ಇಷ್ಟಲಿಂಗವೆಂದು ಧರಿಸಿ ಆ ಲಿಂಗಕ್ಕೆ ಮುಕ್ತಿಯ ಕೊಡು ಕೊಡು ಎಂದಡೆ, ಆ ಲಿಂಗವು ಮುಕ್ತಿಯ ಕೊಡಲರಿಯದು. ಅದೆಂತೆಂದೊಡೆ : ಚಂದನ, ಧಾನ್ಯ, ತಿಲಪಂಚಪಾಕವನು 'ಮರ್ದನಂ ಗುಣವರ್ಧನಂ' ಎಂದುದಾಗಿ, ಇಂತೀ ಎಲ್ಲವು ಮರ್ದನವಿಲ್ಲದೆ ಸ್ವಧರ್ಮಗುಣ ತೋರಲರಿಯವು. ಹಾಗೆ ಅಂತಪ್ಪ ಜಡಸ್ವರೂಪನಾದ ಲಿಂಗವನು ಜ್ಞಾನಗುರುಮುಖದಿಂ ಶಿಲಾಲಿಖಿತವ ಕಳೆದು, ಕಳಾಭೇದವ ತಿಳಿದು, ಆ ಲಿಂಗವೇ ಘನಮಹಾ ಇಷ್ಟಲಿಂಗವೆಂಬ ವಿಶ್ವಾಸ ಬಲಿದು ತುಂಬಿ ಅಂತಪ್ಪ ಇಷ್ಟಬ್ರಹ್ಮದಲ್ಲಿ ಅವಿರಳಸಂಬಂದ್ಥಿಯಾಗಿ ಆ ಇಷ್ಟಲಿಂಗದ ಸತ್ಕ್ರಿಯಾಚಾರದಲ್ಲಿ ಸರ್ವಾಂಗವನು ದಹಿಸಿದಲ್ಲದೆ ಭವಹಿಂಗದು, ಮುಕ್ತಿದೋರದು, ಮುಕ್ತಿಯ ಪಡೆಯಲರಿಯದೆ ಪ್ರಾಣಲಿಂಗಿಯಾಗಲರಿಯನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗಂಧವ ಬಂದ್ಥಿಸಿ ಹಿಡಿದೆಹೆನೆಂದಡೆ ಆ ಗಂಧದ ಅಂಗವಿಲ್ಲದೆ ನಿಂದುದುಂಟೆ ಸುಗಂಧ? ಈ ಶಿವಲಿಂಗವನರಿಯದ ಆತ್ಮನು ಮುಂದೆ ಏತರಿಂದ ಸಂದ್ಥಿಸುವುದು? ಇದು ಲಿಂಗಾಂಗಿಯ ಸಾವಧಾನ ಸಂಬಂಧ. ನಿಳಯದ ಬಾಗಿಲು ತಿಳುವಳ. ಲಿಂಗಮೂರ್ತಿಯ ತದ್ದಾ ್ಯನ ಶುದ್ಧ ಲೇಪವಾದುದು ತತ್ಕಾಲ ಸಂಬಂದ್ಥಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅಯ್ಯ, ನಿಃಶೂನ್ಯಾಕೃತಿ, ಕ್ಷಕಾರ ಪ್ರಣಮ, ದಿವ್ಯನಾದ, ಶಿಖಾಚಕ್ರ, ಮಹಾಜ್ಯೋತಿವರ್ಣ, ನಿರಾಲಂಬಸ್ಥಲ, ಚಿನುಮಯ ತನು, ನಿರಾಳ ಹಸ್ತ, ಶೂನ್ಯಲಿಂಗ, ಉನ್ಮನಿಮುಖ, ನಿರಹಂಕಾರ ಭಕ್ತಿ, ಪರಿಪೂರ್ಣಪದಾರ್ಥ, ಪರಿಪೂರ್ಣಪ್ರಸಾದ, ಪರಶಿವ ಪೂಜಾರಿ, ಪರಶಿವನದ್ಥಿದೇವತೆ, ಅವಿರಳ ಸಾದಾಖ್ಯ, ಆಗಮವೆಂಬ ಲಕ್ಷಣ, ನಿರ್ಮಾಯವೆಂಬ ಸಂಜ್ಞೆ, ದಿವ್ಯನಾದ, ಘೋಷದಿಕ್ಕು, ಮನೋರ್ಲಯ ವೇದ, ಚಿಚ್ಚಂದ್ರನೆ ಅಂಗ, ದಿವ್ಯಾತ್ಮ, ನಿಭ್ರಾಂತಿ ಶಕ್ತಿ ಅನಂತಕಲೆ ಇಂತು ಇಪ್ಪತ್ತುನಾಲ್ಕು ಸಂಕೀಲಂಗಳನೊಳಕೊಂಡು ಎನ್ನ ಶಿಖಾಚಕ್ರವೆಂಬ ಹೇಮಾದ್ರಿಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಶಿವಮಂತ್ರ ಶಿಕ್ಷಾಕರ್ತೃಸ್ವರೂಪವಾದ ಶೂನ್ಯಲಿಂಗವೆ ಹಿರಣ್ಯೇಶ್ವರಲಿಂಗವೆಂದು ಕರಣತ್ರಯವ ಮಡಿಮಾಡಿ, ಅನುಪಮವೆಂಬ ಜಲದಿಂ ಮಜ್ಜನಕ್ಕೆರದು, ಚಂದ್ರ ನಿವೃತ್ತಿಯಾದ ಗಂಧವ ಧರಿಸಿ, ವಿರಳ ಅವಿರಳವಾದಕ್ಷತೆಯನಿಟ್ಟು, ಅಲ್ಲಿಹ ತ್ರಿದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಮಹಾಜ್ಯೋತಿವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ನಿಃಸಂಸಾರಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ಸದಾನಂದವೆಂಬಾಭರಣವ ತೊಡಿಸಿ, ಪರಿಪೂರ್ಣವೆಂಬ ನೈವೇದ್ಯವನರ್ಪಿಸಿ, ನಿರಹಂಕಾರವೆಂಬ ತಾಂಬೂಲವನಿತ್ತು, ಇಂತು ಶೂನ್ಯಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಶತಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು, ಆ ಶೂನ್ಯಲಿಂಗವ ಪೂಜೆಯ ಸಮಾಪ್ತವ ಮಾಡಿ, ಜ್ಞಾನ ಜಪವೆಂಬ ದ್ವಾದಶ ಪ್ರಣಮ ಮಂತ್ರಗಳಿಂದೆ ನಮಸ್ಕರಿಸಿ, ಆ ಶೂನ್ಯಲಿಂಗದ ತಾನೆಂದರಿದು, ಕೂಡಿ ಎರಡಳಿದು ನಿಸ್ಸಂಸಾರಿಯಾಗಿ ಆಚರಿಸಬಲ್ಲಾತನೆ ನಿರಹಂಕಾರ ಭಕ್ತಿಯನುಳ್ಳ ನಿರಾತಂಕ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕೂಡಿದ ಧನವೆಲ್ಲವನು ಗುರುಲಿಂಗಜಂಗಮಕ್ಕೆ ವಂಚನೆಯ ಮಾಡಿ ಒಳಗಿಟ್ಟುಕೊಂಡು, ನೆಲನ ತೋಡಿ ಬಚ್ಚಿಟ್ಟುಕೊಂಡು. ಹಲವು ತೆರದ ಆಭರಣಂಗಳ ಮಾಡಿಸಿ, ಕರ ಚರಣ ಉರ ಕರ್ಣಂಗಳೊಳಗಿಟ್ಟುಕೊಂಡು, ಮತ್ತಿಷ್ಟು ಬದುಕಾಗಲೆಂದು ತನ್ನ ಕೈಯೊಳಗಿನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡುವ ಲಿಂಗಪೂಜಕನ ಪರಿ ಎಂತೆಂದೊಡೆ; ಆ ಭಕ್ತನು ಪಂಚಾಬ್ಥಿಷೇಕದಿಂದ ಲಿಂಗಕ್ಕೆ ಮಜ್ಜನವ ನೀಡಿದಡೆ ಲಿಂಗದ ಚಿತ್ತದಲ್ಲಿ ಸುಣ್ಣ ನೀರನೆತ್ತಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ವಿಭೂತಿಯ ಧರಿಸಿದಡೆ ಲಿಂಗದ ಚಿತ್ತದಲ್ಲಿ ಬೂದಿಯ ಬೊಕ್ಕಣವ ಕಟ್ಟಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಗಂಧವ ಧರಿಸಿದರೆ ಲಿಂಗದ ಚಿತ್ತದಲ್ಲಿ ಚಂಡಿಟ್ಟು ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಅಕ್ಷತೆಯನೇರಿಸಿದರೆ ಲಿಂಗದ ಚಿತ್ತದಲ್ಲಿ ಕಲ್ಲು ಹೊರಿಸಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ಪುಷ್ಪವ ಧರಿಸಿದರೆ ಲಿಂಗದ ಚಿತ್ತದಲ್ಲಿ ಬೆನ್ನ ಮೇಲೆ ಹೇರು ಹೊರಿಸಿದಂತಾಯಿತ್ತಯ್ಯಾ ! ಆ ಭಕ್ತನು ಧೂಪವ ಬೀಸಿದರೆ ಲಿಂಗದ ಚಿತ್ತದಲ್ಲಿ ಅರವನಿಕ್ಕಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ದೀಪಾರತಿಯನೆತ್ತಿದರೆ ಲಿಂಗದ ಚಿತ್ತದಲ್ಲಿ ಪಂಜುಗಳ್ಳರು ಬಂದು ಮೋರೆಯ ಸುಟ್ಟು ಬಾ[ದ್ಥಿ]ಸಿದಂತಾಯಿತ್ತಯ್ಯಾ ! ಆ ಭಕ್ತನು ಸ್ತೋತ್ರಮಂತ್ರವ ನುಡಿದರೆ ಲಿಂಗದ ಚಿತ್ತದಲ್ಲಿ ಕರ್ಣದೊಳಗೆ ತೊಣಚಿ ಹೊಕ್ಕು ಗೋಳಿಟ್ಟು ಬಾದ್ಥಿಸಿದಂತಾಯಿತ್ತಯ್ಯಾ ! ಇಂತಪ್ಪ ಲಿಂಗಬಾಧಕರನು ಲಿಂಗಪೂಜಕರೆನಬಹುದೆ ? ಆತನ ಅಂಗಳವ ಮೆಟ್ಟಬಹುದೆ ? ಇದರ ಇಂಗಿತವ ನಿಜಭಾವವುಳ್ಳ ಶರಣರು ನೀವೇ ತಿಳಿದು ನೋಡಿರೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಯ್ಯ, ತಾರಕಾಕೃತಿ, ನಕಾರಪ್ರಣಮ, ವೇಣುನಾದ, ಆಧಾರಚಕ್ರ, ಪೀತವರ್ಣ, ಭಕ್ತಿಸ್ಥಲ, ಸ್ಥೂಲತನು, ಸುಚಿತ್ತಹಸ್ತ, ಆಚಾರಲಿಂಗ, ಘ್ರಾಣಮುಖ, ಶ್ರದ್ಧಾಭಕ್ತಿ, ಸುಗಂಧ ಪದಾರ್ಥ, ಸುಗಂಧಪ್ರಸಾದ, ಬ್ರಹ್ಮಪೂಜಾರಿ, ಬ್ರಹ್ಮನಧಿದೇವತೆ, ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ, ಪೂರ್ವದಿಕ್ಕು, ಋಗ್ವೇದ, ಪೃಥ್ವಿಯ ಅಂಗ, ಜೀವಾತ್ಮ, ಕ್ರಿಯಾಶಕ್ತಿ, ನಿವೃತ್ತಿಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನಧಾರಚಕ್ರವೆಂಬ ಶ್ರೀಶೈಲಪರ್ವತ ಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಪಂಚಾಚಾರಸ್ವರೂಪವಾದ ಆಚಾರಲಿಂಗವೆ ಮಲ್ಲಿಕಾರ್ಜುನಲಿಂಗವೆಂದು ತನುತ್ರಯವ ಮಡಿಮಾಡಿ, ಶಿವಾನಂದವೆಂಬ ಜಲದಿಂ ಮಜ್ಜನಕ್ಕೆರದು, ಪೃಥ್ವಿ ನಿವೃತ್ತಿಯಾದ ಗಂಧವ ಧರಿಸಿ ಚಿತ್ತ ಸುಚಿತ್ತವಾದÀಕ್ಷತೆಯನಿಟ್ಟು, ಅಲ್ಲಿಹ ಚತುರ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲ ಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಪೀತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ಜಾಗ್ರವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿಃಕಾಮವೆಂಬಾಭರಣವ ತೊಡಿಸಿ, ಸುಗಂಧವೆಂಬ ನೈವೇದ್ಯವನರ್ಪಿಸಿ, ಶ್ರದ್ಧೆಯೆಂಬ ತಾಂಬೂಲವನಿತ್ತು, ಇಂತು ಆಚಾರಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಆಚಾರಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು, ಆ ಆಚಾರಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ನಂ ನಂ ನಂ ನಂ ನಂ ನಂ ಎಂಬ ನಕಾರ ಷಡ್ವಿಧಮಂತ್ರಗಳಿಂದ ನಮಸ್ಕರಿಸಿ, ಈ ಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಬ್ಬೆರಗಿನಿಂದ ಆಚರಿಸಬಲ್ಲಾತನೆ ಶ್ರದ್ಧಾಭಕ್ತಿಯನುಳ್ಳ ಸದ್ಭಕ್ತ ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ತಾರಕಾಕೃತಿ ಮೊದಲಾಗಿ ನವಾಕೃತಿಗಳು, ಅಯ್ಯ, ನಕಾರಪ್ರಣಮ ಮೊದಲಾಗಿ ನವಪ್ರಣಮಗಳು, ಅಯ್ಯ, ಭ್ರಮರನಾದ ಮೊದಲಾಗಿ ನವನಾದಗಳು, ಆಧಾರಚಕ್ರ ಮೊದಲಾಗಿ ನವಚಕ್ರಗಳು, ಪೀತವರ್ಣ ಮೊದಲಾಗಿ ನವವರ್ಣಗಳು, ಭಕ್ತಿಸ್ಥಲ ಮೊದಲಾಗಿ ನವಸ್ಥಲಗಳು, ಸ್ಥೂಲತನು ಮೊದಲಾಗಿ ನವತನುಗಳು, ಸುಚಿತ್ತಹಸ್ತ ಮೊದಲಾಗಿ ನವಹಸ್ತಗಳು, ಅಚಾರಲಿಂಗ ಮೊದಲಾಗಿ ನವಲಿಂಗಗಳು, ಘ್ರಾಣಮುಖ ಮೊದಲಾಗಿ ನವಮುಖಗಳು, ಶ್ರದ್ಧಾಭಕ್ತಿ ಮೊದಲಾಗಿ ನವಭಕ್ತಿಗಳು, ಸುಗಂಧಪದಾರ್ಥ ಮೊದಲಾಗಿ ನವಪದಾರ್ಥಗಳು, ಸುಗಂಧಪ್ರಸಾದ ಮೊದಲಾಗಿ ನವಪ್ರಸಾದಗಳು, ಬ್ರಹ್ಮಪೂಜಾರಿ ಮೊದಲಾಗಿ ನವಪೂಜಾರಿಗಳು, ಬ್ರಹ್ಮ ಅಧಿದೇವತೆ ಮೊದಲಾಗಿ ನವ ಅಧಿದೇವತೆಗಳು, ಕರ್ಮಸಾದಾಖ್ಯ ಮೊದಲಾಗಿ ನವಸಾದಾಖ್ಯಗಳು, ಸತ್ತುವೆಂಬ ಲಕ್ಷಣ ಮೊದಲಾಗಿ ನವಲಕ್ಷಣಗಳು, ಪರವೆಂಬ ಸಂಜ್ಞೆ ಮೊದಲಾಗಿ ನವಸಂಜ್ಞೆಗಳು, ಪೂರ್ವದಿಕ್ಕು ಮೊದಲಾಗಿ ನವದಿಕ್ಕುಗಳು, ಋಗ್ವೇದ ಮೊದಲಾಗಿ ನವವೇದಗಳು, ಚಿತ್ಪøಥ್ವಿ ಮೊದಲಾಗಿ ನವ ಅಂಗಗಳು, ಜೀವಾತ್ಮ ಮೊದಲಾಗಿ ನವ ಆತ್ಮರು, ಕ್ರಿಯಾಶಕ್ತಿ ಮೊದಲಾಗಿ ನವಶಕ್ತಿಯರು, ನಿವೃತ್ತಿಕಲೆ ಮೊದಲಾಗಿ ನವಕಲೆಗಳು, ಇಂತು ಇಪ್ಪತ್ತುನಾಲ್ಕು ಸಕೀಲಂಗಳು ನವವಿಧ ತೆರದಿಂದ ಇನ್ನೂರ ಹದಿನಾರು ಸಕೀಲು ಮೊದಲಾದ ಸಮಸ್ತ ಕ್ಷೇತ್ರಂಗಳನೊಳಕೊಂಡು ಎನ್ನ ಅಣುಚಕ್ರವೆಂಬ ಪರಮಕೈಲಾಸ ಚಿದಾಕಾಶಮಂಡಲದ ವರ ಚೌಕಮಂಟಪ ನವರತ್ನ ಖಚಿತ ಶೂನ್ಯಸಿಂಹಾಸನಪೀಠದಲ್ಲಿ ಮೂರ್ತಿಗೊಂಡಿರ್ದ ಪರಾತ್ಪರ ನಿಜಜಂಗಮಲಿಂಗಸ್ವರೂಪ ಸರ್ವಚೈತನ್ಯಾಧಾರಸ್ವರೂಪವಾದ ಅಣುಲಿಂಗಜಂಗಮವೆ ಪರತತ್ವ ನಿಃಕಲಪರಬ್ರಹ್ಮಮೂರ್ತಿ ಲಿಂಗಜಂಗಮಪ್ರಸಾದವೆಂದು ತನುತ್ರಯ, ಮನತ್ರಯ, ಭಾವತ್ರಯ, ಆತ್ಮತ್ರಯ, ಪ್ರಾಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ, ಕರಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ, ಕರಣತ್ರಯ, ಹಂಸತ್ರಯಂಗಳ ಪೂರ್ಣ ಮಡಿಮಾಡಿ, ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರದು, ನಿಃಕರಣವೆಂಬ ಗಂಧವ ಧರಿಸಿ, ನಿಃಸಂಗವೆಂಬಕ್ಷತೆಯನಿಟ್ಟು, ನಿಃಪರಿಪೂರ್ಣವೆಂಬ ಪುಷ್ಪದಮಾಲೆಯ ಧರಿಸಿ, ನಿರುಪಾಧಿಕವೆಂಬ ಧೂಪವ ಬೀಸಿ, ನಿಃಕಳೆಯೆಂಬ ಜ್ಯೋತಿಯ ಬೆಳಗಿ, ನಿಶ್ಚಲವೆಂಬ ವಸ್ತ್ರವ ಹೊದ್ದಿಸಿ, ಪರಮನಿಜಾಭರಣವ ತೊಡಿಸಿ, ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ, ನಿರಾವಯವೆಂಬ ತಾಂಬೂಲವನಿತ್ತು, ಇಂತೀ ಅಣುಲಿಂಗಜಂಗಮಪ್ರಸಾದಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಭೆಯಂತೆ ಬೆಳಗುವ, ಅಣುಲಿಂಗಜಂಗಮಪ್ರಸಾದವನ್ನು ಅನುಮಿಷದೃಷ್ಟಿಯಿಂ ನಿರೀಕ್ಷಿಸಿ, ಉನ್ಮನಾಗ್ರದಲ್ಲಿ ಸಂತೋಷಂಗೊಂಡು ಆ ಅಣುಲಿಂಗಜಂಗಮಪ್ರಸಾದಪೂಜೆಯ ಸಮಾಪ್ತವ ಮಾಡಿ, ಅನಂತಕೋಟಿ ಮಹಾಮಂತ್ರಂಗಳಿಂದ ನಮಸ್ಕರಿಸಿ, ಆ ಅಣುಲಿಂಗಜಂಗಮಪ್ರಸಾದವೆ ತಾನೆಂದರಿದು ಏಕತ್ವದಿಂ, ನಿಶ್ಚಲಚಿತ್ತದೊಳ್ ಕೂಡಿ ಉಭಯವಳಿದು ಇಹಪರಂಗಳ ಹೊದ್ದದೆ, ಕನ್ನಡಿಯ ಪ್ರತಿಬಿಂಬದಂತೆ ಸರ್ವಸಂಗಪರಿತ್ಯಾಗವಾಗಿ, ನಿಜಾಚರಣೆಯಲ್ಲಿ ಆಚರಿಸಬಲ್ಲಾತನೆ ದಶವಿಧಲಿಂಗಜಂಗಮಸಂಗ ಭಕ್ತಿಪ್ರಸಾದವುಳ್ಳ ಅನಾದಿ ಅಖಂಡ ಚಿಜ್ಜ್ಯೊತಿ ಸದ್ಭಕ್ತ ಜಂಗಮ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಂಗಲಿಂಗ ಸಮರಸವಾದಲ್ಲದೆ, ಸಂಗವ ಮಾಡನಯ್ಯ ನಿಮ್ಮ ಶರಣನು. ಶ್ರೋತ್ರಲಿಂಗ ಸಮರಸವಾದಲ್ಲದೆ, ಶಬ್ದಾದಿಗಳ ಕೇಳನಯ್ಯ ನಿಮ್ಮ ಶರಣನು. ತ್ವಕ್ಕುಲಿಂಗ ಸಮರಸವಾದಲ್ಲದೆ, ಸ್ಪರುಶನಾದಿಗಳ ಮಾಡನಯ್ಯ ನಿಮ್ಮ ಶರಣನು. ನೇತ್ರಲಿಂಗ ಸಮರಸವಾದಲ್ಲದೆ, ರೂಪಾದಿಗಳ ನೋಡನಯ್ಯ ನಿಮ್ಮ ಶರಣನು. ಜಿಹ್ವೆಲಿಂಗ ಸಮರಸವಾದಲ್ಲದೆ, ಷಡುರುಚಿಯ ಕೇಳನಯ್ಯ ನಿಮ್ಮ ಶರಣನು. ಪ್ರಾಣಲಿಂಗ ಸಮರಸವಾದಲ್ಲದೆ, ಗಂಧವ ಕೇಳನಯ್ಯ ನಿಮ್ಮ ಶರಣನು. ಇದು ಕಾರಣ, ಇಂತಪ್ಪ ಭೇದವನರಿತು, ಮಹಾಲಿಂಗದ ಬೆಳಗಿನೊಳು ಕೂಡಿ ಪರಿಪೂರ್ಣತ್ವದಿಂದ ಪರಾಪರಂ ನಾಸ್ತಿಯಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎನ್ನ ಘ್ರಾಣ ಗಂಧವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ಜಿಹ್ವೆ ರುಚಿಯ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ನೇತ್ರ ರೂಪವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ತ್ವಕ್ಕುಸ್ಪರ್ಶನವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ಶ್ರೋತ್ರ ಶಬ್ದವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಇದು ಕಾರಣ ಅಖಂಡೇಶ್ವರಾ, ನಾ ನಿಮಗರಿದು ಕೊಡಬೇಕೆಂಬ ಖಂಡಿತಭಾವವು ಅಖಂಡಿತವಾಯಿತ್ತಯ್ಯಾ.
--------------
ಷಣ್ಮುಖಸ್ವಾಮಿ
ಅಯ್ಯ, ಕುಂಡಲಾಕೃತಿ, ಶಿಕಾರಪ್ರಣಮ, ಭೇರಿನಾದ, ಮಣಿಪೂರಚಕ್ರ, ಹರಿತವರ್ಣ, ಪ್ರಸಾದಿಸ್ಥಲ, ಕಾರಣತನು, ನಿರಹಂಕಾರಹಸ್ತ, ಶಿವಲಿಂಗ, ನೇತ್ರಮುಖ, ಸಾವಧಾನಭಕ್ತಿ, ಸುರೂಪುಪದಾರ್ಥ, ಸುರೂಪಪ್ರಸಾದ, ರುದ್ರಪೂಜಾರಿ, ರುದ್ರನಧಿದೇವತೆ, ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ, ಉತ್ತರದಿಕ್ಕು, ಸಾಮವೇದ, ಅಗ್ನಿಯ ಅಂಗ, ಪರಮಾತ್ಮ, ಇಚ್ಛಾಶಕ್ತಿ, ವಿದ್ಯಾಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕುಂಡು ಎನ್ನ ಮಣಿಪೂರಕಚಕ್ರವೆಂಬ ಪಂಪಾಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ನಿರೀಕ್ಷಣಸ್ವರೂಪವಾದ ಶಿವಲಿಂಗನೆ ಶ್ರೀವಿರೂಪಾಕ್ಷಲಿಂಗವೆಂದು ಆತ್ಮತ್ರಯನ ಮಡಿಮಾಡಿ, ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರದು, ಅಗ್ನಿ ನಿವೃತ್ತಿಯಾದ ಗಂಧವ ಧರಿಸಿ, ಅಹಂಕಾರ ನಿರಹಂಕಾರವಾದಕ್ಷತೆಯನಿಟ್ಟು, ಅಲ್ಲಿಹ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಹರಿತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ಸುಷುಪ್ತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಲೋಭವೆಂಬಾಭರಣವ ತೊಡಿಸಿ, ಸುರೂಪವೆಂಬ ನೈವೇದ್ಯವನರ್ಪಿಸಿ, ಸಾವಧಾನವೆಂಬ ತಾಂಬೂಲವನಿತ್ತು, ಇಂತು ಶಿವಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಶಿವಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ಶಿವಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ ಶಿಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಶಿವಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಃಕಳಂಕನಾಗಿ ಆಚರಿಸಬಲ್ಲಾತನೆ ಸಾವಧಾನಭಕ್ತಿಯನುಳ್ಳ ಶಿವಪ್ರಸಾದಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಮೈ ಶೀತೋಷ್ಣವ ಮರೆದು, ಘ್ರಾಣ ಗಂಧವ ಮರೆದು, ನಯನ ನೋಟವ ಮರೆದು, ಕಿವಿ ಶಬ್ದವ ಮರೆದು, ನಾಲಗೆ ರುಚಿಯ ಮರೆದು, ಅಂಡಜ ಜರಾಯುಜನೆನಿಸದೆ- ಕೂಡಲಚೆನ್ನಸಂಗಯ್ಯನ ಉಪನಯನವಾದ ಶರಣನು.
--------------
ಚನ್ನಬಸವಣ್ಣ
ಇನ್ನಷ್ಟು ... -->