ಅಥವಾ

ಒಟ್ಟು 67 ಕಡೆಗಳಲ್ಲಿ , 26 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಫಣಿಯ ಹೆಡೆಯ ಮೇಲೆ, ಒಂದು ಮಣಿಮಾಡದ ಮಂಟಪ. ಒಬ್ಬರಿಗಲ್ಲದೆ ಇಬ್ಬರಿಗಿಂಬಿಲ್ಲ. ಗಂಡಹಂಡೆರಿಬ್ಬರಿಗೆ ಇಹ ತೆರನಾವುದು ? ತೆರಪಿಲ್ಲದುದ ಕಂಡು, ಗಂಡನ ಮಂಡೆಯ ಮೇಲೆ ಹೆಂಡತಿ ಅಡಗಿರಲಾಗಿ, ಬಂದಬಂದವರೆಲ್ಲರೂ ಅವಳ ಕಂಡು ಮನ ಸೋತು, ಗಂಡನ ಕೊಂದು, ಅವಳ ಕೊಂಡು ಹೋಹಾಗ, ಹುದುಗು ಹಿಂಗದೆ, ಇವರೆಲ್ಲರೂ ಕೊಂದಾಡಿ ಸತ್ತರು. ಇದರ ಸಂಗವಾರಿಗೂ ಚೋದ್ಯ, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಗುರುವೆಂಬ ತಂದೆಗೆ ಶಿಷ್ಯನೆಂಬ ಮಗಳು ಹುಟ್ಟಿ, ಲಿಂಗವೆಂಬ ಗಂಡನ ತಂದು, ಮದುವೆಯ ಮಾಡಿದ ಬಳಿಕ ಇನ್ನಾರೊಡನೆ ಸರಸವನಾಡಲೇಕಯ್ಯಾ ನಾಚಬೇಕು ಲಿಂಗದೆಡೆಯಲ್ಲಿ ನಾಚಬೇಕು ಜಂಗಮದೆಡೆಯಲ್ಲಿ, ನಾಚಬೇಕು ಪ್ರಸಾದದೆಡೆಯಲ್ಲಿ, ನಾಚಿದಡೆ ಭಕ್ತನೆಂಬೆನು, ಯುಕ್ತನೆಂಬೆನು, ಶರಣನೆಂಬೆನು, ನಾಚದಿದ್ದರೆ ಮಿಟ್ಟೆಯ ಭಂಡರೆಂಬೆನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲೌಕಿಕದಲ್ಲಿ ಒಬ್ಬ ಪುರುಷಂಗೆ ಸ್ತ್ರೀಯರು ಒಬ್ಬರು, ಇಬ್ಬರು, ಮೂವರು, ನಾಲ್ವರು, ಐವರು ಪರಿಯಂತರ ಸತಿಯರುಂಟು. ಒಬ್ಬ ಸ್ತ್ರೀಯಳಿಗೆ ಐವರು ಪುರುಷರುಂಟೆ? ಇಲ್ಲೆಂಬ ಹಾಗೆ, ಎನಗೆ ಎನ್ನ ತಾಯಿತಂದೆಗಳು ಮೂರಾರು ಗಂಡರ ಮದುವೆ ಮಾಡಿ ಒಗತನ ಮಾಡೆಂದು ಸಕಲಗಣಂಗಳ ಸಾಕ್ಷಿಯಾಗಿ ಎನಗೆ ಕೊಟ್ಟರು. ಆ ನಿರೂಪವ ಕೈಕೊಂಡು ಗಂಡನ ಸಂಗವ ಮಾಡದೆ ಅವರ ಸಂಗವ ಬಿಡದೆ ರಂಗಮಂಟಪದಲ್ಲಿ ಒಬ್ಬನ ಕುಳ್ಳಿರಿಸಿ, ನಡುಮನೆಯಲ್ಲಿ ಒಬ್ಬನ ಕುಳ್ಳಿರಿಸಿ, ಒಬ್ಬನ ಹಿರಿಮನೆಯಲ್ಲಿ ಕುಳ್ಳಿರಿಸಿ, ಷಡ್ವಿಧಸ್ಥಾನಗಳಲ್ಲಿ ಷಡ್ವಿಧರ ಕುಳ್ಳಿರಿಸಿ, ಇಂತೀ ಪುರುಷರ ಕೂಡಿ ಒಗತನವ ಮಾಡಿ, ಇವರಿಗೆ ಸಿಕ್ಕದೆ ಹೊಲೆಯನ ಕೂಡಿ ಕುಲಗೆಟ್ಟು ನಾಯೆತ್ತ ಹೋದೆನೆಂದರಿಯನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹೇಂಗೆ ಹಡೆವಳಯ್ಯ? ಲಿಂಗಕ್ಕ ನಾಚಿದಾತ ಶರಣನೆಂತಪ್ಪನಯ್ಯ? ಈ ಲಜ್ಜೆ ನಾಚಿಕೆಯೆಂಬ ಪಾಶವಿದೇನಯ್ಯ? ಸಂಕಲ್ಪ ವಿಕಲ್ಪದಿಂದ ಸಂದೇಹಿಸುವ ಭ್ರಾಂತಿಯೇ ಲಜ್ಜೆಯಯ್ಯ. ಅಹುದೋ ಅಲ್ಲವೋ, ಏನೋ ಎಂತೋ ಎಂದು ಹಿಡಿವುತ್ತ ಬಿಡುತ್ತಿಪ್ಪ ಲಜ್ಜಾಭ್ರಾಂತಿ ಉಡುಗಿರಬೇಕಯ್ಯ. ಗಂಡನ ಕುರುಹನರಿಯದಾಕೆಗೆ ಲಜ್ಜೆ, ನಾಚಿಕೆ ಉಂಟಾದುದಯ್ಯ. ಲಿಂಗವನರಿಯದಾತಂಗೆ ಸಂಕಲ್ಪ ವಿಕಲ್ಪವೆಂಬ ಸಂದೇಹ ಭ್ರಾಂತಿ ಉಂಟಾದುದಯ್ಯ. ಈ ಅರುಹು ಮರಹೆಂಬುಭಯದ ಮುಸುಕ ತೆಗೆದು ನೆರೆ ಅರುಹಿನಲ್ಲಿ ಸನ್ನಿಹಿತವಿಲ್ಲದ ಜಡರುಗಳ ಕೈಯಲ್ಲಿ ಲಿಂಗಾನುಭಾವವ ಬೆಸಗೊಳಲುಂಟೆ ಅಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಣ್ಣವ ಬಯಲು ನುಂಗಿದಾಗ ಅಣ್ಣಗಳೆಲ್ಲಕ್ಕೂ ಮರಣವಹಾಗ ಮದವಳಿಗೆಯ ಮದವಳಿಗೆ ಹೋದನೆಂದುಕೊಂಡ. ಒಂದು ಕಡೆಯಲ್ಲಿ ತಾ ಒಂದು ಕಡೆಯಾದ ಪರಿಯ ನೋಡಾ! ಗಂಡನೊಂದಾಗಿ ಹೋದವರ ಮಿಂಡ ಉಳುಹಿಸಿಕೊಂಡ ಪರಿಯ ನೋಡಾ! ಮಿಂಡನೊಂದಾಗಿ ಗಂಡನ ಕೂಡಿಕೊಂಬ ಉಂಡ ಮುಂಡೆಯರತನವ ಕಂಡು ನಾನಂಜುವೆ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ನೀನೆನ್ನನೊಲ್ಲದಿದ್ದರೆ ನಾನಾರ ಸಾರಿ ಬದುಕಲಯ್ಯಾ? ಮೇಕುದೋರಿ ಗಂಡನ ಮಾಡಿಕೊಂಡವರುಂಟೆ? ನಿಮ್ಮಿಂದಲಧಿಕರುಂಟೆ ಹೇಳಾ? ತಲೆಯೂರಿ ತಪಿಸಿದಡೆ, ಅಲ್ಲಿ ಮೂರ್ತಿಯ ತೋರುವಾತ ನೀನೆ. ಕಣ್ಣಮುಚ್ಚಿ ಕಮರಿಯ ಹಾಯ್ದರೆಯೂ ಅಲ್ಲಿ ಪದವಿಯ ಕೊಡುವವನು ನೀನೆ. ನೀನು ಕರುಣಿಸುವನ್ನಕ್ಕ, ನಾನು ಹೀಗಿದೇನೆ ಹೇಳಾ, ಸಕಳೇಶ್ವರಾ.
--------------
ಸಕಳೇಶ ಮಾದರಸ
ಕಡುಜಲಕ್ಕೆ (ಹರಿವ ಜಲಕ್ಕೆ ?) ಇದಿರಾಗಿ ಹರಿವ ಸ್ವಾಮಿಯ ಬರವ ಕಂಡು, ಬಿಡದೆ ಬೆಂಬತ್ತಿಸುವ ಪರಿಯ ನೋಡಾ. ನಡೆ ನುಡಿ ಚೈತನ್ಯ ಒಡಲನೊಂದನು ಮಾಡಿ ಬಿಡದೆ ವೇಧಿಸುವ ಬೆಡಗ ಕಂಡೆನಯ್ಯಾ ! ಕಡೆಗೆ ಸೂಸದ ದೃಷ್ಟಿ, ಹಿಡಿದು ತೊಲಗದ ಹಸ್ತ, ಬೇಡ ಬೇಡ ತನಗೆನ್ನದ ಸಜ್ಜನ ಮಡದಿ, ತನ್ನ ಗಂಡನ ಅಡಗಿ ಕೂಡುವ ಭೇದ !_ ನಡುವಿರುಳು ಕೂಡಿ ನಿಮಿರೆ ಬೆಳಗಾಯಿತ್ತು. ಮಾಡಿ ನೀಡುವನ ಕಂಡು ನಾಡು ಬೀಡೆಲ್ಲ ನೆರೆದು ಕೊಡ ಕೈಯಲ್ಲಿ ಕೊಟ್ಟಡೆ ತೃಪ್ತರಾಗಿ, ಮಾಡುವರು ಹರಸುವರು ನೋಡುವರು ಮನದಣಿಯೆ ಕೊಡುವರು ಕೋಟಿ, ಸಹಜ ಒಂದೆ ಎಂದು ! ಜೋಡ ತೊಡದಾತನ ಮೈಯಲ್ಲಿ, ಕೂಡೆ ಘಾಯವಿಲ್ಲದುದ ಕಂಡು, ನೋಡಿರೆ ಮಸೆ ಮುಟ್ಟದ ಮಹಾಂತನ ! ಬೇಡುವೆನು ಕರುಣವನು, ಪಾದ [ವ]ನೊಸಲಲ್ಲಿ ಸೂಡುವೆನು ಗುಹೇಶ್ವರನ ಶರಣ ಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷೆ*ುಲ್ಲದ ಭಕ್ತ, ಇದ್ದಡೇನೊ ಶಿವ ಶಿವಾ ಹೋದಡೇನೊ ಕೂಡಲಸಂಗಮದೇವಯ್ಯಾ ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ.
--------------
ಬಸವಣ್ಣ
ಗಂಡನುಳ್ಳ ಗರತಿಯರೆಲ್ಲರು ನಿಮ್ಮ ಗಂಡನ ಕುರುಹ ನೀವು ಹೇಳಿರೆ ; ನೀವರಿಯದಿರ್ದಡೆ ನಾವು ನಮ್ಮ ಗಂಡರ ಕುರುಹ ಹೇಳಿಹೆವು ಕೇಳಿರೆ. ಹೊಳೆವ ಕೆಂಜೆಡೆಗಳ, ಬೆಳಗುವ ಭಾಳಲೋಚನದ, ಥಳಥಳಿಪ ಸುಲಿಪಲ್ಲಿನ, ಕಳೆದುಂಬಿ ನೋಡುವ ಕಂಗಳ ನೋಟದ, ಸೊಗಸಿಂದೆ ನಗುವ ಮುಗುಳುನಗೆಯ, ರತ್ನದಂತೆ ಬೆಳಗುವ ರಂಗುದುಟಿಯ, ಚಂಪಕದ ನಗೆಯಂತೆ ಸೊಂಪಾದ ನಾಸಿಕದ, ಶಶಿಯಂತೆ ಬೆಳಗುವ ಎಸೆವ ಕದಪಿನ, ಮಿಸುಪ ಎದೆ ಭುಜ ಕಂಠದ, ಶೃಂಗಾರದ ಕುಕ್ಷಿಯ, ಸುಳಿದೆಗೆದ ನಾಭಿಯ, ತೊಳಪ ತೊಡೆಮಣಿಪಾದಹರಡಿನ, ನಕ್ಷತ್ರದಂತೆ ಹೊಳೆವ ನಖದ ಪಂಕ್ತಿಯ ಚರಣಕಮಲದಲ್ಲಿ ಹರಿಯ ನಯನದ ಕುರುಹಿನ. ಸಕಲಸೌಂದರ್ಯವನೊಳಕೊಂಡು ರವಿಕೋಟಿಪ್ರಭೆಯಂತೆ ರಾಜಿಸುವ ರಾಜಾಧಿರಾಜ ನಮ್ಮ ಅಖಂಡೇಶ್ವರನೆಂಬ ನಲ್ಲನ ಕುರುಹು ಇಂತುಟು ಕೇಳಿರವ್ವಾ.
--------------
ಷಣ್ಮುಖಸ್ವಾಮಿ
ಕತ್ತಿಯ ಕಟ್ಟಿ ಗದ್ರ್ದಿಸಿ ಕಾಳಗದೊಳು ಕುಳಿಯ ಗೆದ್ದು ಪ್ರಾಣವ ತುಂಬಿ ಕೈಲಾಸಕಟ್ಟುವ ಕೂಳಿಯ ಮರುಳಶಂಕರದೇವರಿಗೆ ಬಿಟ್ಟಮಂಡೆಯ ಗಂಗಾಧರದೇವರಿಗೆ ಪಟ್ಟವ ತೊರದು ಗಂಡನ ಜರದ ಅಕ್ಕಮಹಾದೇವಿಗೆ ನಿಷೆ* ನಿರ್ವಾಣ ಬೋಳೇಶ್ವರದೇವರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹಾಳೂರೊಳಗೆ ಬಾಳುವೆಮಾಡುವಳೊಬ್ಬಳು ನಾರಿ. ಮೊದಲ ಮಗನ ಕೈಗಳಲ್ಲಿ ಗಂಡನ ಕಣ್ಣು ನೋಡಾ. ಆ ಕಣ್ಣ ಮೇಲೆ ಬಾಯಿತೆರೆದು ಮೂಗಿಲಿ ಕೊಂಬ ಮುಸುಕಲಿಯೊಳಗಿರ್ದು ಕಣ್ಣನೆತ್ತಿ ಕಡೆಗಂಡು ಕರಗಿದೆಯೆಂಬ ನಡುಮಾತಿನತ್ತತ್ತ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾಚಿಕೆಯಿಲ್ಲದ ಹೆಂಡತಿ, ಗುಣವಿಲ್ಲದ ಗಂಡನ ಮದುವೆಯ ನಿಬ್ಬಣದಲ್ಲಿ, ಮಿಂಡರ ಗುದ್ದಾಟ ಘನವಾಯಿತ್ತು ನೋಡಾ ! ಚೆನ್ನೆಯ ಜವ್ವನದ ಸುಖವ ಚನ್ನಿಗರು ಮೋಹಿಸಿ ಭೋಗವ ಮಾಡಿದರೆ, ಗುರುನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡುಮನೆ ಕಂಬದೊಳಗಿರ್ದ ಬೆಂಕಿ ಹೊರಗೆದ್ದು ಊರನೆಲ್ಲ ಸುಟ್ಟಿತ್ತು ನೋಡಾ! ತಳವಾರನ ಮಡದಿ ಹಡೆದಮಕ್ಕಳ ಬಿಟ್ಟು ಉರಿಯ ಸೀರೆಯನುಟ್ಟು ಗಂಡನ ಶಿರವ ಕೊಯ್ದು ಹಿರಿಯ ಮಗನ ನುಂಗಿ ಉಗುಳದಿರಲು ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧವೆಂಬೆ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಡನ ಸುಖಬಲ್ಲ ಮಿಂಡೆಯರೆಲ್ಲ ಬನ್ನಿರೆ. ತಂಡ ತಂಡದ ಭೋಗವನಾ ಮಂಡಲದ ಮಾನಿನಿಯರೇನು ಬಲ್ಲರು ಕಾಣಿರೆ ! ಸುಚಿತ್ತಾಲಯದಲ್ಲಿ ಬಹಿರಚತುಷ್ಟಿಕಳಾಯುಕ್ತದಿಂ ನೆರೆವ ವತ್ತರ ಒಲುಮೆಯ ರತಿಯೊಳ್ಮುಳುಗಿದ ಸೊಬಗಿನ ಸೊನ್ನೆಯನೇನೆಂಬೆನವ್ವ ! ಸುಬುದ್ಧಿ ನಿಲಯದಲ್ಲಿ ಮಧ್ಯಚತುಷ್ಟಿಕಳಾಯುಕ್ತದಿಂ ಕೂಡುವ ಬಣ್ಣಿತೆ ಭಾವರಮ್ಯ ನಯವಪ್ಪುಗೆಯಸುಖದೊಳ್ಮುಳುಗಿದ ಪರಿಣಾಮದ ಕುಶಲವನೇನೆಂಬೆನವ್ವ ! ನಿರಹಂಕಾರ ಗೃಹದಲ್ಲಿ ಅಂತಃಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ ಎಳೆಮೋಹ ಸಮತೆಯ ಸುಖದೊಳ್ಮುಳುಗಿದ ಪರಮಪರಿಣಾಮವನೇನೆಂಬೆನವ್ವ ! ಸುಮನಮಂಟಪದಲ್ಲಿ ಮಹಾನುಭಾವ ಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ ಕಲೆ ಸೋಂಕು ರತಿರಮ್ಯದೊಳ್ಮುಳುಗಿದ ಅತಿಶಯದುನ್ನತಿಯನೇನೆಂಬೆನವ್ವ ! ಸುಜ್ಞಾನಮಂದಿರದಲ್ಲಿ ಆನಂದಚತುಷ್ಟಿಕಳಾಯುಕ್ತದಿಂ ನೆರೆವ ಮೆಚ್ಚು ಅಚ್ಚೊತ್ತಿರ್ದವಿರಳ ಪರಿ ಸುಖವನೇನೆಂಬೆನವ್ವ ! ಸದ್ಭಾವಾಲಯದಲ್ಲಿ ಸಮರಸಚತುಷ್ಟಿಕಳಾಯುಕ್ತದಿಂ ಸತ್ಕೂಟ ಸನುಮತವೆನಿಸುವ ಅನುಪಮ ಸುಖರತಿಯೊಳ್ಮುಳುಗಿದ ಅಗಣಿತದುನ್ನತಿಯನೇನೆಂಬೆನವ್ವ ! ನಿಜಾಲಯದಲ್ಲಿ ನಿತ್ಯನಿಬ್ಬೆರಗು ಪರವಶ ಪರಿಪೂರ್ಣವೆಂಬ ಅಖಂಡ ಚತುಷ್ಟಿಕಳಾಯುಕ್ತದಿಂ ಅಭಿನ್ನಸಂಯೋಗದತಿಶಯದಾನಂದದೊಳ್ಮುಳುಗಿದ ಘನಸುಖದುನ್ನತಿಯ ಗುರುನಿರಂಜನ ಚನ್ನಬಸವಲಿಂಗದೊಳಗೆ ಏನೆಂಬೆನವ್ವ !
--------------
ದೇಶಿಕೇಂದ್ರ ಸಂಗನಬಸವಯ್ಯ
ಲೋಕದ ಗಂಡರ ಪರಿ ಬೇರೆ, ಎನ್ನ ಗಂಡನ ಪರಿ ಬೇರೆ ಕೇಳಿರವ್ವಾ. ಲೋಕದ ಗಂಡರು ಉಪಚಾರವ ಮಾಡಿ ಕರೆದರೆ ಬರುವರು. ಇಲ್ಲದಾದರೆ ಮೋರೆಯ ತೋರರು. ಎನ್ನ ಗಂಡ ಉಪಚಾರವ ಒಲ್ಲ. ಕರೆದರೆ ಎನ್ನ ಬಿಟ್ಟು ಹೋಗುವ. ಎನ್ನ ಒಡಹುಟ್ಟಿದವರ ಬಿಟ್ಟು ಶಾಲಿಯ ಕಳದು ಪೋದೊಡೆ ಎನ್ನ ಸರ್ವಾಂಗವನು ಬಿಗಿದಪ್ಪಿ ಅಗಲದೆ ಇರುವನವ್ವಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->