ಅಥವಾ

ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತ ಭಕ್ತನೆಂದೇನೊ ? ಭವಿಗಳು ಮನೆಯಲುಳ್ಳನ್ನಕ್ಕ ಭಕ್ತನೆ ? ಭಕ್ತ ಭಕ್ತನೆಂದೇನೊ ? ಅನ್ಯದೈವ ಸುರೆ ಮಾಂಸವುಳ್ಳನ್ನಕ್ಕ ಭಕ್ತನೆ ? ಭಕ್ತ ಭಕ್ತನೆಂದೇನೊ ? ಹರಕೆ ತೀರ್ಥಯಾತ್ರೆಯುಳ್ಳನ್ನಕ್ಕ ಭಕ್ತನೆ ? ಭಕ್ತ ಭಕ್ತನೆಂದೇನೊ ? ತನು ಮನ ಧನ ವಂಚನೆಯುಳ್ಳನ್ನಕ್ಕ ಭಕ್ತನೆ ? ಇವರೆಲ್ಲರು ಎದೆಯಲ್ಲಿ ಕಲ್ಲನಿರಿಸಿಕೊಂಡು ಸಾವಿಂಗೆ ಸಂಬಳಿಗರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
`ಹೆಸರು ಹಾಲಯ್ಯ ಎರೆದುಂಬುದಂಬಿಲ' ಎಂಬ ಲೋಕದ ಗಾದೆಯ ಮಾತು ದಿಟವಾಯಿತಲ್ಲಾ ! ಮಾತು ಕಲಿತು ಮಂಡೆಯ ಬೋಳಿಸಿಕೊಂಡು ಊರ ಮಾರಿಯ ಮರನೇರಿದಂತೆ ಮಾಯೆಯ ಕೊರಳಲ್ಲಿ ಕಟ್ಟಿಕೊಂಡು ಘಟಸರಣಿಯ ಪಶುಗಳು ಜಂಗಮವೆಂದು ಸುಳಿವ ನಾಚಿಕೆಯ ನೋಡಾ ಗುಹೇಶ್ವರ
--------------
ಅಲ್ಲಮಪ್ರಭುದೇವರು
ಭಕ್ತಿಯನಾರು ಬಲ್ಲರು ? ಬಲ್ಲವರನಾರನೂ ಕಾಣೆ. ತನ್ನ ಮರೆದು ಇದಿರ ಹರಿದು ಇರಬಲ್ಲಡೆ ಆತ ಭಕ್ತ . ಆ ಭಕ್ತಂಗೆ ಶಿವನೊಲಿವ. ನುಡಿಯಲ್ಲಿ ಭಕ್ತಿಯನಾಡಿ ನಡೆಯಲ್ಲಿ ಇಲ್ಲದಿದ್ದಡೆ ಕಡೆಮುಟ್ಟಿ ಶಿವನೊಲಿವುದು ಹುಸಿ. ಮರೆದು ಕೋಪದುರಿಯನುಗುಳಿ ಅರಿದು ಬಂದೆರಗಿದೆನೆಂಬ ನುಡಿಗೆ ಒಲಿವನೆ ನಮ್ಮ ಗುಹೇಶ್ವರಲಿಂಗವು ?
--------------
ಅಲ್ಲಮಪ್ರಭುದೇವರು
ಭಕ್ತರ ಮನೆಯೊಳಗೆ ಮನೆಕಟ್ಟಿಕೊಂಡಿಪ್ಪ ಜಂಗಮದ ಇಂಗಿತಾಕಾರವೆಂತೆಂದಡೆ ಆ ಭಕ್ತನ ತನುಮನದೆಡೆಯಲ್ಲಿ ಮೋಹಿತನಾಗದೆ, ಹೋಹ, ಬಾಹ, ಭಕ್ತ ಜಂಗಮಕ್ಕೆ ಮಾಡುವ ದಾಸೋಹ ನೋಡಿ, ಅವರಿಗೆ ಮಾಡುವಡೆ ಎನಗೆ ಮಾಡುವ ಭಕ್ತಿಯೆಂದು ಇದ್ದ ಪರಿಯಲ್ಲಿ ಸುಖಿಸಿ, ಬಂದ ಪರಿಯಲ್ಲಿ ಪರಿಣಾಮಿಸಿ, ನಿಷ್ಕಾಮ್ಯ, ನಿಸ್ಪೃಹ, ನಿರ್ದೋಷಿಯಾಗಿ, ಕೋಪ ತಾಪವಿಲ್ಲದೆ ಭಕ್ತಿ ಜ್ಞಾನಯುಕ್ತನಾಗಿ ಆ ಭಕ್ತನ ನಡೆ ನುಡಿಯಲ್ಲಿ ಜಡ ಹುಟ್ಟಿದರೆ ಅದಲ್ಲವೆಂದು ಕಳೆದು, ಸತ್ಯದ ಬುದ್ಧಿಗಲಿಸಿ ಸಂತೈಸಿಕೊಂಡು ಇಹುದೆ ಜಂಗಮಲಕ್ಷಣ. ಅಂಥ ಜಂಗಮನೆ ಪ್ರಾಣವಾಗಿ, ಅದರಾಜ್ಞೆಯ ಮೀರದೆ ಮನವಚನಕಾಯದಲ್ಲಿ ಉದಾಸೀನವಿಲ್ಲದೆ, ಅವರ ಕೂಡಿಕೊಂಡು ದಾಸೋಹವ ಮಾಡುವುದೆ ಭಕ್ತನ ಲಕ್ಷಣವು. ಈ ಎರಡಕ್ಕೂ ಭವಂ ನಾಸ್ತಿಯಹುದು. ಇಂತಪ್ಪ ಭಕ್ತ ಜಂಗಮದ ಸಕೀಲಸಂಬಂಧವ ಬಸವಣ್ಣ ಮೆಚ್ಚುವನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
-->