ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವನರಿಯದ ಕಾರಣ ತನು ಸವೆಯಬೇಕೆಂಬರು. ಲಿಂಗವನರಿಯದ ಕಾರಣ ಮನ ಸವೆಯಬೇಕೆಂಬರು. ಜಂಗಮವನರಿಯದ ಕಾರಣ ಧನ ಸವೆಯಬೇಕೆಂಬರು. ಇಂತೀ ತ್ರಿವಿಧವನರಿಯದ ಕಾರಣ ಮಾಟಕೂಟಕ್ಕೆ ಮನೆಗಟ್ಟಿ ಮಾಡುತ್ತಿರ್ದರಯ್ಯಾ ಮಹಾಗಣಂಗಳು, ತಾವು ಸ್ವಇಚ್ಫಾಪರರಲ್ಲದೆ. ಬ್ರಹ್ಮನ ಹಂಗಿಂದ ಬಂದ ಗುರುವನರಿಯರಾಗಿ, ವಿಷ್ಣುವಿನ ಹಂಗಿಂದ ಬಂದ ಲಿಂಗವನರಿಯರಾಗಿ, ರುದ್ರನ ಹಂಗಿಂದ ಬಂದ ಜಂಗಮವನರಿಯರಾಗಿ, ಅಹಂಕಾರವ ಮರೆದಲ್ಲಿಯೆ ಗುರುವನರಿದವ, ಚಿತ್ತದ ಪ್ರಕೃತಿಯ ಹರಿದಲ್ಲಿಯೆ ಲಿಂಗವನರಿದವ, ಮಾಟಕೂಟದ ಅಲಸಿಕೆಯ ಮರೆದಾಗವೆ ಜಂಗಮವನರಿದವ. ಇಂತೀ ತ್ರಿವಿಧಸ್ಥಲನಿರತಂಗಲ್ಲದೆ ವರ್ಮವಿಲ್ಲಾ ಎಂದೆ. ಖ್ಯಾತಿ ಲಾಭಕ್ಕೆ ಮಾಡುವಾತನ ಭಕ್ತಿ, ಅಗ್ನಿಯಲ್ಲಿ ಬಿದ್ದ ಬಣ್ಣವನರಸುವಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪಟ ಬಾಲಸರವು ಕೂಡಿರ್ದಡೇನು ? ಸೂತ್ರ ಕಿಂಚಿತ್ತು ತಪ್ಪಿದಡೆ ಖೇಚರತ್ವದಲ್ಲಿ ಆಡಲರಿಯದಂತೆ, ಹೊರಗಣ ಮಾತಿನಿಂ ಗುರುವೆಂದು ಶರಣೆಂದಡೇನಾಯಿತ್ತು ? ಕೈಯಲ್ಲಿ ಲಿಂಗವ ಹಿಡಿದುಕೊಂಡು, ಕಣ್ಣಿನಲ್ಲಿ ನೋಡಿ, ಮನಮುಟ್ಟದಿರ್ದಡೇನಾಯಿತ್ತು ? ಖ್ಯಾತಿ ಲಾಭಕ್ಕೆ ಜಂಗಮಕ್ಕೆ ಧನವ ಕೊಟ್ಟಡೇನಾಯಿತ್ತು? ಇದು, ಉಸಿರ ಹಿಡಿದಡೆ, ದ್ವಾರಂಗಳೆಲ್ಲವೂ ಮುಚ್ಚುವ ತೆರನಂತೆ, ಮಹಾಘನವನರಿದಲ್ಲಿಯೆ ತ್ರಿವಿಧವೂ ಸಮರ್ಪಣ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ಥಲನಿರ್ದೇಶ.
--------------
ಮೋಳಿಗೆ ಮಾರಯ್ಯ
ಸರ್ವೇಂದ್ರಿಯ ಸಮ್ಮತವಾಗಿ ಸರ್ವಕರಣಂಗಳ ಸಮಾಧಾನವ ಮಾಡಿ, ಸಮಸ್ತ ಸುಖಭೋಗಾದಿಗಳ ಬಯಸದೆ, ತನ್ನ ಮರೆದು ಶಿವತತ್ವವನರಿದು, ಅಹಂಕಾರ ಮಮಕಾರವಿಲ್ಲದೆ, ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯ ಮೀರಿ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಗಳನಳಿದು, ಸ್ತುತಿ_ನಿಂದಾದಿ, ಕಾಂಚನ ಲೋಷ*ಂಗಳ ಸಮಾನಂಗಂಡು, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಾದಿ ಪದಂಗಳ ಬಯಸದೆ, ವೇದ ವೇದಾಂತ ತರ್ಕ ವ್ಯಾಕರಣ ದರ್ಶನ ಸಂಪಾದನೆಗಳ ತೊಲಗಿಸಿ, ಖ್ಯಾತಿ ಲಾಭದ ಪೂಜೆಗಳ ಬಯಸದೆ ತತ್ವನಿರ್ಣಯವನರಿಯದವರೊಳು ತಾನೆಂಬುದನೆಲ್ಲಿಯೂ ತೋರದೆ; ಹೊನ್ನು ತನ್ನ ಲೇಸ ತಾನರಿಯದಂತೆ, ಬೆಲ್ಲ ತನ್ನ ಸಿಹಿಯ ತಾನರಿಯದಂತೆ, ವಾರಿಶಿಲೆ ಉದಕದೊಳಡಗಿದಂತೆ, ಪುಷ್ಪದೊಳಗೆ ಪರಿಮಳವಡಗಿದಂತೆ ಅಗ್ನಿಯೊಳಗೆ ಕರ್ಪೂರವಡಗಿದಂತೆ, ಮಹಾಲಿಂಗದಲ್ಲಿ ಲೀಯವಾದುದೆ ಲಿಂಗೈಕ್ಯ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಲಿಂಗ ಜಂಗಮಕ್ಕೆ ಮಾಡಿದ ಭಕ್ತಿ ಮನಕೆ ಮನವೇ ಸಾಕ್ಷಿಯಾಗಿರಬೇಕಲ್ಲದೆ, ಇದಿರಿಟ್ಟು ನುಡಿಯಲಾಗದು. ಅದೇನು ಕಾರಣವೆಂದರೆ : ಬಡವಂಗೆ ಭಾಗ್ಯ ದೊರೆಕೊಂಡಂತಿರಬೇಕಲ್ಲದೆ, ಎನ್ನ ಪದಾರ್ಥವ ನಾನು ಮಾಡಿದೆನು ಅವರು ಕೈಕೊಂಡರೆಂದು ತನ್ನ ಖ್ಯಾತಿ ಭಕ್ತಿಯನು ಮನ ಹಿಗ್ಗಿ ಅನ್ಯರೊಡನೆ ಹೇಳಿಕೊಂಡರೆ ಶಿವನೊಪ್ಪಿಕೊಳ್ಳನು, ಪುರಾತನರು ಮೆಚ್ಚರು. ಅಂತಪ್ಪ ಖ್ಯಾತಿಭಕ್ತನ ಡಂಭಕದ ಭಕ್ತಿಯೆಂತಾಯಿತ್ತೆಂದರೆ, ಹಾವಸಗಲ್ಲ ಮೆಟ್ಟಿ ಜಾರಿ ಬಿದ್ದು ಕೊಡನೊಡೆದಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹಠಯೋಗ ಲಂಬಿಕಾಯೋಗ ಆತ್ಮಯೋಗ ಸಿದ್ಧಯೋಗ ಪಿಶಾಚಯೋಗ ಅಷ್ಟಾಂಗಯೋಗಂಗಳೆಂಬ ಷಡುವಿಧ ಕರ್ಮಯೋಗಂಗಳೊಳು ಶೋಷಣೆ, ದಾಹನೆ, ಪ್ಲಾವನೆ, ಚಾಲನೆ ಖಾಳಾಪಖಾಳಮಂ ಮಾಡಿ ತ್ರಿದೋಷಾದಿಗಳಂ ಪ್ರವರ್ತಿಸಲೀಯದೆ ಮಲಯುಗಮಂ ನೆಲೆಗೊಳ್ಳಲೀಯದೆ ಗಜಕರಣಂಗಳಿಂ ಪವನಧಾರಣೆಯಿಂ ಕಲ್ಪಯೋಗಂಗಳಿಂ ಮೂಲಿಕಾಬಂಧದಿಂ ಬಂಧಿಸಿ, ಘಟಮಂ ನಟಿಸುವುದು ಹಠಯೋಗ. ಪವನಾಭ್ಯಾಸಂಗಳಿಂದಭ್ಯಾಸಯೋಗ, ಕ್ರಮಕ್ರಮಂಗಳಿಂ ಜಿಹ್ವೆಯಂ ಬೆಳಸಿ ಹಠಸಮ್ಮಿಶ್ರದಿಂ ಷಡಾಧಾರದ ಪಶ್ಚಿಮಪಥವಿಡಿದು ಪ್ರಾಣಪವನನ ಮಸ್ತಕಕ್ಕೇರಿಸಿ ಜಿಹ್ವೆಯ ಸುಷುಮ್ನೆಯಲ್ಲಿಟ್ಟು ಸೋಮಪಾನಮಂ ಸೇವಿಸಿ ಸಪ್ತಸ್ಥಾನ ನವಚಕ್ರದಲ್ಲಿ ನಿಂದು ಮುಕ್ತ್ಯಂಬಿಕೆಯೊಡಗೂಡುನವುದು ಲಂಫಬಿಕಾಯೋಗ. ಆತ್ಮನಂ ಭೇದಿಸಿ ಪ್ರಾಣವಾಯು ನಾಡಿಗಳನರಿತು ಹಿಡಿವ ಭೇದಮಂ ತಿಳಿದು, ತೆಗೆವ ಬಿಗಿವ ಸಂಚಮಂ ಕಂಡು ಒಡ್ಡಿಯಾಣಬಂಧ ಜಾಳಾಂಧರಬಂಧ ಠಾಣಿಕಾಮುದ್ರೆ ಭ್ರೂಸಂಕೋಚ ಬ್ರಹ್ಮಸ್ಥಾನದುತ್ತರನಾಡಿಯಿಂದ ಆತ್ಮನನಾತ್ಮಲಿಂಗದಲ್ಲಿ ಸಂಯೋಗಮಾಡುವದಾತ್ಮಯೋಗ. ಅಂಜನಾಸಿದ್ಧಿ ಘುಟಿಕಾಸಿದ್ಧಿ ಶರೀರಸಿದ್ಧಿ ಪರಕಾಯಪ್ರವೇಶ ತ್ರಿಕಾಲಜ್ಞಾನ ದೂರಶ್ರವಣ ದೂರದೃಷ್ಟಿಯೊಳಗಾದ ಅಷ್ಟಮಹಾಸಿದ್ಧಿಯಂ ಪಡೆದು, ರಸಸಿದ್ಧಿ ಪಾಷಾಣಸಿದ್ಧಿ ಲೋಹಸಿದ್ಧಿ ವಯಸ್ತಂಭ ಸ್ವರವಂಚನೆ ಕಾಯವಂಚನೆ ವೇದಶಾಸ್ತ್ರಸಿದ್ಧಿ ಭರತಸಿದ್ಧಿ ಗಾಂಧರ್ವಸಿದ್ಧಿ ಕಿನ್ನರಸಿದ್ಧಿ ವಾಚಾಸಿದ್ಧಿ ಖೇಚರತ್ವ ಮಹೇಂದ್ರಜಾಲದೊಳಗಾದ Zõ್ಞಷಷ್ಟಿವಿದ್ಯಾಸಿದ್ಧಿ ಅಣಿಮಾದಿ ಮಹಿಮಾ ದಿ ಈಶಿತ್ವ ವಶಿತ್ವ ಪ್ರಾಪ್ತಿ ಪ್ರಾಕಾಮ್ಯವೆಂಬ ಅಷ್ಟೈಶ್ವರ್ಯಸಿದ್ಧಿ ವ್ಯಾಳಿ ಚರ್ಪಟಿ ಕೋರಾಂಟ ರತ್ನಘೋಷ ಭೂತನಾಥ ನಾಗಾರ್ಜುನ ಮಚ್ಚೇಂದ್ರ ಗೋರಕ್ಷ ಮಂಜಿನಾಥ ನವನಾಥ ಸಿದ್ಧರೊಳಗಾದ ಸಮಸ್ತ ಸಿದ್ಧಿಬುದ್ಧಿಗಳಿಂ ಲಿಂಗವನರಿಸಿ ಅಟ್ಟಿಮುಟ್ಟಿ ಹಿಡಿದೆಹೆನೆಂಬುದು ಸಿದ್ಧಯೋಗ. ಪಿಶಾಚತ್ವದಿಂ ತ್ರಿಭುವನಿಯಂ ಸೇವಿಸಿ ಅಮರಿಗಳಂ ಸೇವಿಸಿ ಅಮರೀ ಭ್ರಮರಾದೇವಿ ಅಮರೀ ತ್ರಿಪುರಾಂತಕೀ ಅಮರೀ ಕಾಲಸಂಹಾರೀ ಅಮರೀ ತ್ರೈಲೋಕ್ಯಸಾಧನೀ ಇಂತೆಂಬ ಶ್ರುತಿಗೇಳ್ದು, ವಜ್ರಿ ಅಮರಿಗಳನಂಗಲೇಪಂ ಮಾಡಿ ಶುಕ್ಲಮಂ ಸೇವಿಸಿ ಭೂತಸಂಕುಳಂಗಳೊಡನಾಡಿ ಅಜ್ಞಾನವಶದಿಂ ಲಿಂಗವನೇನೆಂದರಿಯದ ಕ್ಷೀಣವೃತ್ತಿಯ ಪಿಶಾಚತ್ವದಿಂದಿಪ್ಪುದು ಪಿಶಾಚಯೋಗ. ಹಿಂಸೆಯನುಳಿದ ±õ್ಞಚತ್ವದಿಂ ಬ್ರಹ್ಮಚರ್ಯದಿಂ ತತ್ವಂಗಳನಾಹ್ವಾನಿಸುತ್ತಿಪ್ಪುದು ಯಮಯೋಗ. ವಿವೇಕ ವಿಚಾರದಿಂ ತತ್ವಂಗಳನರಿತು ಆಚರಿಸಿ ಅಡಿುಟ್ಟು ನಡೆವುದು ನಿಯಮಯೋಗ. ಪದ್ಮಾಸನ ಸಿದ್ಧಾಸನ ಬದ್ಧಾಸನ ವಜ್ರಾಸನ ಮಯೂರಾಸನ ಕೂರ್ಮಾಸನ ಕಕ್ಕುಟಾಸನ ಅರ್ಧಾಸನ ವೀರಾಸನ ಶ್ಮಶಾನಾಸನ ಹಸ್ತಾಸನ ಮಸ್ತಕಾಸನ ಕುಠಾರಾಸನ ಸಿಂಹಾಸನ ಮಧ್ಯಲವಣಿ ಶಿರೋಲವಣಿಯೊಳಗಾದ ಆಸನಬಂಧಂಗಳಿಂದಾಚರಿಸುವುದಾಸನಯೋಗ. ತತ್ವ ಮೂವತ್ತಾರಕ್ಕೆ ಪ್ರಣವ ಮೂಲವೆಂದರಿತು ಷಡಾಧಾರಚಕ್ರಂಗಳ ಅಕ್ಷರವರ್ಣಂಗಳಿಂ ತಿಳಿದು ಮೇರಣ ಅಜನಾಳ ಬ್ರಹ್ಮಸ್ಥಾನ ತುರೀಯಾತೀತದ ಓಂಕಾರಮಪ್ಪ ಪ್ರಣವವನರಿವುದು ಪ್ರಾಣಾಯಾಮಯೋಗ. ಪ್ರತ್ಯಾಹಾರಯೋಗಕ್ರಮಗಳಿಂದ ಸತ್ಪ್ರಣವವನಾಹಾರಿಸುವುದು ಪ್ರತ್ಯಾಹಾರಯೋಗ. ಪ್ರಣವಕ್ಕೆ ಅತೀತವಾದ ಪರಶಿವಮೂರ್ತಿ ಮನದಲ್ಲಿ ಚಿಗುರ್ತು ಅಂತರಂಗದಲ್ಲಿ ಧ್ಯಾನಾರೂಢನಾಗಿ ಧ್ಯಾನಿಸುವುದು ಧ್ಯಾನಯೋಗ. ಆ ಪರಶಿವಮೂರ್ತಿಯೆ ಇಷ್ಟಲಿಂಗವೆಂಬ ಭಾವನೆಯಿಂದ ಅಷ್ಟವಿಧಾರ್ಚನೆ ಷೋಡಶೋಪಚರ್ಯಂಗಳಿಂದಿಷ್ಟಲಿಂಗಧಾರಣದಿಂದ ಇಪ್ಪುದು ಧಾರಣಯೋಗ. ಅಪ್ರಶಿಖಾಸ್ಥನದಿಂದುತ್ತರವಿಭಾಗೆಯ ಅಜಪೆಯಿಂದತ್ತಣ ಚಿತ್‍ಪ್ರಭೆಯಿಂದುಜ್ವಳತೇಜ ಸ್ವಯಂಪ್ರಕಾಶ ದಿವ್ಯತೇಜದಿಂದೊಪ್ಪಿಪ್ಪ ಮಹಾಘನ ಪರವಸ್ತುವನಿದಿರಿಟ್ಟೀಕ್ಷಿಸಿ ಆಮಹಾಪ್ರಕಾಶದಲ್ಲಿ ಒಡಗೂಡಿ ತಾನು ತಾನಾಗಿ ಜಗದ್ವಿಹರಣೀಯನೇನೆಂದರಿಯದ ಪರಮಕಾಷೆ*ಯ ಸಮಾಧಿಯಲ್ಲಿಪ್ಪುದು ಸಮಾಧಿಯೋಗ. ಇಂತಪ್ಪ ಅಷ್ಟಾಂಗವೊಳಗಾದ ಷಡುವಿಧಕರ್ಮಯೋಗಂಗಳಂ ಮೆಟ್ಟಿ ಚತುರ್ವಿಧಪದವಿಯಂ ಹೊದ್ದದೆ ಫಲಭೋಗಂಗಳಂ ಮುಟ್ಟದೆ ಖ್ಯಾತಿ ಲಾಭ ಪೂಜೆಯಂ ತಟ್ಟದೆ ಇಹಪರಂಗಳಂ ಸಾರದೆ, ಭವಬಂಧನಕ್ಕೆ ಬಾರದೆ ಗೆಲ್ಲ ಸೋಲಕ್ಕೆ ಹೋರದೆ, ತನುವಿನಿಚ್ಛೆಯಲ್ಲಿ ಸುಳಿಯದೆ ಮನದಿಚ್ಛೆಯಲ್ಲಿ ಹರಿಯದೆ, ಪ್ರಾಣನ ಸುಳುಹಿನಲ್ಲಿ ಸಿಕ್ಕದೆ ಪ್ರಕೃತಿವಶಕ್ಕೊಳಗಾಗದೆ, ಇಂದ್ರಿಯಂಗಳಿಗೆ ಮೈಯೊಡ್ಡದೆ ಸರ್ವಸಂದೇಹನಿವೃತ್ತಿಯಾಗಿ, ನಿಂದಲ್ಲಿ ನಿರಾಳ, ನಡೆದಲ್ಲಿ ನಿರ್ಗಮನಿ, ನುಡಿದಲ್ಲಿ ನಿಶ್ಶಬ್ದಿ, ಸುಳಿದಲ್ಲಿ ಒಡಲಿಲ್ಲದುಪಾಧಿಯರತು ಅಂಗವೆ ಲಿಂಗವಾಗಿ ಲಿಂಗವೆ ಪ್ರಾಣವಾಗಿ ಪ್ರಾಣವೆ ಪ್ರಸಾದವಾಗಿ, ಪ್ರಸಾದವೆ ಪರಿಪೂರ್ಣವಾಗಿ ನಿಜಲಿಂಗೈಕ್ಯವಾಗಿ ನಿಜಸುಖಸಂಬಂಧಿಯಾಗಿ ನಿಜಯೋಗ ಸನ್ನಿಹಿತವಾಗಿ ಕಾಯವಿದ್ದಂತೆ ಬಯಲಾಗಿಪ್ಪರಯ್ಯಾ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಶ್ರೀಗುರುವಿನ ಸಂದರ್ಶನಕ್ಕೆ ಹೋದಲ್ಲಿ ಮೂರ್ತಿಧ್ಯಾನದಿಂದ ಮಹಾಪ್ರಸಂಗವ ಮಹಾಪ್ರಸಾದವೆಂದು ಕೈಕೊಂಡು, ಆ ಗುಣ ಗುರುಭಕ್ತಿ ಸಾಧನ, ಶಿವಲಿಂಗ ಪೂಜೆಯ ಮಾಡುವಲ್ಲಿ ಪರಾಕು ಪರಿಭ್ರಮಣ ಪ್ರಕೃತಿಭಾವ ಪಗುಡಿ ಪರಿಹಾಸಕರ ವಾಗ್ವಾದಿಗಳ ಕೂಡದೆ ಕಂಗಳಲ್ಲಿ ಹೆರೆಹಿಂಗದೆ, ಭಾವದಲ್ಲಿ ಬೈಚಿಟ್ಟುಕೊಂಡು ಹೆರೆಹಿಂಗದಿರವು ಶಿವಲಿಂಗಪೂಜಕನ ಭಾವ ಜಂಗಮ ಸೇವೆಯ ಮಾಡುವಲ್ಲಿ ಇಷ್ಟ ಕಾಮ್ಯ ಮೋಕ್ಷಂಗಳನರಿತು ಆಶನ ವಿಷಯ ರೋಷ ಆಸಕರನರಿತು ವರ್ಮಕ್ಕೆ ವರ್ಮ, ಧರ್ಮಕ್ಕೆ ಮುಕ್ತಿ, ವೈಭವಕ್ಕೆ ಖ್ಯಾತಿ ಲಾಭಂಗಳನರಿತು ಮಾಡಿದ ದ್ರವ್ಯ ಕೇಡಿಲ್ಲದಂತೆ ಅಡಗಿಪ್ಪುದು ಜಂಗಮಭಕ್ತಿ; ಇಂತೀ ತ್ರಿವಿಧಭಕ್ತಿಯಲ್ಲಿ ನಿರತ ಸ್ವಯ ಸನ್ನದ್ಧನಾಗಿಪ್ಪ ಭಕ್ತನ ಪಾದದ್ವಯವೆ, ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಸಜ್ಜಾಗೃಹ.
--------------
ತುರುಗಾಹಿ ರಾಮಣ್ಣ
ಧರ್ಮಾರ್ಥವಾಗಿ ದೀಕ್ಷೆಯ ಮಾಡಬೇಕಲ್ಲದೆ, ಆಶಾರ್ಥವಾಗಿ ದೀಕ್ಷೆಯ ಮಾಡಲಾಗದಯ್ಯ. ಜ್ಞಾನಾರ್ಥವಾಗಿ ಶಾಸ್ತ್ರವನೋದಬೇಕಲ್ಲದೆ, ವಾದಾರ್ಥವಾಗಿ ಶಾಸ್ತ್ರವನೋದಲಾಗದಯ್ಯ. ಮೋಕ್ಷಾರ್ಥವಾಗಿ ಶಿವಪೂಜೆಯ ಮಾಡಬೇಕಲ್ಲದೆ, ಡಂಭಾರ್ಥವಾಗಿ ಶಿವಪೂಜೆಯ ಮಾಡಲಾಗದಯ್ಯ. ಅದೆಂತೆಂದೊಡೆ : ``ಆಶಾರ್ಥಂ ದೀಯತೇ ದೀಕ್ಷಾ ದಂಭಾರ್ಥಂ ಪೂಜ್ಯತೇ ಶಿವಃ | ವಾದಾರ್ಥಂ ಪಠ್ಯತೇ ವಿದ್ಯಾ ಮೋಕ್ಷೋ ನಾಸ್ತಿ ವರಾನನೇ || ಧರ್ಮಾರ್ಥಂ ದೀಯತೇ ದೀಕ್ಷಾ ಮೋಕ್ಷಾರ್ಥಂ ಪೂಜ್ಯತೇ ಶಿವಃ | ಜ್ಞಾನರ್ಥಂ ಪಠ್ಯತೇ ವಿದ್ಯಾ ಮೋಕ್ಷಸಿದ್ಧಿರ್ವರಾನನೇ ||'' ಎಂದುದಾಗಿ, ಇಂತಪ್ಪ ಖ್ಯಾತಿ ಕೀರ್ತಿಯ, ಕಡೆಗೆ ನೂಂಕಿ ನೀತಿಯ ನಿಜವನು ಅಂಗೀಕರಿಸಿ ಶಿವನನೊಲಿಸುವ ಭಾವವನರಿಯದೆ ಸಂತೆಯ ಪಸಾರದಂತೆ ಸರ್ವರು ಮೆಚ್ಚಲೆಂದು ಹಾರೈಸಿ ಹರಹಿಕೊಂಡು ಮಾಡುವ ಡಂಭಕನ ಪೂಜೆ ಶಂಭುವಿಂಗೆ ಮುಟ್ಟಲರಿಯದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->