ಅಥವಾ

ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಟ ಬಾಲಸರವು ಕೂಡಿರ್ದಡೇನು ? ಸೂತ್ರ ಕಿಂಚಿತ್ತು ತಪ್ಪಿದಡೆ ಖೇಚರತ್ವದಲ್ಲಿ ಆಡಲರಿಯದಂತೆ, ಹೊರಗಣ ಮಾತಿನಿಂ ಗುರುವೆಂದು ಶರಣೆಂದಡೇನಾಯಿತ್ತು ? ಕೈಯಲ್ಲಿ ಲಿಂಗವ ಹಿಡಿದುಕೊಂಡು, ಕಣ್ಣಿನಲ್ಲಿ ನೋಡಿ, ಮನಮುಟ್ಟದಿರ್ದಡೇನಾಯಿತ್ತು ? ಖ್ಯಾತಿ ಲಾಭಕ್ಕೆ ಜಂಗಮಕ್ಕೆ ಧನವ ಕೊಟ್ಟಡೇನಾಯಿತ್ತು? ಇದು, ಉಸಿರ ಹಿಡಿದಡೆ, ದ್ವಾರಂಗಳೆಲ್ಲವೂ ಮುಚ್ಚುವ ತೆರನಂತೆ, ಮಹಾಘನವನರಿದಲ್ಲಿಯೆ ತ್ರಿವಿಧವೂ ಸಮರ್ಪಣ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ಥಲನಿರ್ದೇಶ.
--------------
ಮೋಳಿಗೆ ಮಾರಯ್ಯ
ರಸ ಗಂಧ ರೂಪ ಸ್ಪರ್ಶವೆಂಬ ಪಂಚೇಂದ್ರಿಯಂಗಳಲ್ಲಿ, ಲಿಂಗಕರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗದಲ್ಲಿ ವಿಷಾವರ್ತಿಸುವುದಲ್ಲದೆ, ಖಂಡಿತವಾಗಿ ನಿಂದುದಿಲ್ಲ. ಸರ್ವಾಂಗಲಿಂಗಿಗೆ ಬೇರೆ ಐದು ಸ್ಥಾನದಲ್ಲಿ, ಅರ್ಪಿತವ ಮಾಡಬೇಕೆಂಬುದಿಲ್ಲ. ಇಷ್ಟಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಾ ಅಯ್ಯಾ, ಪರುಷಸರ ಕೈಯಲ್ಲಿದ್ದು ಹೇಮವನರಸಿ ತಿರುಗುವನಂತೆ. ಖೇಚರತ್ವದಲ್ಲಿ ಬಹ ಸಾಮಥ್ರ್ಯವಿದ್ದಡೇನೊ, ಅಂಬಿಗನ ಹಂಗನರಸುವನಂತೆ. ನಿತ್ಯನಿತ್ಯ ತೃಪ್ತಂಗೆ ಉಂಡೆಹೆನೆಂದು ತಳಿಗೆ ಕಂಕುಳೊಳಗಿನ ತೆರನಂತೆ. ಸ್ವಯಂಜ್ಯೋತಿಯ ಬೆಳಗುಳ್ಳವಂಗೆ, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ. ವಾಯುಗಮನವುಳ್ಳವಂಗೆ ತೇಜಿಯನರಸುವಂತೆ. ಅಮೃತದ ಸೇವನೆಯುಳ್ಳವಂಗೆ ಆಕಳನರಸಿ ಬಳಲಿ ಬಪ್ಪವನಂತೆ. ತಾ ಬೈಚಿಟ್ಟ ನಿಕ್ಷೇಪದ ಹೊಲಬುದಪ್ಪಿ ಬಳಲುವನಂತೆ. ಇದು ಕಾರಣ, ಐದರ ಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ಮುಕ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ, ಭ್ರಾಂತ ಹರಿದು ಕಾಳಿಕೆಯೊಳಗಿಪ್ಪ ಕರಿಯ ಬಣ್ಣವ ಕಳೆದು, ಬೆಳಗಿನೊಳಗಿಪ್ಪ ಜ್ವಲಿತಮಂ ಕಡಿದು ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಕಂ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಪಂಚೇಂದ್ರಿಯಂಗಳಲ್ಲಿ ಲಿಂಗಾರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗಲಿಂಗಿಗೆ ಬೇರೆ ಐದುಸ್ಥಾನದಲ್ಲಿ ಅರ್ಪಿತವ ಮಾಡಬೇಕೆಂಬ ಜಡಸಂಕಲ್ಪವಿಲ್ಲ. ಇಷ್ಟಕ್ಕೂ ಭಾವಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಯ್ಯಾ. ಪರುಷದ ರಸ ಕೈಯಲ್ಲಿರ್ದು ಹೇಮವನರಸಿ ತಿರುಗುವವನಂತೆ, ಖೇಚರತ್ವದಲ್ಲಿ ಹೋಹ ಸಾಮಥ್ರ್ಯವಿರ್ದು, ಅಂಬಿಗನ ಹಂಗನರಸುವ ಅವಿಚಾರಿಯಂತೆ, ನಿತ್ಯತೃಪ್ತನಾಗಿರ್ದು ಅಂಬಲಿಯ ಬಯಸುವ ಕಾಳ್ವಿಚಾರಿಯಂತೆ, ಸ್ವಯಂಜ್ಯೋತಿ ಪ್ರಕಾಶದೊಳಗಿರ್ದು, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ, ವಾಯುಗಮನವುಳ್ಳಾತ ತೇಜಿಯನರಸುವಂತೆ, ಅಮೃತ ಸೇವನೆಯ ಮಾಡುವಾತ ಆಕಳನರಸಿ ಬಳಲುವಂತೆ, ತಾ ಬೈಚಿಟ್ಟ ನಿಕ್ಷೇಪವ ಹೊಲಬುದಪ್ಪಿ ಅರಸುವನಂತೆ ಆಗಬೇಡ. ಇದು ಕಾರಣ, ವೇದಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ತೃಪ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ ಭ್ರಾಂತು ಹರಿದು, ಬೆಳಗಿನೊಳಗಿಪ್ಪ ಜ್ವಲಿತವಂ ಕಡಿದು, ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->