ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಅಪರವನರಿದುದೆ ಖರ್ಪರ, ತ್ರಿವಿಧವ ಮುರಿದುದೆ ಕಟ್ಟಿಗೆ. ಸರ್ವವ ಕೇಳಿ ಕೇಳದಂತಿಪ್ಪುದೆ ಕುಂಡಲ. ರುದ್ರಪಾಶವ ಕಿತ್ತು ಗಟ್ಟಿಗೊಂಬುದೆ ಜಡೆ. ಜ್ಞಾನ ವಿಜ್ಞಾನ ಸುಜ್ಞಾನ ಮಹಾಜ್ಞಾನ ಅಪರಜ್ಞಾನ. ಇಂತೀ ಪಂಚಜ್ಞಾನ ದಹ್ಯಮಂ ಮಾಡಿ, ಬ್ರಹ್ಮಲಿಖಿತವ ತೊಡೆವಂತೆ ಧರಿಸುವುದು ತ್ರಿಪುಂಡ್ರವ. ಇಂತೀ ವೇಷವ ಧರಿಸಿ ಭಕ್ತನೆಂಬ ಭೂಮಿಯಲ್ಲಿ, ಸಕಲಕರಣಂಗಳ ತೀರ್ಥಯಾತ್ರೆಯಂ ಮಾಡುತ್ತ, ಕಳೆದುಳಿಯಬಲ್ಲಡೆ, ಆತನೇ ಲಿಂಗಜಂಗಮ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪಾತಾಳದಿಂ ಕೆಳಗೆ ಪಾದ, ಸತ್ಯರ್ಲೋಕದಿಂ ಮೇಲೆ ಉತ್ತಮಾಂಗ, ಬ್ರಹ್ಮಾಂಡವೇ ಮುಕುಟ, ಗಗನವೇ ಮುಖ, ಚಂದ್ರಾರ್ಕಾಗ್ನಿಗಳೇ ನೇತ್ರ, ದಶದಿಕ್ಕುಗಳೇ ಬಾಹುಗಳು, ಮಹದಾಕಾಶವೇ ಶರೀರ, ತರುಗಳೇ ತನೂರುಹ, ಶೂನ್ಯವೇ ಕರಸ್ಥಲದ ಲಿಂಗ, ನಕ್ಷತ್ರವೇ ಪುಷ್ಪ, ನಿತ್ಯವೇ ಪೂಜೆ, ಮೇಘವೇ ಜಡೆ, ಬೆಳ್ದಿಂಗಳೇ ವಿಭೂತಿ, ಪರ್ವತಂಗಳೇ ರುದ್ರಾಕ್ಷಿಗಳು, ಪಂಚಬ್ರಹ್ಮವೇ ಪಂಚಾಕ್ಷರ, ತತ್ವಂಗಳೇ ಜಪಮಾಲೆ, ಮೇರುವೇ ದಂಡಕೋಲು, ಸಮುದ್ರವೇ ಕಮಂಡಲು, ಶೇಷನೇ ಕಟಿಸೂತ್ರ, ಜಗವೇ ಕಂಥೆ. ಅನಂತವೇ ಕೌಪೀನ, ತ್ರಿಗುಣವೊಂದಾದುದೇ ಖರ್ಪರ, ಚತುರ್ಯುಗವೇ ಗಮನ, ಮಿಂಚೇ ಅಂಗರುಚಿ, ಸಿಡಿಲೇ ಧ್ವನಿ, ವೇದಾಗಮವೇ ವಾಕ್ಯ, ಜ್ಞಾನಮುದ್ರೆಯೇ ಉಪದೇಶ, ಪೃಥ್ವಿಯೇ ಸಿಂಹಾಸನ, ದಿವಾರಾತ್ರಿಯೇ ಅರಮನೆ, ಶಿವಜ್ಞಾನವೇ ಐಶ್ವರ್ಯ, ನಿರಾಳವೇ ತೃಪ್ತಿ. ಇಂತಪ್ಪ ಚೈತನ್ಯಜಂಗಮಕ್ಕೆ ಆನು ನಮೋ ನಮೋ ಎನುತಿರ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
-->