ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒರಳೊನಕಿಯ ನಡುವಿನ ಸಿಹಿಧಾನ್ಯದಂತೆ, ಖಣಿ ಗಾಣದ ನಡುವಿನ ತಿಲದಂತೆ, ಅಗ್ನಿ ಕುಂಭದ ನಡುವಿನ ಜೀವಪಾಕದಂತೆ, ತ್ರಿದೋಷದಿಂದಲೆನ್ನ ಕಾಡುತಿದೆ ಮಾಯೆ. ಅದುಯೆಂತೆಂದಡೆ : ಜನನ ಮರಣವೆಂಬ ಯಂತ್ರದಲ್ಲಿ ತಿರುವಿ, ಹೊನ್ನು ಹೆಣ್ಣು ಮಣ್ಣೆಂಬ ಒರಳೊನಕಿಯ ನಡುವೆ ಹಾಕಿ ಕುಟ್ಟಿ, ತಾಪತ್ರಯವೆಂಬ ಅಗ್ನಿ ಕುಂಭದೊಳಿಟ್ಟೆನ್ನ ಸುಟ್ಟು ಸೂರೆಮಾಡಿ ಕಾಡುತಿರ್ದುದೀ ಮಾಯೆ, ಕಳೆವರೆನ್ನಳವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುವೇ ಪರಶಿವನು. ಗುರುವೇ ಸಕಲಾಗಮಮೂರ್ತಿ. ಗುರುವೇ ಸಕಲ ವಿದ್ಯಾಸ್ವರೂಪನು. ಗುರುವೇ ಸಕಲ ಮಂತ್ರಸ್ವರೂಪನು. ಗುರುವೇ ಕಲ್ಪವೃಕ್ಷವು, ಕಾಮಧೇನುವು. ಗುರುವೇ ಪರುಷದ ಖಣಿ, ತವನಿಧಿ. ಗುರುವೇ ಕರುಣರಸಾಬ್ಧಿ. ಗುರುವಿನಿಂದಧಿಕ ದೈವವಿಲ್ಲ. ಸರ್ವಧ್ಯಾನಕ್ಕೆ ಗುರುಧ್ಯಾನವೇ ಅಧಿಕ. ಸರ್ವಪೂಜೆಗೆ ಗುರುವಿನ ಪಾದಪೂಜೆಯೇ ಅಧಿಕ. ಸರ್ವಮಂತ್ರಕ್ಕೆ ಗುರುವಿನ ವಾಕ್ಯವೇ ಅಧಿಕ. ಸರ್ವಮುಕ್ತಿಗೆ ಗುರುವಿನ ಕರುಣಕೃಪೆಯೇ ಅಧಿಕ. ಸಾಕ್ಷಿ : ''ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂ | ಮಂತ್ರಮೂಲಂ ಗುರೋರ್ವಾಕ್ಯಂ ಮುಕ್ತಿಮೂಲಂ ಗುರೋಃ ಕೃಪಾ ||'' ಎಂಬುದಾಗಿ, ಇಂತಿವನೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಇಷ್ಟಲಿಂಗಸ್ವರೂಪವಾಗಿ ಮತ್ತೆ ಮನಸ್ಥಲಕ್ಕೆ ಪ್ರಾಣಲಿಂಗಸ್ವರೂಪವಾಗಿ ಮತ್ತೆ ಭಾವಸ್ಥಲಕ್ಕೆ ಭಾವಲಿಂಗಸ್ವರೂಪವಾಗಿ ಈ ತ್ರಿವಿಧಮೂರ್ತಿಯೇ ಅಷ್ಟಾವರಣಸ್ವರೂಪವಾಗಿ ಎನ್ನ ಅಱುಹಿನಲ್ಲಿ ಗುರು ಎನ್ನ ಪ್ರಾಣದಲ್ಲಿ ಲಿಂಗ ಎನ್ನ ಜ್ಞಾನದಲ್ಲಿ ಜಂಗಮ ಎನ್ನ ಜಿಹ್ವೆಯಲ್ಲಿ ಪಾದೋದಕ ಎನ್ನ ನಾಸಿಕದಲ್ಲಿ ಪ್ರಸಾದ ಎನ್ನ ತ್ವಕ್ಕಿನಲ್ಲಿ ವಿಭೂತಿ ಎನ್ನ ನೇತ್ರದಲ್ಲಿ ರುದ್ರಾಕ್ಷಿ ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿ ಇಂತಿವು ಅಷ್ಟಾವರಣಸ್ವರೂಪವಾಗಿ ಎನ್ನೊಳು ತನ್ನ ಕರುಣಕೃಪೆಯ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಪರಮಾನುಭಾವಜಂಗಮಾರಾಧನೆಗೆಂದು ಒಂದೆ ಪಶ್ಚಿಮಾದ್ರಿ ಏಕದಳಪದ್ಮವ ಸಮರ್ಪಿಸಿ, ಬಚ್ಚಬರಿಯಾನಂದಾಬ್ಧಿಯಲ್ಲಿ ಲೋಲುಪ್ತರಾಗಿರ್ಪರು ಸದ್‍ಭಕ್ತ ಶರಣಗಣಾರಾಧ್ಯರು. ಈ ಪೂಜಾಸ್ಥಾನದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಲ್ಲವು. ಅದೇನು ಕಾರಣವೆಂದಡೆ : ಸಗುಣ-ನಿರ್ಗುಣ, ಸಾಕಾರ-ನಿರಾಕಾರ, ಆದಿಲಿಂಗ ಅನಾದಿಶರಣಸಂಬಂಧವಿಡಿದು, ಸರ್ವೋಪಚಾರಪೂಜೆಗಳೆರಡು ನಿತ್ಯವಾದ ಅಂತರಂಗದ ಪರಿಪೂರ್ಣದ್ರವ್ಯ ನಿರಂಜನಪೂಜೆಯೆಂದು ಇಲ್ಲಿಗೆ ಸದ್ರೂಪವಾದ ಗುರು, ಚಿದ್ರೂಪವಾದ ಲಿಂಗ, ಚಿನ್ಮಯರೂಪವಾದ ಜಂಗಮಾರ್ಚನೆ. ಈ ಮೂರು ಸಂಬಂಧಾಚರಣೆಯಾಗಿರ್ಪುವು. ಈ ನಿಲುಕಡೆಯ ಮೀರಿ ಶೈವಭಿನ್ನಕರ್ಮಿಗಳಂತೆ ತೀರ್ಥದಲ್ಲಿ ಪೂಜೆಯೊಂದ ಮಾಡಲಾಗದು. ಅದೇನುಕಾರಣವೆಂದಡೆ : ಶರಣನ ಸದ್ರೂಪವಾದ ಚಿತ್ಕಾಯದಲ್ಲಿ ಸಂಬಂಧವಾದ ನಿಜೇಷ*ಲಿಂಗ ವೃತ್ತಗೋಳಕಮುಖಂಗಳಲ್ಲಿ ದೀಕ್ಷಾಗುರು ಮೋಕ್ಷಾಗುರು ಶಿಕ್ಷಾಗುರುಸ್ಥಲವಾದ ಸಾಕಾರಗುರುಲಿಂಗಜಂಗಮವಾಗಿ ನೆಲಸಿರ್ಪುದುದರಿಂದ ಆ ಇಷ್ಟಲಿಂಗಸೂತ್ರವಿಡಿದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೆ ಸಗುಣಾರ್ಚನೆಯೊಳಗಿನ ಕ್ರಿಯಾರ್ಚನೆಯು. ಇದೀಗ ಅನಾದಿಪ್ರಮಥಗಣ ಸುಕರಾರ್ಚನೆ ಸೂತ್ರವು. ಶರಣನ ಚಿದ್ರೂಪವಾದ ಚಿತ್‍ಪ್ರಾಣದಲ್ಲಿ ಸಂಬಂಧವಾದ ಚಿತ್ಪ್ರಾಣಲಿಂಗ ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ, ಅರ್ಧಚಂದ್ರಾಕೃತಿ, ದರ್ಪಣಾಕೃತಿ, ಜ್ಯೋತಿರಾಕೃತಿಗಳಲ್ಲಿ ಕಾಯಾನುಗ್ರಹ ಪ್ರಾಣಾನುಗ್ರಹ ಇಂದ್ರಿಯಾನುಗ್ರಹಸ್ಥಲವಾದ ನಿರಾಕಾರ ಚಿದ್ವಿಭೂತಿ ರುದ್ರಾಕ್ಷಿ ಮಂತ್ರವಾಗಿ ನೆಲಸಿರ್ಪುದುದರಿಂದ ಆ ಪ್ರಾಣಲಿಂಗಸೂತ್ರವಿಡಿದು, ಮಂತ್ರ ಧ್ಯಾನ ಜಪಸ್ತೋತ್ರಂಗಳಿಂದ ಸೂಕ್ಷ್ಮಾರ್ಚನೆಯ ಮಾಡುವುದೆ ಸಗುಣಾರ್ಚನೆಯೊಳಗಿನ ಜ್ಞಾನಾರ್ಚನೆಯು. ಇದೀಗ ಅನಾದಿಪ್ರಮಥಗಣ ನಿರಾರ್ಚನ ಸೂತ್ರವು. ಶರಣಚಿನ್ಮಯರೂಪವಾದ ಚಿತ್ಸೂರ್ಯಚಂದ್ರಾಗ್ನಿಮಂಡಲತ್ರಯಂಗಳಲ್ಲಿ ಪರಮಾಣುಮೂರ್ತಿ ಭಾವಲಿಂಗ ಅಖಂಡಜ್ಯೋತಿರಾಕೃತಿ ಅಖಂಡಮಹಾಜ್ಯೋತಿರಾಕೃತಿಗಳಲ್ಲಿ ಅಖಂಡಮಹಾಚಿಜ್ಜ್ಯೋತಿರಾಕೃತಿಗಳಲ್ಲಿ ಕಾಯಾರ್ಪಣ ಕರಣಾರ್ಪಣ ಭಾವಾರ್ಪಣ ಪರಿಣಾಮಾರ್ಪಣಸ್ಥಲವಾದ ನಿರವಯಚಿತ್ಪಾದೋದಕ ಚಿತ್ಪ್ರಸಾದವಾಗಿ ನೆಲಸಿರ್ಪುವುದರಿಂದ ಆ ಭಾವಲಿಂಗಸೂತ್ರವಿಡಿದು ಮನೋರ್ಲಯ ನಿರಂಜನವಾದ ಘನಮನದಿಂದ ಕರಣಾರ್ಚನೆಯ ಮಾಡುವುದೆ ಸಗುಣಾರ್ಚನೆಯೊಳಗಿನ ಮಹಾಜ್ಞಾನಿಯು. ಇದೀಗ ಅನಾದಿಪ್ರಮಥಗಣ ನಿರವಯಾರ್ಚನೆಯ ಸೂತ್ರವು. ಈ ನಿಲುಕಡೆಗಳಿಂದ ಪ್ರಮಥಗಣ ಹೋದ ಮಾರ್ಗವ ತಿಳಿದು, ಸಾಕಾರವಾದ ಕಾಯವಿಡಿದು ಬಂದ ರೂಪಾದ ಅಷ್ಟವಿರ್ಧಾಚನೆ ಷೋಡಶೋಪಚಾರವ ಗುರುಲಿಂಗಜಂಗಮಕ್ಕೆ ಮಾಡುವುದೇ ಕಾಯಾರ್ಚನೆಯೆನಿಸುವುದು. ನಿರಾಕಾರವಾದ ಕರಣವಿಡಿದು ಬಂದ ಚಿದ್ರೂಪವಾದ ಮಂತ್ರ ಧ್ಯಾನ ಜಪಸ್ತೋತ್ರಂಗಳ ಚಿದ್ವಿಭೂತಿ ರುದ್ರಾಕ್ಷಿ ಮಂತ್ರಕ್ಕೆ ಮಾಡುವುದೆ ಕರಣಾರ್ಚನೆಯೆನಿಸುವುದು. ನಿರವಯವಾದ ಭಾವವಿಡಿದು ಬಂದ ಚಿನ್ಮಯರೂಪಾದ ಮನೋರ್ಲಯ ನಿರಂಜನ ಘನಮನೋಲ್ಲಾಸ ಚಿದ್ಬೆಳಗುಗಳ ಚಿತ್ಪಾದತೀರ್ಥ ಪ್ರಸಾದಕ್ಕೆ ಮಾಡುವುದೆ ಭಾವಾರ್ಚನೆಯೆನಿಸುವುದು. ಹೀಂಗೆ ಪೂರ್ವಪುರಾತನೋಕ್ತಿಯಿಂದ ಸಾಕಾರವಾದ ಕಾಯಾರ್ಚನೆಯ ಕರಸ್ಥಲದ ಇಷ್ಟಲಿಂಗಕ್ಕೆ, ಆ ಇಷ್ಟಲಿಂಗಕ್ಕೆ ಚೈತನ್ಯವಾದ ಚರಲಿಂಗಪಾದಕ್ಕೆ ಮಾಡುವುದು ಸಾಧ್ಯ. ಗಣಂಗಳು ನಿರಾಕಾರವಾದ ಕರಣಾರ್ಚನೆಯ ಚರಜಂಗಮಲಿಂಗದ ಚರಣಾಬ್ಜದ ಕೊನೆಮೊನೆಯೊಳಗೆ ಮೂಲಮಂತ್ರಮೂರ್ತಿ ಚಿನ್ಮಂಡಲಾಧಿಪತಿ ಪ್ರಾಣಲಿಂಗಸೂತ್ರಂಗಳೊಳ್ ಚಿತ್ಕರಣಂಗಳೊಂದುಗೂಡಿ ಪಶ್ಚಿಮಾದ್ರಿ ಏಕಕುಸಮದೊಳು ಹುದುಗಿ ನಿಜದೃಷ್ಟಿ ಕಡೆ ಸೂಸಲೀಯದೆ, ನಿರಂಜನಜಂಗಮಾರ್ಚನೆಯು ಮೊದಲಾದ ಚಿದ್ವಿಭೂತಿರುದ್ರಾಕ್ಷಿ ಮಂತ್ರಬ್ರಹ್ಮಕ್ಕೆ ಮಾಡುವುದು ಸಾಧ್ಯ. ಗಣಂಗಳು ನಿರವಯವಾದ ಭಾವಾರ್ಚನೆಯ ಚರಜಂಗಮ ಜಂಗಮಲಿಂಗ ಲಿಂಗಶರಣ ಶರಣ ವಿಭೂತಿ ರುದ್ರಾಕ್ಷಿ ಮಂತ್ರ, ಆ ಚಿದ್ವಿಭೂತಿ ರುದ್ರಾಕ್ಷಿ ಮಂತ್ರವೆ ಪರಮಪರುಷಾಂಬುಧಿ ಪರಮಪರುಷಾನಂದದ ಖಣಿ ಚಿತ್ಪಾದೋದಕ ಪ್ರಸಾದ. ಆ ಚಿತ್ಪಾದೋದಕಪ್ರಸಾದ ಮಂತ್ರಮಣಿ ವಿಭೂತಿ ಶರಣಲಿಂಗಜಂಗಮಚರವೆ ಘನಕ್ಕೆ ಮಹಾಘನವೆಂದಾರಾಧಿಸಿ, ಕೂಡಿ ಎರಡಳಿದು ಭಕ್ತನೆಂಬೆರಡಕ್ಷರವೆ ಪಾವನಾರ್ಥಚಿದಂಗ, ಆ ಚಿದ್ಘನಲಿಂಗವೆಂದಷ್ಟಾವರಣಸ್ವರೂಪ. ಚಿದ್ಘ ನಗುರು ತಾನೆ ತಾನಾದ ಬಯಲಪೂಜೆಗಳರಿದಾನಂದಿಸುವವರೆ ನಿರವಯಪ್ರಭು ಮಹಾಂತನ ಘನಕ್ಕೆ ಘನವೆಂದವರ ಆಳಿನಾಳಾಗಿರ್ಪೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
-->