ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಖಂಡಜ್ಞಾನಭರಿತ ಶರಣಂಗೆ ಪೃಥ್ವಿಯೆ ಖಟ್ವಾಂಗ, ಆಕಾಶವೇ ಕಿರೀಟ, ಮೇಘಾದಿಗಳೆ ಮಜ್ಜನ, ನಕ್ಷತ್ರಂಗಳೆ ಪುಷ್ಪಮಾಲೆಗಳು, ವೇದಂಗಳೆ ಮುಖಂಗಳು, ಶಾಸ್ತ್ರಂಗಳೆ ಅವಯವಂಗಳು, ಸೋಮಸೂರ್ಯಾಗ್ನಿಗಳೆ ನಯನಂಗಳು, ದಶದಿಕ್ಕುಗಳೆ ಹೊದಿಕೆಗಳು, ಬ್ರಹ್ಮಾಂಡವೆ ಒಡಲಾದ ಮಹಾಮಹಿಮನ ಏನೆಂದು ಉಪಮಿಸಬಹುದಯ್ಯಾ ಅಖಂಡೇಶ್ವರಾ. ?
--------------
ಷಣ್ಮುಖಸ್ವಾಮಿ
ಶರಣನಿರ್ಣಯವೆಂತೆಂದಡೆ: ಕರವೆ ಕಪ್ಪರ ಒಡಲೆ ಜೋಳಿಗೆ, ಆಕಾಶವೆ ಹೊದಿಕೆ ಭೂಮಿಯೆ ಖಟ್ವಾಂಗ. ಸರ್ವಸಂಗನಿವೃತ್ತಿಯ ಮಾಡಿ ಬಸವಣ್ಣ ಹೋದುದನು ಕಂಡೆ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಶರಣಸನ್ನಿಹಿತ ಐಕ್ಯವಹಲ್ಲಿ ಹರಿಬ್ರಹ್ಮಾದಿಗಳು ಮೊದಲಾದ ತೆತ್ತೀಸಾದಿ ದೇವರ್ಕಳುಘೇ ಉಘೇ ಎನ್ನುತ್ತಿರಲು ಐಕ್ಯ ಬಸವಣ್ಣಂಗೆಠಾವಾವುದಯ್ಯಾ ಎಂದಡೆ; ಅಂಗದ ಬಲದಲ್ಲಿ ಬ್ರಹ್ಮನ ಸ್ಥಾನ, ಎಡದಲ್ಲಿ ನಾರಾಯಣನ ಸ್ಥಾನ, ಒಲ್ಲೆನಯ್ಯಾ. ಕೊರಳು ಗರಳದ ಸ್ಥಾನ, ಬಾಯಿ ಅಪ್ಪುವಿನ ಸ್ಥಾನ, ನಾಸಿಕ ವಾಯುವಿನ ಸ್ಥಾನ, ಕಣ್ಗಳು ಅಗ್ನಿಯ ಸ್ಥಾನ, ಜಡೆ ಗಂಗೆಯ ಸ್ಥಾನ, ನೊಸಲು ಚಂದ್ರನ ಸ್ಥಾನ, ಹಿಂದು ಸೂರ್ಯನ ಸ್ಥಾನ, ಚರಣಂಗಳು ಅಷ್ಟದಿಕ್ಪಾಲಕರ ಸ್ಥಾನ, ಗುಹ್ಯ ಕಾಮನ ಸ್ಥಾನ, ಹಸ್ತಂಗಳು ಕಪಾಲ ಖಟ್ವಾಂಗ ತ್ರಿಶೂಲ ಡಮರುಗ ಸ್ಥಾನ, ದೇಹ ರುಂಡಮಾಲೆಯ ಸ್ಥಾನ, ಕರ್ಣ ನಾಗೇಂದ್ರನ ಸ್ಥಾನ, ಇಂತೀ ಸ್ಥಾನಂಗಳ ನಾನೊಲ್ಲೆನಯ್ಯಾ. ಹೃದಯಮಧ್ಯದ ಅಂತರಾಳದ ಏಕಪೀಠದ ಸಿಂಹಾಸನವ ತೆರಪ ಕೊಡು ಕೂಡಲಸಂಗಮದೇವಾ.
--------------
ಬಸವಣ್ಣ
ಕಂಥೆ ಖಟ್ವಾಂಗ ದಂಡ ಕಮಂಡಲ ಗುಂಡುಗಪ್ಪರದ ಜೋಳಿಗೆ ಕಾಮಾಕ್ಷಿ ಇವು ಪಂಚಮುದ್ರೆ ಪರಿಪೂರ್ಣಸ್ಥಲಕುಳವೆಂದು ನುಡಿದುಕೊಂಡು ನಡೆವರಯ್ಯ. ಜೀವವೆಂಬುದು ಹಾರಿ ಕಾಯವೆಂಬ ಕಂಥೆಯ ತಡೆಗೆಡೆದು ಮೆಟ್ಟಿ ಮೆಟ್ಟಿ ಹೂಳುವಲ್ಲಿ ಬಿಟ್ಟು ಹೋಹ ಪ್ರಾಣಕ್ಕೆ ಆವುದು ಕಂಥೆ? ಆವುದು ಖಟ್ವಾಂಗ? ಆವುದು ದಂಡ? ಆವುದು ಕಮಂಡಲ? ಆವುದು ಗುಂಡುಗಪ್ಪರದ ಜೋಳಿಗೆ? ಆವುದು ಕಾಮಾಕ್ಷಿ? ಈ ಸ್ಥಲಕುಳದ ನಿರ್ಣಯವ ಬಲ್ಲರೆ ಹಿರಿಯರೆಂದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->