ಅಥವಾ

ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಇಂತು ಕಲ್ಯಾಣಪಟ್ಟಣದ ಅನುಭಾವಮಂಟಪದ ಶೂನ್ಯಸಿಂಹಾಸನದಲ್ಲಿ ಪ್ರಭುಸ್ವಾಮಿಗಳು ಬಸವರಾಜೇಂದ್ರ ಮುಖ್ಯವಾದ ಸಕಲಪ್ರಮಥಗಣಂಗಳು ಕೂಡಿ, ಚಿಕ್ಕದಂಡನಾಯಕ ಮುಖವಚನದಿಂದೆ ಶಿವಯೋಗಿ ಸಿದ್ಧರಾಮೇಶ್ವರನ ಉಪದೇಶಕಾರಣಾರ್ಥವಾಗಿ, ನವರತ್ನ ಖಚಿತ ಮಂಟಪವ ರಚಿಸಿ, ಶುಚಿ, ರುಚಿ, ಪರುಷ, ನಿಜ, ಸದ್ಭಕ್ತಿ, ಜ್ಞಾನ, ವೈರಾಗ್ಯ, ಸತ್ಕ್ರಿಯಾಚಾರ ಷಟ್ಸ್ಥಲಮಾರ್ಗವ ಚೆನ್ನಬಸವಣ್ಣನ ಮುಖವಚನದಿಂದೆ ಸಿದ್ಧರಾಮದೇಶಿಕೇಂದ್ರನಿಗೆ ಬೋದ್ಥಿಸಿದ ನಿಲುಕಡೆಯ ಸೂತ್ರವದೆಂತೆಂದಡೆ : ಅಯ್ಯ, ಮೂವತ್ತಾರು ತತ್ವಂಗಳಲ್ಲಿ ಸಂಬಂಧವಾದ ಅಷ್ಟಾವರಣಂಗಳ ಕೂಡಿ ನಾಲ್ವತ್ತುನಾಲ್ಕು ಚಿದಂಗತತ್ವಂಗಳೆಂದೆನಿಸಿ, ಅಯ್ಯ, ಇಷ್ಟಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಪ್ರಾಣಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಭಾವಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು ಕೂಡಲಾಗಿ ಐವತ್ತೇಳು ಮಹಾಪ್ರಣಮಂಗಳೆ ಚಿದ್ಛನಲಿಂಗಸ್ಥಲಂಗಳಾಗಿ ಶೋಬ್ಥಿಸುವಂಥ ಚಿದಂಗ-ಚಿದ್ಘನಲಿಂಗವ ಉಭಯಭಾವವಳಿದು ನೂರೊಂದುಸ್ಥಲವ ಸಂಬಂಧವಮಾಡಿ, ಮಾರ್ಗಾಚರಣೆಯ ಕುರುಹ ತೋರಿ, ಅಂತರಂಗದಲ್ಲಿ ಶೋಬ್ಥಿಸುವ ಲೋಮವಿಲೋಮದಳಂಗಳೆ ನೂರೆಂಟು ತೆರದ ಚಿದಂಗಂಗಳಾಗಿ, ಆ ದಳಂಗಳಲ್ಲಿ ಝಗಝಗಾಯಮಾನವಾಗಿ ಪ್ರಕಾಶಿಸುವ ಪ್ರಣಮಂಗಳೆ ನೂರೆಂಟು ತೆರದ ಚಿದ್ಘನಲಿಂಗಂಗಳಾಗಿ, ಒಳಗು-ಹೊರಗು ಎಂಬ ಉಭಯ ನಾಮ ರೂಪು ಕ್ರಿಯವನಳಿದು ಇನ್ನೂರ ಹದಿನಾರು ಸ್ಥಲವ ಸಂಬಂಧವ ಮಾಡಿ ಮೀರಿದ ಕ್ರಿಯಾಚರಣೆಯ ಕುರುಹ ತೋರಿ ಅನಾದ್ಥಿಗುರು ಬಸವರಾಜೇಂದ್ರನ ಪ್ರಸಿದ್ಧಪ್ರಸಾದನೆ ಮಾರ್ಗಕ್ರಿಯಾರೂಪವಾದ ನೂರೊಂದು ಸ್ಥಲಂಗಳಾಗಿ, ಅನಾದಿಜಂಗಮ ಪ್ರಭುರಾಜೇಂದ್ರನ ಶುದ್ಧಪ್ರಸಾದವೆ ಮೀರಿದ ಕ್ರಿಯಾರೂಪವಾದ ಇನ್ನೂರ ಹದಿನಾರುಸ್ಥಲಂಗಳಾಗಿ, ಇವರಿಬ್ಬರ ಮಹಾಪ್ರಸಾದವೆ ಘಟ್ಟಿಗೊಂಡು ಅನಾದಿಶರಣರೂಪವ ತಾಳಿ ಚೆನ್ನಬಸವಣ್ಣನೆಂಬಬ್ಥಿಧಾನದಿಂದ ಮಾರ್ಗಕ್ರಿಯಾಸ್ವರೂಪ ನೂರೊಂದುಸ್ಥಲವೆ ಆಚರಣೆಯಾಗಿ ಮೀರಿದ ಕ್ರಿಯಾಸ್ವರೂಪ ಇನ್ನೂರ ಹದಿನಾರುಸ್ಥಲವೆ ಸಂಬಂಧವಾಗಿ ಅನಾದಿಪರಶಿವರೂಪ ಶಿವಯೋಗಿಸಿದ್ಧರಾಮನ ಕರ-ಮನ-ಭಾವಂಗಳಲ್ಲಿ ಮಿಶ್ರಾಮಿಶ್ರಂಗಳೊಡನೆ ಅಗಣಿತ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ ತ್ಯಾಗ-ಭೋಗ-ಯೋಗಾನುಸಂಧಾನದಿಂದ ಸಿದ್ಧರಾಮನ ಕರಸ್ಥಲದಲ್ಲಿ ಶುದ್ಧಪ್ರಸಾದ-ಇಷ್ಟಲಿಂಗವಾಗಿ ಅಷ್ಟವಿಧಾರ್ಚನೆ-ಷೋಡಶೋಪಚಾರವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಮನಸ್ಥಲದಲ್ಲಿ ಸಿದ್ಧಪ್ರಸಾದ-ಪ್ರಾಣಲಿಂಗವಾಗಿ ಮಂತ್ರ-ಧ್ಯಾನ-ಜಪ-ಸ್ತೋತ್ರಂಗಳ ಕೈಕೊಂಡು ಒಪ್ಪುತ್ತಿರ್ಪರು ನೋಡ. ಭಾವಸ್ಥಲದಲ್ಲಿ ಪ್ರಸಿದ್ಧಪ್ರಸಾದ-ಭಾವಲಿಂಗವಾಗಿ ಮನೋರ್ಲಯ ನಿರಂಜನ ಪೂಜಾಕ್ರಿಯಾನಂದ ಕೂಟವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಇಂತು ಸಂಬಂಧಾಚರಣೆಯ ಸ್ಥಲಕುಳಂಗಳ ಚಿದ್ಬೆಳಗಿನಲ್ಲಿ ಶೋಬ್ಥಿಸುವ ಬಸವಣ್ಣ, ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ ಪ್ರಮಥಗಣಂಗಳ ಮಹಾಪ್ರಸಾದ ಬೆಳಗಿಗೆ ಯೋಗ್ಯರಾಗಿ ದಗ್ಧಪಟನ್ಯಾಯ, ಉರಿವುಂಡ ಕರ್ಪೂರದಂತಾದೆವು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ತಾರಕಾಕೃತಿ ಮೊದಲಾಗಿ ನವಾಕೃತಿಗಳು, ಅಯ್ಯ, ನಕಾರಪ್ರಣಮ ಮೊದಲಾಗಿ ನವಪ್ರಣಮಗಳು, ಅಯ್ಯ, ಭ್ರಮರನಾದ ಮೊದಲಾಗಿ ನವನಾದಗಳು, ಆಧಾರಚಕ್ರ ಮೊದಲಾಗಿ ನವಚಕ್ರಗಳು, ಪೀತವರ್ಣ ಮೊದಲಾಗಿ ನವವರ್ಣಗಳು, ಭಕ್ತಿಸ್ಥಲ ಮೊದಲಾಗಿ ನವಸ್ಥಲಗಳು, ಸ್ಥೂಲತನು ಮೊದಲಾಗಿ ನವತನುಗಳು, ಸುಚಿತ್ತಹಸ್ತ ಮೊದಲಾಗಿ ನವಹಸ್ತಗಳು, ಅಚಾರಲಿಂಗ ಮೊದಲಾಗಿ ನವಲಿಂಗಗಳು, ಘ್ರಾಣಮುಖ ಮೊದಲಾಗಿ ನವಮುಖಗಳು, ಶ್ರದ್ಧಾಭಕ್ತಿ ಮೊದಲಾಗಿ ನವಭಕ್ತಿಗಳು, ಸುಗಂಧಪದಾರ್ಥ ಮೊದಲಾಗಿ ನವಪದಾರ್ಥಗಳು, ಸುಗಂಧಪ್ರಸಾದ ಮೊದಲಾಗಿ ನವಪ್ರಸಾದಗಳು, ಬ್ರಹ್ಮಪೂಜಾರಿ ಮೊದಲಾಗಿ ನವಪೂಜಾರಿಗಳು, ಬ್ರಹ್ಮ ಅಧಿದೇವತೆ ಮೊದಲಾಗಿ ನವ ಅಧಿದೇವತೆಗಳು, ಕರ್ಮಸಾದಾಖ್ಯ ಮೊದಲಾಗಿ ನವಸಾದಾಖ್ಯಗಳು, ಸತ್ತುವೆಂಬ ಲಕ್ಷಣ ಮೊದಲಾಗಿ ನವಲಕ್ಷಣಗಳು, ಪರವೆಂಬ ಸಂಜ್ಞೆ ಮೊದಲಾಗಿ ನವಸಂಜ್ಞೆಗಳು, ಪೂರ್ವದಿಕ್ಕು ಮೊದಲಾಗಿ ನವದಿಕ್ಕುಗಳು, ಋಗ್ವೇದ ಮೊದಲಾಗಿ ನವವೇದಗಳು, ಚಿತ್ಪøಥ್ವಿ ಮೊದಲಾಗಿ ನವ ಅಂಗಗಳು, ಜೀವಾತ್ಮ ಮೊದಲಾಗಿ ನವ ಆತ್ಮರು, ಕ್ರಿಯಾಶಕ್ತಿ ಮೊದಲಾಗಿ ನವಶಕ್ತಿಯರು, ನಿವೃತ್ತಿಕಲೆ ಮೊದಲಾಗಿ ನವಕಲೆಗಳು, ಇಂತು ಇಪ್ಪತ್ತುನಾಲ್ಕು ಸಕೀಲಂಗಳು ನವವಿಧ ತೆರದಿಂದ ಇನ್ನೂರ ಹದಿನಾರು ಸಕೀಲು ಮೊದಲಾದ ಸಮಸ್ತ ಕ್ಷೇತ್ರಂಗಳನೊಳಕೊಂಡು ಎನ್ನ ಅಣುಚಕ್ರವೆಂಬ ಪರಮಕೈಲಾಸ ಚಿದಾಕಾಶಮಂಡಲದ ವರ ಚೌಕಮಂಟಪ ನವರತ್ನ ಖಚಿತ ಶೂನ್ಯಸಿಂಹಾಸನಪೀಠದಲ್ಲಿ ಮೂರ್ತಿಗೊಂಡಿರ್ದ ಪರಾತ್ಪರ ನಿಜಜಂಗಮಲಿಂಗಸ್ವರೂಪ ಸರ್ವಚೈತನ್ಯಾಧಾರಸ್ವರೂಪವಾದ ಅಣುಲಿಂಗಜಂಗಮವೆ ಪರತತ್ವ ನಿಃಕಲಪರಬ್ರಹ್ಮಮೂರ್ತಿ ಲಿಂಗಜಂಗಮಪ್ರಸಾದವೆಂದು ತನುತ್ರಯ, ಮನತ್ರಯ, ಭಾವತ್ರಯ, ಆತ್ಮತ್ರಯ, ಪ್ರಾಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ, ಕರಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ, ಕರಣತ್ರಯ, ಹಂಸತ್ರಯಂಗಳ ಪೂರ್ಣ ಮಡಿಮಾಡಿ, ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರದು, ನಿಃಕರಣವೆಂಬ ಗಂಧವ ಧರಿಸಿ, ನಿಃಸಂಗವೆಂಬಕ್ಷತೆಯನಿಟ್ಟು, ನಿಃಪರಿಪೂರ್ಣವೆಂಬ ಪುಷ್ಪದಮಾಲೆಯ ಧರಿಸಿ, ನಿರುಪಾಧಿಕವೆಂಬ ಧೂಪವ ಬೀಸಿ, ನಿಃಕಳೆಯೆಂಬ ಜ್ಯೋತಿಯ ಬೆಳಗಿ, ನಿಶ್ಚಲವೆಂಬ ವಸ್ತ್ರವ ಹೊದ್ದಿಸಿ, ಪರಮನಿಜಾಭರಣವ ತೊಡಿಸಿ, ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ, ನಿರಾವಯವೆಂಬ ತಾಂಬೂಲವನಿತ್ತು, ಇಂತೀ ಅಣುಲಿಂಗಜಂಗಮಪ್ರಸಾದಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಭೆಯಂತೆ ಬೆಳಗುವ, ಅಣುಲಿಂಗಜಂಗಮಪ್ರಸಾದವನ್ನು ಅನುಮಿಷದೃಷ್ಟಿಯಿಂ ನಿರೀಕ್ಷಿಸಿ, ಉನ್ಮನಾಗ್ರದಲ್ಲಿ ಸಂತೋಷಂಗೊಂಡು ಆ ಅಣುಲಿಂಗಜಂಗಮಪ್ರಸಾದಪೂಜೆಯ ಸಮಾಪ್ತವ ಮಾಡಿ, ಅನಂತಕೋಟಿ ಮಹಾಮಂತ್ರಂಗಳಿಂದ ನಮಸ್ಕರಿಸಿ, ಆ ಅಣುಲಿಂಗಜಂಗಮಪ್ರಸಾದವೆ ತಾನೆಂದರಿದು ಏಕತ್ವದಿಂ, ನಿಶ್ಚಲಚಿತ್ತದೊಳ್ ಕೂಡಿ ಉಭಯವಳಿದು ಇಹಪರಂಗಳ ಹೊದ್ದದೆ, ಕನ್ನಡಿಯ ಪ್ರತಿಬಿಂಬದಂತೆ ಸರ್ವಸಂಗಪರಿತ್ಯಾಗವಾಗಿ, ನಿಜಾಚರಣೆಯಲ್ಲಿ ಆಚರಿಸಬಲ್ಲಾತನೆ ದಶವಿಧಲಿಂಗಜಂಗಮಸಂಗ ಭಕ್ತಿಪ್ರಸಾದವುಳ್ಳ ಅನಾದಿ ಅಖಂಡ ಚಿಜ್ಜ್ಯೊತಿ ಸದ್ಭಕ್ತ ಜಂಗಮ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ನಿನ್ನ ಷಟ್ಚಕ್ರಂಗಳಲ್ಲಿ ಅನಾದಿ ನಿಷ್ಕಳಂಕ ಚಿದ್ಘನ ಇಷ್ಟಮಹಾಲಿಂಗವೆ ಷಡ್ವಿಧಲಿಂಗವಾಗಿ ನೆಲಸಿರ್ಪರು ನೋಡ, ಅದೆಂತೆಂದಡೆ: ಆಧಾರಚಕ್ರದ ನಾಲ್ಕೆಸಳಮಧ್ಯದಲ್ಲಿ ನಕಾರಮಂತ್ರಮೂರ್ತಿ ಆಚಾರಲಿಂಗವಾಗಿ ನೆಲಸಿರ್ಪರು ನೋಡ. ಸ್ವಾಧಿಷಾ*ನಚಕ್ರದ ಆರೆಸಳಮಧ್ಯದಲ್ಲಿ ಮಕಾರಮಂತ್ರಮೂರ್ತಿ ಗುರುಲಿಂಗವಾಗಿ ನೆಲಸಿರ್ಪರು ನೋಡ. ಮಣಿಪೂರಕಚಕ್ರದ ಹತ್ತೇಸಳಮಧ್ಯದಲ್ಲಿ ಶಿಕಾರಮಂತ್ರಮೂರ್ತಿ ಶಿವಲಿಂಗವಾಗಿ ನೆಲಸಿರ್ಪರು ನೋಡ. ಅನಾಹತಚಕ್ರದ ಹನ್ನೆರಡೆಸಳಮಧ್ಯದಲ್ಲಿ ವಕಾರಮಂತ್ರಮೂರ್ತಿ ಚರಲಿಂಗವಾಗಿ ನೆಲಸಿರ್ಪರು ನೋಡ. ವಿಶುದ್ಧಿಚಕ್ರದ ಹದಿನಾರೆಸಳಮಧ್ಯದಲ್ಲಿ ಯಕಾರಮಂತ್ರಮೂರ್ತಿ ಪ್ರಸಾದಲಿಂಗವಾಗಿ ನೆಲಸಿರ್ಪರು ನೋಡ. ಆಜ್ಞಾಚಕ್ರದ ಎರಡೆಸಳ ಮಧ್ಯದಲ್ಲಿ ಓಂಕಾರಮಂತ್ರಮೂರ್ತಿ ಮಹಾಲಿಂಗವಾಗಿ ನೆಲಸಿರ್ಪರು ನೋಡ. ಇಂತು ಷಟ್ಚಕ್ರಂಗಳಮಧ್ಯದಲ್ಲಿ ನೆಲಸಿ, ನಿನ್ನ ಷಡ್ವಿಧಭೋಗಂಗಳ ಕೈಕೊಂಡು, ಆ ಪರಿಣಾಮವ ನಿನಗೆ ಸಂತೃಪ್ತಿಯ ಮಾಡಿ, ಶರಣಸತಿ ಲಿಂಗಪತಿ ಭಾವದಿಂದ ಮೇಲುಗಿರಿಮಂಟಪದ ನವರತ್ನ ಖಚಿತ ಸಹಸ್ರದಳ ಪದ್ಮಯುಕ್ತವಾದ ಪರಿಯಂಕದ ಮೇಲೆ ಲಿಂಗಾನುಭಾವರತಿಸುಖಾನಂದದಿಂದ ಶೋಭಿಸುವಂಥದೆ ಆಧ್ಯಾತ್ಮ ದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
-->