ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಎರಡಹುದೆ ? ಎರಡು ಒಂದಹುದೆ ? ಒಂದು ಒಂದೇ, ಎರಡು ಎರಡೇ. ಅದು ಕಾರಣ, ಶಿವನು ತನ್ನ ಲೀಲಾಕಾರಣವಾಗಿ ಮಾಯಾ ನಿರ್ಮಿತವಂ ಮಾಡಿ, ಆ ಮಾಯಾರಚನೆಯಿಂದಾದ ಬ್ರಹ್ಮಾಂಡ ಸಂದೋಹ, ಹರಿ ವಿರಿಂಚಿ ಸುರಪತಿ ಸುರಾಸುರರು ನರನಿಕರ, ಖಗಮೃಗ ಜೀವರಾಶಿಗಳೆಲ್ಲವೂ ಶಿವನಿಂದಲಾಗಿ, ಶಿವನಿಂದ ಹೊರೆಯಿಸಿಕೊಂಡು, ಶಿವನಿಂದವೆ ಹೋದವೆಂದಡೆ, ಅವರ ಆಗು ಹೋಗು ಇರವು ಹೋಗಿನೊಳಗೆ ಲಯ ಗಮನ ಸ್ಥಿತಿ ಶಿವಂಗುಂಟೆ, ಎಲೆ ಮರುಳಗಳಿರಾ ? ಗಗನದಲ್ಲಿ ತೋರಿದ ಮೇಘವು ಗಗನದಲ್ಲಿ ಅಡಗಿದವೆಂದಡೆ, ಆ ಗಗನ ತಾ ಮೇಘವೆ ? ತನ್ನಾದ್ಥೀನಶಕ್ತಿದಂಡದಿಂ ಕುಂಬಾರ ಚಕ್ರವ ತಿರುಗಿಸಲು, ಆ ಚಕ್ರಭ್ರಮಣ ಚೈತನ್ಯವು ಆ ಕುಂಬಾರನೆ, ಮರುಳುಗಳಿರಾ ? ಆ ಚೈತನ್ಯ ಅಡಗುವುದೆ ? ನಿಲ್ಲು ಮಾಣು. ಬಿಲ್ಲ ನಾರಿಗೆ ಅಂಬಂ ಸಂಧಾನಿಸಿ ಎಸೆಯಲಾ, ಅಂಬು ಹರಿದ ಚೈತನ್ಯ ಬಿಲ್ಲು ಕಾರಣವೆ ? ಅಲ್ಲ , ನಿಲ್ಲು , ಮಾಣು. ಇವೆಲ್ಲವು ಚೈತನ್ಯಂಗಳು. ಅಂತು ಸರ್ವವೆಲ್ಲವು ತೋರಿಯಡಗುವುದು. ಸರ್ವೇಶ್ವರನು, ಸರ್ವಕರ್ತೃ, ಸರ್ವಚೈತನ್ಯ, ಸೂತ್ರಯಂತ್ರವಾಹಕ ಶಿವನು. ಸರ್ವಲಯ ಗಮನ ಸ್ಥಿತಿ ತನಗುಂಟೆ ? ನಿಲ್ಲು , ಮಾಣಿರೆ, ಎಲೆ ಜಡಜೀವಿಗಳಿರಾ. ಗಗನದ ರವಿ ಕಿರಣದಿಂದ ಸಕಲರೂಪಿತ ದ್ರವ್ಯಪದಾರ್ಥಂಗಳಲ್ಲಿ ಪ್ರತಿಪ್ರಭೆ ತೋರಲು, ಆ ಪ್ರತಿಪ್ರಭೆಯ ಆಗುಹೋಗಿನ ಸ್ಥಿತಿಗತಿ ಆ ಗಗನದ ಸೂರ್ಯಂಗುಂಟೆ, ಎಲೆ ಜಡಜೀವಿಗಳಿರಾ ? ಈ ಪರಿಯಲೆ ವಿಶ್ವವೆಲ್ಲವಕ್ಕೂ ತಾನಲ್ಲದ ತಾನಿಲ್ಲದ ಪ್ರೇರಣ ಚೈತನ್ಯವೇ ವಿಶ್ವದ ನಯನ, ವಿಶ್ವದ ಮುಖ, ವಿಶ್ವದ ಬಾಹು, ವಿಶ್ವದ[ಚ]ರಣ, ಸ್ವರ್ಗಮತ್ರ್ಯ ಭುವನಾದ್ಯಂಗಳ ಮೂಲಚೈತನ್ಯಸೂತ್ರ ತಾನಲ್ಲದೆ, ತಾನಿಲ್ಲದೆ ಆಡಿಸುವ ಸೂತ್ರಾತ್ಮಕನಲ್ಲದೆ ಅವರಾಗು ತನಗುಂಟೆ, ಎಲೆ ಭ್ರಮಿತರಿರಾ ? `ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾ ಪಾತ್ | ಸಂ ಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಎನಲು, `ಈಶಾನಃ ಶಿವ ಏಕೋದೇವಃ ಶಿವಂ ಕರಃ ತತ್ಸರ್ವಮನ್ಯತ್ ಪರಿತ್ಯಜೇತ್' ಎನಲು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥು' ಎನಲು, ಶಿವನೊಬ್ಬನೇ, ಇಬ್ಬರಿಲ್ಲ . `ನ ಯಥಾಸ್ತಿ ಕೂರ್ಮರೋಮಾಣಿ, ಶೃಂಗಂ ನ ನರಮಸ್ತಕೇ ನ ಯಥಾಸ್ತಿ ವಿಯತ್ಪುಷ್ಪಂ ನ ತಥಾಸ್ತಿ ಪರಾತ್ಪರಃ |' ನಾಲ್ಕು ವೇದಂಗಳು ಬಿನ್ನವಿಸಿದವು ಕೇಳಿರೇ ಎಲೆ ವಿಪ್ರರಿರಾ. ಇದನರಿದು, ಬಸವಪ್ರಿಯ ಕೂಡಲಚೆನ್ನಸಂಗಯ್ಯನನೆ ಧ್ಯಾನಿಸಿ, ನಿರೀಕ್ಷಿಸಿ, ಸ್ತುತಿಸಿ, ಯಜಿಸಿ ಕೃತಾರ್ಥರಾಗಿರೆ ಎಲೆ ಮರುಳು ವಿಪ್ರರಿರಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯ ವಿಶ್ವತೋಚಕ್ಷುರುತ' ಎಂದುದಾಗಿ, ಜಗವೆಲ್ಲ ನೇತ್ರಂಗಳಾಗಿರ್ಪನು ಶಿವನು. ಜಗವೆಲ್ಲ ನೇತ್ರವಾಗಿದ್ದರೆ, ನೇತ್ರದೊಳಗುತ್ತಮ ಮಧ್ಯಮ ಕನಿಷ*ಂಗಳು ಏಕಾದವು ? ಎಂದಡೆ ಹೇಳಿಹೆವು ಕೇಳಿರಯ್ಯ: ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶನಾಗಿ ತನ್ನ ತೋರದೆ ಇದ್ದಂಥಾ, ಶ್ರೀಗುರು ಕರುಣಾಕಟಾಕ್ಷೆಯಿಂದ ಉದಯವಾದ ಇಷ್ಟಮಹಾಜ್ಯೋತಿರ್ಲಿಂಗವನು ನೋಡಿದ ನೇತ್ರವೆ ಲಿಂಗನೇತ್ರವು. ಅದೇ ಸದ್ಧರ್ಮಸ್ವರೂಪವಾದ ಉತ್ತಮವೆನಿಸುವುದು. ಅಯ್ಯಾ ಖಗಮೃಗ ಫಣಿಕೀಟಕಾದಿಗಳ ನೇತ್ರಂಗಳು ಉಭಯಕರ್ಮಕ್ಕೆ ಒಳಗಿಲ್ಲಾಗಿ ದೃಷ್ಟಿದೋಷವಿಲ್ಲಾಗಿ ಅದು ಮಧ್ಯಮವೆನಿಸುವುದು ಅಯ್ಯಾ ಇಷ್ಟಮಹಾಜ್ಯೋತಿರ್ಲಿಂಗಬಾಹ್ಯವಾಗಿ ಪಂಚಮಹಾಪಾತಕ ಸೂತಕಂಗಳಲ್ಲಿ ವರ್ತಿಸುವ ಅಪಾತ್ರಜೀವಿಗಳಾದ ಭವಿಗಳ ನೇತ್ರಂಗಳು ಉಭಯಕ್ಕೆ ಅನುಕೂಲವಾದ ಕಾರಣ ಚರ್ಮಚಕ್ಷುವೆಂದು, ತನ್ನತಾನರಿಯದ ಗಾಡಾಂಧಕಾರವೆಂದು ಮೀನುಗಳೆಂದು ವಿಷನೇತ್ರವೆಂದು ಮನ್ಮಥನ ಕೈಗೆ ಸಿಲುಕಿದ ನೀಲೋತ್ಪಲ ಬಾಣವೆಂದು, ತಾಮಸಾಗ್ನಿಯೆಂದು ಕುರೂಪದ ನೇತ್ರೇಂದ್ರಿಯವೆಂದು, ಶಿವಾಚಾರ ಸದ್ಧರ್ಮಿಗಳ ನಿಂದಿಸುವ ಮಹಾಪಾತಕ ದೃಷ್ಟಿಯೆಂದು ಹೇಳಲ್ಪಟ್ಟಿತ್ತು. ಇಷ್ಟಲಿಂಗವಿಲ್ಲಾದ ಕಾರಣ ಕನಿಷ*ಚಕ್ಷುವೆಂದುದು ನೋಡಾ ಅಯ್ಯ. ಅದರಿಂದ ಸದ್ಭಕ್ತ ಶರಣಗಣಂಗಳು ಅರ್ಚನೆ ಅರ್ಪಿತದ್ರವ್ಯವ ಕೊಡದೆ, ಅವರೊಡನೆ ಸಂಭಾಷಣೆ ದರ್ಶನ ಸ್ಪರ್ಶನವ ಮಾಡಲಿಲ್ಲ ನೋಡಾ ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
``ಲಿಂಗ ಸೂತ್ರಾತ್ಮನೋರಪಿ, ವಿಶ್ವತಶ್ಚಕ್ಷುಂ, ಊಧ್ರ್ವರೇತಂ ವಿರೂಪಾಕ್ಷಃ, ಪುರುಷಂ ಕೃಷ್ಣಪಿಂಗಳಂ ಋತಗ್‍ಂ ಸತ್ಯಂ ಪರಬ್ರಹ್ಮಂ, ಲಿಂಗಂ ಮನಂ ತಮವ್ಯಕ್ತಮಚಿಂತ್ಯಂ, ಲಿಂಗಂ ಶಿವ ಪರಾತ್ಪರಮಧಿಷಾ*ನಾಂ ಸಮಸ್ತಸ್ಯಂ' ಎಂಬ ಶ್ರುತಿಯುಂಟಾಗಿ; ಜಗವೆಲ್ಲಾ ನೇತ್ರಂಗಳಾಗಿರ್ಪಾತನು ಶಿವನೆನಲಾ ಶ್ರುತಿ ಜಗವೆಲ್ಲಾ ನೇತ್ರಂಗಳಾಗಿದ್ದರೆ, ನೇತ್ರಂಗಳೊಳಗೆ ಉತ್ತಮ ಮಧ್ಯಮ ಕನಿಷ*ಂಗಳೇಕಾದವೆಂದಡೆ, ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶವಾಗಿ ತನ್ನ ತಾ ತೋರದಿದ್ದಂತೆ, ಜ್ಯೋತಿರ್ಲಿಂಗವನೆ ನೋಡಿದ ನೇತ್ರವು ಲಿಂಗನೇತ್ರವು. ಅದೀಗ ಉತ್ತಮವು. ಖಗಮೃಗ ಕ್ರಿಮಿಕೀಟ ಪತಂಗ ನೇತ್ರಂಗಳು ಉಭಯ ಕರ್ಮಂಗಳಿಲ್ಲವಾಗಿ ದೃಷ್ಟಿದೋಷವಿಲ್ಲ. ಅದು ಮಧ್ಯಮವೆನಿಸಿತ್ತು. ಅಪವಿತ್ರಜೀವಿಗಳಾದ ಭವಿಗಳ ನೇತ್ರವು ಉಭಯ ಕರ್ಮಕ್ಕನುಕೂಲವಾದ ಕಾರಣ, ಚರ್ಮಚಕ್ಷುವೆಂದು ತನ್ನ ತಾನರಿಯದ ಗಾಡಾಂಧಕಾರವೆಂದು, ವಿೂನನೇತ್ರವೆಂದು ವಿಷನೇತ್ರ ವಿಷಯನೇತ್ರವೆಂದು ಮನ್ಮಥನ ಕೈಗೆ ಸಿಲ್ಕಿದ ನೀಲೋತ್ಪಲಬಾಣವೆಂದು, ತಾಮಸಾಗ್ನಿಯೆಂದು, ನೇತ್ರೇಂದ್ರಿಯವೆಂದು, ಶಿವಲಾಂಛನಧಾರಿಗಳ ಕೆಡಿಸುವ ಮಹಾಪಾತಕದೃಷ್ಟಿಯೆಂದು, ವಿಷಯ ಗಾಳಿಯೆಂದು ಪೇಳಲ್ಪಟ್ಟಿತ್ತು. ಅವರಿಗಿಷ್ಟಲಿಂಗಧಾರಣವಿಲ್ಲದ ಕಾರಣ, ಕನಿಷ*ವೆಂದು ಪೇಳಲ್ಪಟ್ಟಿತ್ತು. ಇದು ಕಾರಣ, ಶಿವಭಕ್ತರವರ ನೋಡುವುದಿಲ್ಲ. ಅವರು ಸುಕರ್ಮ ದುಷ್ಕರ್ಮವೆಂಬ ಮಾಯಾ ರೂಪುಗಳಂ ಎದುರಿಟ್ಟು ನೋಡುತ್ತಿಹರಾಗಿ, ಶಿವಾರ್ಚನೆ ಶಿವಾರ್ಪಣವಂ ಮಾಡುವುದಿಲ್ಲ. ಅವರ ಬಹುಜನ್ಮಾಂತರದ ಮಹಾಪಾತಕಂಗಳು ಶಿವಭಕ್ತರು ತಮ್ಮ ಸೋಂಕವೆಂದು, ಮೇರುಗಿರಿಯಂ ಪಿಡಿದು ಘೋರಾಸ್ತ್ರ ಪ್ರಯೋಗದಿಂ ದಹಿಸಿ ಗುಹೇಶ್ವರಲಿಂಗವನೊಡಗೂಡುವರು ನೋಡಾ.
--------------
ಅಲ್ಲಮಪ್ರಭುದೇವರು
-->