ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೆಲ್ಲಸೋಲೆಂಬ ಕಲಿಧರ್ಮದಲ್ಲಿ ಗೆಲಬೇಕೆಂಬ ನರ ಸುರ ಖಗ ಮೃಗ ಕೀಟ ಕ್ರಿಮಿಗಳೆಲ್ಲ ಹೆಣಗುತಿಪ್ಪವಲ್ಲದೆ ಸೋಲಬೇಕೆಂಬ ಕುರುಹುಗಾಣದು ನೋಡಾ. ಸೋಲದಲ್ಲಿ ಭವಮಾಲೆ ಬಲಿಯಿತ್ತು ಕಲಿಯುಗ ಕಳೆವೊಡೆಯಿತ್ತು. ಅಂತಂತೆ ಶರಣಶಿವಾನುಕೂಲ. ಸೋಲಬಾರದ ಕರ್ತು ಸೋತುಬಂದಲ್ಲಿ ಸೋತುಗೆಲ್ಲುವುದಪೂರ್ವ. ಸೋತುಗೆಲ್ಲುವ ಸುಲಭವಳಿದು ಖ್ಯಾತಿವಡೆದು ಹೋಗಿ ಬಂದು ಹೋದರು ಗುರುನಿರಂಜನ ಚನ್ನಬಸವಲಿಂಗಕೀತೆರವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ ಅರಗಿನ ಮರದ ಮೇಲೆ ಗಿರಿ ಹುಟ್ಟಿತ್ತಯ್ಯಾ. ಆ ಗಿರಿಯ ತಪ್ಪಲಲ್ಲಿ ಸಪ್ತಶರಧಿಗಳಿಪ್ಪವು. ಆ ಶರಧಿಯ ನಡುವೆ, ತರು ಮರ ಗಿರಿ ಗಹ್ವರ ಖಗ ಮೃಗಂಗಳಿಪ್ಪವು. ಈ ಭಾರವ ತಾಳಲಾರದೆ, ಅರಗಿನ ಮರದಡಿಯಲಿರ್ದ ಪರಮಜ್ಞಾನವೆಂಬ ಉರಿಯೆದ್ದು, ಅರಗಿನ ಮರ ಕರಗಿ ಕುಸಿಯಿತ್ತು, ಗಿರಿ ನೆಲಕ್ಕೆ ಬಿದ್ದಿತ್ತು, ಸಪ್ತಶರಧಿಗಳು ಬತ್ತಿದವು. ಅಲ್ಲಿರ್ದ ತರು ಮರ ಖಗ ಮೃಗಾದಿಗಳು ಗಿರಿಗಹ್ವರವೆಲ್ಲ ದಹನವಾದವು. ಇದ ಕಂಡು, ನಾ ನಿಮ್ಮೊಳು ಬೆರಗಾಗಿ ನೋಡುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹಗಲಿರುಳ್ಗಳಿಲ್ಲದಂದು, ಯುಗಜುಗಂಗಳು ಮರಳಿ ಮರಳಿ ತಿರುಗದಂದು, ಗಗನ ಮೇರು ಕೈಲಾಸಂಗಳಿಲ್ಲದಂದು, ಖಗ ಮೃಗ ಶೈಲ ವೃಕ್ಷಂಗಳಿಲ್ಲದಂದು, ಅಜಹರಿಸುರಾಸುರ ಮನುಮುನಿಗಳಿಲ್ಲದಂದು, ಜಗದ ಲೀಲಾವೈಭವಂಗಳೇನೂ ಇಲ್ಲದಂದು, ಅಖಂಡೇಶ್ವರಾ, ನಿಮ್ಮ ನೀವರಿಯದೆ ಅನಂತಕಾಲವಿರ್ದಿರಂದು.
--------------
ಷಣ್ಮುಖಸ್ವಾಮಿ
ಹಾಲು ಅನಿಲ ಕಂದಮೂಲ ಪರ್ಣಾಂಬು ಫಲಾದಿಗಳನೆ ಆಹಾರವ ಕೊಂಡು ಮುಕ್ತರಾದೆಹೆವೆಂಬ ಅಣ್ಣಗಳು ನೀವು ಕೇಳಿರೆ. ಆಹಾರವ ಕೊಂಡು ಅಣುರೇಣು ನೊರಜ ಸರ್ವ ಸರ್ಪ ಪಕ್ಷಿಗಳು ವಾಯುವನೇ ಉಂಡು ಬೆಳೆವವು ನೋಡಾ. ಖಗ ಮೃಗ ವಾನರ ಕ್ರಿಮಿ ಕೀಟಕ ಇವೆಲ್ಲವೂ ಕಂದಮೂಲ ಪರ್ಣಾಂಬುವನೆ ಉಂಡು ಬೆಳೆವವು ಕೇಳಿರಣ್ಣಾ. ಕ್ಷೀರಾಬ್ಧಿಯೊಳಗೆ ಹುಟ್ಟಿದ ಪ್ರಾಣಿಗಳೆಲ್ಲ ಕ್ಷೀರವನೆ ಉಂಡು ಬೆಳೆವವು. ನಿಮಗೆ ಮುಕ್ತಿಯುಂಟಾದಡೆ ಇವು ಮಾಡಿದ ಪಾಪವೇನು ಹೇಳಿರೇ ? ವಿಚಾರಿಸುವಡೆ ನಿಮ್ಮಿಂದ ಅವೆ ಹಿರಿಯರು ನೋಡಾ. ವಾಗದ್ವೈತವ ನುಡಿದು ಅನುವನರಿಯದೆ ಬರುಸೂರೆವೋದಿರಲ್ಲಾ. ಆದಿ ಅನಾದಿಯ ಅಂಗವ ಮಾಡಿ, ಆ ಮಹಾ ಅನಾದಿಯ ಪ್ರಕಾಶವನೆ ಶ್ರೀಗುರು ಸಾಕಾರಮೂರ್ತಿಯಂ ಮಾಡಿ, ಅಂಗ ಮನ ಪ್ರಾಣ ಸರ್ವಾಂಗದಲ್ಲಿ ನೆಲೆಗೊಳಿಸಿದ ಭೇದವನರಿತು, ಶ್ರೋತ್ರ ನೇತ್ರ ಘ್ರಾಣ ತ್ವಕ್ಕು ಜಿಹ್ವೆ ಮೊದಲಾದ ಸರ್ವೇಂದ್ರಿಯದಲ್ಲಿ ವೇಧಿಸಿಕೊಂಡು, ಶುದ್ಧ ಸುಯಿದಾನ ಸುಜ್ಞಾನದಿಂದ ಲಿಂಗಾವಧಾನ ಹಿಡಿದು ಅರ್ಪಿಸಿ, ಆ ಪರಮ ಪ್ರಸಾದವನುಂಡು, ಮಾತಂಗ ನುಂಗಿದ ನಾರಿವಾಳದ ಫಲದಂತೆ ಬಯಲುಂಡ ಪರಿಮಳದಂತೆ ನಿಜಗುರು ಭೋಗಸಂಗನೊಳು ಸಯವಾದ ಶರಣರಿರವು, ಮಿಕ್ಕಿನ ಭವಭಾರಿಗಳಿಗೆಂತು ಸಾಧ್ಯವಪ್ಪುದೊ, ಕೇಳಯ್ಯಾ.
--------------
ಭೋಗಣ್ಣ
-->