ಅಥವಾ

ಒಟ್ಟು 12 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೊಲ್ಲಿಗೆ ಒಂದು ಖಂಡುಗ ನವಣೆ ನುಂಗಿತ್ತಯ್ಯಾ. ಆ ನವಣೆಯ ಹೊಯ್ದಳೆಯಬೇಕೆಂದಡೆ ಸ್ಥಲ ಸಾಲದಯ್ಯಾ- ಹಲಬರು ಛಲವಿಡಿದುವಿಡಿದು ಹೊಲಬುಗೇಡಿಯಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬನ್ನಿ ಕರಣಿಕರು, ನೀವು ಲೆಕ್ಕವ ಹೇಳಿ, ಧಾನ್ಯ ಧಾನ್ಯಂಗಳ ಸಂಚವನು. ಹೊಸಜೋಳ ಅರುವತ್ತುಲಕ್ಷ ಖಂಡುಗ, ಶಾಲಿಧಾನ್ಯ ಮೂವತ್ತುಲಕ್ಷ ಖಂಡುಗ, ಗೋದಿ ಹನ್ನೆರಡುಲಕ್ಷ ಖಂಡುಗ, ಕಡಲೆ ಬತ್ತೀಸ ಖಂಡುಗ, ಹೆಸರು ಮೂವತ್ತಾರುಲಕ್ಷ ಖಂಡುಗ, ನವಣೆ ಹಾರಕ ಬರಗು ಸಾವೆ ದೂಸಿಗಳೆಂಬ ಧಾನ್ಯ ಐವತ್ತುಲಕ್ಷ ಖಂಡುಗ. ಹೊಸಸುಗ್ಗಿಯ ವೇಳೆಗೆ ಬಹ ಭತ್ತ ಅಗಣಿತ. ಮಹಾದಾನಿ ಸೊಡ್ಡಳನ ಆರೋಗಣೆಯ ಅವಸರಕ್ಕೆ ಅಳವಟ್ಟ ಸಯದಾನ ಇನಿತನವಧರಿಸಯ್ಯಾ, ಸಂಗನಬಸವಣ್ಣಾ.
--------------
ಸೊಡ್ಡಳ ಬಾಚರಸ
ಕಂಡಮಂಡಗೆ ಬೆಲ್ಲ ದ್ರಾಕ್ಷೆ ಸಕ್ಕರೆ, ಸರಿಭಾಗವಾದ ಹೊಸ ಹೆಸರ ಭಕ್ಷ್ಯ ಪನ್ನಿರ್ಖಂಡುಗ, ಸುಲಿಗಡಲೆಯ ಕಜ್ಜಾಯ ಹದಿನೆಂಟು ಖಂಡುಗ, ಅಕಾಲ ಮಾವಿನಹಣ್ಣು ಇಪ್ಪತ್ತುನಾಲ್ಕು ಲಕ್ಷ, ಕಡೆಯಿಲ್ಲದ ಕದಳೀಫಲ, ಚಾರಬೀಜ ಎಂಬತ್ತು ಖಂಡುಗ, ತವರಾಜ ಹೆತ್ತುಪ್ಪ, ಹಲಸಿನ ಹಣ್ಣು ಮನ ಮೇರೆ, ಹಾಲಕೆನೆ ಹದಿನೆಂಟು ಖಂಡುಗ, ಉತ್ತತ್ತಿ, ಚಿಲುಪಾಲಘಟ್ಟಿ ಕಟ್ಟಣೆಯಿಲ್ಲ. ಮನವೊಲಿದ ಕಜ್ಜಾಯವನಾರೋಗಣೆಯ ಮಾಡು ದೇವಾ, ಕೂಡಲಸಂಗಮದೇವಾ.
--------------
ಬಸವಣ್ಣ
ಹಲವು ಕಾಲ ಹಂಸೆಯ ಸಂಗದಲ್ಲಿದ್ದರೆ ಬಕನು ಶುಚಿಯಾಗಬಲ್ಲುದೆ ? ನಿಧಿನಿಧಾನದೊಳಗಿದ್ದರೇನು ಪಾಷಾಣ ಹೊನ್ನಾಗಬಲ್ಲುದೆ ? ಕಲ್ಪತರುಗಳ ಸಂಗದಲ್ಲಿದ್ದರೇನು ಕೊರಡು ಫಲವಾಗಬಲ್ಲುದೆ ? ಕಾಶೀಕ್ಷೇತ್ರದಲ್ಲಿ ಶುನಕನಿದ್ದರೇನು ಅದರ ಕ್ಷೀರ ಪಂಚಾಮೃತವಾಗಬಲ್ಲುದೆ ? ಖಂಡುಗ ಹಾಲೊಳಗೆ ಇದ್ದಿಲ ಹಾಕಿದರೇನು ಬಿಳಿದಾಗಬಲ್ಲುದೆ ? ಇದು ಕಾರಣ ಕೂಡಲಚೆನ್ನಸಂಗನ ಶರಣರ ಸನ್ನಿಧಿಯಲ್ಲಿದ್ದರೇನು ಅಸಜ್ಜನ ಸದ್ಭಕ್ತನಾಗಬಲ್ಲನೆ ?
--------------
ಚನ್ನಬಸವಣ್ಣ
ಮಣ್ಣಪಡಿಯಿಂದ ಮತ್ರ್ಯವನಳದು, ಸಣ್ಣಪಡಿಯಿಂದ ನೀರನಳದು, ಹಿರಿಯ ಪಡಿಯಿಂದ ಹಣವನಳದು, ಮೂರು ಪಡಿಯನೊಡದು, ಬಣ್ಣದ ಪಡಿಯಿಂದ ಹಿರಿಖಂಡುಗದ ಬತ್ತವನಳದು, ಖಂಡುಗ ಪಡಿಯನುಂಡು, ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->