ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿ ಅನಾದಿಯಿಲ್ಲದತ್ತಣ ದೂರಕ್ಕೆ ದೂರದಲ್ಲಿ ಭಾವಕ್ಕೆ ನಿರ್ಭಾವಕ್ಕೆ ಬಾರದಿರ್ದ ನಿಷ್ಕಳಂಕ ಪರಬ್ರಹ್ಮವೇ ಮುನ್ನ ನೀನು ಶಾಖೆದೋರುವಲ್ಲಿ ನಿನ್ನೊಳಂಕುರಿಸಿ ನಾನು ತಾಮಸ ಮುಸುಂಕಿ ಜನನ ಮರಣಕ್ಕೊಳಗಾಗಿ ಚೌರಾಶಿ ಎಂಬತ್ತುನಾಲ್ಕು ಲಕ್ಷ ಪ್ರಾಣಿಗಳ ಗರ್ಭದಿಂದ ಬಂದು ಬಂದು ಒಮ್ಮೆ ಮಾನವನಪ್ಪಂದಿಗೆ ನಾನುಂಡು ಮೊಲೆಹಾಲು ಸಪ್ತಸಮುದ್ರಕ್ಕೆ ಸರಿಯಿಲ್ಲವಯ್ಯ. ಇಂತಪ್ಪ ಮಾನವ ಜನ್ಮದಲ್ಲಿ ಬಂದ ಬಂದುದು ಗಣಿತಕ್ಕೆ ಬಾರದಯ್ಯ. ಈ ಜನ್ಮದಲ್ಲಿ ಪಿಂಡೋತ್ಪತ್ತಿಯಲ್ಲಿಯೇ ಶರಣಸತಿ ಲಿಂಗಪತಿಯೆಂಬ ಜ್ಞಾನ ತಲೆದೋರಿ ಶರಣವೆಣ್ಣಾಗಿ ಹುಟ್ಟಿದೆನಯ್ಯ. ಎನಗೆ ನಿನ್ನ ಬಯಕೆಯೆಂಬ ಸಿಂಗಾರದ ಸಿರಿಮುಡಿಯಾಯಿತು. ಎನಗೆ ನಿನ್ನ ನೋಡುವೆನೆಂಬ ಮುಗುಳ್ಮೊಲೆ ಮೂಡಿದವು. ಎನಗೆ ನಿನ್ನೊಳು ನುಡಿಯಬೇಕೆಂಬ ಉರವಣೆಯ ಸಂಪದದ ಜವ್ವನ ಕುಡಿವರಿಯಿತ್ತು. ಎನಗೆ ನಿನ್ನನೊಲಿಸಬೇಕೆಂಬ ಸಂಭ್ರಮದ ಕಾಂಚೀಧಾಮ ಕಟಿಸೂತ್ರ ನೇವುರ ನಿಡುಗೊಂಡೆಯವೆಂಬಾಭರಣ ಅನುಲೇಪನ ವಸ್ತ್ರಂಗಳೆನಗೆ ಅಲಂಕಾರವಾಯಿತ್ತು. ಭಕ್ತಿಯೆಂಬ ವಿರಹಾಗ್ನಿ ಎನ್ನ ಹೃದಯಕಮಲದಲ್ಲಿ ಬೆಳೆದು ಬೀದಿವರಿದು ನಿಂತಲ್ಲಿ ನಿಲಲೀಸದಯ್ಯ. ಕುಳಿತಲ್ಲಿ ಕುಳ್ಳಿರಲೀಸದಯ್ಯ. ಮನ ನಿಂದಲ್ಲಿ ಮನೋಹರವಪ್ಪುದಯ್ಯ. ಅಂಗ ಮನ ಪ್ರಾಣ ನೇತ್ರ ಚಿತ್ತಂಗಳೊಳು ಪಂಚಮುಖವೆಂಬ ಪಂಚಬಾಣಂಗಳು ನೆಟ್ಟವಯ್ಯ. ನಾನು ಧರೆಯೊಳುಳಿವುದರಿದು. ಪ್ರೇಮದಿಂ ಬಂದು ಕಣ್ದುಂಬಿ ನೋಡಿ ಮನವೊಲಿದು ಮಾತಾಡಿ ಕರುಣದಿಂ ಕೈವಿಡಿದು ಅಕ್ಕರಿಂದಾಲಂಗಿಸಿ ದಿಟ್ಟಿಸಿ ಬೊಟ್ಟಾಡಿ ಲಲ್ಲೆವಾತಿಂ ಗಲ್ಲವ ಪಿಡಿದು ಪುಷ್ಪ ಪರಿಮಳದಂತೆ ನಾನು ನೀನುಭಯವಿಲ್ಲದಂತೆ ಕೂಡೆನ್ನ ಪ್ರಾಣೇಶನೇ. ಕೂಡಿದಿರ್ದೊಡೆ ಗಲ್ಲವ ಪಿಡಿ. ಪಿಡಿಯದಿರ್ದೊಡೆ ಬೊಟ್ಟಾಡು. ಬೊಟ್ಟಾಡದಿರ್ದೊಡೆ ಆಲಂಗಿಸು. ಆಲಂಗಿಸದಿರ್ದೊಡೆ ಕೈವಿಡಿ. ಕೈವಿಡಿಯದಿರ್ದೊಡೆ ಮಾತಾಡು. ಮಾತಾಡದಿರ್ದೊಡೆ ನೋಡು. ನೋಡದಿರ್ದೊಡೆ ಬಾ. ಬಾರದಿರ್ದೊಡೆ ಪ್ರಮಥಗಣಂಗಳೊಡನೆನ್ನವಳೆಂದು ನುಡಿ. ನುಡಿಯದಿರ್ದೊಡೆ ನಿನ್ನ ಮನದಲ್ಲಿ ನನ್ನವಳೆಂದು ಭಾವಿಸು. ಭಾವಿಸದಿರ್ದೊಡೆ ಪುಣ್ಯ ಕಣ್ದೆರೆಯದು. ಕರ್ಮ ಕಾಂತಿಯಪ್ಪುದು. ಕಾಮ ಕೈದುಗೊಂಬ, ಕಾಲ ಕಲಿಯಪ್ಪ. ಭವಕ್ಕೆ ಬಲ್ಮೆ ದೊರೆವುದು. ಇಂತೀ ಐವರು ಎನಗೆ ಅವಾಂತರದೊಳಗಾದ ಹಗೆಗಳಯ್ಯ, ಇವರೆನ್ನ ತಿಂದುತೇಗಿ ಹಿಂಡಿ ಹಿಪ್ಪೆಯಮಾಡಿ ನುಂಗಿ ಉಗುಳ್ದು ಹಿಂದಣ ಬಟ್ಟೆಗೆ ನೂಂಕುತಿಪ್ಪರಯ್ಯ. ಹೊಗಲಂಜುವೆನಯ್ಯ. ಹೋದರೆ ಚಂದ್ರಸೂರ್ಯಾದಿಗಳುಳ್ಳನಕ್ಕ ನಿನ್ನ ನೆನವ ಮನಕ್ಕೆ ನಿನ್ನ ಕೊಂಡಾಡುವ ಬಾಯ್ಗೆ ನಿನ್ನ ನೋಡುವ ಕಂಗಳಿಗೆ ಸೆರೆ ಸಂಕಲೆಯಪ್ಪುದಯ್ಯ. ಇಂತಿವಂ ತಿಳಿದು ನಿನ್ನ ಮನದೊಳು ನನ್ನವಳೆಂದರೆ ದಿವಾರಾತ್ರೆಯುಳ್ಳನ್ನಬರ ಎನ್ನ ಮನ ಜಿಹ್ವೆ ನೇತ್ರಂಗಳಿಗೆ ಬಂಧನಗಳೆಂಬಿವು ಮುಂಗೆಡುವುವಯ್ಯ. ನಿನ್ನನು ನೆನೆನೆನೆದು ನನ್ನ ಮನ ಬೀಗಿ ಬೆಳೆದು ತಳಿರಾಗಿ ಹೂ ಮಿಡಿಗೊಂಬುದಯ್ಯ. ನಿನ್ನ ಹಾಡಿ ಹಾಡಿ ನನ್ನ ಜಿಹ್ವೆ ಅಮೃತಸಾಗರದೊಳೋಲಾಡುತ್ತಿಪ್ಪುದಯ್ಯ. ನಿನ್ನಂ ನೋಡಿ ನೋಡಿ ಕಂಗಳು ನಿಜಮೋಕ್ಷಮಂ ಪಡೆವುವಯ್ಯ. ನಾನು ಈರೇಳು ಲೋಕಕ್ಕೆ ಬರುವ ಹಾದಿ ಹಾಳಾಗಿಪ್ಪುದಯ್ಯ. ಶತ್ರುಗಳೆನಗೆ ಮಿತ್ರರಪ್ಪರಯ್ಯ. ಭವದ ಬಳ್ಳಿ ಅಳಿವುದು. ಕಾಲಿನ ಕಲಿತನ ಕೆಡುವುದು. ಕಾಮನ ಕೈದು ಖಂಡಿಸುವುದು. ಕರ್ಮದ ಕಾಂತಿ ಕರಗುವುದು. ಪುಣ್ಯದ ಕಣ್ಣು ಬಣ್ಣಗೆಡುವುದಯ್ಯ. ನಿನಗೊಲಿದವರ ನಿನ್ನಂತೆ ಮಾಡು ಕೃಪಾಕರನೆ. ನಿನಗೆ ಮೆಚ್ಚಿದೆನಯ್ಯ. ನಿನ್ನ ಮೆಚ್ಚಿಸಿಕೊಳ್ಳಲರಿಯದ ಮುಗ್ಧವೆಣ್ಣಿನ ಪತಿಭಕ್ತಿಯಂ ಸಾಧಿಸು. ಎನ್ನವಸ್ಥೆಯಂ ಲಾಲಿಸು, ನಿನ್ನ ಶ್ರೀಪಾದಪದ್ಮದೊಳಗೆನ್ನನೊಡಗೂಡಿಸು. ಎನ್ನ ಬಿನ್ನಪಮಂ ಲಾಲಿಸು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ನಾಸಿಕದ ತುದಿಯಲ್ಲಿ ಆಡುವ ಪ್ರಾಣಾವಾಯು ದೇವರೆಂಬರು ; ಅಲ್ಲಲ್ಲ ನೋಡಾ. ಅದೆಂತೆಂದಡೆ : ಆ ಪ್ರಾಣವಾಯು ನಾಸಿಕದಿಂದ ಹನ್ನೆರಡಂಗುಲಪ್ರಮಾಣ, ಹೊರಹೊಂಟು ಎಂಟಂಗುಲ ಪ್ರಮಾಣ, ತಿರುಗಿ ನಾಲ್ಕಂಗುಲ ಪ್ರಮಾಣ ಖಂಡಿಸುವುದು ನೋಡಾ. ಇಂತು ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಶ್ವಾಸಂಗಳು ಹೊರಹೊಂಟು, ಹದಿನಾಲ್ಕುಸಾವಿರದ ನಾನೂರು ಶ್ವಾಸಂಗಳು ತಿರುಗಿ, ಏಳುಸಾವಿರದ ಇನ್ನೂರು ಶ್ವಾಸಂಗಳು ಖಂಡಿಸಿ ಮೃತವಾಗಿ ಹೋಹ ಪ್ರಾಣವಾಯುವ ದೇವರೆಂಬ ಶಿವದ್ರೋಹಿಗಳ ಎನಗೊಮ್ಮೆ ತೋರದಿರಯ್ಯಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->