ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದ್ಥಿಸಿದ ವೇದಂಗಳೆಲ್ಲ ಉರಿದುಲಿದು ನಿಂದವು. ಸಾದ್ಥಿಸಿದ ಶಾಸ್ತ್ರಂಗಳೆಲ್ಲ ಸೋಹೋ ಎಂದಡಗಿದವು. ವಿದ್ಯಾಮುಖ ಪ್ರಣಮವು ಸಿದ್ಧ ಸಿದ್ಧ ಎಂದು ಕದ್ದ ಕಳ್ಳರಂತೆ ತಡವಡಿಸುತ್ತಿರ್ದವು ನೋಡಾ. ಅರ್ಧನಾರೀಶ್ವರನ ರೂಪು ಇಂತೆಂದು ಶುದ್ಧವಾಯಿತ್ತೀ ಲೋಕದೊಳಗೆ. ಜಡೆಯಿಲ್ಲ ಎಮ್ಮ ದೇವಂಗೆ, ಮುಡಿಯಿಲ್ಲ ಎಮ್ಮ ದೇವಂಗೆ. ಮಡದಿಯರಿಬ್ಬರಿಲ್ಲ ಎಮ್ಮ ದೇವಂಗೆ. ಬೆಡಗ ನುಡಿವವರಿಲ್ಲ, ನುಡಿಯಲಮ್ಮದ ಕಾರಣ ಅರಸುತ್ತಿದ್ದಾರು. ಎಡೆಯ ಮಧ್ಯದಲ್ಲಿ ನುಡಿಯ ನುಂಗಿದ ಬೆಡಗ ಹಿಡಿತಂದು ಅರ್ಪಿತವ ಮಾಡಿ ; ನಡೆಸಿ ತೋರಿದ ಭಕ್ತರ ತನುವಿನೊಳಗೆ ಕಡೆಯಿಲ್ಲದ ಲಿಂಗವ ಖಂಡಿತವ ಮಾಡಿ ತೋರಿದ ರೇಕಣ್ಣಪ್ರಿಯ ನಾಗಿನಾಥ, ಇಬ್ಬರಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಬಲ್ಲೆನೆಂಬ ಮದದಲ್ಲಿ ಅರಿದೆನೆಂಬ ಮಹಾಮದವಂ ಕೊಂಡು, ಅಹಂಕಾರವೆಂಬ ಮದ, ಸರ್ವಾಂಗ ವೇದ್ಥಿಸಿ ತಲೆಗೇರಿದಲ್ಲಿ, ಸತ್ತೆಂಬುದನರಿಯದೆ, ಚಿತ್ತೆಂಬುದ ತಿಳಿಯದೆ, ಆನಂದವೆಂಬ ಆಶ್ರಯವ ಭಾವಿಸಿ ನೋಡದೆ, ಸ್ಥೂಲಸೂಕ್ಷ್ಮಕಾರಣವೆಂಬ ತನುತ್ರಯದ ಭೇದವ ಕಾಣಲರಿಯದೆ, ಅಂಡಪಿಂಡವೆಂಬ ಖಂಡಿತವ ತಿಳಿಯಲರಿಯದೆ, ದಿಂಡೆಯತನದಿಂದ ಕಂಡೆನೆಂದಡೆ, ಅದು ತಾ ಕೊಂಡ ಮೂರು ಹೆಂಡದ ಗುಣವೆಂದೆ, ಧರ್ಮೇಶ್ವರಲಿಂಗದ ಸಂಗವಲ್ಲಾಯೆಂದೆ.
--------------
ಹೆಂಡದ ಮಾರಯ್ಯ
ಶ್ರದ್ಧೆಯಲ್ಲಿ ಮುಳುಗಿದರೆ ನೈಷೆ* ನೆರೆಯುವುದು, ಸಾವಧಾನ ಸಂಭವಿಸುವುದು. ಅನುಭಾವವಿಡಿದು ಆಚರಿಸುವ ಪ್ರಾಣಲಿಂಗಿಯ ಮನಸ್ಸು ಆನಂದವನು ಬಯಸುತ್ತಿಹುದು, ಕರ್ಮವನು ಕತ್ತರಿಸುತ್ತಿಹುದು, ಖಂಡಿತವ ಕಡೆಗಿಡುತ್ತಿಹುದು, ಬಂಡುಂಬ ಭ್ರಮರದಂತೆ ಮಂಡಲತ್ರಯದ ಮಧ್ಯದಲ್ಲಿ ನಿರ್ಮಲಬೆಳಗ ಸೇವಿಸುತ್ತಿಹುದು ಗುರುನಿರಂಜನ ಚನ್ನಬಸವಲಿಂಗವ ಮುಟ್ಟಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಜಗತ್ಪಾವನ ನಿಮಿತ್ಯರ್ಥವಾಗಿ ಸಾಕಾರೀಲೆಯ ಧರಿಸಿದ ಸ್ವಯಚರಪರಗುರುಚರಮೂರ್ತಿಗಳ ಅರ್ಪಿತಾವಧಾನದ ನಿಲುಕಡೆಯೆಂತೆಂದೆಡೆ: ಲಿಂಗಾಚಾರ ಮೊದಲಾದ ಸದ್ಭಕ್ತ ಶರಣಗಣಂಗಳಲ್ಲಿ ಲಿಂಗಾರ್ಪಿತಭಿಕ್ಷಲೀಲೆಯ ಧರಿಸಿ ಹೋದ ವ್ಯಾಳ್ಯದೊಳು ಆ ಭಕ್ತಗಣಂಗಳು ಶರಣುಹೊಕ್ಕು ಸಮಸ್ತ ಆಚರಣೆಯ ಒದಗಿಸಿಕೊಟ್ಟ್ಲ ದಶವಿಧ ಪಾದೋದಕ ಏಕಾದಶ ಪ್ರಸಾದದಾಚರಣೆಯಾಗುವದಯ್ಯಾ. ಇಂತು ಲಿಂಗಾಚಾರ ಭಕ್ತಗಣಂಗಳು ದೊರೆಯದಿರ್ದಡೆ ವೇದಾಂತಿ ಸಿದ್ಧಾತಿ ತಿನ್ನಯೋಗಿ ಮೊದಲಾದ ಸಮಸ್ತಮತದಿಂದ ಏಕಶಬ್ದಭಿಕ್ಷವ ಸಪ್ತಗೃಹವ ಬೇಡಿ ದುರ್ಗುಣಯುಕ್ತವಾದ ಅಯೋಗ್ಯದ್ರವ್ಯವನುಳಿದು ಸದ್ಗುಣಯುಕ್ತವಾದ ಯೋಗ್ಯದ್ರವ್ಯವ ಕೈಕೊಂಡು, ಧೂಳಪಾದಜಲದಿಂದ ಭವಿತನವ ಕಳೆದು ಭಕ್ತಪದಾರ್ಥವೆನಿಸಿ ಅಘ್ರ್ಯಪಾದ್ಯಾಚಮನವ ಮಾಡಿ ಧಾನ್ಯವಾದಡೆ ಪರಿಣಾಮಜಲಂ ಶೋಧಿಸಿ ಪಾಕವ ಮಾಡಿ, ಫಲಾಹಾರವಾದಡೆ ಶೋಧಿಸಿ ಪಕ್ವವ ಮಾಡಿಟ್ಟು ಆಮೇಲೆ, ಅಯ್ಯಾ, ನಿನಗೆ ಭಕ್ತಗಣಂಗಳು ದೊರೆಯದ ಸಮಯದಲ್ಲಿ ಚತುರ್ವಿಧ ಪಾದೋದಕವೆಂತುಟೆಂದಡೆ: ಏಕಾಂತವಾಸದಲ್ಲಿ ಪರಿಣಾಮತರವಾದ ಹಳ್ಳ ಹೊಳೆ ಕೆರೆ ಬಾವಿ ಮಡು ಹೊಂಡ ಚಿಲುಮೆ ಕೊಳ ಮೊದಲಾದ ಸ್ಥಾನಕ್ಕೆ ಹೋಗಿ ಪ್ರಥಮದಲ್ಲಿ `ಶಿವ ಶಿವ! ಹರಹರ! ಗುರುಬಸವಲಿಂಗ!' ಎಂಬ ಮಂತ್ರಧ್ಯಾನದಿಂದ ಪಾದವನಿಟ್ಟು ಚರಣಸೋಂಕಿನಿಂ ಪವಿತ್ರವಾದುದಕವೆ ಧೂಳಪಾದೋದಕವೆನಿಸುವದಯ್ಯ; ಆ ಮೇಲೆ ತಂಬಿಗೆಯೊಳಗೆ ಶೋಧಿಸಿ ಬಸವಾಕ್ಷರವ ಲಿಖಿಸುವದೆ ಗುರುಪಾದೋದಕವೆನಿಸುವದಯ್ಯ; ಆ ಮೇಲೆ ಅರ್ಚನಾಕ್ರಿಯೆಗಳ ತೀರ್ಚಿಸಿಕೊಂಡು ನಿಚ್ಚಪ್ರಸಾದಿ ಸಂಬಂಧಾಚರಣೆಯಂತೆ ಮುಗಿದಲ್ಲಿ ಜಂಗಮ ಪಾದೋದಕವೆನಿಸುವದಯ್ಯ. ಇಂತು ಚತುರ್ವಿಧ ಪಾದೋದಕದೊಳಗೆ ಷಡ್ವಿಧ ಪಾದೋದಕ ಉಂಟಯ್ಯ. ಅದೆಂತೆಂದಡೆ: ಹಸ್ತವಿಟ್ಟು ಸ್ಪರ್ಶನವ ಮಾಡೆ ಸ್ಪರ್ಶನೋದಕವೆನಿಸುವದಯ್ಯ; ಲಿಂಗಕ್ಕೆ ಧಾರೆಯಿಂದ ಅಭಿಷೇಕವ ಎರೆದಲ್ಲಿ ಅವಧಾರೋದಕವೆನಿಸುವದಯ್ಯ; ಲಿಂಗಾರ್ಪಿತವ ಮಾಡಬೇಕೆಂಬ ಆನಂದವೆ ಆಪ್ಯಾಯನೋದಕವೆಂದೆನಿಸುವದಯ್ಯ; ಅರ್ಪಿತಮುಖದಲ್ಲಿ ಹಸ್ತವ ಪ್ರಕ್ಷಾಸಿ ಖಂಡಿತವ ಮಾಡಿದಲ್ಲಿಗೆ ಹಸ್ತೋದಕವೆನಿಸುವದಯ್ಯ; ಲಿಂಗಕ್ಕೆ ಸಂತೃಪ್ತಿಪರಿಯಂತರವು ಅರ್ಪಿತವ ಮಾಡಿ[ದಲ್ಲಿ] ಪರಿಣಾಮೋದಕವೆನಿಸುವದಯ್ಯ; ತಟ್ಟೆ ಬಟ್ಟಲ ಲೇಹವ ಮಾಡಿದಲ್ಲಿ ನಿರ್ನಾಮೋದಕವೆನಿಸುವದಯ್ಯ; ಲೇಹವ ಮಾಡಿದ ಮೇಲೆ ದ್ರವ್ಯವನಾರಿಸಿ ಸರ್ವಾಂಗದಲ್ಲಿ ಲೇಪಿಸುವದೆ ಸತ್ಯೋದಕವೆನಿಸುವದಯ್ಯ. ಇಂತೀ ದಶವಿಧ ಪಾದೋದಕದ ವಿಚಾರವ ತಿಳಿದು ಆ ಮೇಲೆ ನಿಚ್ಚಪ್ರಸಾದಿಯ ಸಂಬಂಧಾಚರಣೆಯಂತೆ ಪ್ರಸಾದವ ಮುಗಿವದಯ್ಯ. ಅದರೊಳಗೆ ಏಕಾದಶಪ್ರಸಾದದ ವಿಚಾರವೆಂತೆಂದಡೆ: ಪ್ರಥಮದಲ್ಲಿ ಹಸ್ತಸ್ಪರ್ಶ ಮಾಡಿದಂತಹದೆ ಗುರುಪ್ರಸಾದವೆನಿಸುವದಯ್ಯ; ಇಷ್ಟ ಮಹಾಲಿಂಗಕ್ಕೆ ಮಂತ್ರಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿದಲ್ಲಿಗೆ ಲಿಂಗಪ್ರಸಾದವೆನಿಸುವದಯ್ಯ; ಎರಡು ವೇಳೆ ಇಷ್ಟಮಹಾಂಗದೇವಂಗೆ ರೂಪನರ್ಪಿಸಿದಲ್ಲಿಗೆ ಲಿಂಗಪ್ರಸಾದವೆನಿಸುವದಯ್ಯ; ಎರಡುವೇಳೆ ಇಷ್ಟಮಹಾಂಗದೇವಂಗೆ ರೂಪನರ್ಪಿಸಿ ಜಿಹ್ವೆಯಲ್ಲಿಟ್ಟ್ಲ ಜಂಗಮ ಪ್ರಸಾದವೆನಿಸುವದಯ್ಯ; ಆ ಮೇಲೆ ಲಿಂಗದೇವರಿಗೆ ತೋರಿ ಬೋಜೆಗಟ್ಟಿ ಲಿಂಗದೇವಂಗೆ ತೋರಿ ಜಿಹ್ವೆಯ್ಲಟ್ಟಂತಹದೆ ಪ್ರಸಾದಿಯ ಪ್ರಸಾದವೆನಿಸುವದಯ್ಯ; ಆ ಭೋಜ್ಯರೂಪಾದ ಪ್ರಸಾದಿಯ ಪ್ರಸಾದದೊಳಗೆ ಮಧುರ ಒಗರು ಕಾರ ಆಮ್ಲ ಕಹಿ ತೃಪ್ತಿ-ಮಹಾತೃಪ್ತಿಯೆ ಆಪ್ಯಾಯನ, ಸಮಯ, ಪಂಚೇಂದ್ರಿಯವಿರಹಿತ, ಕರಣಚತುಷ್ಟಯವಿರಹಿತ, ಸದ್ಭಾವ, ಸಮತೆ, ಜ್ಞಾನಪ್ರಸಾದ ಮೊದಲಾದವು ಸಪ್ತವಿಧಪ್ರಸಾದವೆನಿಸುವದಯ್ಯ. ಇಂತು ಪರಾಧೀನತೆಯಿಂ ಭಿಕ್ಷವ ಬೇಡಲಾರದಿರ್ದಡೆ, ಅರಣ್ಯದಲ್ಲಿ ಫಲರಸಯುಕ್ತವಾದ ಹಣ್ಣು ಕಾಯಿಗಳ ಲಿಂಗಾರ್ಪಿತ ಭಿಕ್ಷೆಯೆಂದು ಆ ಫಲಾದಿಗಳ ತೆಗೆದುಕೊಂಡು ಶೋಧಿಸಿ, ಪವಿತ್ರವ ಮಾಡಿ ಲಿಂಗಾರ್ಪಿತ ಭೋಗಿಯಾದಾತನೆ ಸ್ವಯಂಭು ಪ್ರಸಾದ ಭಕ್ತನಾದ ಚಿತ್ಕಲಾಪ್ರಸಾದಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತನ್ನ ತಾ ಬಂದುದ ಸೋಂಕಿಲ್ಲದುದ ವಿಚಾರಿಸಿ, ತನ್ನನುವಿಂಗೆ ಬಂದುದ ಕೈಕೊಂಬುದು, ಬಾರದ ದ್ರವ್ಯಕ್ಕೆ ಭ್ರಮೆಯಿಲ್ಲದೆ ಚಿತ್ತದೋರದಿಪ್ಪುದು ಭರಿತಾರ್ಪಣ. ಅರ್ಪಿತವ ಮುಟ್ಟಿ ಅನರ್ಪಿತವ ಜಾಗ್ರ ಸ್ವಪ್ನದಲ್ಲಿ ಮುಟ್ಟದಿಪ್ಪುದು ಭರಿತಾರ್ಪಣ. ಲಿಂಗಕ್ಕೆ ಸಲ್ಲದುದ ಇರಿಸದೆ, ಸಲುವಷ್ಟನೆ ಅರ್ಪಿತವ ಮಾಡಿ, ಮುಂದಣ ಸಂದೇಹವ ಮರೆದು, ಹಿಂದಣ ಸೋಂಕನರಿದು, ಉಭಯದ ಖಂಡಿತವ ಖಂಡಿಸಿ ನಿಂದುದು ಭರಿತಾರ್ಪಣ. ಹೀಗಲ್ಲದೆ, ಭಾಷೆಗೂಳಿನ ಭಟರಂತೆ, ಓಗರ ಮೇಲೋಗರದಾಸೆಗೆ ಲೇಸಿನ ದ್ರವ್ಯಕ್ಕೆ ಆಸೆ ಮಾಡಲಿಲ್ಲ. ಬಂದುದ ಕೈಕೊಂಡು ಸಂದನಳಿದು ನಿಂದುದೆ ಭರಿತಾರ್ಪಣ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಕ್ರೀ ಭಾವದ ಭೇದ.
--------------
ಅಕ್ಕಮ್ಮ
-->