ಅಥವಾ

ಒಟ್ಟು 30 ಕಡೆಗಳಲ್ಲಿ , 14 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ ಗಂಧದಿಂದ ಸುಳಿವ ನಾನಾ ಸುಗಂಧವ ರಸದಿಂದ ಬಂದ ನಾನಾ ರಸಂಗಳ ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ -ಇಂತೀ ಪಂಚೇಂದ್ರಿಯಂಗಳಲ್ಲಿ ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ. ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ. ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ. ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ. ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ. ಅದೆಂತೆಂದಡೆ: ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ ಎತ್ತಿ ಪ್ರತಿಯ ಲಕ್ಷಿಸಬಹುದೆ ? ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು ದಹನ ಚಂಡಿಕೇಶ್ವರಲಿಂಗದಿರವು.
--------------
ಪ್ರಸಾದಿ ಲೆಂಕಬಂಕಣ್ಣ
ಮಹಾರಾಣುವೆಯ ಬಿಟ್ಟು ಬಂದು, ಮತ್ತೆ ಒಡೆಯರು ಭಕ್ತರಲ್ಲಿ ರಾಣಿವಾಸವೆಂದು ಕಟ್ಟು ಮೆಟ್ಟುಂಟೆ ? ಖಂಡಿತ ಕಾಯವನಂಗೀಕರಿಸಿದ ಭಕ್ತಂಗೆ, ಮತ್ತೆ ಹೆಂಡತಿ ಮಕ್ಕಳು ಬಂಧುಗಳೆಂದು ಜಂಗಮಕ್ಕೆ ತಂದ ದ್ರವ್ಯವನ್ಯರಿಗಿಕ್ಕಿ, ತಾನುಂಡನಾದಡೆ, ತಿಂಗಳು ಸತ್ತ ಹುಳಿತನಾಯ ಕಾಗೆ ತಿಂದು, ಆ ಕಾಗೆಯ ಕೊಂದು ತಿಂದ ಭಂಡಂಗೆ ಕಡೆ. ನಿಃಕಳಂಕ ಮಲ್ಲಿಕಾರ್ಜುನಲಿಂಗವೆ, ನೀವೆ ಬಲ್ಲಿರಿ.
--------------
ಮೋಳಿಗೆ ಮಾರಯ್ಯ
ಅನಂತಕೋಟಿ ಸೋಮಸೂರ್ಯಾಗ್ನಿ ಪ್ರಕಾಶವ ಕಂಡು ಮುಳುಗಿದ ಮಹಾತ್ಮನು ಖಂಡಿತ ಮಾರ್ಗದ ಕರ್ಮಕತ್ತಲೆಯ ಕನಸಿನೊಳಗರಿಯನು. ಬ್ಥಿನ್ನ ನುಡಿಗಡಣಕ್ಕಿಂಬುಗೊಟ್ಟರಿವ ಮನತ್ರಯವು ಮಹದಲ್ಲೊಪ್ಪುತ್ತಿಹುದು. ಸಕಲನಿಃಕಲಸನುಮತ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಾಣಲಿಂಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಕ್ಷರವೆಂಬುದು ಲೆಕ್ಕದೊಳಗು; ಲೆಕ್ಕವೆಂಬುದು ನೆನಹಿನೊಳಗು; ಇವೆಲ್ಲಾ ಕಲ್ಪಿತದೊಳಗು. ಕಲ್ಪಿತವೆಂಬುದು ಖಂಡಿತ ನೋಡ ಅಖಂಡ ಪರಿಪೂರ್ಣ, ನಿರ್ವಿಕಲ್ಪ, ನಿತ್ಯಾತ್ಮಕನಾದ ಲಿಂಗೈಕ್ಯನ ಕಲ್ಪಿತಕ್ಕೆ ತಂದು ನುಡಿವ ಕರ್ಮಕಾಂಡಿಗಳನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉಪಾಧಿಕಂಗೆ ಆವ ವ್ರತ, ತ್ರಿವಿಧ ಭಕ್ತಿ ಏನೂ ಇಲ್ಲ. ನಿರುಪಾಧಿಕಂಗೆ ಅವಾವ ವ್ರತ, ತ್ರಿವಿಧಭಕ್ತಿ ಉಂಟು. ಸ್ವಯಾನುಭಾವಿಗೆ ಇದಿರ ದಯೆ ದಾಕ್ಷಿಣ್ಯ ತನ್ನಯ ಅರಿವಿನ ವಿಲಾಸಿತದ ಲಕ್ಷ. ಸರ್ವಗುಣದಲ್ಲಿ ಸನ್ನದ್ಧನಾಗಿಪ್ಪುದು ಸ್ವಯಾನುಭಾವದ ಸಂಬಂಧ. ಇಂತೀ ಖಂಡಿತ ಅಖಂಡಿತ ಪರಿಪೂರ್ಣತ್ವ ವಿಭೇದವಿಲ್ಲದೆ ಪೂರ್ಣತ್ವವಾಗಿ ಇಪ್ಪುದು ಸಂಗನಬಸವಣ್ಣನ ಸತ್ಕ್ರೀಮಾರ್ಗ, ಬ್ರಹ್ಮೇಶ್ವರಲಿಂಗವನರಿದೆಹೆನೆಂದು ಉಪಾಧಿಕೆ ನಿರುಪಾಧಿಕೆಯೆಂಬುದನರಿದು ಸ್ವಯವ ಕೂಡಿಹೆನೆಂದು.
--------------
ಬಾಹೂರ ಬೊಮ್ಮಣ್ಣ
ಲಿಂಗಾಂಗಸಾಮರಸ್ಯವನರಿಯದೆ ಖಂಡಿತ ಬುದ್ಧಿಯಿಂದೆ ಲಿಂಗವ ಬೇರಿಟ್ಟುಕೊಂಡು ಸಕಲಭೋಗೋಪಭೋಗವನು ಅರ್ಪಿಸಿದೆವೆಂಬ ಭಂಗಗೇಡಿಗಳ ಮಾತ ಕೇಳಲಾಗದು. ಅದೆಂತೆಂದೊಡೆ : ಆ ಲಿಂಗಕ್ಕೆ ಶರಣನಂಗದ ಮಜ್ಜನಸುಖವಲ್ಲದೆ ಬೇರೆ ಮಜ್ಜನಸುಖವುಂಟೆ ? ಆ ಲಿಂಗಕ್ಕೆ ಶರಣನ ಲಲಾಟದ ಶ್ರೀವಿಭೂತಿ ಗಂಧಾಕ್ಷತೆಯ ಶೃಂಗಾರವಲ್ಲದೆ ಬೇರೆ ಶೃಂಗಾರವುಂಟೆ ? ಆ ಲಿಂಗಕ್ಕೆ ಶರಣನ ಕರ್ಣದಲ್ಲಿಯ ಪಂಚಮಹಾವಾದ್ಯದ ಕೇಳಿಕೆಯಲ್ಲದೆ ಬೇರೆ ಕೇಳಿಕೆಯುಂಟೆ ? ಆ ಲಿಂಗಕ್ಕೆ ಶರಣನ ಜಿಹ್ವೆಯಲ್ಲಿಯ ಷಡುರಸಾನ್ನದ ನೈವೇದ್ಯವಲ್ಲದೆ ಬೇರೆ ನೈವೇದ್ಯವುಂಟೆ ? ಆ ಲಿಂಗಕ್ಕೆ ಶರಣನ ಕಂಗಳಲ್ಲಿಯ ನಾನಾ ವಿಚಿತ್ರರೂಪಿನ ವಿನೋದವಲ್ಲದೆ ಬೇರೆ ವಿನೋದವುಂಟೆ ? ಆ ಲಿಂಗಕ್ಕೆ ಶರಣನ ತ್ವಕ್ಕಿನಲ್ಲಿಯ ವಸ್ತ್ರಾಭರಣದ ಅಲಂಕಾರವಲ್ಲದೆ ಬೇರೆ ಅಲಂಕಾರವುಂಟೆ ? ಆ ಲಿಂಗಕ್ಕೆ ಶರಣನ ಘ್ರಾಣದಲ್ಲಿಯ ಸುಗಂಧ ಪರಿಮಳವರ್ಪಿತವಲ್ಲದೆ ಬೇರೆ ಅರ್ಪಿತವುಂಟೆ ? ಆ ಲಿಂಗಕ್ಕೆ ಶರಣನ ಪರಮ ಹೃದಯಕಮಲವೆ ನಿಜವಾಸವಲ್ಲದೆ ಬೇರೆ ನಿಜವಾಸವುಂಟೆ ? ಇಂತೀ ಶರಣಸನ್ನಿಹಿತಲಿಂಗ, ಲಿಂಗಸನ್ನಿಹಿತ ಶರಣನೆಂಬುದನರಿಯದೆ ಅನಂತಕಾಲ ಲಿಂಗವ ಧರಿಸಿಕೊಂಡು ಲಿಂಗಾಂಗಿಯೆನಿಸಿಕೊಂಡಡೇನು ? ಅದು ಪಶುವಿನ ತೊಡೆಯಲ್ಲಿ ಬರೆದ ಮುದ್ರೆಯಂತೆ ಕಂಡೆಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಯದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಭಾವದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ನೇತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ ಶ್ರೀತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಘ್ರಾಣದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಜಿಹ್ವೆಯ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಸ್ಪರ್ಶನದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಲಿಂಗಮಧ್ಯೇ ಶರಣ, ಶರಣಮಧ್ಯೇ ಲಿಂಗ. ಅಲ್ಲಲ್ಲಿ ತಾಗಿದ ಸುಖವೆಲ್ಲ ಲಿಂಗಾರ್ಪಿತವಾಗದಿದ್ದಡೆ ಕೂಡಲಚೆನ್ನಸಂಗಯ್ಯನಲ್ಲಿ ಅವರ ಸಹಜರೆಂತೆಂಬೆ ?
--------------
ಚನ್ನಬಸವಣ್ಣ
ಆದಿಪುರ ವೇದಪುರ ಹಿಮಪುರ ಖಂಡಿತ ಅಖಂಡಿತ_ ಶಿವಶಿವಾ ಗಗನವ ಮನ ನುಂಗಿತ್ತು. ಆದಿ ವೇದವ ನುಂಗಿ, ವೇದ ಸ್ವಯಂಭುವ ನುಂಗಿ, ಕಾಲ ಕರ್ಮ ಹಿಂಗಿತ್ತು_ಗುಹೇಶ್ವರಾ ನಿಮ್ಮ ಶರಣಂಗೆ
--------------
ಅಲ್ಲಮಪ್ರಭುದೇವರು
ಲವಣನಿರಶನದ ಆಯತದ ಭೇದವೆಂತೆಂದಡೆ ; ಕಾರಲವಣ ನಿಷೇಧವೆಂದು ಬಿಟ್ಟು, ಮತ್ತೆ ಬಿಳಿಯ ಲವಣಬಳಸುವುದು. ಬಿಳಿಯಲವಣ ನಿಷೇಧವೆಂದು ಬಿಟ್ಟು ಮತ್ತೆ ಸೈಂಧಲವಣ ಬಳಸುವುದು. ಸೈಂಧಲವಣ ನಿಷೇಧವೆಂದು ಬಿಟ್ಟು, ಮತ್ತೆ ಮೃತ್ತಿಕೆಲವಣ ಬಳಸುವುದು. ಮೃತ್ತಿಕೆಲವಣದಲ್ಲಿ ತಟ್ಟುಮುಟ್ಟು ಕಂಡ ಮತ್ತೆ ಉಪ್ಪೆಂಬ ನಾಮವ ಬಿಟ್ಟಿಹುದೇ ಲೇಸು. ಈ ಅನುವ ನಾನೆಂದುದಿಲ್ಲ, ನಿಮ್ಮ ಅನುವ ನೀವೇ ಬಲ್ಲಿರಿ. ಅನುವಿಗೆ ತಕ್ಕ ವ್ರತ, ವ್ರತಕ್ಕೆ ತಕ್ಕ ಆಚಾರ, ಆಚಾರಕ್ಕೆ ತಕ್ಕ ಖಂಡಿತ. ಆವಾವ ನೇಮದಲ್ಲಿಯೂ ಭಾವ ಶುದ್ಧವಾದವಂಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಆವಾವಾಚರಣೆಯ ತೊಟ್ಟಲ್ಲಿ ಅನುಸರಿಯಿಲ್ಲದಿಪ್ಪುದೆ, ಗುರುಚರಲಿಂಗಪೂಜೆ. ಖಂಡಿತ ಕಾಯಕಕ್ಕೆ ಇಂದಿಂಗೆ ನಾಳಿಂಗೆಂಬ ಸಂದೇಹವಿಲ್ಲದಲ್ಲಿಯೆ ಸರ್ವಶೀಲ. ತಾಗು ನಿರೋಧ ಬಂದಲ್ಲಿ , ಕಂದದೆ ಕುಂದದೆ ಎಂದಿನಂತಿದ್ದಲ್ಲಿ ಶಿವಲಿಂಗಪೂಜೆ. ಇದಕ್ಕೆ ಹಿಂದುಮುಂದು ವಿಚಾರಿಸಲಿಲ್ಲ, ಇದಕ್ಕೆ ಐಘಂಟೇಶ್ವರಲಿಂಗ ಸಾಕ್ಷಿಯಾಗಿ.
--------------
ಸತ್ತಿಗೆ ಕಾಯಕದ ಮಾರಯ್ಯ
ಕತ್ತಲೆ ಸತ್ತು ಬೆಳಗು ಬೀದಿವರಿಯಿತ್ತು ನೋಡಾ ಎಲೆ ಅಮ್ಮಾ. ಪಂಚತತ್ವಂಗಳ ಮೇಲಿಪ್ಪ ಆಚಾರಲಿಂಗದ ನಿಷೆ*ಯ ಬಲದಿಂದ ಆ ಖಂಡಿತ ಕರಣಂಗಳನೊಳಕೊಂಡಿಪ್ಪ ಈಷಣತ್ರಯಂಗಳ ಬೀಯವನಿಕ್ಕಿ ತ್ಯಾಗಾಂಗಿಯಾದೆ. ಹದಿನೇಳುತತ್ವಂಗಳ ಮೇಲಿಪ್ಪ ಜಂಗಮಲಿಂಗದ ಎಚ್ಚರಿನ ಬಲದಿಂದ ಅನಂತಸವಿಯನೊಳಕೊಂಡಿಪ್ಪ ಷsಡುರಸಾನ್ನಂಗಳಲಿ ಲಿಂಗಭೋಗೋಪಭೋಗಿಯಾಗಿ ಭೋಗಾಂಗಿಯಾದೆ. ಮೂರುತತ್ವಂಗಳ ಮೇಲಿಪ್ಪ ನಿರಾಕಾರಲಿಂಗದ ಅರುಹಿನ ಬಲದಿಂದ ಪ್ರಣವ ಪಂಚಾಕ್ಷರಿಯ ಸ್ಮರಿಸಿ ಮನ ಮಹಾಲಿಂಗದಲ್ಲಿ ಯೋಗವಾಗಿ ಯೋಗಾಂಗಿಯಾಗಿ ಚಿದ್ಪ್ರಹ್ಮಾಂಡದೊಳಗಣ ಏಳುತಾವರೆಯ ಮೇಲಿಪ್ಪ ನಿಷ್ಕಲ ಚಿದ್ವಿಂದುಲಿಂಗಕ್ಕೆ ಪ್ರಾಣಪೂಜೆಯಂ ಮಾಡೆ ಮಹಾಜ್ಞಾನಬಲದಿಂದ ನವದ್ವೀಪಗಳ ಲಿಂಗಂಗಳ ಬೆಳಗು ಪಿಂಡಾಂಡದಲ್ಲಿ ಪ್ರಭಾವಿಸಿ ತೋರುತಿರ್ಪುದಾಗಿ ನಾನು ಸರ್ವಾಂಗಲಿಂಗಿಯಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎಲೆ ಶಿವನೆ ನಿಮ್ಮನೊಲಿಸಿ ಕೂಡಬೇಕೆಂಬ ಖಂಡಿತ ಜ್ಞಾನದ ಕರ್ಮಕಾಂಡಿಗಳನು ಎಳತಟಗೊಳಿಸಿತ್ತು ಇದೇನು ನೋಡಾ ! ವ್ರತಿಗಳೆಂದು ಹೇಳಿಸಿಕೊಂಬ ಹಿರಿಯರ ಬಲೆಯೊಳೊಂದಿಸಿ ಕಡೆಗೆ ಮಾಡಿಸಿಕೊಂಡಿತ್ತು. ನಿಯಮಸ್ಥರೆನಿಸಿಕೊಂಬ ಹಿರಿಯರ ಸೀಮಿಯ ಸಂಸಾರದೊಳಿಟ್ಟು ಬೇರೆ ಮಾಡಿಸಿಕೊಂಡಿತ್ತು. ಶೀಲವಂತರೆನಿಸಿಕೊಂಬ ಹಿರಿಯರ ದುಶ್ಶೀಲದೊಳೊಂದಿಸಿ ಬಿಡಿಸಿಕೊಂಡಿತ್ತು. ಯತಿಗಳೆನಿಸಿಕೊಂಬ ಹಿರಿಯರ ಸತಿಯರ ರತಿಸಂಸಾರದೋರಿ ಬಿಡಿಸಿಕೊಂಡಿತ್ತು. ಗತಿಮತಿಗಳೆಂಬ ಹಿರಿಯರ ಭಿನ್ನ ಭಿನ್ನ ಸಂಸಾರವೆರಸಿ ಕಾಡಿಕೊಂಡಿತ್ತು ನಿಮ್ಮ ಮಾಯೆ ನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರನುಳಿದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯಗುಣ ಕೆಟ್ಟ ಮತ್ತೆ ಅರ್ಚನೆ ಹಿಂಗಿತ್ತು. ಪ್ರಾಣಗುಣ ಕೆಟ್ಟ ಮತ್ತೆ ಅರ್ಪಿತ ಹಿಂಗಿತ್ತು. ಭಾವಗುಣ ಕೆಟ್ಟ ಮತ್ತೆ ಉಭಯ ಜಂಜಡ ಹಿಂಗಿತ್ತು. ಇಂತಾದ ಕಾರಣ_ನಮ್ಮ ಗುಹೇಶ್ವರನ ಶರಣರು ಲಿಂಗಭೋಗೋಪಭೋಗವೆಂಬ ಖಂಡಿತ ಬುದ್ಧಿಯ ಮೀರಿ, ಅಖಂಡಾದ್ವೈತಬ್ರಹ್ಮದಲ್ಲಿ ತಲ್ಲೀಯವಾದರು.
--------------
ಅಲ್ಲಮಪ್ರಭುದೇವರು
ಮನ ಮಹಾಘನವಾಯಿತ್ತು. ಭಾವ ನಿರ್ಭಾವವಾಯಿತ್ತು. ಖಂಡಿತ ಅಖಂಡಿತವಾಯಿತ್ತು. ಬೆರಗು ನಿಬ್ಬೆರಗಾಯಿತ್ತು. ನೆನಹು ನಿಷ್ಪತ್ತಿಯಾಯಿತ್ತು. ಅರುಹು ಕರಗಿ ನಿರವಯಲಾಗಿತ್ತಾಗಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.
--------------
ಷಣ್ಮುಖಸ್ವಾಮಿ
ಅಚ್ಚೊತ್ತಿರ್ದ ಲಿಂಗದಿಚ್ಛೆಯಲ್ಲಿಪ್ಪ ಇಳೆ ಜಲಾಗ್ನಿ ಮರುತಾಂಬರ ನಿರಂಜನ ಶರಣ. ತನ್ನ ಅಖಂಡ ಗತಿಮತಿಯೊಳೊಂದು ಕಿಂಚಿತ್ತು ಖಂಡಿತ ಕುರುಹ ಭಾವಿಸುವರ ತ್ರಿಪುಟಿಗಳಿಗಸಾಧ್ಯವಾಗಿರ್ದನು ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->