ಅಥವಾ

ಒಟ್ಟು 9 ಕಡೆಗಳಲ್ಲಿ , 6 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸಮಾಕ್ಷಲಿಂಗಕ್ಕೆ ಅನ್ಯದೈವವ ಸರಿಯೆಂಬವನ ಬಾಯಲ್ಲಿ ಮಸೆದ ಕೂರಲಗನಿಕ್ಕದೆ ಮಾಬನೆ ಹುಸಿಯಾಗಿ ನುಡಿವವನ ನಾಯಾಗಿ ಬಗುಳಿಸನೆ ಹಿರಿಯರುತ್ತಮರೆನ್ನದವರ ಕುದುರೆಯಾಗಿ ಕಟ್ಟಿಸನೆ ಗುರುಲಘುವೆನ್ನದವರ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ ಪರಸ್ತ್ರೀಗಳುಪಿದವರ ಗಾಣದಲಿಕ್ಕಿ ಹಿಳಿಯನೆ ಪರಧನಕ್ಕಳುಪಿದವರ ಹಿಡಿ ಖಂಡವ ಕೊಯ್ಯನೆ ಎಲೆ ಕೂಡಲಸಂಗಮದೇವಾ, ನಿಮ್ಮ ಹೇಳಿದ ಹೇಳಿಕೆಯಿಂದ ಪಿಂಬೇರ ಮೈ[ಲುಗ] ಮೇಳವಾಡುತ ಇದ್ದ ಕಾಣಾ, ತೃಜಗದೊಳಗೆ.
--------------
ಬಸವಣ್ಣ
ಕೊಂಡವನ ಕೊಂದು, ಖಂಡವ ಕೊಯ್ದವ ಪ್ರಸಾದಿ. ಅದರ ಸಂದ ಮುರಿದವ ಪ್ರಾಣಲಿಂಗಿ. ಆನಂದಿಸಿದವನ ಕೊಂದು ಹಿಂಡೆಯ ಕೂಳನುಂಡವ ಶರಣೈಕ್ಯ. ಇದರಂದದ ಐಕ್ಯವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆಕಾಶ ಸತ್ತಿತ್ತು, ಬಯಲು ಅತ್ತಿತ್ತು, ವಾಯು ಹೊತ್ತಿತ್ತು, ಬೆಂಕಿ ಸತ್ತ ಠಾವಿನಲ್ಲಿ ಸುಟ್ಟಿತ್ತು. ಕೈಯಿಲ್ಲದ ಮೋಟ ಹಿಡಿ ಖಂಡವ ಕೊಯ್ದ. ನಾಲಗೆಯಿಲ್ಲದೆ ಬಾಯಲ್ಲಿ ಮೆದ್ದು, ಪರಿಣಾಮವಿಲ್ಲದ ಸಂತೋಷಿಯಾದನಯ್ಯಾ, ಆ ಶರಣ. ಆತನ ಇರವು, ಇಹದಲ್ಲಿ ಅಜ್ಞಾನಿ, ಪರದಲ್ಲಿ ಸುಜ್ಞಾನಿ. ಇಹಪರವೆಂಬ ಸಂದನಳಿದಲ್ಲದೆ ಲಿಂಗವಂತನಲ್ಲ. ಲಿಂಗ ಪ್ರಾಣದ ಮೇಲೆ ನಿಂದುದಕ್ಕೆ ಸಾಕ್ಷಿ ಉರಿ ಕೊಂಡ ಕರ್ಪುರದಂತೆ, ವಿಷ ಕೊಂಡ ಘಟದಂತೆ ಘಟ ಕೊಂಡ ಸೂತ್ರದಂತೆ, ಶೌರ್ಯ ಕೊಂಡ ಪ್ರತಾಪದಂತೆ. ಹಾಂಗಿರಬೇಕು ಮನ. ಲಿಂಗ ಕೊಂಡ ಮನಕ್ಕೆ ಇದೇ ದೃಷ್ಟ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ವಾನುಭಾವಿಗೆ.
--------------
ಮೋಳಿಗೆ ಮಾರಯ್ಯ
ಕುಂಭದಲ್ಲಿ ಬೆಂದ ಅಶನಕ್ಕೆ ಒಂದಗುಳಲ್ಲದೆ ಹಿಂಗಿ ಹಿಂಗಿ ಹಿಸುಕಲುಂಟೆ? ಗುರುತಪ್ಪುಕನ ಲಿಂಗಬಾಹ್ಯನ ಜಂಗಮನಿಂದಕನ ಆಚಾರಭ್ರಷ್ಟನ ಜ್ಞಾನಹೀನನ ಅರಿತು ಕಂಡು ಕೂಡಿದಡೆ, ತನ್ನವನೆಂದು ಅಂಗೀಕರಿಸಿದಡೆ, ಖಂಡವ ಬಿಟ್ಟು ಮತ್ಸ ್ಯಕ್ಕೆ ಹರಿದ ಜಂಬುಕನಂತೆ ಆಗದೆ? ಸದಾಚಾರದಲ್ಲಿ ಸಂದಿರಬೇಕು. ಕಟ್ಟಾಚಾರದಲ್ಲಿ ನಿಂದಿರಬೇಕು. ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಹುಲಿಯ ಹುಲ್ಲೆ ನುಂಗಿತ್ತು, ಹುಲ್ಲೆಯ ಹುಲಿಯ ಮೊಲ ನುಂಗಿತ್ತು. ಆ ಮೊಲನ ಕೊಂದು ಮುಂದಣ ಖಂಡವ ಕೊಯ್ದು ತಿಂದವ ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಿಂಬ ಜಾತಿಗೆ ಮೇವ ಹಾಕಿ ಹೇರಳ ಖಂಡವ ಕೊಯಿದು ತಿಂಬವನಂತೆ, ದಾತನಿಗೆ ಛಂದದ ಮಾತನಾಡಿ ಮೂರು ಮಲದಂದವ ಸಂಧಿಸಿಕೊಂಬವಂಗೆ, ಲಿಂಗವಿಲ್ಲಾ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮುಂಡಧಾರಿಯ ತಲೆ ಮುಂದೆ ಬರ್ಪುದ ಕಂಡೆ. ಜಟಾಧಾರಿಯ ತಲೆ ನಡೆದು ಹೋಯಿತ್ತ ಕಂಡೆ. ಖಂಡಕಪಾಲಿಯ ಖಂಡವ ಕೊಯಿತ್ತ ಕಂಡೆ. ಬಾಲಬ್ರಹ್ಮಚಾರಿಯ ಬಾರನೆತ್ತಿತ್ತ ಕಂಡೆ. ಭಕ್ತರೆಲ್ಲರೂ ಸತ್ತು ನೆಲಕ್ಕಿಕ್ಕಿತ್ತ ಕಂಡೆ. ಗುಹೇಶ್ವರಾ ನೀ ಸತ್ತು ಲಿಂಗವಾಯಿತ್ತ ಕಂಡೆ.
--------------
ಅಲ್ಲಮಪ್ರಭುದೇವರು
ಖಂಡವ ಮೆದ್ದು ಅರಗಿಸಿ ಹೆಂಡವ ಕುಡಿದು ಉನ್ಮತ್ತವಿಲ್ಲದೆ ಮಿಕ್ಕಾದ ಕಿರುಹಕ್ಕಿಯ ಕೊಂದು ಕುಕ್ಕೆಯೊಳಗಿಟ್ಟು ಹೆಬ್ಬದ್ದ ಹಿಡಿದು ಕಬ್ಬದ್ದ ಬಾಣಸವ ಮಾಡಿ ಹುಲಿಯ ಹಲ್ಲ ಕಿತ್ತು, ಎರಳೆಯ ಕಾಲ ಮುರಿದು ಲಂಘಿಸುವ ಸಿಂಹದ ಅಂಗವ ಸೀಳಿ ಉನ್ಮತ್ತದಿಂದ ಬಂದಪ್ಪ ಗಜವ ಕಂಗಳು ನುಂಗಿ ಮೊಲ ನಾಯ ಕಚ್ಚಿ ನರಿ ಬಲೆಯ ನುಂಗಿ ಸರ್ಪನ ಗಾಳಿ ತಾಗಿ ಗರುಡ ಸತ್ತು ಇಂತಿವು ಹಗೆ ಕೆಳೆಯಾಗಿರಬಲ್ಲಡೆ ಭಕ್ತ. ಇಂತಹ ಭಕ್ತ ಕೆಳೆಯಾಗಿರಬಲ್ಲಡೆ ಮಾಹೇಶ್ವರ. ಇಂತಹ ಮಾಹೇಶ್ವರ ಕೆಳೆಯಾಗಿರಬಲ್ಲಡೆ ಪ್ರಸಾದಿ. ಇಂತಹ ಪ್ರಸಾದಿ ಕೆಳೆಯಾಗಿರಬಲ್ಲಡೆ ಪ್ರಾಣಲಿಂಗಿ. ಇಂತಹ ಪ್ರಾಣಲಿಂಗಿ ಕೆಳೆಯಾಗಿರಬಲ್ಲಡೆ ಶರಣ. ಇಂತಹ ಶರಣ ಕೆಳೆಯಾಗಿರಬಲ್ಲಡೆ ಐಕ್ಯ. ಇಂತಹ ಐಕ್ಯಾನುಭಾವ ಕೆಳೆಯಾಗಿರ್ದಲ್ಲಿ ಮಹದೊಳಗಾಯಿತ್ತು. ಆ ಮಹದೊಳಗು ಸಯವಾದಲ್ಲಿ ಸರ್ವಮಯವೆಂಬುದು ಇಹಪರ ನಾಸ್ತಿ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಇದಿರೆಡೆಯಿಲ್ಲ.
--------------
ಪ್ರಸಾದಿ ಭೋಗಣ್ಣ
ಭಂಡವ ತುಂಬಿದ ಹಸುಬೆ, ಕೊಂಡವನ ನುಂಗಿತ್ತು. ಆ ಚೀಲದ ಮದ್ದು, ನುಂಗಿದವನ ಖಂಡವನೊಡೆದು, ದಿಂಡುಗೆಡಹಿತ್ತು ತನುವ. ಆ ಖಂಡವ ಕೊಂಡುಹೋಗಿ ಉಂಡವ ಸತ್ತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->