ಅಥವಾ

ಒಟ್ಟು 186 ಕಡೆಗಳಲ್ಲಿ , 43 ವಚನಕಾರರು , 162 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭರಿತಾರ್ಪಣ ಸಹಭೋಜನ ನೈವೇದ್ಯ ಸಹ ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ, ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ, ಒಂದನೂ ಹೊದ್ದದ ಬಹುವರ್ಣದಂತೆ, ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ ಈ ತ್ರಿವಿಧ ವ್ರತ ಪ್ರಸಾದವಿಲ್ಲ. ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ. ಕ್ರೀ ತಪ್ಪದೆ ಎನ್ನ ಕೂಡಿಕೊ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಬಯಲೆಂದಡೆ ಕೀಳು ಮೇಲಿನೊಳಗಾಯಿತ್ತು. ನಿರವಯವೆಂದಡೆ ಸಾವಯದಿಂದ ಕುರುಹುದೋರಿತ್ತು. ಸವಿದ ಸವಿಯನುಪಮಿಸಬಾರದೆಂದಡೆ ಜಿಹ್ವೆಯಿಂದ ಕುರುಹುಗೊಂಡಿತ್ತು. ಆ ಜಿಹ್ವೆ ಸಾಕಾರ, ಸವಿದ ಸವಿ ನಿರಾಕಾರವೆಂದಡೆ, ನಾನಾ ಭೇದಂಗಳಿಂದ ರುಚಿಮಯವಾಯಿತ್ತು. ಆ ಜಿಹ್ವೆಯ ಕೊನೆಯ ಮೊನೆಯಲ್ಲಿ ನಿಂದು, ಅಹುದಲ್ಲವೆಂಬುದ ತಾನೆ ಕುರುಹಿಟ್ಟುಕೊಂಡಂತೆ ಜಿಹ್ವೆ ಬಲ್ಲುದೆಂದಡೆ ತನ್ನಡಿಗೆ ಬಾರದುದನರಿಯಿತ್ತೆ ? ಸಾರ ಸ್ವಾದ ಲೇಸೆಂದಡೆ ಜಿಹ್ವೆ ಹೊರತೆಯಾಗಿ ಕುರುಹುಗೊಂಡಿತ್ತೆ ? ಇದು ಕ್ರೀ ಜ್ಞಾನ ಸಂಪುಟಸ್ಥಲ. ಈ ಉಭಯಸ್ಥಲ ಲೇಪವಾದ ಮತ್ತೆ ನಿರುತ ನಿರ್ಯಾಣವೆಂಬುದು ನನ್ನಲ್ಲಿಯೊ ? ನಿನ್ನಲ್ಲಿಯೊ ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ಸದಾತ್ಮದಲ್ಲಿ ನಿನ್ನ ಕುರುಹೇಕೆ ಅಡಗದು ?
--------------
ಮೋಳಿಗೆ ಮಹಾದೇವಿ
ಜ್ಞಾನ ಸದ್ಭಕ್ತಿ ಸನ್ನಹಿತವಾಗಿ, ಲಿಂಗ ಮುಂತಾಗಿ ಮಾಡಿದ ಕ್ರೀ ಲಿಂಗಕ್ರೀ. ಧ್ಯಾನ ಪೂಜೆ ಭಕ್ತಿಯರ್ಪಿತ ಪ್ರಸಾದ ಮುಕ್ತಿ- ಇವೆಲ್ಲವು ತನ್ನೊಳಗೆ, ಅಜ್ಞಾನ ಅಭಕ್ತಿ ಮರವೆ ಮುಂತಾದ ಕ್ರೀ ಅಂಗಕ್ರೀ, ಅದು ಹೊರಗು. ಇದು ಕಾರಣ, ಜ್ಞಾನ ಸದ್ಭಕ್ತಿ ಸನ್ನಹಿತವಾದುದೆ ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಕ್ರೋಧ ಬಂದಲ್ಲಿ ಕೊಲ್ಲೆಂಬುದು, ದಯೆ ಬಂದಲ್ಲಿ ಬೇಡಾ ಎಂಬುದು, ಅದು ಅರಿವೊ? ಅಜ್ಞಾನವೊ? ಬೇರೊಂದು ಹೊಲಬೊ? ಮಾಡುವ ಕ್ರೀ ಜಡನೆಂಬುದು, ಕ್ರೀ ಹೊರಗಾದುದು ಅರಿವೆಂಬುದು, ಅದನರಿವುದು ಅದೇನು ಹೇಳಾ? ಆತ್ಮನರಿವೊ ಅದೇನು ಮರವೆಯೊ? ತೊಳೆದಡೆ ಮಡಿಯಾಗಿ ಮಾಸಿದಡೆ ಮೈಲಿಗೆಯಾಗಿ ಪುಸಿಯಹುದೊಂದೊ ಎರಡೊ? ಅರಿದಡೆ ತಾನೆಂಬ ಮರೆದಡೆ ಜಗವೆಂಬ ಉಭಯಕ್ಕೊಳಗಾಗದ ಮುನ್ನವೆ ಅರಿ, ಕಾಮಭೀಮ ಜೀವಧನದೊಡೆಯನ.
--------------
ಒಕ್ಕಲಿಗ ಮುದ್ದಣ್ಣ
ದೃಕ್ಕು ಸಕಲವನವಗವಿಸುವನ್ನಕ್ಕ, ಶ್ರೋತ್ರ ಶಬ್ದವ ವೇದ್ಥಿಸುವನ್ನಕ್ಕ, ಕ್ರೀ ಶೂನ್ಯವೆನಲೇತಕ್ಕೆ? ಭಾವಿಸಿಹೆನೆಂಬನ್ನಕ್ಕ ಕ್ರೀ ಅರಿದೆಹೆನೆಂಬನ್ನಕ್ಕ ಸೂತಕ. ಕುಕ್ಕಳಗುದಿವುದ ಹುಟ್ಟಿನಲ್ಲಿ ತೆಗೆದಿಕ್ಕುವಂತೆ, ಅದು ದೃಷ್ಟಕ್ಕ ದೃಷ್ಟ, ನಿಶ್ಚಯಕ್ಕೆ ನಿಜ. ಈ ಗುಣ ಉಭಯಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 49 ||
--------------
ದಾಸೋಹದ ಸಂಗಣ್ಣ
ಸರ್ವ ಇಂದ್ರಿಯಗಳ ಒಂದು ಮುಖವ ಮಾಡಿ ಸರ್ವ ಮೋಹಂಗಳಲ್ಲಿ ನಿರ್ಮೋಹಿತನಾಗಿ, ಅಂಗದಿಚ್ಫೆಯ ಮರೆದು ವ್ರತವೆಂಬ ಆಚಾರಲಿಂಗವ ಧರಿಸಬೇಕಲ್ಲದೆ ತನುವಿಗೆ ಬಂದಂತೆ ಮುಟ್ಟಿ, ಮನಕ್ಕೆ ಬಂದಂತೆ ಹರಿದು, ನಾನಿಲ್ಲಿ ಒಬ್ಬ ಶೀಲವಂತನಿದ್ದೇನೆ ಎಂದು ಕಲಹಟ್ಟಿಯಂತೆ ಕೂಗುತ್ತ ಕೊರಚುತ್ತ ಅಲ್ಲಿ ಬೊಬ್ಬಿಡುತ್ತ ಶೂಲವನೇರುವ ಕಳ್ಳನಂತೆ ಬಾಹ್ಯದಲ್ಲಿ ಬಾಯಾಲುವ, ಮನದಲ್ಲಿ ಸತ್ತೆಹೆನೆಂಬ ಸಂದೇಹದವನಂತೆ ಸಾಯದೆ, ಹೊರಗಣ ಕ್ರೀ ಶುದ್ಭವಾಗಿ, ಒಳಗಳ ಆತ್ಮ ಶುದ್ಧವಾಗಿ, ಉಭಯ ಶುದ್ಧವಾಗಿಪ್ಪುದು ಪಂಚಾಚಾರ ನಿರುತ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸರ್ವಾಂಗಭರಿತನು
--------------
ಅಕ್ಕಮ್ಮ
ಕ್ರೀ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗಪೂಜೆ. ರೂಪು ರುಚಿ ಏಕವಾದಲ್ಲಿ ಪ್ರಾಣಲಿಂಗಪೂಜೆ. ರೂಪು ನಿರೂಪೆಂಬ ಉಭಯವಳಿದಲ್ಲಿ ಐಕ್ಯನ ಅನುಭವ ತೃಪ್ತಿ. ಕೂಡುನ್ನಬರ ನೋಟ ಸುಖಿಯಾಗಿ, ಬೇಟದ ನೋಟ ಕೂಟದಲ್ಲಿ ಅಳಿದ ಮತ್ತೆ, ಉಭಯದೃಷ್ಟ ಏಕವಾಯಿತ್ತು. ಚರ ಅಚರವಾದಲ್ಲಿ ಉಭಯನಾಮರೂಪು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎಂಬತ್ತುನಾಲ್ಕುಲಕ್ಷ ಜೀವವ್ರತ. ಐವತ್ತಾರು ನೇಮವ್ರತ. ಅರುವತ್ತನಾಲ್ಕು ಶೀಲವ್ರತ. ಮೂವತ್ತಾರು ಆಚಾರವ್ರತ. ತ್ರಿವಿಧ ಕ್ರೀಭಾವ ನೇಮವ್ರತ. ಇಂತಿವರಲ್ಲಿ ಶುದ್ಧಾತ್ಮನಾಗಿ ಅರಿದುದೇ ಜೀವನ್ಮುಕ್ತವ್ರತ. ಐಘಟದೂರ ರಾಮೇಶ್ವರಲಿಂಗದಲ್ಲಿ ಸರ್ವ ಅವಧಾನಿಯ ಕ್ರೀ ಶುದ್ಧತೆ.
--------------
ಮೆರೆಮಿಂಡಯ್ಯ
ಕಾಯನೆಂಬ ಡಕ್ಕೆ, ಕ್ರೀ ಭಾವವೆಂಬ ಹೊದಕೆ. ಅರಿವೆಂಬ ನೇಣಿನಲ್ಲಿ ಸ್ಥೂಲಸೂಕ್ಷ ್ಮವೆಂಬ ಹೊಡೆಚೆಂಡು ಕಟ್ಟಿ ಹೊಯ್ವುತ್ತಿದೆ ಡಕ್ಕೆ, ಕಾಲಾಂತಕಬ್ಥೀಮೇಶ್ವರಲಿಂಗವಲ್ಲದಿಲ್ಲಾಎಂದು.
--------------
ಡಕ್ಕೆಯ ಬೊಮ್ಮಣ್ಣ
ಮಣ್ಣ ಬೆಕ್ಕು, ನನ್ನಿಯ ಮೂಷಕನ ಮುಟ್ಟಿದುದುಂಟೆ ? ಜಗಗನ್ನರ ಕ್ರೀ, ವಿರಕ್ತಿ ಪ್ರಸನ್ನನ ಮುಟ್ಟಿದುದುಂಟೆ ? ಇದ ಚೆನ್ನಾಗಿ ತಿಳಿದು ನೋಡಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಾರಯ್ಯ
ಪ್ರಥಮಾಂಗುಲದಲ್ಲಿ ಉಪದೃಷ್ಟ. ಉಭಯಾಂಗುಲದಲ್ಲಿ ಕರ್ಮಕ್ರೀ. [ತ್ರಿವಿ]ಧಾಂಗುಲದಲ್ಲಿ ಸಂ[ಶ]ಯಸಿದ್ಧಿ. ಚತುರ್ವಿಧ ಅಂಗುಲದಲ್ಲಿ ಚತುರ್ವಿಧ ಫಲಪದ. ಪಂಚಮಪಕ್ಷದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ಭವದ ಗೊಂಚಲ ಸಂಚಂಗಳಿಲ್ಲ. ಇದು ಪಂಚಾಕ್ಷರಿಯ ಪ್ರಣಮಮಂತ್ರದ ಕ್ರೀ ಆಚಾರ್ಯನಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಜಗವೊಂದೆಸೆ, ತಾನೊಂದೆಸೆ, ಮತ್ತಾ ಜಗದೊಳಗೆ ತಾ, ತನ್ನೊಳಗೆ ಜಗ. ಆಗಮವೊಂದೆಸೆ, ತಾನೊಂದೆಸೆ, ಮತ್ತಾ ಆಗಮದೊಳಗೆ ತಾ, ತನ್ನೊಳಗೆ ಆಗಮ. ವಿದ್ಥಿಯೊಂದೆಸೆ, ತಾನೊಂದೆಸೆ, ಮತ್ತಾ ವಿದ್ಥಿಯೊಳಗೆ ತಾ, ತನ್ನೊಳಗೆ ವಿದ್ಥಿ. ಕ್ರೀಯೊಂದೆಸೆ, ತಾನೊಂದೆಸೆ, ಮತ್ತಾ ಕ್ರೀಯೊಳಗೆ ತಾ, ತನ್ನೊಳಗೆ ಕ್ರೀ. ಇಂತೀ ಜಗ, ಆಗಮ, ವಿದ್ಥಿ, ಕ್ರೀ ನಿಷೇಧವಾಗಿ, ಹೊದ್ದಿಯೂ ಹೊದ್ದನು, ನೀರ ತಾವರೆಯಂತೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತನ್ನ ಸಮ ಕ್ರೀವಂತರಲ್ಲಿಯಲ್ಲದೆ ಕೊಳುಕೊಡೆ ಮಿಕ್ಕಾದ ಹೊರಗಣ ಕ್ರೀ ಸೋಂಕು ಬಾಹ್ಯರಚನೆ ತಪ್ಪದಿರಬೇಕು. ಆತ್ಮನರಿದು ಮುಟ್ಟುವಲ್ಲಿ ತನ್ನ ವ್ರತದೆಸಕವನರಿದು ಸ್ವಪ್ನಾವಸ್ಥೆಗಳಲ್ಲಿದ್ದು ಸೂಕ್ಷ ್ಮತನುವಂ ಮುಟ್ಟದೆ, ಅಲ್ಲದುದ ಕಂಡು ಮತ್ತೆ ಆರೂ ಅರಿಯರೆಂದು ತನ್ನಲ್ಲಿಯೇ ಅಡಗದೆ, ತಲೆದೋರಿದಲ್ಲಿಯೇ ಲಯವಾಗಬೇಕು. ಇಂತೀ ಗುಣ ಆತ್ಮನ ಶೀಲ ಮನಕ್ಕೆ ಮನೋಹರ ಶಂಕೇಶ್ವರ ಲಿಂಗದಲ್ಲಿ.
--------------
ಕರುಳ ಕೇತಯ್ಯ
ನಾನಾ ಬಹುವರ್ಣದ ಬೊಕ್ಕಸವ ಹೊತ್ತು ಮಾಡುವಲ್ಲಿ ಭಾವದ ಬಹುಚಿತ್ತವನರಿಯಬೇಕು. ನಾನಾ ವರ್ಣದ ಆಭರಣ, ಹದಿನೆಂಟು ಆಶ್ರಯಂಗಳ ತೊಡುವಲ್ಲಿ ದ್ರವ್ಯವ ಕೊಡುವಲ್ಲಿ ಇಂದ್ರಿಯಾತ್ಮನ ಬೆಂಬಳಿಯನರಿಯಬೇಕು. ಎಂಟುರತ್ನದ ಕಾಂತಿ, ಜೀವರತ್ನದ ಕಳೆ ಭಾವಿಸಿ ಏಕವ ಮಾಡಿ ನಡೆವುದು. ನೀವು ಕೊಟ್ಟ ಕಾಯಕ ತನುವಿಂಗೆ ಕ್ರೀ, ಆತ್ಮಂಗೆ ಅರಿವು. ಆ ಅರಿವಿಂಗೆ ಮಹಾಬೆಳಕು ಒಡಗೂಡಿ ಕರಿಗೊಂಡಲ್ಲಿ ಬೊಕ್ಕಸದ ಮಣಿಹವನೊಪ್ಪಿಸಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ.
--------------
ಆನಂದಯ್ಯ
ಕಾಲಿಗೆ ಕೋಳ, ಕೈಗೆ ಸಂಕಲೆ, ಕೊರಳಿಗೆ ಪಾಶ ಪಾಷಂಡಿಗಳಾಗುತ್ತ, ಮತ್ತಾ ಅರಿವಿನ ಹೊಲಬೆಲ್ಲ ಅಡಗಿತ್ತು. ಅಂಗದ ಕ್ರೀ, ಲಿಂಗದ ಕೂಟ, ನಿರಂಗದ ಸುಖವೆಂಬುದು ಆ ಮೂರರ ಬಂಧದಲ್ಲಿ ಅಡಗಿತ್ತು. ಬೇರೊಂದು ಸಂಗವೆಲ್ಲಿದ್ದಿತ್ತು ಹೇಳಾ ? ನಿರಂಗವೆಂಬ ನಾಮವಿಲ್ಲದನೆ ಕಾಮಕ್ಕೇಕೆ ಕೂಟವಾದೆ ? ದುರ್ಮುಖಕ್ಕೇಕೆ ಆತ್ಮನಾದೆ ? ಕಾಮಧೂಮ ಧೂಳೇಶ್ವರನೆಂಬುದಕ್ಕೆ ಕುರುಹಿಲ್ಲದ ನೆರೆ ನಾಮವಾದೆಯಲ್ಲಾ.
--------------
ಮಾದಾರ ಧೂಳಯ್ಯ
ಇನ್ನಷ್ಟು ... -->