ಅಥವಾ

ಒಟ್ಟು 134 ಕಡೆಗಳಲ್ಲಿ , 52 ವಚನಕಾರರು , 129 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ನವ ಸವೆವ ಕನ್ನಗತ್ತಿಗೆ ಕನ್ನ ಸವೆಯಿತ್ತೆ ಕೈ ತಟ್ಟಿತೆಂಬಂತೆ, ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು, ಬಳಲುವಣ್ಣಗಳ ಬಾಯ ಟೊಣೆದು, ಇವು ಮೂರು ತನ್ನಿಂದ ಬಲ್ಲಿದರಲ್ಲಿಗೆ ಹೋಗದೆ ಮಾಣವು. ಇವರಲ್ಲಿ ಬನ್ನಬಟ್ಟು ಬಳಲುವ ಕರ್ಮಿಗಳಿಗಿನ್ನೆಲ್ಲಿಯ ಮುಕ್ತಿಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅರ್ಪಿತವಲ್ಲದುದ ಕಲಸಿದ ಕೈ, ಉಂಡ ಬಾಯಿ, ತುಂಬಿದ ಘಟ, ಅರಿದು ಕೊಂಡ ಆತ್ಮ ಇವ ಹಿಡಿದಡೆ ಭಂಗ. ಸಡಗರಿಸಿ ತುಂಬಿದ ಗರಳ ಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿ ಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ ಮತ್ತಾ ತಪ್ಪ ಕಂಡು ಎನ್ನಂಗವನೊಡಗೂಡುವ ಮನಕ್ಕೆ ಮನೋಹರ ಶಂಕೇಶ್ವರ ಲಿಂಗವೆ ಬೇಡಾ.
--------------
ಕರುಳ ಕೇತಯ್ಯ
ಕಾಲು ಮೂರು, ಬಸುರು ನಾಲ್ಕು, ಕೈ ಐದು, ತಲೆ ಎಂಟು, ಬಾಯಿ ಒಂಬತ್ತು, ಕಿವಿ ಆರು, ಕಣ್ಣು ಮೂವತ್ತೆರಡು. ಇಂತೀ ಪಿಂಡಕ್ಕೆ ಐವತ್ತೊಂದು ಕಳೆ. ಆ ಜೀವಕ್ಕೆ ಪರಮನೊಂದೆ ಕಳೆ. ಈ ಗುಣ ಜಾÕನಪಿಂಡದ ಭೇದ. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಉದಯಕ್ಕೆ ತನುವೆಂಬ ಹಸ್ತದಲ್ಲಿ ಇಷ್ಟಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಮಧ್ಯಾಹ್ನಕ್ಕೆ ಮನವೆಂಬ ಹಸ್ತದಲ್ಲಿ ಪ್ರಾಣಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಅಸ್ತಮಾನಕ್ಕೆ ಧನವೆಂಬ ಹಸ್ತದಲ್ಲಿ ಭಾವಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ತನು ಮುಟ್ಟದ ಮುನ್ನ, ಮನ ಮುಟ್ಟದ ಮುನ್ನ, ಭಾವ ಮುಟ್ಟದ ಮುನ್ನ, ಲಿಂಗಕ್ಕೆ ದ್ರವ್ಯವ ಸಲಿಸಬಲ್ಲರೆ ಶರಣನೆಂಬೆ. ಕಾಲು ತಾಗದ ಮುನ್ನ, ಕೈ ಮುಟ್ಟದ ಮುನ್ನ ಉದಕವ ತಂದು ಲಿಂಗಕ್ಕೆ ಮಜ್ಜನವ ನೀಡಬಲ್ಲರೆ ಶರಣನೆಂಬೆ. ಹೂವು ನೋಡದ ಮುನ್ನ, ಹಸ್ತದಿಂದ ಮುಟ್ಟದ ಮುನ್ನ, ಹೂವಕೊಯಿದು ಧರಿಸಬಲ್ಲರೆ ಶರಣನೆಂಬೆ. ಈ ಭೇದವ ತಿಳಿಯಬಲ್ಲರೆ ಶಿವಜ್ಞಾನಿಶರಣ ಲಿಂಗಾಂಗಸಂಬಂದ್ಥಿ. ಇಂತೀ ನಿರ್ಣಯವ ತಿಳಿಯದೆ ಶರಣಸತಿ ಲಿಂಗಪತಿ ಎಂಬಾತನ ಲಿಂಗ ಪ್ರೇತಲಿಂಗ, ಅವ ಭೂತಪ್ರಾಣಿ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದೀಕ್ಷೋಪದೇಶವ ಮಾಡಿ ಗುರುವಿನ ಕಣ್ಣ ಕಳೆದು ತಲೆ ಹೊಡೆದು ಮೂರು ಹಣವ ಕೊಂಡೆ. ದೀಕ್ಷೋಪದೇಶವ ಹಡೆದ ಭಕ್ತರ ನಾಲಗೆಯ ಕೊಯ್ದು ಕೈ ಮುರಿದು ಮೂರು ಹಣವ ಕೊಂಡೆ. ಈ ಗುರುಶಿಷ್ಯರುಭಯರ ಸಂಯೋಗಕಾಲದಲ್ಲಿರುವ ಸಾಕ್ಷಿಗಣಂಗಳ ಮನೆಯ ಸುಟ್ಟು ಮೂರು ರತ್ನವ ಕೊಂಡೆ. ಇಂತೀ ಮೂವರ ಹಣವ ತಂದು ಗುರುವಿಗೆ ಕೊಟ್ಟು ಕಾಯಕವ ಮಾಡುತ್ತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೂಗಿನಲ್ಲಿ ಕಂಡು, ಮೂರ್ತಿಯ ಕಂಗಳಲ್ಲಿ ಮಾಡಿಸಿ, ಕಿವಿಯಲ್ಲಿ ಶೋಭನ, ತಲೆಯಲ್ಲಿ ಕೈಗೂಡಿ, ಕಣ್ಣ ಕಾಡಿನ ತಲೆ ಹೊಲದಲ್ಲಿ ಸತ್ತದೇವರ ಕಂಡು, ಹುಟ್ಟಿದ ಗಿಡುವಿನ ಪತ್ರೆಯ ಕೈ ಮುಟ್ಟದೆ ಕೊಯ್ದು, ಬತ್ತಿದ ಕೆರೆಯ ಜಲವ ತುಂಬಿಕೊಂಡು, ಬಂದು ಮುಟ್ಟಿ ಪೂಜಿಸಹೋದಡೆ ಸತ್ತ ದೇವರೆದ್ದು ಪೂಜಾರಿಯ ನುಂಗಿದರು ನೋಡಾ. ತಲೆಯಲ್ಲಿ ನಡೆದು, ತಲೆಗೆಟ್ಟು ನಿರಾಳವಾದ ನಿಜಗುರು ಭೋಗೇಶ್ವರಾ, ನಿಮ್ಮ ಶರಣರಿಗಲ್ಲದೆ ಸತ್ತದೇವರನು ಸಾಯದವರು ಪೂಜಿಸಿ ನಿತ್ಯವ ಹಡೆದೆಹೆನೆಂಬ ಮಾತೆಲ್ಲಿಯದೊ ?
--------------
ಭೋಗಣ್ಣ
ಹರಿಯ ಕೈಯೊಳಗಣ ಗಿಳಿಗೆ, ಬೆಕ್ಕಿನ ಭಯ. ಗಿಳಿಯೆದ್ದೋಡಿ ಹಾಲ ಕುಡಿಯಲು, ಹರಿಯ ಕೈ ಮುರಿದು, ಮಾರ್ಜಾಲಗೆ ಮರಣವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪ್ರಾಣಲಿಂಗಸಂಬಂಧಿಯಾದ ಬಳಿಕ ತನುಗುಣವಿರಲಾಗದಯ್ಯಾ. ಕೈ ಸಿಂಹಾಸನವಾದ ಬಳಿಕ ಸಂದಾಗಿರಲಾಗದಯ್ಯಾ. ಕೂಡಲಚೆನ್ನಸಂಗಯ್ಯಾ, ಈಯನುವನಲ್ಲಮ ತೋರಿದ.
--------------
ಚನ್ನಬಸವಣ್ಣ
ಗುರಿಯನೆಚ್ಚಲ್ಲಿ ತಾಗಿದವೊಲು, ತಪ್ಪಿದ ಭೇದವ ನಿಶ್ಚೈಸಿ ಕೈ ಅರಿವಂತೆ, ಕಾಯ ಜೀವದ ಸಂದಣಿಯಲ್ಲಿ, ಅರಿವೆಂಬ ವಸ್ತು ತಿರುಗಾಡುತ್ತಿರಲಾಗಿ, ಆ ಗುಣವ ಕರಿಗೊಂಡು, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮಲವಿಶಿಷ್ಟರಾದ ಮಾನವರು ಬಹಿರಂಗದ ತೀರ್ಥವ ಹೊಕ್ಕು, ಅಲ್ಲಿ ಕಾಲು ಕೈ ಮುಂತಾದ ಸರ್ವಾಂಗವ ತೊಳೆದು, ಪರಿಶುದ್ಧರಾದೆವೆಂದು ಭಾವಿಸುತಿಪ್ಪರು ನೋಡಾ. ಮತ್ತೆ ಆ ಮಲಿನವಾದ ಜಲವನೆ ತೀರ್ಥವೆಂದು ಲಿಂಗಕ್ಕಭಿಷೇಕಂಗೆಯ್ಯುತಿಪ್ಪರು ನೋಡಾ. ಶಿವಜ್ಞಾನಿಗಳ ಪಾದೋದಕವು ಪರಿಶುದ್ಧವಲ್ಲವೆಂದು ಗಳಹುತಿಪ್ಪರು ನೋಡಾ. ಇಂತೀ ಮರುಳರಾಟವ ಕಂಡು, ನಮ್ಮ ಪ್ರಮಥರು ಗಹಗಹಿಸಿ ನಗುತಿಪ್ಪರು ನೋಡಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕೈ ಮುಟ್ಟುವಲ್ಲಿ, ಕಿವಿ ಕೇಳುವಲ್ಲಿ, ಬಾಯಿ ಕೊಂಬಲ್ಲಿ, ಮೂಗು ವಾಸಿಸುವಲ್ಲಿ, ಕಣ್ಣು ನೋಡುವಲ್ಲಿ- ಇಂತೀ ಅಯಿದರ ಗುಣ ಎಡೆಯಾಟ ಅದಾರಿಂದ ಎಂಬುದ ತಾ ವಿಚಾರಿಸಿದಲ್ಲಿ, ಪಂಚಕ್ರೀಯಲ್ಲಿ ಸಂಚಿತ ಪ್ರಾರಬ್ಧ ಆಗಾಮಿಯೆಂಬ ಹಿಂಚುಮುಂಚಿಗೆ ಸಿಕ್ಕದೆ, ಕುಡಿವೆಳಗಿನ ಮಿಂಚಿನ ಸಂಚದಂತಿರಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಲು ಕೈ ನಡುವೆಲ್ಲ ತಾವರೆಯ ತಂತಿನಂತೆ ಎಂಬತ್ತುನಾಲ್ಕುನೂರುಸಾವಿರ ಸಂದುಗಳ ಬಂದ್ಥಿಸಿಕೊಂಡಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
[ಎನ್ನ ಕಷ್ಟ್ವ] ಕುಲದಲ್ಲಿ ಹುಟ್ಟಿಸಿದೆಯಯ್ಯಾ, ಎಲೆ ಲಿಂಗ ತಂದೆ. ಕೆಟ್ಟೆನಯ್ಯಾ, ನಿಮ್ಮ ಮುಟ್ಟಿ (ಯೂ ಮುಟ್ಟದಿ) ಹನೆಂದು ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾಗದೆ? ಅಬ್ಥಿನವ ಮಲ್ಲಿಕಾರ್ಜುನಾ.
--------------
ಡೋಹರ ಕಕ್ಕಯ್ಯ
ಕೂಪರನಗಲುವದು ಆತ್ಮಘಾತುಕವವ್ವಾ. ದಿಬ್ಯವ ತುಡುಕಿದಡೆ ಕೈ ಬೇವುದಲ್ಲದೆ ಮೈ ಬೇವುದೆ? ಒಲಿದವರನಗಲಿದಡೆ ಸರ್ವಾಂಗವೂ ಬೇವುದವ್ವಾ. ಮಹಾಲಿಂಗ ಗಜೇಶ್ವರನನಗಲಿ ಆವುಗೆಯ ಮಧ್ಯದ ಘಟದಂತಾದೆನವ್ವಾ.
--------------
ಗಜೇಶ ಮಸಣಯ್ಯ
ಕನಕಶಿಲೆಯೆನಿಸುವ ಪಾಷಾಣದಲ್ಲಿ ರತಿ ಪುಟ್ಟಲಿಕ್ಕಾಗಿ, ಆ ಮಧ್ಯದಲ್ಲಿ ಸೂತ್ರ ತೋರಲಿಕ್ಕೆ, ಆ ಸೂತ್ರ ಆ ಪಾಷಾಣವ ಗ್ರಹಿಸಿ, ಆವ ಕಡೆ ಮುಖವಾದಲ್ಲಿ ಸೂತ್ರ ಆವರಣಿಸುವಂತೆ, ಶಿವಲಿಂಗಪೂಜೆಯಲ್ಲಿ ಲಿಂಗವ ಮುಟ್ಟುವ ಕೈ, ನಟ್ಟ ದೃಷ್ಟಿ ತನ್ನಂಗದಲ್ಲಿ ಸರ್ವಾಂಗದೋಷಂಗಳ ಮರೆದು ಜಾಗ್ರದಿರವು ಸ್ವಪ್ನದಲ್ಲಿ ತೋರುವಂತೆ ಸ್ವಪ್ನದ ಸಂಗ ಸುಷುಪ್ತಿಯನೆಯಿದಿದಂತೆ ಇಪ್ಪುದು ಶಿವಪೂಜಕನ ಶಿವಮೂರ್ತಿಧ್ಯಾನ. ಈ ಗುಣ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಲಿಂಗವನರಿವವರಿಗಲ್ಲದೆ ಕಾಣಬಾರದು.
--------------
ಮೋಳಿಗೆ ಮಹಾದೇವಿ
ಇನ್ನಷ್ಟು ... -->