ಅಥವಾ

ಒಟ್ಟು 175 ಕಡೆಗಳಲ್ಲಿ , 2 ವಚನಕಾರರು , 175 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಲಿಂಗ ಉದಯವಾದ ಉದಯವ ನೋಡಿರಯ್ಯಾ. ಹಿಂದೆ ಕತ್ತಲೆ ಮುಂದೆ ಬೆಳಗಾಯಿತ್ತು ! ಬೆಳಗು ಬೆಳದಿಂಗಳಾಯಿತ್ತು. ಕೂಡಲಚೆನ್ನಸಂಗಯ್ಯನಲ್ಲಿ ಒಲವಿನ ಉದಯದ ದರ್ಪಣದಿಂದ.
--------------
ಚನ್ನಬಸವಣ್ಣ
ತನುವ ಕೊಟ್ಟು ತನು ಬಯಲಾಯಿತ್ತು, ಮನವ ಕೊಟ್ಟು ಮನ ಬಯಲಾಯಿತ್ತು, ಧನವ ಕೊಟ್ಟು ಧನ ಬಯಲಾಯಿತ್ತು, ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.
--------------
ಚನ್ನಬಸವಣ್ಣ
ಮಾತು ಮಾಣಿಕ್ಯವ ನುಂಗಿ, ಜ್ಯೋತಿ ಕತ್ತಲೆಯ ನುಂಗಿ ಆಳು ಆಯ್ದನ ನುಂಗಿ ಉಗುಳಲಿನ್ನೆಂತೊರಿ ಮಥನವಿಲ್ಲದ ಸಂಗ, ಮರಣವಿಲ್ಲದ ಉದಯ, ಅಳಲಿಲ್ಲದ ಶೋಕ ಸಮರಸದಲ್ಲಿ! ಉದಯದ ಬೆಳಗನು ಮದಗಜ ಒಳಕೊಂಡು ಮಾವತಿಗನ ನುಂಗಿ ಉಗುಳದಲ್ಲಾ! ಸದಮದ ಭರಿಕೈಯೊಳಗೆ ಈರೇಳು ಭುವನವನು ಒದರಿ ಹಾಯ್ಕಿ ತಾನೆ ನಿಂದುದಲ್ಲಾ! ಸದಮಲಜಾÕನಸಂಪನ್ನ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಸ್ವಯವಾಯಿತ್ತು
--------------
ಚನ್ನಬಸವಣ್ಣ
ಪೃಥ್ವ್ಯಾದಿ ಪಂಚಭೂತಂಗು ಇದಕ್ಕೆ ವಿವರ: ಅಸ್ಥಿ ಚರ್ಮ ಮಾಂಸ ರೋಮ ಮಜ್ಜೆ ಇವೈದು ಪೃಥ್ವಿಯ ಅಂಶ. ಶುಕ್ಲ ಶೋಣಿತ ಶ್ಲೇಷ್ಮ ಪಿತ್ತ ರಕ್ತ ಇವೈದು ಅಪ್ಪುವಿನ ಅಂಶ. ಹಸಿವು ತೃಷೆ ನಿದ್ರೆ ಆಲಸ್ಯ ಸ್ತ್ರೀಸಂಗ ಇವೈದು ಅಗ್ನಿಯ ಅಂಶ. ಹವುದು ಕುಳ್ಳಿರುವುದು ಏಳುವುದು ಮೈಮುರಿವುದು ನಡೆವುದು ಈ ಐದು ವಾಯುವಿನ ಅಂಶ. ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯ ಆನಂದ ಇವೈದು ಆಕಾಶದ ಅಂಶ. ಇಂತೀ ಅಂಗ ಶುದ್ಧಂಗಳ ಬಿಟ್ಟು ಲಿಂಗಾಂಗವ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು
--------------
ಚನ್ನಬಸವಣ್ಣ
ಗೋವಿನ ಹೊಟ್ಟೆಯಲ್ಲಿ ಘೃತವಿದ್ದಡೇನೊ ಆ ಗೋವು ದಿನದಿನಕ್ಕೆ ಪುಷ್ಟವಾಗಬಲ್ಲುದೆ ? ಅದು ಕಾರಣ_ ಆ ಗೋವ ಪೋಷಿಸಿ ಕರೆದು ಕಾಸಿ, ಘೃತವ ಮಾಡಿ ಆ ಗೋವಿಂಗೆ ಕುಡಿಯಲೆರೆದಡೆ ಆ ಗೋವು ದಿನದಿನಕ್ಕೆ ಪುಷ್ಟವಹುದು. ಹಾಂಗೆ, ತನ್ನಲ್ಲಿ ವಸ್ತುವಿದ್ದಡೇನೊ ? ವಸ್ತುವ ಗುರುಮುಖದಿಂದ ಕರಸ್ಥಲಕ್ಕೆ ಪಡೆದು, ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇಧಿಸಿದಲ್ಲದೆ ಪ್ರಾಣಲಿಂಗವಾಗದು. ಕೂಡಲಚೆನ್ನಸಂಗಯ್ಯನಲ್ಲಿ, ಇಷ್ಟಲಿಂಗವ ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇದ್ಥಿಸಿ, ತಾನೆಂಬ ಅನಿಷ್ಟವ ತೊಲಗಿಸಿದಲ್ಲದೆ ಪ್ರಾಣಲಿಂಗಸಂಬಂಧವಾಗಬಾರದು
--------------
ಚನ್ನಬಸವಣ್ಣ
ಮರ್ಮವರಿದು ಮಾಡುವಂಗೆ ಕರ್ಮವಿಲ್ಲ, ಹೆಮ್ಮೆಯಲ್ಲಿ ಮಾಡಿದವನ ವಿಧಿಯ ನೋಡಾ. ಸಜ್ಜನ ಸದಾಚಾರವರಿದು ಮಾಡುವನು ಕೂಡಲಚೆನ್ನಸಂಗಯ್ಯನಲ್ಲಿ ನಮ್ಮ ಬಸವಣ್ಣನು
--------------
ಚನ್ನಬಸವಣ್ಣ
ಮಾಂಸಪಿಂಡವೆಂದೆನಿಸದೆ ಮಂತ್ರಪಿಂಡವೆಂದೆನಿಸಿದ ಬಸವಣ್ಣ. ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದ ಬಸವಣ್ಣ, ಜಗಭರಿತನೆಂಬ ಶಬ್ದಕ್ಕೆ ಅಂಗವಿಸದೆ, ಶರಣಭರಿತ ಲಿಂಗವೆನಿಸಿದ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.
--------------
ಚನ್ನಬಸವಣ್ಣ
ಇಷ್ಟಲಿಂಗ ಪೂಜಕರೆಲ್ಲ ದೃಷ್ಟಲಿಂಗವನೆತ್ತ ಬಲ್ಲರೊ ? ಜಂಗಮವೆ ಲಿಂಗವೆಂಬುದನು ಭವಭಾರಿಗಳೆತ್ತ ಬಲ್ಲರೊ ? ಕೂಡಲಚೆನ್ನಸಂಗಯ್ಯನಲ್ಲಿ, ಮಹಾಪ್ರಸಾದಿ ಬಸವಣ್ಣ ಬಲ್ಲ
--------------
ಚನ್ನಬಸವಣ್ಣ
ಸತಿಯ ಸಂಗವತಿಸುಖವೆಂದರಿದಡೇನು ? ಗಣಸಾಕ್ಷಿಯಾಗಿ ವಿವಾಹವಾಗದನ್ನಕ್ಕರ ? ಕಣ್ಣು ಕಾಂಬುದೆಂದಡೆ, ಕತ್ತಲೆಯಲ್ಲಿ ಕಾಂಬುದೆ ದೀಪವಿಲ್ಲದನ್ನಕ್ಕರ ? ಸೂರ್ಯನ ಪ್ರಕಾಶದಿಂದ ಕಂಡು ತಾನೆ, ಕಂಡೆನೆಂಬ ಜಗದ ನಾಣ್ಣುಡಿಯಂತಾಯಿತ್ತು. ಅಂಗವ ಬಿಟ್ಟು ಆತ್ಮನುಂಟೆ ? ಶಕ್ತಿಯ ಬಿಟ್ಟು ಶಿವನುಂಟೆ ? ಇದು ಕಾರಣ_ಸ್ಥೂಲ ಸೂಕ್ಷ್ಮಕಾರಣ ತನುತ್ರಯವಿರಲು, ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗಸಂಬಂಧ ಬೇಡವೆಂದಡೆ ಅಸಂಖ್ಯಾತ ಪ್ರಮಥಗಣಂಗಳೊಪ್ಪುವರೆ ? ಕೂಡಲಚೆನ್ನಸಂಗಯ್ಯನಲ್ಲಿ ಇಷ್ಟಲಿಂಗಸಂಬಂಧವಿಲ್ಲದವರ ಮುಖವ ನೋಡಲಾಗದು ಪ್ರಭುವೆ.
--------------
ಚನ್ನಬಸವಣ್ಣ
ಗುರುಲಿಂಗವೆ ಪರುಷವಾಗಿ, ಶಿಷ್ಯನೆ ಕಬ್ಬುನವಾಗಿ ಬೆರಸಿ ನಡೆದೆನೆಂಬ ನರಕನಾಯಿಗಳು, ಕುಲವನರಸುವಿರಿ, ಮತ್ತೆ ಹೊಲೆಯನರಸುವಿರಿ. ಹೊಲೆಯನರಸುವಿರಿ ಸೂತಕವಳಿಯದೆ, ಪಾತಕ ಹಿಂಗದೆ. ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಮುಕ್ತಿಯನರಸುವಿರಿ.
--------------
ಸಂಗಮೇಶ್ವರದ ಅಪ್ಪಣ್ಣ
ಗುರು ತನ್ನ ವಿನೋದಕ್ಕೆ ಸ್ಥಾವರವಾದ: ಗುರುತನ್ನ ವಿನೋದಕ್ಕೆ ಜಂಗಮವಾದ; ಗುರು ತನ್ನ ವಿನೋದಕ್ಕೆ ಪ್ರಸಾದವಾದ; ಗುರು ತನ್ನ ವಿನೋದಕ್ಕೆ ಗುರುವಾದ; ಕೂಡಲಚೆನ್ನಸಂಗಯ್ಯನಲ್ಲಿ ಏಕಾರ್ಥವಾದ
--------------
ಚನ್ನಬಸವಣ್ಣ
ಜಲನಿಧಿ ತಟಾಕದಲ್ಲಿ ಕನ್ನವನಿಕ್ಕಿ ಉದಕವ ತಂದು ಮಜ್ಜನಕ್ಕೆರೆವರೆಲ್ಲ ಶೀಲವಂತರೆ ? ಭವಿಪಾಕವನೊಲ್ಲೆವೆಂದು ಭುಂಜಿಸುವ ಉದರಪೋಷಕರೆಲ್ಲ ಶೀಲವಂತರೆ? ವರಲ್ಲ, ನಿಲ್ಲು ಮಾಣು. ಅಶನವರತು ವ್ಯಸನ ಬೆಂದು ವ್ಯಾಪ್ತಿಗಳು ಅಲ್ಲಿಯೆ ಲೀಯವಾಗಿ ಅಷ್ಟಮದ ಬೆಂದು ನಷ್ಟವಾಗಿ, ತನುಗುಣ ಸಮಾಧಾನವಾದಡೆ ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಶೀಲವೆಂಬೆ
--------------
ಚನ್ನಬಸವಣ್ಣ
`ಬಸವ' ಎಂಬ ಮೂರಕ್ಷರ ಹೃದಯಕಮಲದಲ್ಲಿ ನೆಲೆಗೊಂಡಡೆ, ಅಭೇದ್ಯ ಭೇದ್ಯವಾಯಿತ್ತು, ಅಸಾಧ್ಯ ಸಾಧ್ಯವಾಯಿತ್ತು. ಇಂತು ಬಸವಣ್ಣನಿಂದ ಲೋಕ¯õ್ಞಕಿಕದ ಕುಭಾಷೆಯ ಕಳೆದು, ಲೋಕಾಚರಣೆಯನತಿಗಳೆದು ಭಕ್ತಿಭರವಪ್ಪುದು, ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನ ಕಾರುಣ್ಯದಿಂದ
--------------
ಚನ್ನಬಸವಣ್ಣ
ಪ್ರಾಣಲಿಂಗದ ಪೂರ್ವಾಶ್ರಯವ ಕಳೆಯಲೆಂದು ಲಿಂಗಪ್ರಾಣಿಯಾದ, ಲಾಂಛನದ ಪೂರ್ವಾಶ್ರಯವ ಕಳೆಯಲೆಂದು ಜಂಗಮಪ್ರೇಮಿಯಾದ, ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು ಪ್ರಸಾದಿಯಾದ, [ಇಂತೀ] ತ್ರಿವಿಧದ ಪೂರ್ವಾಶ್ರಯವ ಕಳೆಯಲೆಂದು ಮಹಾಗುರುವಾಗಿ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನಾದ.
--------------
ಚನ್ನಬಸವಣ್ಣ
ಭಕ್ತ ಜಂಗಮದ ಸಕೀಲಸಂಬಂಧವೆಂತಿಪ್ಪುದೆಂಬುದನಾರು ಬಲ್ಲರಯ್ಯಾ ? ಅದು ಉಪಮಾತೀತ ! ಭಕ್ತನೊಳಗೆ ಜಂಗಮವಡಗಿದಡೆ ಭಕ್ತನಾಗಿ ಕ್ರಿಯಾನಿಷ್ಪತ್ತಿಯಲ್ಲಿ ಸಮರಸಸುಖಿಯಾಗಿಪ್ಪ ನೋಡಯ್ಯಾ. ಜಂಗಮದೊಳಗೆ ಭಕ್ತನಡಗಿದಡೆ, ಕರ್ತೃಭೃತ್ಯಭಾವವಳಿದು ಸಂಬಂಧ ಸಂಶಯದೋರದೆ, ಅರಿವರತು ಮರಹು ನಷ್ಟವಾಗಿ, ಸ್ವತಂತ್ರ ಶಿವಚಾರಿಯಾಗಿರಬೇಕು ನೋಡಯ್ಯಾ. ಈ ಉಭಯಭಾವಸಂಗದ ಪರಿಣಾಮವ ಕಂಡು ಕೂಡಲಚೆನ್ನಸಂಗಯ್ಯನಲ್ಲಿ ಬಸವಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು
--------------
ಚನ್ನಬಸವಣ್ಣ
ಇನ್ನಷ್ಟು ... -->