ಅಥವಾ

ಒಟ್ಟು 1630 ಕಡೆಗಳಲ್ಲಿ , 75 ವಚನಕಾರರು , 1496 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವಿಲ್ಲದ ಶರಣಂಗೆ ಕರ್ಮವಿಲ್ಲ ; ಕರ್ಮಶೂನ್ಯವಾದಲ್ಲಿ ಭಾವನಾಸ್ತಿ ಕಾಣಾ. ಭಾವನಾಸ್ತಿಯಾಗಿ ನಿರ್ಭಾವ ನಿಂದು ನಿಜವಾದಲ್ಲಿ ನೋಡಲಿಲ್ಲ ನುಡಿಯಲಿಲ್ಲ ಕೂಡಲಿಲ್ಲ ಅಗಲಲಿಲ್ಲ. ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿರ್ದ ಸುಖವ ತಂದು ಹೇಳುವರಾರೂ ಇಲ್ಲ ಈ ಮೂರುಲೋಕದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ. ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು. ಬಿಂದುವೆಂದಡೆ ಆಗುಮಾಡುವಂತಹದು. ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು, ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು. ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಾಯವೆಂಬ ಕಲ್ಪಿತವ ಕಳೆದು, ಪ್ರಾಣವೆಂಬ ಸೂತಕವ ಹರಿದು, ನಿಜಭಕ್ತಿ ಸಾಧ್ಯವಾದಲ್ಲದೆ ಲಿಂಗಪರಿಣಾಮವನೆಯ್ದಿಸಬಾರದು (ವೇಧಿಸಬಾರದು ?) ಅನು ಮಾಡಿದೆ, ನೀವು ಕೈಕೊಳ್ಳಿ ಎಂದಡೆ ಅದೇ ಅಜಾÕನ. ನಮ್ಮ ಗುಹೇಶ್ವರಲಿಂಗಕ್ಕೆ ಕುರುಹಳಿದು ನಿಜ ಉಳಿದವಂಗಲ್ಲದೆ ಪದಾರ್ಥವ ನೀಡಬಾರದು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಸಾಧ್ಯ ಸಾಧಕರಿಲ್ಲದಂದು, ಪೂಜ್ಯ ಪೂಜಕರಿಲ್ಲದಂದು, ದೇವ ಭಕ್ತನೆಂಬ ನಾಮ ತಲೆದೋರದಂದು, ಉಪಾಸ್ಯ ಉಪಾಸಕರಿಲ್ಲದಂದು, ಅಂಗಸ್ಥಲ ಲಿಂಗಸ್ಥಲವಾಗದಂದು, ನಿನ್ನ, ನಿಃಕಲ ಶಿವತತ್ವವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ. ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ. ಅಳುಪಿಲ್ಲದಿರ್ಪುದೆ ವ್ರತ. ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಸತ್ತಾತ ಗುರು, ಹೊತ್ತಾತ ಲಿಂಗವು, ಎತ್ತಿಕೊಂಡಾತ ಜಂಗಮವೆಂದೆಂಬೆನಯ್ಯ. ಸತ್ತವನೊಬ್ಬ, ಹೊತ್ತವನೊಬ್ಬ, ಎತ್ತಿಕೊಂಡವನೊಬ್ಬನೆಂಬನ್ನಕ್ಕರ ಕತ್ತಲೆ ಹರಿಯದಯ್ಯ. ಆತ್ತವರಮರರು, ನಿತ್ಯವಾದುದು ಪ್ರಸಾದ, ಪರಿಪೂರ್ಣವಾದುದು ಪಾದಜಲ. ಇದರರ್ಥವ ಬಲ್ಲರೆ ಸತ್ತಹಾಗಿರಬೇಕು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಓಂಕಾರವೇ ನಾದಮಯ. ಓಂಕಾರವೇ ಮಂತ್ರಮಯ. ಓಂಕಾರವೇ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ. ಪ್ರಣವವೇ ಪರಮಾತ್ಮ ಸ್ವರೂಪವಾಗಿ ಪರಮೇಶ್ವರನ ಗೌಪ್ಯಮುಖ ನೋಡಾ. ಪ್ರಣವವೆ ಶಿವಶರಣರ ಹೃದಯಾದ್ಥಿಪತಿ ಇದು ಕಾರಣ, ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ. ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಹಳ ಬಹಳ ಕಂಡೆನೆಂದು ನುಡಿವ, ಬಿಸಿಲು ಮಧ್ಯಾಹ್ನದಲ್ಲಿ ಚಂದ್ರಬಿಂಬ ಉದಯವಾದ ಪ್ರತ್ಯಕ್ಷವಾಯಿತ್ತೆಂದು ಹೊರಗೆ ಕಂಡು ಒಳಗೆ ಕಂಡನಲ್ಲದೆ ಏನು ಅಪ್ಪುದು ಕಾಣಾ. ಎರಡೂ ಒಂದೇ. ಮುಂದೆ ಮೀರಿ ಮನಸಮಾದ್ಥಿ ಮಾಡಿದಡೆ ಮುಕ್ತಿಯೆಂದು ಹೇಳುವರು. ಮನ ಮುಳುಗಿದುದೆ ಲಿಂಗವೆಂದೆಂಬರು. ಆ ಲಿಂಗ ಮುಳುಗುವುದು ಸಮಾದ್ಥಿ ಕಾಣಾ, ತಾನಳಿದ ಮೇಲೆ ಮುಕ್ತಿ ಯಾರಿಗೆ ಹೇಳಾ ? ಲಿಂಗಕ್ಕೆ ಅಳಿವು ಬೆಳವುಂಟೆ ಕಾಣಾ ? ಚಿಂತಿಸಿ ಮುಳುಗಿದವರೆಲ್ಲ ಕಡೆಯಿಲ್ಲ ಮೊದಲಿಲ್ಲ ನೋಡಾ. ಇನ್ನು ಉಳಿದದ್ದು ಘನವು. ಉಳಿಯೆ ಹೇಳಾ ನಿಜಕೆಲ್ಲ. ಲಯವಿಲ್ಲ ಭಯವಿಲ್ಲದಾಡಿದ ವಿದೇಹ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಈರೇಳುಭುವನವನು ಒಡಲೊ?ಗೆ ಇಂಬಿಟ್ಟುಕೊಂಡು ಲಿಂಗರೂಪನಾಗಿ ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಡಿತ್ತು ನೋಡಾ ! ಅಂತಹ ಅಗಮ್ಯ ಅಗೋಚರ ಲಿಂಗವೆಂದರಿದು ಭಕ್ತನು ತಾನು ಹಿಂದೆ ನಡೆದ ಜೂಜು ಬೇಂಟೆ ಚದುರಂಗ ಲೆತ್ತ ಪಗಡೆಯಾಟಂಗಳಂ ಪರಿಹಾಸಕರ ಕೂಡಿಕೊಂಡು ಕೆಲೆದಾಡುವದಂ ಬಿಟ್ಟು ಬಂಧುವ ತೊರೆದು ಮುಂದೆ ಶಿವಪಥದಲ್ಲಿ ನಡೆಯಬಲ್ಲಾತನೇ ಸದ್ಭಕ್ತನಲ್ಲದೆ, ಹಣದಾಸೆಗೆ ಹಂಗಿಗನಾಗಿ ಗುಣದಾಸೆಗೆ ಅಮೇಧ್ಯವ ತಿಂದು ಬಂಧುಗಳ ಬಿಟ್ಟು ಭಕ್ತಿಯಿಲ್ಲವೇ ಉಂಟೇ ಎಂಬ ಪಂಚಮಹಾಪಾತಕರ ಮುಖವ ನೋಡಲಾಗದು ಅವರ ಮಾತ ಕೇಳಲಾಗದು, ಅದೆಂತೆಂದಡೆ; ಕತ್ತೆ ಭಕ್ತನಾದರೆ ಕಿಸುಕುಳವ ತಿಂಬುದ ಮಾಂಬುದೆ ? ಬೆಕ್ಕು ಭಕ್ತನಾದರೆ ಇಲಿಯ ತಿಂಬುದ ಮಾಂಬುದೆ ? ಹಂದಿ ಭಕ್ತನಾದರೆ ಹಡಿಕೆಯ ತಿಂಬುದ ಮಾಂಬುದೆ ? ಶುನಕ ಭಕ್ತನಾದರೆ ಮೂಳೆ ಮಾಂಸವ ತಿಂಬುದ ಮಾಂಬುದೆ ? ಕೋಳಿಯ ತಂದು ಪಂಜರವ ಕೂಡಿ ಅಮೃತಾನ್ನವನಿಕ್ಕಿ ಸಲಹಿದರೆ ಅದು ತಾನೆ ಮತ್ತೆ ತಿಂಬ ಹಡುವಿಂಗೆ ಚಿತ್ತವನಿಕ್ಕುದುಂ ಮಾಂಬುದೆ ? ಇಂತೀ ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಅನಾಚಾರವ ಬಿಟ್ಟು ಸದಾಚಾರದಲ್ಲಿ ನಡೆಯಬೇಕು. ಗುರುವಾದಡೂ ಆಗಲಿ ಭಕ್ತನಾದಡೂ ಆಗಲಿ ತಾನು ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ ಸುರೆ ಮಾಂಸ ಭಂಗಿ ಭವಿಸಂಗ ಭವಿಪಾಕ ಇಂತಿವ ಬಿಡದಿರ್ದವರುಗಳು ಆ ಕತ್ತೆ ಬೆಕ್ಕು ಸೂಕರ ಸೊಣಗ ಕೋಳಿಗಿಂದತ್ತತ್ತ ಕಡೆ ನೋಡಿರೇ. ಚಿನ್ನದ ಬೆಟ್ಟವನೇರಿದವನು ಕಣ್ಣುಕಾಣದಿಪ್ಪಂತೆ ಗಣೆಯನೇರಿದ ಡೊಂಬ ಮೈ ಮರೆದಿಪ್ಪಂತೆ ನಡುನೀರಿಗೆ ಹೋದ ಹರಿಗೋಲು ತಲೆ ಕೆಳಗಾದಂತೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮಧುರದ ಗುಣವ ಇರುಹೆ ಬಲ್ಲುದು. ವಾಯುವಿನ ಗುಣವ ಸರ್ಪ ಬಲ್ಲುದು. ಗೋತ್ರದ ಗುಣವ ಕಾಗೆ ಬಲ್ಲುದು. ವೇಳೆಯ ಗುಣವ ಕೋಳಿ ಬಲ್ಲುದು. ಇದು ಕಾರಣ, ಮನುಷ್ಯಜನ್ಮದಲ್ಲಿ ಬಂದು, ಶಿವಜ್ಞಾನಾನುಭವವನರಿಯದಿರ್ದಡೆ, ಆ ಕಾಗೆ ಕೋಳಿಗಿಂದ ಕರಕಷ್ಟ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮುಂದು ಜಾವದಲೆದ್ದು, ಲಿಂಗದಂಘ್ರಿಯ ಮುಟ್ಟಿ, ಸುಪ್ರಭಾತ ಸಮಯದಲ್ಲಿ ಶಿವಭಕ್ತರ ಮುಖವ ನೋಡುವುದು. ಹುಟ್ಟಿದುದಕ್ಕೆ ಇದೇ ಸಫಲ ನೋಡಾ, ಸತ್ಯವಚನವಿಂತೆಂದುದು_ಇವಿಲ್ಲದವರ ನಾನೊಲ್ಲೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಮನ ಮಂದಿರದಡವಿಯೊಳಗೆ ಶುಕ್ಲಶೋಣಿತವೆಂಬ ಮಡಕೆಯ ಮಾಡಿ ಮೂತ್ರ ಶ್ಲೇಷ್ಮ ಅಮೇಧ್ಯವೆಂಬ ಪಾಕದ್ರವ್ಯಂಗಳ ಮಡಕೆಯಲ್ಲಿ ನಿಶ್ಚಯಿಸಿ ಆ ಮಡಕೆಯನೊಡೆದಾ[ಗಲೆ ಭಕ್ತ] ಕಾಣಾ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆನು.
--------------
ಬಹುರೂಪಿ ಚೌಡಯ್ಯ
ನಿರಂಜನಾತೀತಷಟ್‍ಸ್ಥಲಬ್ರಹ್ಮ ಅಂಗವಾಗಿ ಆ ನಿರಂಜನಾತೀತ ಷಟ್‍ಸ್ಥಲಬ್ರಹ್ಮವನೊಡಗೂಡಿದ ಮಹಾಶರಣಂಗೆ ನಮೋ ನಮೋ ಎಂದು ಬದುಕಿದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ. || 661 ||
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಿಕಾರಿ ಭಿಕಾರಕ್ಕೆಳಸ. ಉಣ್ಣಲು ಉಡಲು ಕಾಣದಾತ ಭಿಕಾರಿ. ತನು ಮೀಸಲು, ಮನ ಮೀಸಲು, ಬಾಯಿ ಬೋರು ಬೋರು. ಮರಣವಳಿದುಳಿದಾತ ಭಿಕಾರಿ. ಸಂಚಲದ ಪಂಚಕರಣಗಳ ತೆಗೆದುಂಡು, ರುಂಡಮಾಲೆಯ ರಣಮಾಲೆಯ ಹೆಣಮಾಲೆಯ ಚಾರುಚ್ಚಿದಲ್ಲದೆ ಭಿಕಾರಿ ಭೀಮೇಶ್ವರಲಿಂಗಕ್ಕೆ ದೂರ ಕಾಣಾ, ಕರುತಿರುವ ಗೊರವಾ
--------------
ಭಿಕಾರಿ ಭೀಮಯ್ಯ
ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->